ಬಿಜೆಪಿಯಲ್ಲಿ ಉನ್ನತ ಮಟ್ಟದ ಬದಲಾವಣೆಗೆ ವೇದಿಕೆ ಸಿದ್ಧವಾಗುತ್ತಿದೆ. ಕಳೆದ ವರ್ಷದ ʼಆಪರೇಷನ್ ಕಮಲʼದ ಮೂಲಕ ಅಧಿಕಾರ ಹಿಡಿದ ಬಿಜೆಪಿ, ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆ ವಿಚಾರದಲ್ಲೇ ಚೌಕಾಸಿ ಶುರು ಮಾಡಿತ್ತು. ಬಿ.ಎಸ್ ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿ ಪಟ್ಟ ದೊರಕಬಾರದು ಎನ್ನುವ ಎಲ್ಲಾ ಲೆಕ್ಕಾಚಾರಗಳು ನಡೆದಿದ್ದವು. ಆದರೂ ಪಟ್ಟು ಬಿಡದ ಬಿ.ಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಪದವಿ ಪಡೆದೇ ತೀರುವೆ ಎನ್ನುವ ಹಠಕ್ಕೆ ಬಿದ್ದು, ಮುಖ್ಯಮಂತ್ರಿ ಪದವಿ ಪಡೆದುಕೊಂಡರು. ಅದೂ ಕೂಡ ಹೈಕಮಾಂಡ್ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆ ಬಗ್ಗೆ ವಿಳಂಬ ನೀತಿ ಅನುಸರಿಸಿದ್ದಕ್ಕೆ ಏಕಾಏಕಿ ರಾಜಭವನಕ್ಕೆ ತೆರಳಿ ಅಧಿಕಾರ ರಚನೆಗೆ ಹಕ್ಕು ಮಂಡಿಸಿ, ಹೈಕಮಾಂಡ್ ಗೆ ಮಂಡಿಗೆ ತಿನ್ನಿಸಿ ಮುಖ್ಯಮಂತ್ರಿ ಆಗಿದ್ದರು. ಅಂದಿನಿಂದಲೇ ಹೈಕಮಾಂಡ್ ಜೊತೆಗೆ ಬಿ.ಎಸ್ ಯಡಿಯೂರಪ್ಪ ಸಂಘರ್ಷ ಶುರುವಾಗಿತ್ತು. ಆದರೂ ಬಹಿರಂಗವಾಗಿ ಬಿ.ಎಸ್ ಯಡಿಯೂರಪ್ಪ ಅವರನ್ನು ಕೆಣಕುವ ಧೈರ್ಯವಿಲ್ಲದ ಬಿಜೆಪಿ ಟಾಪ್ ಲೀಡರ್ಸ್ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಅಡ್ಡಿ ಆತಂಕಗಳನ್ನು ಮಾಡುತ್ತಲೇ ಬಂದಿದ್ದರು.
ಸಚಿವ ಸಂಪುಟ ವಿಸ್ತರಣೆಯಲ್ಲೇ ಕೊಕ್ಕೆ..!
ಕಳೆದ ವರ್ಷ ಜುಲೈನಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಬಿ.ಎಸ್ ಯಡಿಯೂರಪ್ಪ ಅವರಿಗೆ ಆಗಸ್ಟ್ ಮೊದಲ ವಾರದಲ್ಲೇ ಸಂಕಷ್ಟದ ದಿನಗಳು ಶುರುವಾದವು. ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ಶುರುವಾದ ಉತ್ತರ ಕರ್ನಾಟಕ ಭಾಗದ ಭಾರೀ ಪ್ರವಾಹ ತಿಂಗಳಾದರೂ ಕಡಿಮೆಯಾಗಲಿಲ್ಲ. ಅಧಿಕಾರ ಹಿಡಿದ ದಿನದಿಂದಲೂ ಕಾಲಿಗೆ ಚಕ್ರ ಕಟ್ಟಿಕೊಂಡು ಸುತ್ತಬೇಕಾದ ಇಕ್ಕಟ್ಟಿಗೆ ಸಿಲುಕಬೇಕಾಯ್ತು. ನಂತರ ಅಲ್ಲಲ್ಲಿ ರಾಷ್ಟ್ರೀಯ ನಾಯಕರ ಮನವೊಲಿಸಿ ಸಂಪುಟ ವಿಸ್ತರಣೆ ಮಾಡಲು ಕಸರತ್ತು ನಡೆಸಿದರಾದರೂ ಹೈಕಮಾಂಡ್ ಯಡಿಯೂರಪ್ಪ ಮಾತಿಗೆ ಸೊಪ್ಪು ಹಾಕಲಿಲ್ಲ. ಕೊನೆಗೆ 25 ದಿನಗಳ ಬಳಿಕ ಮೂವರು ಉಪಮುಖ್ಯಮಂತ್ರಿಗಳನ್ನಾಗಿ ಮಾಡಿ ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ಸಿಕ್ಕಿತ್ತು. ಹೈಕಮಾಂಡ್ ನ ಈ ನಡೆ ಬಿ.ಎಸ್ ಯಡಿಯೂರಪ್ಪ ಅವರನ್ನು ಕಟ್ಟಿಹಾಕಲು ತೆಗೆದುಕೊಂಡ ಕ್ರಮ ಎಂದೇ ವಿಶ್ಲೇಷಣೆ ಮಾಡಲಾಯ್ತು.
ಅಂತಿಮವಾಗಿ ಪ್ರವಾಹ ಪರಿಹಾರದಲ್ಲೂ ಜಟಾಪಟಿ..!
ಉತ್ತರ ಕರ್ನಾಟಕ ಭಾಗದಲ್ಲಿ ಸಾವಿರಾರು ಮನೆಗಳು ಧ್ವಂಸ ಆಗಿದ್ದವು. ಸಾವಿರಾರು ಎಕರೆ ಭೂಮಿಯಲ್ಲಿ ಬೆಳೆದಿದ್ದ ಫಸಲು ನೀರು ಪಾಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಬಂದಿದ್ದರೂ ಉತ್ತರ ಕರ್ನಾಟಕ ಭಾಗದ ಪ್ರವಾಹದ ಬಗ್ಗೆ ಒಂದಕ್ಷರ ಮಾತನಾಡದೆ ವಾಪಸ್ ಹೋಗಿದ್ದರು. ಈ ವೇಳೆ ಬಿ.ಎಸ್ ಯಡಿಯೂರಪ್ಪ ಅವರ ಮೇಲಿನ ಕೋಪದಿಂದ ಪ್ರವಾಹ ಪರಿಹಾರ ಕೊಡ್ತಿಲ್ಲ ಎಂದು ರಾಜ್ಯಾದ್ಯಂತ ಆಕ್ರೋಶ ಹೊರಹೊಮ್ಮಲು ಶುರುವಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಕಿಸಾನ್ ಸಮ್ಮಾನ್ ಕಾರ್ಯಕ್ರಮದಲ್ಲಿ ಭಾಗಿಯಾಗಲು ತುಮಕೂರಿಗೆ ಬಂದಿದ್ದಾಗ, ನೇರವಾಗಿಯೇ ಪರಿಹಾರ ಕೇಳಿದ್ದರು. ಕರ್ನಾಟಕ ಪ್ರವಾದಿಂದ ತತ್ತರಿಸಿದೆ ಕೇಂದ್ರ ಸರ್ಕಾರ ಕೂಡಲೇ ಪರಿಹಾರದ ಹಣವನ್ನು ಬಿಡುಗಡೆ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಎದುರಲ್ಲೇ ಆಗ್ರಹ ಮಾಡಿದ್ದರು. ಇಕ್ಕಟ್ಟಿಗೆ ಸಿಲುಕಿದ್ದ ಕೇಂದ್ರ ಸರ್ಕಾರ ಪರಿಹಾರದ ಸ್ವಲ್ಪ ಭಾಗವನ್ನು SDRF ಫಂಡ್ ಗೆ ಕೊಟ್ಟಿತ್ತು.
ಮೇಯರ್, ಸ್ಪೀಕರ್ ಆಯ್ಕೆಯಲ್ಲೂ ಕಡಿವಾಣ..!
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೈಕಮಾಂಡ್ ವಿರುದ್ಧವೇ ತಿರುಗಿಬಿದ್ದರು ಎನ್ನುವುದು ದೊಡ್ಡ ಮಟ್ಟದ ಸುದ್ದಿಯಾಗಿತ್ತು. ಆ ಬಳಿಕ ಬಿ.ಎಸ್ ಯಡಿಯೂರಪ್ಪ ಅವರಿಂದ ತೆರವಾಗಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನವನ್ನು ಸಂಘ ಪರಿವಾರದ ಮೂಲದ ನಳೀನ್ ಕುಮಾರ್ ಕಟೀಲ್ ಅವರನ್ನು ಆಯ್ಕೆ ಮಾಡುವ ಮೂಲಕ ಕೌಂಟರ್ ಕೊಡಲಾಯ್ತು. ವಿಧಾನಸಭಾ ಸ್ಪೀಕರ್ ಆಗಿ ಜಗದೀಶ್ ಶೆಟ್ಟರ್, ಕೆ.ಜಿ ಬೋಪಯ್ಯ ಅಥವಾ ಸುರೇಶ್ ಕುಮಾರ್ ಅವರನ್ನು ಆಯ್ಕೆ ಮಾಡಲು ಬಿ.ಎಸ್ ಯಡಿಯೂರಪ್ಪ ಮುಂದಾಗಿದ್ದರು. ಆದರೆ ಅದಕ್ಕೂ ಬೌನ್ಸ್ ಬ್ಯಾಕ್ ಮಾಡಿದ ಹೈಕಮಾಂಡ್ ಸಂಘ ಪರಿವಾರ ಮೂಲಕ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಸ್ಪೀಕರ್ ಸ್ಥಾನಕ್ಕೆ ತಂದು ಕೂರಿಸಿತು. ಆ ಬಳಿಕ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಆಯ್ಕೆಯಲ್ಲೂ ಬಿಎಸ್ ಯಡಿಯೂರಪ್ಪ ತೀರ್ಮಾನಿಸಿದ ನಾಲ್ಕು ಹೆಸರುಗಳನ್ನು ಕಸದ ಬುಟ್ಟಿಗೆ ಹಾಕಿ, ಏಕಾಏಕಿ ಗೌತಮ್ ಕುಮಾರ್ ಜೈನ್ ಅವರನ್ನು ಸೂಚಿಸಿತ್ತು. ಅಲ್ಲೀವರೆಗೂ ಗೌತಮ್ ಕುಮಾರ್ ಜೈನ್ ಯಾರು ಎನ್ನುವುದೇ ಗೊತ್ತಿರಲಿಲ್ಲ ಎನ್ನುವುದು ಗಮನಿಸಬೇಕಾದ ವಿಚಾರ.
ಬಿ.ಎಸ್ ಯಡಿಯೂರಪ್ಪ ವಿರುದ್ಧ ಯಾಕೀ ಕೋಪ..?
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸಮರ್ಥ ನಾಯಕ ಎನ್ನುವುದರಲ್ಲಿ ಎರಡು ಮಾತಿಲ್ಲ. ಆಪ್ತರಿಗಷ್ಟೇ ಮಣೆ ಹಾಕ್ತಾರೆ ಎನ್ನುವ ಮಾತಿದ್ದರೂ ಈ ಬಾರಿ ಅಷ್ಟೊಂದು ಹೇಳಿಕೊಳ್ಳುವ ಮಟ್ಟದಲ್ಲಿ ಆಪ್ತರ ಗುಂಪು ಕಟ್ಟಿಲ್ಲ. ಆದರೂ ಹೈಕಮಾಂಡ್ ನಾಯಕರು ಬಿ.ಎಸ್ ಯಡಿಯೂರಪ್ಪ ಅವರನ್ನು ಸ್ವಚ್ಛಂದ ಆಡಳಿತ ಮಾಡಲು ಬಿಟ್ಟಿದ್ದಾರೆಯೇ..? ಎಂದರೆ ಇಲ್ಲ. ಕಾಲಕ್ರಮೇಣ ಬಿಎಸ್ ಯಡಿಯೂರಪ್ಪ ಅವರ ಹಿಡಿತದಿಂದ ಪಕ್ಷವನ್ನು ಬಿಡಿಸಲು ಬಿಜೆಪಿ ಹೈಕಮಾಂಡ್ ಮುಂದಾಗಿದೆ ಎನ್ನಲಾಗಿದೆ. ಒಂದು ವೇಳೆ ಬಿಜೆಪಿ ಹೈಕಮಾಂಡ್ ನಾಯಕರು ಬಿ.ಎಸ್ ಯಡಿಯೂರಪ್ಪ ಅವರನ್ನು ಏಕಾಏಕಿ ಸಿಎಂ ಸ್ಥಾನದಿಂದ ಕೆಳಕ್ಕೆ ಇಳಿಸಿದರೆ, ಬಿಎಸ್ ಯಡಿಯೂರಪ್ಪ ಶಕ್ತಿ ಎನ್ನಲಾಗುವ ಲಿಂಗಾಯಿತ ಸಮುದಾಯ ಕಮಲದ ವಿರುದ್ಧ ತಿರುಗಿ ಬೀಳುವ ಸಾಧ್ಯತೆಯಿದೆ. ಅದೊಂದೇ ಕಾರಣಕ್ಕೆ ಬಿ.ಎಸ್ ಯಡಿಯೂರಪ್ಪ ಅವರ ಶಕ್ತಿಯನ್ನು ಹೇಗೆಲ್ಲಾ ಕುಂದಿಸಬಹುದು ಅದನ್ನೆಲ್ಲಾ ಹೈಕಮಾಂಡ್ ಮಾಡುತ್ತಿದೆ ಎನ್ನಲಾಗಿದೆ.
ಇದೀಗ ನಾಯಕತ್ವ ಬದಲಾದರೆ..? ಲಿಂಗಾಯತರಿಗೇ ಸ್ಥಾನ..!
ಇದೀಗ ನಾಯಕತ್ವ ಬದಲಾವಣೆಗೆ ಲಿಂಗಾಯತ ಸಮುದಾಯದ ನಾಯಕರನ್ನೇ ಮುಂದೆ ಬಿಟ್ಟಿರುವ ಹೈಕಮಾಂಡ್ ನಾಯಕರು ಮಾಸ್ಟರ್ ಪ್ಲ್ಯಾನ್ ಸಿದ್ಧ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಬಸನಗೌಡ ಪಾಟೀಲ್ ಯತ್ನಾಳ್, ಮುರುಗೇಶ್ ನಿರಾಣಿ, ಉಮೇಶ್ ಕತ್ತಿ ಹಿಂದಿನ ಯೋಜನಾ ನಾಯಕ ಜಗದೀಶ್ ಶೆಟ್ಟರ್ ಎನ್ನಲಾಗಿದೆ. ದೆಹಲಿ ನಾಯಕರ ಸಂದೇಶ ಬರುತ್ತಿದ್ದಂತೆ ಶೆಟ್ಟರ್ ಸೂಚನೆಯಂತೆಯೇ ಸಭೆಗಳು ನಡೆಯುತ್ತಿದ್ದು, ಮಾಧ್ಯಮಗಳಿಗೆ ಸೂಕ್ತ ಮಾಹಿತಿಯನ್ನೂ ಕೊಡಲಾಗ್ತಿದೆ. ಉಳಿದ ಅವಧಿಗೆ ಜಗದೀಶ್ ಶೆಟ್ಟರ್ ಗೆ ಮುಖ್ಯಮಂತ್ರಿ ಪಟ್ಟ ಕಟ್ಟುವುದು, ಒಂದು ವೇಳೆ ಶೆಟ್ಟರ್ ಗೆ ಅಷ್ಟೊಂದು ಶಾಸಕರ ಬಲ ಸಿಗದಿದ್ದರೆ ಹಿಂದುತ್ವ ಅಜೆಂಡಾದಲ್ಲಿ ಬಸನಗೌಡ ಪಾಟೀಲರನ್ನೇ ಮುಖ್ಯಮಂತ್ರಿ ಹುದ್ದೆಗೆ ಕೂರಿಸುವ ಮೂಲಕ ಲಿಂಗಾಯತ ಸಮುದಾಯದ ಕೋಪವನ್ನು ತಣಿಸುವುದು. ಪ್ರಖರ ಹಿಂದುತ್ವವಾದಿಗಳನ್ನು ಪಕ್ಷದತ್ತ ಸೆಳೆಯುವುದು ಹೈಕಮಾಂಡ್ ಮುಂದಿನ ಯೋಜನೆ. ಬಿಜೆಪಿಯಲ್ಲಿ 75 ವರ್ಷದ ಬಳಿಕ ಸ್ವಯಂ ನಿವೃತ್ತಿ ಘೋಷಣೆಯಾಗಿದೆ. ಅದರಂತೆ ಬಿಎಸ್ ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡಿ ಬೇರೊಂದು ಹುದ್ದೆ ಕೊಡುವ ಮೂಲಕ ಪಕ್ಷದ ಮೇಲಿನ ಹಿಡಿತದಿಂದ ದೂರ ಮಾಡಲು ಆಲೋಚನೆಗೆ ಸಾಕಷ್ಟು ಅಡಿಪಾಯ ಹಾಕಲಾಗ್ತಿದೆ ಎನ್ನಲಾಗಿದೆ.
ಶಿಘ್ರದಲ್ಲೇ ಯಡಿಯೂರಪ್ಪ ಸಿಕ್ಕೇ ಸಿಗುತ್ತಾ ಗೇಟ್ ಪಾಸ್..?
ಬಿ.ಎಸ್ ಯಡಿಯೂರಪ್ಪ ನಮ್ಮ ಮುಖ್ಯಮಂತ್ರಿ ಮಾತ್ರ ಎಂದಿರುವ ಯತ್ನಾಳ್ ಹೇಳಿಕೆ ಸಾಕಷ್ಟು ಅರ್ಥವನ್ನು ಕೊಡುತ್ತಿದೆ. ಹೈಕಮಾಂಡ್ ಸೂಚನೆ ಇಲ್ಲದೆ ಬಿಜೆಪಿ ನಾಯಕರು ಇಷ್ಟೊಂದು ಮುಂದುವರಿಯಲು ಸಾಧ್ಯವೇ ಇಲ್ಲ ಎನ್ನುವುದು ರಾಜಕೀಯ ಪಂಡಿತರ ಮಾತು. ಈಗಾಗಲೇ ಒಮ್ಮೆ ಸಭೆ ನಡೆಸಿದ್ದಾರೆ. ಇದೀಗ ಮತ್ತೆ ಬುಧವಾರ ಇನ್ನೊಂದು ಬಂಡಾಯ ಸಭೆ ಕರೆದಿದ್ದಾರೆ ಎನ್ನಲಾಗಿದೆ. ಪಕ್ಷನಿಷ್ಠ ನಾಯಕರು ಮಾತ್ರ ನಾಯಕತ್ವ ಬದಲಾವಣೆ ಬಗ್ಗೆ ತಮ್ಮದೇ ಆದ ಮಾತುಗಳನ್ನು ಹೇಳುತ್ತಿದ್ದಾರೆ. ಅದನ್ನೆಲ್ಲಾ ಹೈಕಮಾಂಡ್ ನೋಡಿಕೊಳ್ಳುತ್ತದೆ ಎನ್ನುತ್ತಿದ್ದಾರೆ. ಬಿಎಸ್ ಯಡಿಯೂರಪ್ಪ ಪರವಾಗಿರುವ ನಾಯಕರು ಮಾತ್ರ ಸಭೆ ಮಾಡಿದ್ದು ತಪ್ಪು. ಅಸಮಾಧಾನ ಇದ್ದರೆ ಸಿಎಂ ಜೊತೆಗೆ ಚರ್ಚೆ ನಡೆಸಿ ಬಗೆಹರಿಸಿಕೊಳ್ಳಬೇಕಿತ್ತು ಎನ್ನುತ್ತಿದ್ದಾರೆ. ಆದರೆ ನಾನು ಸಿಎಂ ಮಾತುಕತೆಗೆ ಕರೆದರೂ ನಾನು ಹೋಗುವುದಿಲ್ಲ ಎಂದು ಕಡ್ಡಿ ತುಂಡಾದಂತೆ ಮಾತನಾಡಿದ್ದಾರೆ ಯತ್ನಾಳ್. ಒಟ್ಟಾರೆ, ಯತ್ನಾಳ್ ನೇರವಾಗಿ ಯಡಿಯೂರಪ್ಪ ವಿರುದ್ಧ ತೊಡೆ ತಟ್ಟಿ ನಿಂತಿದ್ದಾರೆ. ಮತ್ತೊಂದು ಸಭೆ ಬಳಿಕ ಹೈಕಮಾಂಡ್ ಅಂಗಳಕ್ಕೆ ವಿಚಾರ ಅಧಿಕೃತವಾಗಿ ಪ್ರವೇಶ ಪಡೆಯಲಿದೆ. ನಂತರ ಮುಂದಿನ ಬೆಳವಣಿಗೆಗಳು ಶುರುವಾಗಲಿವೆ ಎನ್ನಲಾಗ್ತಿದೆ. ಆದರೆ ಕುರ್ಚಿಯಿಂದ ಏಕಾಏಕಿ ಬಿ.ಎಸ್ ಯಡಿಯೂರಪ್ಪ ಅವರನ್ನು ಇಳಿಸಿದ್ರೆ ಮುಂದೇನಾಗಲಿದೆ..? ಗೊತ್ತಿಲ್ಲ. ಕಾಲವೇ ಉತ್ತರ ಕೊಡಬೇಕಿದೆ.