ಕರೋನಾ ನಿಯಂತ್ರಣ ಮಾಡಬೇಕು ಎನ್ನುವ ಏಕೈಕ ಕಾರಣಕ್ಕೆ ಕೇಂದ್ರ ಸರ್ಕಾರ ಲಾಕ್‌ಡೌನ್ ಆದೇಶ ಮಾಡಿತ್ತು. ಅದೂ ಕೂಡ 2ನೇ ಬಾರಿಗೆ ಲಾಕ್‌ಡೌನ್ ವಿಸ್ತರಣೆ ಮಾಡಿ ಪ್ರಧಾನಿ ನರೇಂದ್ರ ಮೋದಿ ಆದೇಶ ಮಾಡಿದ್ದರು. ಮೇ 3ರ ತನಕ ಲಾಕ್‌ಡೌನ್ ವಿಸ್ತರಣೆ ಮಾಡುವ ವೇಳೆ ಪ್ರಧಾನಿ ನರೇಂದ್ರ ಮೋದಿ ಒಂದು ಮಾತು ಹೇಳಿದ್ರು. ಏಪ್ರಿಲ್ 20ರೊಳಗೆ ಕರೋನಾ ಸೋಂಕು ಕಡಿಮೆಯಾಗುವ ಲಕ್ಷಣ ಕಾಣಿಸಿದರೆ, ಲಾಕ್ಡೌನ್ ನಿಂದ ಕೆಲವೊಂದು ವಿನಾಯ್ತಿ ನೀಡಬಹುದು. ನೀವು ಮನೆಯಿಂದ ಹೊರಕ್ಕೆ ಬರಬೇಡಿ ಎಂದು ಮನವಿ ಮಾಡಿದ್ದರು. ಪ್ರಧಾನಿ ನರೇಂದ್ರ ಮೋದಿ ಹೇಳುತ್ತಿದ್ದಂತೆ ʼರೋಗಿ ಬಯಸಿದ್ದು ಹಾಲು ಅನ್ನ, ಡಾಕ್ಟರ್ ಹೇಳಿದ್ದು ಹಾಲು ಅನ್ನʼ ಎನ್ನುವಂತೆ ಏಪ್ರಿಲ್ 20 ರಿಂದ ಐಟಿ ಬಿಟಿ ಕಂಪನಿಗಳು ತೆರೆಯಲು ಯಾವುದೇ ಸಮಸ್ಯೆ ಇಲ್ಲ. ಆದರೆ ಶೇಕಡ 50ರಷ್ಟು ನೌಕರರು ಮಾತ್ರ ಕೆಲಸ ಮಾಡಬೇಕು ಎನ್ನುವ ನಿರ್ಧಾರಕ್ಕೆ ಬಂದಿತ್ತು.
ಶುಕ್ರವಾರವಷ್ಟೇ ಐಟಿ ಬಿಟಿ ಕಂಪನಿಗಳ ಮುಖ್ಯಸ್ಥರ ಜೊತೆ ಸಭೆ ನಡೆಸಿದ್ದ ಐಟಿ ಬಿಟಿ ಸಚಿವರೂ ಆಗಿರುವ ಡಿಸಿಎಂ ಅಶ್ವತ್ಥ ನಾರಾಯಣ, ಏಪ್ರಿಲ್ 20ನೇ ತಾರೀಕಿನಿಂದ ರಾಜ್ಯ ರಾಜಧಾನಿಯಲ್ಲಿ ಏಪ್ರಿಲ್ 20ರ ನಂತರ ಶೇಕಡ 50 ರಷ್ಟು IT BT ನೌಕರರು ಕೆಲಸ ಮಾಡಲು ಅವಕಾಶ ಕೊಡಲಾಗುತ್ತದೆ. ಈ ಕುರಿತು ಇಂದಿನ ವೀಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ನಿರ್ಧಾರ ಮಾಡಲಾಯ್ತು. ಆದರೆ IT BT ನೌಕರರು ಓಡಾಡಲು ಯಾವುದೇ ಪಾಸ್ ನ ಅವಶ್ಯಕತೆ ಇಲ್ಲ. ಬದಲಾಗಿ ಅವರು ಕಂಪನಿಯ ಬಸ್ಸುಗಳಲ್ಲಿ ಅಥವಾ ಬಿಎಂಟಿಸಿ ಬಸ್ ಗಳಲ್ಲಿ ಓಡಾಡುತ್ತಾ ಕಚೇರಿ ಕೆಲಸಕ್ಕೆ ಹೋಗಬಹುದು ಎಂದಿದ್ದರು. ಒಂದು ವೇಳೆ ಸಾರಿಗೆ ಅವಶ್ಯಕತೆ ಮಾಡುವಂತೆ ಮನವಿ ಮಾಡಿದರೆ ಸಾರಿಗೆ ವ್ಯವಸ್ಥೆ ಕಲ್ಪಿಸಲು ಸರ್ಕಾರ ತೀರ್ಮಾನ ಕೈಗೊಂಡಿದೆ ಎಂದಿದ್ದರು.
ಸಚಿವರ ಹೇಳಿಕೆ ಖಂಡಿಸಿದ್ದ ʼಪ್ರತಿಧ್ವನಿʼ, ‘ಲಾಕ್‌ಡೌನ್ ಸಡಿಲಿಕೆಯಿಂದ ಅಪಾಯವನ್ನು ಆಹ್ವಾನಿಸುವ ಕೆಲಸಕ್ಕೆ ರಾಜ್ಯ ಸರ್ಕಾರ ಕೈ ಹಾಕದಿರಲಿ’ ಎನ್ನುವ ಶೀರ್ಷಿಕೆ ಅಡಿಯಲ್ಲಿ ಎಚ್ಚರಿಸುವ ಕೆಲಸ ಮಾಡಿತ್ತು.ʼಪ್ರತಿಧ್ವನಿʼ ವರದಿ ರಾಜ್ಯದ ಇತರೆ ಮಾಧ್ಯಮಗಳನ್ನೂ ಬಡಿದೆಬ್ಬಿಸಿತ್ತು. ರಾಜ್ಯಾದ್ಯಂತ ಆಕ್ರೋಶ ಜೋರಾಗಿತ್ತು. ಸರ್ಕಾರದ ನಿರ್ಧಾರಕ್ಕೆ ವಿರುದ್ಧವಾದ ಜನಾಭಿಪ್ರಾಯ ಸಂಗ್ರಹವಾದ ಬೆನ್ನಲ್ಲೇ ಸರ್ಕಾರ ಹಿರಿಯ ಅಧಿಕಾರಿಗಳು ಸಭೆ ನಡೆಸಿತ್ತು. ಆ ಬಳಿಕ ತನ್ನದೇ ನಿರ್ಣಯಗಳನ್ನು ಪುನರ್ ಪರಿಶೀಲನೆ ಮಾಡಿ ತೀರ್ಮಾನವನ್ನು ಯಥಾಸ್ಥಿತಿ ಲಾಕ್‌ಡೌನ್ ಪಾಲನೆ ಮಾಡುವ ನಿರ್ಧಾರ ಕೈಗೊಂಡಿದೆ. ದ್ವಿಚಕ್ರ ವಾಹನಗಳ ಮುಕ್ತ ಸಂಚಾರಕ್ಕೆ ಅವಕಾಶ ಕೊಡುತ್ತೇವೆ ಎಂಬ ನಿರ್ಧಾರವನ್ನು ವಾಪಸ್ ತೆಗೆದುಕೊಳ್ಳಲಾಗಿದೆ.
IT-BT ಕ್ಷೇತ್ರದಲ್ಲಿ ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ ಕೊಟ್ಟು, ಉಳಿದಂತೆ ಮನೆಯಿಂದಲೇ ಕೆಲಸ ಮಾಡುವ (Work from Home) ನೀತಿಯನ್ನು ಮುಂದುವರಿಸಲಾಗುವುದು ಎಂದಿದ್ದಾರೆ. ದ್ವಿಚಕ್ರ ವಾಹನ ಸಂಚಾರದ ನಿರ್ಧಾರದಿಂದ ಹಿಂದೆ ಸರಿದ ಸರ್ಕಾರ, ಏಪ್ರಿಲ್ 20ರ ನಂತರ ದ್ವಿಚಕ್ರ ವಾಹನ ಸಂಚಾರಕ್ಕೆ ಅವಕಾಶ ಇಲ್ಲ ಎಂದಿದೆ. ಲಾಕ್‌ಡೌನ್ ಆದೇಶವನ್ನು ಯಥಾವತ್ತಾಗಿ ಮುಂದುವರಿಸಲು ಸರ್ಕಾರ ತೀರ್ಮಾನ ತೆಗೆದುಕೊಂಡಿದೆ. ಲಾಕ್‌ಡೌನ್ ಸಡಿಲಿಕೆಯಿಂದ ಹಿಂದೆ ಸರಿಯಲು ಮುಖ್ಯ ಕಾರಣ ಸರ್ಕಾರದ ಬೇರೆಲ್ಲಾ ಇಲಾಖೆಗಳು ವಿರೋಧ ಮಾಡಿದವು. IT-BT ಸಂಸ್ಥೆಗಳ ಪ್ರಮುಖ ಮುಖಂಡರ ಬೇಡಿಕೆ ಇಲ್ಲದಿದ್ದರೂ ಶೇಕಡ 50 ರಷ್ಟು ನೌಕರರು ಕೆಲಸಕ್ಕೆ ಹಾಜರಾಗಬಹುದು ಎಂದಿದ್ದ IT-BT ಸಚಿವ ಡಿಸಿಎಂ ಡಾ.ಅಶ್ವತ್ಥ ನಾರಾಯಣ ನಿರ್ಧಾರ ಪ್ರಕಟ ಮಾಡುವ ಮುನ್ನ ಯಾವುದೇ ಇಲಾಖೆಯೊಂದಿಗೆ ಚರ್ಚೆ ನಡೆಸಿರಲಿಲ್ಲ. ಪ್ರಮುಖ ಇಲಾಖೆಗಳಲ್ಲಿ ಒಂದಾದ ಗೃಹ ಇಲಾಖೆಯಿಂದಲೂ ಒಪ್ಪಿಗೆ ಪಡೆದಿರಲಿಲ್ಲ. ಸಿಎಂ ಬಳಿಯೂ ಈ ಬಗ್ಗೆ ಪ್ರಸ್ತಾಪ ಮಾಡಿರಲಿಲ್ಲ ಎನ್ನಲಾಗಿದೆ. ಡಾ.ಅಶ್ವತ್ಥ ನಾರಾಯಣ ನಿರ್ಧಾರಕ್ಕೆ ರಾಜ್ಯ ಗೃಹ ಇಲಾಖೆ ಅಸಮಾಧಾನ ವ್ಯಕ್ತಪಡಿಸಿತ್ತು. ಆ ಬಳಿಕ ಶೇಕಡ 50ರಷ್ಟು ಬೇಡ ಶೇಕಡ 30ರಷ್ಟು ಟೆಕ್ಕಿಗಳು ಕೆಲಸಕ್ಕೆ ಹಾಜರಾಗಬಹುದು ಎಂದು ಇಂದು ಘೋಷಣೆ ಮಾಡಲಾಗಿತ್ತು. ʼಆಗಲೂ ಬಂದೋಬಸ್ತ್ ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳೋದು ಕಷ್ಟʼ ಎಂದು ಗೃಹ ಇಲಾಖೆ ವಿರೋಧ ಮಾಡಿದ್ದರಿಂದ ತನ್ನದೇ ನಿರ್ಧಾರ ವಾಪಸ್ ಪಡೆಯಬೇಕಾಯ್ತು ಎಂದು ರಾಜ್ಯ ಸರ್ಕಾರದ ಮೂಲಗಳು ತಿಳಿಸುತ್ತಿವೆ. ಆದರೆ, ನಿಮ್ಮ ʼಪ್ರತಿಧ್ವನಿʼ ಮಾಡಿದ್ದ ಸಣ್ಣ ಧ್ವನಿ ದೊಡ್ಡ ನಿರ್ಧಾರ ಹೊರ ಬೀಳುವಂತೆ ಮಾಡಿತು ಎನ್ನುವುದು ಮಾತ್ರ ಸತ್ಯ.







