ಸುದರ್ಶನ್ ನ್ಯೂಸ್ ಟಿವಿಯ ಅತ್ಯಂತ ವಿವಾದಿತ ಕಾರ್ಯಕ್ರಮವಾದ ʼಬಿಂದಾಸ್ ಬೋಲ್ʼ ಪ್ರಸಾರಕ್ಕೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿಸಿದೆ. ಈ ಹಿಂದೆ ದೆಹಲಿ ಹೈಕೋರ್ಟ್ ಕಾರ್ಯಕ್ರಮವನ್ನು ಪ್ರಸಾರ ಮಾಡಲು ತಡೆ ನೀಡಿತ್ತು. ಈ ಕಾರ್ಯಕ್ರಮದ ಟ್ರೈಲರ್ ಕೇಬಲ್ ಟೆಲಿವಿಷನ್ ನೆಟವರ್ಕ್ (ನಿಯಂತ್ರಣ) ಕಾಯ್ದೆ, 1995ಯ ಶಿಷ್ಟಚಾರವನ್ನು ಉಲ್ಲಂಘಿಸುತ್ತದೆ ಎಂದು ಹೇಳಿತ್ತು. ಆದರೆ, ಕೇಂದ್ರ ಸರ್ಕಾರಕ್ಕೆ ಮಾತ್ರ ಇದರಲ್ಲಿ ಯಾವುದೇ ದೋಷ ಕಂಡು ಬಂದಿಲ್ಲ.
Also Read: ಸುದರ್ಶನ್ ಟಿವಿ ʼUPSC ಜಿಹಾದ್ʼ ಕಾರ್ಯಕ್ರಮ: ಐಪಿಎಸ್ ಅಸೋಷಿಯೇಷನ್ ಖಂಡನೆ
ಯುಪಿಎಸ್ಸಿ ಪರೀಕ್ಷೆಯಲ್ಲಿ ಹೆಚ್ಚಾಗಿ ಮುಸ್ಲಿಂ ಅಭ್ಯರ್ಥಿಗಳೇ ತೇರ್ಗಡೆಯಾಗುತ್ತಿದ್ದಾರೆ. ಇದು ಯುಪಿಎಸ್ಸಿ ಜಿಹಾದ್ ಎಂದು ಬಿಂಬಿಸುವ ರೀತಿಯಲ್ಲಿ ಆ ಕಾರ್ಯಕ್ರಮದ ಟ್ರೈಲರ್ ಅನ್ನು ಪ್ರಸಾರ ಮಾಡಲಾಗಿತ್ತು. ಇದರಲ್ಲಿ ಮಾತನಾಡುವ ಸುದರ್ಶನ್ ನ್ಯೂಸ್ ಟಿವಿಯ ಸುರೇಶ್ ಚವ್ಹಾಂಕೆ, ತಮ್ಮ ಮಾತಿನ ಮಧ್ಯೆ ಜಾಮಿಯಾ ಮಿಲಿಯಾ ಯುನಿವರ್ಸಿಟಿಯಿಂದ ಬರುವಂತಹ ಜಿಹಾದಿಗಳು ನಿಮ್ಮ ಜಿಲ್ಲೆಯ ಜಿಲ್ಲಾಧಿಕಾರಿಗಳಾದರೆ ಏನು ಮಾಡುತ್ತೀರಾ ಎಂಬಂತಹ ದ್ವೇಷಪೂರಿತವಾದ ಮಾತುಗಳನ್ನು ಆಡುತ್ತಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಈ ಕಾರ್ಯಕ್ರಮಕ್ಕೆ ಆಗಸ್ಟ್ 28ರಂದು ದೆಹಲಿ ನ್ಯಾಯಾಲಯ ತಡೆ ನೀಡಿತ್ತು. ಆರ್ಜಿದಾರರು ತಮ್ಮ ವಾದದಲ್ಲಿ, ಈ ಕಾರ್ಯಕ್ರಮವು ಬಹಿರಂಗವಾಗಿ ದ್ವೇಷವನ್ನು ಹರಡುತ್ತದೆ ಹಾಗೂ ಜಾಮಿಯಾ ಮಿಲಿಯಾ ಇಸ್ಲಾಮಿಯಾ ಯೂನಿವರ್ಸಿಟಿಯ ವಿದ್ಯಾರ್ಥಿಗಳ ಮಾನನಷ್ಟ ಮಾಡುತ್ತಿದೆ ಎಂದು ಹೇಳಿದ್ದರು.
Also Read: UPSC ಜಿಹಾದ್: ಪ್ರಾಯೋಜಕತ್ವ ನೀಡಿದ ಅಮುಲ್ ಸಂಸ್ಥೆ ವಿರುದ್ಧ ಬಾಯ್ಕಾಟ್ ಅಭಿಯಾನ
ಈ ಕಾರ್ಯಕ್ರಮಕ್ಕೆ ಐಪಿಎಸ್ ಅಸೋಸಿಯೇಷನ್ ಸೇರಿದಂತೆ ಎಲ್ಲಾ ಕಡೆಯಿಂದಲೂ ತೀವ್ರವಾದ ಪ್ರತಿರೋಧ ವ್ಯಕ್ತವಾಗಿತ್ತು. ಆದರೆ, ಈ ಕಾರ್ಯಕ್ರಮವು ಯಾವುದೇ ರೀತಿಯ ಕಾನೂನು ನಿಯಮಗಳ ಉಲ್ಲಂಘನೆ ಮಾಡುತ್ತಿಲ್ಲ. ಒಂದು ವೇಳೆ ಆ ರೀತಿ ನಿಮಗೆ ಕಂಡು ಬಂದಲ್ಲಿ ನಮ್ಮ ಮೇಲೆ ಕ್ರಮ ಕೈಗೊಳ್ಳಿ ಎಂದು ಕೇಂದ್ರ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಇಲಾಖೆಗೆ ನೀಡಿದ ಪತ್ರದಲ್ಲಿ ಸುದರ್ಶನ್ ನ್ಯೂಸ್ ತಿಳಿಸಿದೆ. ಈ ಪತ್ರದ ಆಧಾರದ ಮೇಲೆ ಕಾರ್ಯಕ್ರಮವನ್ನು ಪ್ರಸಾರ ಮಾಡಲು ಸುದರ್ಶನ್ ನ್ಯೂಸ್ಗೆ ಕಾರ್ಯಕ್ರಮ ಪ್ರಸಾರ ಮಾಡಲು ಕೇಂದ್ರ ಅನುಮತಿ ನೀಡಿದೆ.
ಕಾನೂನು ಪ್ರಕಾರ, ಯಾವುದೇ ಕಾರ್ಯಕ್ರಮ ಪ್ರಸಾರವಾಗುವ ಮುಂಚೆ ಆ ಕಾರ್ಯಕ್ರಮದ ಸ್ಕ್ರಿಪ್ಟ್ ಅನ್ನು ಪಡೆದು ಸೆನ್ಸಾರ್ ಮಾಡುವುದು, ಒಂದು ಟಿವಿ ಚಾನೆಲ್ನ ಮೂಲಭೂತ ಹಕ್ಕುಗಳನ್ನು ಕಸಿದುಕೊಂಡಂತೆ. ಒಂದು ವೇಳೆ ಪ್ರಸಾರ ಮಾಡಿರುವ ಕಾರ್ಯಕ್ರಮವು, ಕಾನೂನಿನ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಆ ಚಾನೆಲ್ನ ಮೇಲೆ ಕ್ರಮ ಕೈಗೊಳ್ಳಬಹುದಾಗಿದೆ.