
ಬೆಳಗಾವಿಯಲ್ಲಿ ನಡೆಯಲಿರುವ ಕಾಂಗ್ರೆಸ್ ಸಮಾವೇಶ ಮಾಡಬೇಕಿರುವ ಹಿನ್ನೆಲೆಯಲ್ಲಿ, ಇಂದು ದಿನವಿಡೀ ಕಾಂಗ್ರೆಸ್ ಮುಂಖಡರ ಸಭೆ ಮಾಡಲಾಗಿದೆ. ಗಾಂಧಿ ಭಾರತ್ ಸ್ಮರಣಾರ್ಥ ಕಾರ್ಯಕ್ರಮದ ಪೂರ್ವ ಸಿದ್ಧತೆ ಕುರಿತು ಬೆಂಗಳೂರಿನ ಇಂದಿರಾ ಭವನದಲ್ಲಿ ಸಭೆ ನಡೆಸಲಾಗಿದ್ದು, ಸಮಾವೇಶದಲ್ಲಿ ಸಚಿವರು, ಶಾಸಕರು, ಸಂಸದರಿಗೆ ಜವಾಬ್ದಾರಿಗಳನ್ನ ಹಂಚಿಕೆ ಮಾಡಲಾಗಿದೆ. ಗಾಂಧಿ ಭಾರತ ಕಾರ್ಯಕ್ರಮ ಯಶಸ್ವಿಯಾಗುವಂತೆ ಎಲ್ಲರೂ ಶ್ರಮ ವಹಿಸುವಂತೆ ಸೂಚಿಸಲಾಗಿದೆ.
ಕಾಂಗ್ರೆಸ್ ಸಭೆ ಬಳಿಕ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನರಾದ ಕಾರಣ ಗಾಂಧಿ ಭಾರತ ಕಾರ್ಯಕ್ರಮ ಮುಂದೂಡಿದ್ದೆವು. ಜನವರಿ 21ಕ್ಕೆ ಮತ್ತೆ ಮರು ದಿನಾಂಕ ನಿಗದಿ ಮಾಡಲಾಗಿದೆ. 224 ಕ್ಷೇತ್ರಗಳಿಂದ ಕನಿಷ್ಟ ನೂರು ಜನ ನಾಯಕರು ಭಾಗವಹಿಸಬೇಕೆಂದು ಸೂಚಿಸಿದ್ದೇವೆ. ಜನವರಿ 15 ಮತ್ತು 16 ರಂದು ಉಸ್ತುವಾರಿಗಳು ಆಯಾ ಜಿಲ್ಲೆಗೆ ತೆರಳಿ ಕಾರ್ಯಕ್ರಮದ ಉಸ್ತುವಾರಿ ಸಭೆ ನಡೆಸಬೇಕು ಅಂತಾನೂ ಸೂಚಿಸಿದ್ದೇವೆ ಎಂದಿದ್ದಾರೆ.
ಗಾಂಧಿ ಸ್ಮರಣಾರ್ಥ ಕಾರ್ಯಕ್ರಮದ ಪೂರ್ವಾ ಸಿದ್ದತಾ ಸಭೆಯಲ್ಲಿ ಭಾಗಿಯಾಗಿದ್ದ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ತ್ಯಾಗದ ಮಾತನ್ನಾಡಿದ್ದಾರೆ. ಸಭೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅಧಿಕಾರವನ್ನ ತ್ಯಾಗ ಮಾಡಿದ್ದಾರೆ. ನಾವೆಲ್ಲರೂ ಅದೇ ದಾರಿಯಲ್ಲಿ ನಡೆಯಬೇಕು. ಬಿಜೆಪಿ-ಜೆಡಿಎಸ್ನವರು ಅಪಪ್ರಚಾರ ಮಾಡ್ತಿದ್ದಾರೆ. ಜೆಡಿಎಸ್ನವ್ರು ಯಾರ ಜೊತೆಗೆ ಬೇಕಾದ್ರೂ ಸೇರಿಕೊಳ್ತಾರೆ. ಬಿಜೆಪಿಯವರು ಗೋಡ್ಸೆ ವಂಶಸ್ಥರು.. ನಾವು ಗಾಂಧಿ ವಂಶಸ್ಥರು.. ಹೀಗಾಗಿ ಕರ್ನಾಟಕದ ಜನ ನಮ್ಮ ಜೊತೆಗೆ ಇದ್ದಾರೆ ಎಂದಿದ್ದಾರೆ.
ಇನ್ನು ಇದೇ ವೇಳೆ ಮಾತನಾಡಿದ ಡಿಕೆ ಶಿವಕುಮಾರ್ ಕೂಡ ಸೋನಿಯಾಗಾಂಧಿ, ರಾಹುಲ್ಗಾಂಧಿ ತ್ಯಾಗದ ಬಗ್ಗೆ ಮಾತನಾಡಿದ್ರು.. ಗಾಂಧಿ ಭಾರತ ಸಭೆಯಲ್ಲಿ ಮಾತನಾಡಿದ ಡಿ ಕೆ ಶಿವಕುಮಾರ್, ಗ್ರಾಮ ಪಂಚಾಯತಿ, ಎಂಎಲ್ಎ, ಸಚಿವ ಸ್ಥಾನಕ್ಕೆ ಹೊಡೆದಾಡುತ್ತೇವೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಪಿಎಂ ಸ್ಥಾನ ತ್ಯಾಗ ಮಾಡಿದ್ದರು. ಆರ್ಥಿಕ ತಜ್ಞ ದೇಶವನ್ನು ಮುನ್ನಡೆಸಬೇಕು ಎಂದು ಮನಮೋಹನ್ ಸಿಂಗ್ ಪ್ರಧಾನಿ ಮಾಡಿದ್ರು. ಅವಕಾಶಗಳು ನಿಮ್ಮ ಮನೆ ಬಾಗಿಲಿಗೆ ಬರಲ್ಲ ಎಂಬುದು ಇಂದಿರಾಗಾಂಧಿ ಸಂದೇಶ. ನಮ್ಮ ಪಕ್ಷ ಮುಂದೆಯೂ ಅಧಿಕಾರಕ್ಕೆ ಬಂದೇ ಬರಲಿದೆ. ನಾನು ಇರುತ್ತೇನೋ? ಇಲ್ಲವೋ ಅನ್ನೋದು ಮುಖ್ಯ ಅಲ್ಲ. ನಾನು ಕಾಂಗ್ರೆಸ್ಸಿಗ, ನನಗೆ ಗೊತ್ತು ಹೇಗೆ ಅಧಿಕಾರಕ್ಕೆ ತರೋದು ಅಂತಾ ಎಂದಿದ್ದಾರೆ.
