ಕೇಂದ್ರ ಸರ್ಕಾರ ತಂದಿರುವ ವಿವಾದಾತ್ಮಕ ಕೃಷಿ ಕಾನೂನುಗಳ ಬಗ್ಗೆ ರೈತ ಸಮುದಾಯ ದೇಶಾದ್ಯಂತ ವ್ಯಾಪಕವಾಗಿ ವಿರೋಧ ವ್ಯಕ್ತಪಡಿಸುತ್ತಿದೆ. ಆದರೆ ಕೇಂದ್ರ ಸರ್ಕಾರ ಅನ್ನದಾತನ ಅಳಲಿನ ನಡುವೆಯೂ ವಿವಾದಾತ್ಮಕ ಕಾನೂನುಗಳನ್ನು ಜಾರಿಗೆ ತರಲು ಹೊರಟಿದೆ. ಇದರಿಂದ ಆಕ್ರೋಶಗೊಂಡಿರುವ ರೈತರು ಇಂದು ದೆಹಲಿಯಲ್ಲಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸಲಿದ್ದಾರೆ.
ವಿವಾದಾತ್ಮಕ ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಮಾಡಲು ನಡೆಸಬೇಕಾದ ಹೋರಾಟದ ರೂಪುರೇಷೆ ಬಗ್ಗೆ ಚರ್ಚಿಸಲು ದೇಶದ 500ಕ್ಕೂ ಹೆಚ್ಚು ರೈತ ಸಂಘಟನೆಗಳ ಒಕ್ಕೂಟವಾದ ಎಐಕೆಎಸ್ಸಿಸಿ ಅಕ್ಟೋಬರ್ 27ರಂದು ಸಭೆ ಕರೆದಿತ್ತು. ನವದೆಹಲಿಯ ಗುರುದ್ವಾರ ರಾಕಬ್ಗಂಜ್ನಲ್ಲಿ ನಡೆದ ಸಭೆಯಲ್ಲಿ ದೆಹಲಿ ಚಲೋ, ರೈಲ್ ರೋಕೋ, ಅನಿರ್ದಿಷ್ಟಾವಧಿ ಧರಣಿ ಮಾಡಬೇಕು ಎಂದು ನಿರ್ಧರಿಸಲಾಗಿತ್ತು. ರೈತರು ತಮ್ಮ ಹೋರಾಟವನ್ನು ತೀವ್ರಗೊಳಿಸುತ್ತಾರೆ ಎಂದರಿತ ಕೇಂದ್ರ ಸರ್ಕಾರ ನವೆಂಬರ್ 13ರಂದು ಪಂಜಾಬ್ ರೈತ ಮುಖಂಡರೊಂದಿಗೆ ಸಭೆ ನಡೆಸಿತು. ರೈತ ಮುಖಂಡರು ಹೊಸ ಕೃಷಿ ಕಾನೂನುಗಳು ಹೇಗೆ ರೈತ ಸಮುದಾಯಕ್ಕೆ ಮಾರಕ ಎಂಬುದನ್ನು ವಿವರಿಸಿ ಕೆಲವೊಂದು ಬೇಡಿಕೆ ಇಟ್ಟರು. ಆದರೆ ರೈತ ಮುಖಂಡರ ಬೇಡಿಕೆಗಳಿಗೆ ಕೇಂದ್ರ ಸರ್ಕಾರದಿಂದ ಯಾವುದೇ ಖಚಿತವಾದ ಭರವಸೆ ಸಿಕ್ಕಿಲ್ಲ. ಅದರಿಂದಾಗಿಯೇ ದೆಹಲಿಯಲ್ಲಿ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ರೈತರು ದೆಹಲಿಯತ್ತ ಧಾವಿಸುತ್ತಾರೆ, ‘ದಿಲ್ಲಿ ಚಲೋ’ ನಡೆಯುತ್ತದೆ, ಪಂಜಾಬಿನಲ್ಲಿ ‘ರೈಲ್ ರೋಕೋ’ ಚಳವಳಿ ಮತ್ತೆ ಶುರುವಾಗುತ್ತದೆ ಎಂಬ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಡಿಸಂಬರ್ 3ರಂದು ಎರಡನೇ ಸುತ್ತಿನ ಸಭೆಗೆ ರೈತಮುಖಂಡರು ಹಾಗೂ ರೈತ ಸಂಘಗಳನ್ನು ಆಹ್ವಾನಿಸಿದೆ. ಆದರೆ ಮೊದಲ ಸಭೆ ವಿಫಲವಾದ ಹಿನ್ನೆಲೆಯಲ್ಲಿ ರೈತ ಸಂಘಟನೆಗಳು ತಮ್ಮ ದೆಹಲಿಯ ಅನಿರ್ದಿಷ್ಟಾವಧಿ ಧರಣಿಯನ್ನು ಕೈಬಿಡಲು ಒಪ್ಪಿಲ್ಲ.
ವಿವಾದಾತ್ಮಕ ಕೃಷಿ ಕಾನೂನುಗಳನ್ನು ಹಿಂಪಡೆಯಲು ಮುಖ್ಯವಾಗಿ ಎಲ್ಲಾ ಬಗೆಯ ಕೃಷಿ ಉತ್ಪನ್ನಗಳಿಗೆ ಕಾನೂನುಬದ್ಧವಾಗಿ ಖಾತರಿಪಡಿಸಿದ ಕನಿಷ್ಟ ಬೆಂಬಲ ಬೆಲೆಯನ್ನು ನೀಡಲು ಕೇಂದ್ರ ಸರ್ಕಾರ ಬದ್ಧವಾಗಿಲ್ಲ ಎಂಬುದು ರೈತ ಸಂಘಟನೆಗಳ ಆರೋಪ. ಆದುದರಿಂದ ಎಐಕೆಎಸ್ಸಿಸಿ, ರಾಷ್ಟ್ರೀಯ ಕಿಸಾನ್ ಮಹಾಸಂಗ್ ಮತ್ತು ಭಾರತೀಯ ಕಿಸಾನ್ ಯೂನಿಯನ್ ಸೇರಿದಂತೆ 500ಕ್ಕೂ ಹೆಚ್ಚು ರೈತ ಸಂಘಟನೆಗಳು ದೆಹಲಿ ಚಲೋ ಮತ್ತು ಅನಿರ್ದಿಷ್ಟಾವಧಿ ಧರಣಿ ಕೈಗೆತ್ತಿಕೊಂಡಿವೆ.
ಪ್ರತಿಭಟನೆ ಹತ್ತಿಕ್ಕುವ ಯತ್ನ
ಒಂದೆಡೆ ದೇಶದ ವಿವಿಧ ಭಾಗಗಳಿಂದ ಬರುತ್ತಿರುವ ಸಹಸ್ರಾರು ರೈತರು ದೆಹಲಿಯ ರಾಮಲೀಲಾ ಮೈದಾನದಲ್ಲಿ ಸೇರಲು ಅವಕಾಶ ನೀಡಿಲ್ಲ. ಮೊದಲಿಗೆ ರಾಮಲೀಲಾ ಮೈದಾನದಲ್ಲಿ ಪ್ರತಿಭಟನೆ ನಡೆಸಲು ಅನುಮತಿ ನೀಡಿತ್ತಾದರೂ ನಂತರ ಕೋವಿಡ್ -19 ಕಾರಣ ಕೊಟ್ಟು ಒಪ್ಪಿಗೆಯನ್ನು ಹಿಂಪಡೆದಿದೆ. ಒಂದೊಮ್ಮೆ ಕೋವಿಡ್-19 ಕಾರಣಕ್ಕಾಗಿಯೇ ಒಪ್ಪಿಗೆ ಹಿಂಪಡೆಯಲಾಗುತ್ತದೆ ಎನ್ನುವುದಾದರೆ ಮೊದಲಿಗೆ ‘ಕರೋನಾ ಸೋಂಕು ಹರಡಬಹುದು’ ಎಂಬ ವಿಷಯ ಗೊತ್ತಿರಲಿಲ್ಲವೇ?’ ಎಂದು ರೈತ ಸಂಘಟನೆಗಳು ಪ್ರಶ್ನಿಸುತ್ತಿವೆ. ಹಾಗೆಯೇ ರೈತರ ಪ್ರತಿಭಟನೆ ಹತ್ತಿಕ್ಕಲೆಂದೇ ಅನುಮತಿ ಹಿಂಪಡೆಯಲಾಗಿದೆ ಎಂದು ದೂರಿವೆ.
ಸದ್ಯ ಜಂತರ್ ಮಂತರ್ ನಲ್ಲಿ 100 ಜನ ಸೇರಿ ಪ್ರತಿಭಟನೆ ನಡೆಸಬಹುದು ಎಂದು ಅನುಮತಿ ನೀಡಲಾಗಿದೆ. ಆದರೆ ದೇಶಾದ್ಯಂತ ಬರುತ್ತಿರುವ ರೈತರ ಸಂಖ್ಯೆ ಸಾವಿರಾರು. ಈ ನಡುವೆ ದೆಹಲಿಗೆ ಹತ್ತಿರ ಇರುವ ರಾಜ್ಯಗಳಾದ ಹರಿಯಾಣ, ಪಂಜಾಬ್, ಉತ್ತರ ಪ್ರದೇಶ, ಉತ್ತರಾಖಂಡ ಹಾಗೂ ರಾಜಸ್ಥಾನ ರಾಜ್ಯಗಳಿಂದ ರೈತರು ಟ್ರ್ಯಾಕ್ಟರ್ ಮೂಲಕ ಬರುತ್ತಿದ್ದಾರೆ. ಎಲ್ಲರೂ ದೆಹಲಿಯಲ್ಲಿ ಸೇರಿ ನಂತರ ಅನಿರ್ಧಿಷ್ಟಾವಧಿ ಧರಣಿ ನಡೆಸಲು ತೀರ್ಮಾನಿಸಲಾಗಿದೆ. ಆದರೆ ರೈತರು ದೆಹಲಿಗೆ ಬರದಂತೆ ದೆಹಲಿಯ 9 ಗಡಿಯಲ್ಲಿ ರೈತರನ್ನು ತಡೆಯಲಾಗುತ್ತಿದೆ. ಕೆಲವೆಡೆ ರೈತರು ಅಲ್ಲೇ ಧರಣಿ ಆರಂಭಿಸಿದ್ದಾರೆ. ಇನ್ನು ಕೆಲವೆಡೆ ರೈತ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಷ್ಟೆಲ್ಲದರ ನಡುವೆಯೂ ರೈತ ಸಂಘಟನೆಗಳು ದಾರಿ ಮಧ್ಯೆ ಮತ್ತು ಜಂತರ್ ಮಂತರ್ ನಲ್ಲಿಯೇ ಅನಿರ್ದಿಷ್ಟಾವಧಿ ಧರಣಿ ನಡೆಸಲು ನಿರ್ಧರಿಸಿವೆ.