ಮಾಧ್ಯಮಗಳು ಬಿಂಬಿಸುವಷ್ಟು, ಜನರು ಭಯಪಟ್ಟಷ್ಟು ಕರೋನಾ ಸೋಂಕು ಅಪಾಯಕಾರಿಯಲ್ಲ ಎಂದು ಹೇಳುತ್ತಾ ಬಂದಿರುವ ಖ್ಯಾತ ವೈದ್ಯ ಡಾ. ಶ್ರೀನಿವಾಸ ಕಕ್ಕಿಲಾಯರು ಕರೋನಾ, ಲಾಕ್‌ಡೌನ್ ಕುರಿತು ವೈಜ್ಞಾನಿಕ ಆಧಾರಿತ ಮಾಹಿತಿಗಳನ್ನು ʼಪ್ರತಿಧ್ವನಿʼಯೊಂದಿಗೆ ಹಂಚಿಕೊಂಡಿದ್ದಾರೆ. ವರದಿಗಳ ಆಧಾರದಡಿಯಲ್ಲಿ, ಮಕ್ಕಳಿಗೆ ಕರೋನಾ ಸೋಂಕು ಅಪಾಯ ತರುವುದಿಲ್ಲ ಎನ್ನುವ ಕಕ್ಕಿಲಾಯರು ಭಯಪಡದೆ ಶಾಲೆಗಳನ್ನು ಪುನರಾರಂಭಿಸಲು ಸಲಹೆ ನೀಡಿದ್ದಾರೆ. ಅವರ ಸಂದರ್ಶನದ ಸಂಪೂರ್ಣ ಭಾಗ ಇಲ್ಲಿದೆ.
1) ಬೆರಳೆಣಿಕೆಯಷ್ಟು ಕರೋನಾ ಪ್ರಕರಣಗಳು ಇರುವಾಗ ದೇಶಾದ್ಯಂತ ಲಾಕ್‌ಡೌನ್ ಹೇರಿ, ಪ್ರಕರಣಗಳು ಲಕ್ಷಗಳನ್ನು ದಾಟುವಾಗ ಲಾಕ್‌ಡೌನ್ ತೆರವುಗೊಳಿಸಿದ್ದು ಎಷ್ಟು ಸರಿ?
ಮೊದಲನೆಯದಾಗಿ ಲಾಕ್‌ಡೌನ್ ಏನೆಂದು ಬಹಳಷ್ಟು ಮಂದಿಗೆ, ರಾಷ್ಟ್ರಗಳಿಗೆ ಸರಿಯಾಗಿ ಅರ್ಥವಾಗಿಲ್ಲ. ಚೀನಾ, ವುಹಾನ್ ಪ್ರಾಂತ್ಯದಲ್ಲಿ ಮಾತ್ರ ಲಾಕ್‌ಡೌನ್ ಘೋಷಿಸಿತ್ತು. ಸಂಪೂರ್ಣ ದೇಶವನ್ನು ಲಾಕ್‌ಡೌನ್ ಮಾಡಿರಲಿಲ್ಲ. ಚೀನಾದ ಲಾಕ್‌ಡೌನ್ ಅನ್ನು ನಕಲು ಮಾಡಿದ ಹಲವು ದೇಶಗಳು ತಮ್ಮ ದೇಶಕ್ಕೆ ಹೊಂದದಂತಹ ಲಾಕ್‌ಡೌನ್ ಮಾಡಿದ್ದಾರೆ. ಭಾರತ ಈಗಾಗಲೇ ಕಾಲರಾ, ದಡಾರ, ಮಲೇರಿಯಾ ಏಡ್ಸ್ ಮೊದಲಾದ ರೋಗಗಳನ್ನು ವಿಶ್ವವೇ ಬೆರಗಾಗುವಂತೆ ನಿಭಾಯಿಸಿತ್ತು. ಹೊರ ದೇಶಗಳ ಕ್ರಮವನ್ನು ನಕಲು ಮಾಡಿದ್ದರಿಂದಲೇ ಇವತ್ತು ಈ ಪರಿಸ್ಥಿತಿ ಬಂದಿರೋದು.
ಲಾಕ್‌ಡೌನ್ ಬಹಳ ಬೇಗನೇ ಮಾಡಿರುವುದರಿಂದ ಇಷ್ಟು ಬೇಗನೇ ತೆರವುಗೊಳಿಸಬೇಕಾಗಿದೆ. 560 ಪ್ರಕರಣಗಳಿರುವಾಗ 130 ಕೋಟಿ ಜನರನ್ನು ದಿಗ್ಭಂಧನದಲ್ಲಿ ಇರಿಸುವ ಅಗತ್ಯವಿರಲಿಲ್ಲ. ಯಾಕೆ ಲಾಕ್‌ಡೌನ್ ಮಾಡಿಲ್ಲ ಎಂದು ಕೇಳುವ ಮಾಧ್ಯಮಗಳನ್ನು ಎದುರಿಸಲು ಧೈರ್ಯವಿಲ್ಲದ ಸರ್ಕಾರಗಳು ಅಗತ್ಯಕ್ಕಿಂತ ಮೊದಲೇ ಲಾಕ್‌ಡೌನ್ ಹೇರಿತು. ಲಾಕ್‌ಡೌನ್ ಹಾಕುವುದು ವಿಷಯವಲ್ಲ ಅದನ್ನು ಯಾವಾಗ ತೆರವುಗೊಳಿಸುತ್ತೇವೆ ಅನ್ನುವುದು ಮುಖ್ಯವಾಗುತ್ತದೆ. ಎರಡು-ಮೂರು ವಾರಗಳಿಗಿಂತ ಹೆಚ್ಚು ಜನರು ಲಾಕ್‌ಡೌನ್‌ನ್ನು ಸಹಿಸುವುದಿಲ್ಲ. ಹಾಗಾಗಿ ಲಾಕ್‌ಡೌನ್ ಹಾಕುವಾಗಲೇ ತಜ್ಞರ ಅಭಿಪ್ರಾಯ ಕೇಳಬೇಕಿತ್ತು.
ಮನುಷ್ಯರಿಂದ ಮನುಷ್ಯರಿಗೆ ಹರಡುವ ಈ ವೈರಸನ್ನು ಹೆಚ್ಚು ಕಾಲ ಹರಡದಂತೆ ತಡೆಯಲು ಸಾಧ್ಯವಿಲ್ಲ. ಎಷ್ಟೇ ಲಾಕ್‌ಡೌನ್ ಹಾಕಿದ್ದರೂ ಇದು ಹರಡುವುದು ಹರಡುತ್ತಲೇ ಇರುತ್ತದೆ. ನಮ್ಮ ದೇಶದಲ್ಲಿ ಬೇಕಾದಷ್ಟು ವಿಜ್ಞಾನಿಗಳು, ವಿಷಯ ತಜ್ಞರು ಇದ್ದಾರೆ. ನಾವು ಅವರನ್ನು ಕೇಳಬೇಕಾಗಿತ್ತು. ಆದರೆ ಸರ್ಕಾರ ಅವರ ಜೊತೆ ಸಮಾಲೋಚಿಸಿದಂತೆ ಕಾಣುವುದಿಲ್ಲ.
2) ಹಾಗಾದರೆ ಸರ್ಕಾರ ಕರೋನಾ ಸೋಂಕು ಎದುರಿಸಲು ಯಾವ ಕ್ರಮ ಕೈಗೊಳ್ಳಬೇಕಾಗಿತ್ತು?
ಫೆಬ್ರವರಿ ಆರಂಭದಲ್ಲೇ ನಮಗೆ ಕರೋನಾದ ಗುಣ, ಸೋಂಕಿತರಲ್ಲಾಗುವ ಪರಿಣಾಮದ ಬಗ್ಗೆ ವರದಿ ಬಂದಿತ್ತು. ರೋಗ ಲಕ್ಷಣ ಕಂಡು ಬರದ ಜನರನ್ನು ಪ್ರತ್ಯೇಕವಾಗಿ ಇಡುವುದಕ್ಕಿಂತ ಯಾರಿಗೆ ಕರೋನಾ ಸೋಂಕು ಅಪಾಯವನ್ನುಂಟು ಮಾಡುತ್ತದೆಯೋ ಅವರನ್ನು ಪ್ರತ್ಯೇಕವಾಗಿ ಇರಿಸಬೇಕಿತ್ತು. ಹಾಗೆ ಮಾಡಿದರೆ ಉಳಿದವರು ತಮ್ಮ ದೈನಂದಿನ ಕೆಲಸಗಳನ್ನು ನಿರ್ವಹಿಸಬಹುದಾಗಿತ್ತು, ನಮ್ಮ ಆರ್ಥಿಕತೆಗೂ ಯಾವುದೇ ಅಪಾಯವಿರಲಿಲ್ಲ.
ಈ ಕುರಿತು ರಾಜ್ಯ ಸರ್ಕಾರ ಈಗ ಎಚ್ಚೆತ್ತುಕೊಂಡಿದೆ. ರಿವರ್ಸ್ ಕ್ವಾರಂಟೈನ್ ಎಂದು ಯೋಚನೆ ಮಾಡಿಕೊಳ್ಳುತ್ತಿದೆ. ಈ ಕೆಲಸವನ್ನು ಮೊದಲೇ ಮಾಡಬೇಕಿತ್ತು. ಲಾಕ್‌ಡೌನ್ ಎಂಬ ನಕಲು ಪದ್ಧತಿಯನ್ನು ಭಾರತದಲ್ಲಿ ತಂದಿರುವುದರಿಂದ ಆ ನಿಟ್ಟಿನಲ್ಲಿ ಯೋಚಿಸೋ ಸಾಧ್ಯತೆ ಇಲ್ಲದಾಯಿತು.
ಇದು ಇನ್ನೂ ಕೂಡ ಸಾಧ್ಯ ಇದೆ. ಆದರೆ ಜನರಿಗೆ ಮನದಟ್ಟು ಮಾಡುವುದು ಸ್ವಲ್ಪ ಕಷ್ಟವಾಗಬಹುದು. ಈಗಾಗಲೇ ಕರೋನಾ ಮಹಾಮಾರಿ, ಬಂದವರೆಲ್ಲಾ ಸಾಯುತ್ತರೆಂದು ಅವರನ್ನು ಭಯಪಡಿಸಿಟ್ಟಿರುವುದರಿಂದ ಕಷ್ಟವಾಗಬಹುದು. ಅವರಿಗೆ ಕರೋನಾ ಅನ್ನುವುದು ಸಾಮಾನ್ಯ ಜ್ವರದ ರೀತಿಯೆಂದು ಅರಿವು ಮೂಡಿಸಬೇಕಿತ್ತು. ಅದು ಮಾಡಲಿಲ್ಲ. ಅವರ ತಲೆಯಿಂದ ಭಯವನ್ನು ಹೋಗಲಾಡಿಸುವುದೇ ಸವಾಲಿನ ಕೆಲಸ.
3) ಕರೋನಾ ವೈರಸ್ ನಾವು ಭೀತಿಗೊಂಡಷ್ಟು ಮಾರಣಾಂತಿಕವೇ ?
ಹೊಸ ಕರೋನಾ ಸೋಂಕು 100 ರಲ್ಲಿ 85 ರಿಂದ 90 ಜನರಿಗೆ ಯಾವುದೇ ರೋಗಲಕ್ಷಣ ಉಂಟು ಮಾಡುವುದಿಲ್ಲ. ಇದನ್ನು ಚೀನಾ 77 ಸಾವಿರ ಮಂದಿಯನ್ನು ಪರೀಕ್ಷಿಸಿ ಫೆಬ್ರವರಿ ಮೊದಲ ವಾರದಲ್ಲೇ ನೀಡಿರುವ ವರದಿಯಲ್ಲಿ ಹೇಳಿದೆ. ಅವರು ಅಂದು ಹೇಳಿರುವ ವಿವರಗಳನ್ನೇ ಈಗ ಉಳಿದ ದೇಶಗಳು ಹೇಳುತ್ತಿದೆ. ವರದಿಯ ಪ್ರಕಾರ 80% ಸೋಂಕು ಭಾಧಿತರಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ. 20%( ಹಿರಿಯರು ಮತ್ತು ಉಳಿದ ರೋಗಗಳಿಂದ ಬಳಲುತ್ತಿರುವ) ಜನರಿಗೆ ಅಲ್ಪ ಅಥವಾ ಗಂಭೀರ ಸಮಸ್ಯೆಯಾಗಬಹುದು. ಅವರಲ್ಲಿ 1/3 ಭಾಗ ಜನರನ್ನು ಆಸ್ಪತ್ರೆಗೆ ಸೇರಿಸಬೇಕಾಗಬಹುದು. ಅದರಲ್ಲಿ 30% ಜನರಿಗೆ ವೆಂಟಿಲೇಟರ್ ಬೇಕಾಗಬಹುದು, ಅವರಲ್ಲಿ 50% ಜನರು ಸಾವನ್ನಪ್ಪಬಹುದು, ಅಂದರೆ ಒಟ್ಟು ಮೊತ್ತವಾಗಿ 1.4% ಅಷ್ಟೇ ಮರಣ ಪ್ರಮಾಣ ಇರಬಹುದು ಎಂದು ಅಂಕಿ ಅಂಶಗಳೊಂದಿಗೆ ಸಾಬೀತು ಮಾಡಿದ್ದಾರೆ.
ಮಲೇರಿಯಾಕ್ಕೆ ಆರೋಗ್ಯವಂತರನ್ನೂ ಕೊಲ್ಲಬಹುದು, ಹಾಗೆ ನೋಡಿದರೆ ಕರೋನಾ ಮಲೇರಿಯಾದಷ್ಟು ಭೀಕರವಾಗಿಲ್ಲ. ಮಲೇರಿಯಾಕ್ಕೆ ಚಿಕಿತ್ಸೆಯ ಅಗತ್ಯವಿದೆ. ಆದರೆ ಕರೋನಾಕ್ಕೆ 85% ರಿಂದ 90% ಮಂದಿಗೆ ಚಿಕಿತ್ಸೆಯ ಅಗತ್ಯವಿಲ್ಲ. ಹಾಗಾಗಿ ಕರೋನಾ ನಾವು ಅಂದುಕೊಂಡಷ್ಟು ಭೀಕರವಿಲ್ಲ.
Also Read: ಕೋವಿಡ್-19 ಮಹಾಮಾರಿಯೇ? ಭಾರತದ ಅಂಕಿ ಅಂಶಗಳು ಏನನ್ನುತ್ತವೆ?

ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಿದೆ, ಹಾಗಾಗಿ ಕರೋನಾ ಸೋಂಕು ನಿಯಂತ್ರಣಕ್ಕೆ ಬರುವಲ್ಲಿಯವರೆಗೆ ಶಾಲೆಗಳು ಪುನರಾರಂಭಿಸಬಾರದೆಂಬ ಕೂಗು ಇದೆ. ಈ ಹೊತ್ತಿನಲ್ಲಿ ಶಾಲೆಗಳನ್ನು ಪುನರಾರಂಭಿಸಬೇಕೆ ಅಥವಾ ಬೇಡವೇ ?
ಇಲ್ಲ, ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇದೆ ಅನ್ನುವ ವಾದವೇ ಸುಳ್ಳು. ನಿಜವಾಗಿ ಮಕ್ಕಳ ರೋಗ ನಿರೋಧಕ ಶಕ್ತಿ ಅಧ್ಬುತವಾಗಿರುತ್ತದೆ. ಅಲ್ಲದೆ ಎಲ್ಲರಲ್ಲೂ ರೋಗನಿರೋಧಕ ಶಕ್ತಿ ಇದೆ. ವಿಶೇಷ ಕಾಯಿಲೆಯಿಂದ ಬಳಲುತ್ತಿರುವವರಲ್ಲಿ ಮಾತ್ರ ರೋಗನಿರೋಧಕ ಶಕ್ತಿ ಇರುವುದಿಲ್ಲ. ಅಂತವರು ಬೆರಳಣಿಕೆಯ ಜನರು ಮಾತ್ರ.
ಮಕ್ಕಳಿಗೆ ಕರೋನಾ ರೋಗ ಲಕ್ಷಣ ಇರುವುದಿಲ್ಲವೆಂದು ಚೈನಾದ ವರದಿ ಹೇಳಿದೆ. ಯಾಕೆಂದರೆ ಮಕ್ಕಳು ಪ್ರತಿನಿತ್ಯ ಹೊಸ ಹೊಸ ಬ್ಯಾಕ್ಟೀರಿಯ, ವೈರಸನ್ನು ಎದುರಿಸಿರುತ್ತಾರೆ. ಹಾಗಾಗಿ ಅವರಿಗೆ ಈ ಸೋಂಕನ್ನು ಎದುರಿಸಿ ಅಲ್ಲಿಂದಲ್ಲಿಗೆ ಮಟ್ಟ ಹಾಕುವಂತೆ ಅವರ ರೋಗ ನಿರೋಧಕ ವ್ಯವಸ್ಥೆ ಬಹಳ ಚುರುಕಾಗಿರುತ್ತದೆ. ಹಾಗಾಗಿ ಅವರೊಳಗೆ ಈ ಸೋಂಕು ಹೋದರೆ ಅವರ ರೋಗ ನಿರೋಧಕ ವ್ಯವಸ್ಥೆ ತಕ್ಷಣವೇ ನಿರ್ಣಾಮ ಮಾಡುತ್ತದೆ. ಜಗತ್ತಿನಲ್ಲಿ ಬಂದಿರುವ ಒಟ್ಟು ಪ್ರಕರಣಗಳಲ್ಲಿ ಒಟ್ಟಾರೆ ಮಕ್ಕಳಲ್ಲಿ ಗುರುತಿಸಿರುವುದು ಶೇಕಡಾ ಒಂದಕ್ಕಿಂತಲೂ ಕಡಿಮೆ. ನಮ್ಮ ದೇಶದಲ್ಲಿ ಕರೋನಾದಿಂದ ಮೃತಪಟ್ಟ ಮಕ್ಕಳ ಸಂಖ್ಯೆ 3 ಅಥವಾ 4. ಅದೂ ಕೂಡ ಹೃದ್ರೋಗ ಮುಂತಾದವುಗಳಿಂದ ಬಳಲುತ್ತಿದ್ದವರು.
ಹಾಗಾಗಿ ಯಾವ ಕಾರಣಕ್ಕೂಶಾಲೆಗಳನ್ನು ಬಂದ್ ಮಾಡುವ ಅವಶ್ಯಕತೆ ಇಲ್ಲ. ಅಲ್ಲದೆ ಅಲ್ಲಿ ಅವರನ್ನು ಸಾಮಾಜಿಕ ಅಂತರ ಕಾಪಾಡಲು ಹೇಳುವುದು, ಮಾಸ್ಕ್ ಹಾಕಲು ಹೇಳಿ ಮಕ್ಕಳಿಗೆ ಹಿಂಸೆ ನೀಡುವ ಅಗತ್ಯವಿಲ್ಲ. ಎಂದಿನಂತೆ ಶಾಲೆಗಳನ್ನು ಪುನರಾರಂಭಿಸಬೇಕು. ಪೋಷಕರಿಗೆ ಇದರ ಕುರಿತು ಧೈರ್ಯ ಹೇಳಬೇಕು. ಶಾಲೆಗಳನ್ನು ಧೈರ್ಯವಾಗಿ ತೆರೆಯಬಹುದು.
4) ಭಾರತದಲ್ಲಿ ಕರೋನಾ ಸೋಂಕು ಬೇರೆಬೇರೆ ಪ್ರದೇಶದಲ್ಲಿ ಬೇರೆಬೇರೆ ರೀತಿಯಲ್ಲಿ ಹರಡಿದೆ. ಕರೋನಾ ಸೋಂಕು ಹರಡುವುದರಲ್ಲಿ ಭೌಗೋಳಿಕ ವಿಭಿನ್ನತೆಗಳೇನಾದರೂ ಪರಿಣಾಮ ಬೀಳುತ್ತದೆಯೇ ?
ಇಲ್ಲ. ಆ ರೀತಿ ಏನೂ ಇಲ್ಲ. ಮುಂಬೈ ಭಾರತದ ಆರ್ಥಿಕ ರಾಜಧಾನಿ, ಅತೀ ಹೆಚ್ಚು ವ್ಯಸ್ತವಾಗಿರುವ ವಿಮಾನ ನಿಲ್ದಾಣಗಳಿರುವುದು ಮುಂಬೈಯಲ್ಲಿ. ಅತ್ಯಂತ ಹೆಚ್ಚು ಜನಸಾಂದ್ರತೆ ಇರುವುದು ಮುಂಬೈಯಲ್ಲಿ. ಹಾಗಾಗಿ ಅಲ್ಲಿ ಕರೋನಾ ನಿಯಂತ್ರಣ ಮಾಡಲು ಸಾಧ್ಯವಾಗಿಲ್ಲ. ಅತೀ ಹೆಚ್ಚು ಪ್ರಯಾಣಿಕರಿರುವುದರಿಂದ ಕಟ್ಟು ನಿಟ್ಟಾಗಿ ಕ್ವಾರಂಟೈನ್ ಮಾಡುವ ಮೊದಲೇ ನಗರದೊಳಗೆ ಹರಡಿಯಾಗಿತ್ತು. ದೆಹಲಿಯಲ್ಲಿ ನಡೆದಿರುವುದು ಇದೇ, ಮದ್ರಾಸಿನಲ್ಲಿ ನಡೆದಿರುವುದೂ ಇದೇ. ಅಹಮದಾಬಾದಿಗೂ ಇದುವೇ ಕಾರಣ.
5) ಕರೋನಾ ಎದುರಿಸುವಲ್ಲಿ ಮಹಾರಾಷ್ಟ್ರ, ದೆಹಲಿ ಮೊದಲಾದ ರಾಜ್ಯಗಳು ಬೇಜವಾಬ್ದಾರಿ ತೋರಿದೆಯೇ ?
ಕೇರಳದಲ್ಲಿ ಜನವರಿಯಿಂದಲೇ ಸೋಂಕು ಪತ್ತೆಹಚ್ಚಲು ಶುರು ಮಾಡಿದ್ದಾರೆ. ಮತ್ತು ಅದನ್ನು ನಿಯಂತ್ರಿಸಿದ್ದಾರೆ. ಆದರೆ ಈಗ ಮತ್ತೆ ಅಲ್ಲಿ ಸೋಂಕು ಹರಡುತ್ತಿದೆಯಲ್ಲಾ? ಇದರಲ್ಲಿ ಯಾರನ್ನೂ ದೂಷಿಸಬಾರದು, ಅವರವರ ಕೆಲಸ ಮಾಡಿದ್ದಾರೆ. ಇದರಲ್ಲಿ ಸ್ಪರ್ಧೆಗೆ ಇಳಿಯುವುದು ಬಹಳ ದುಃಖದ ವಿಷಯ. ಬೆಂಗಳೂರು ಗುಜರಾತಿಗಿಂತ ಒಳ್ಳೆಯದು ಎಂದು ಹೇಳುವುದು, ಮಹಾರಾಷ್ಟ್ರ ಬ್ಯಾಡ್ ಎಂದು ಬಿಜೆಪಿಯವರು ಹೇಳುವುದು, ಗುಜರಾತ್ ಬ್ಯಾಡ್ ಎಂದು ಕಾಂಗ್ರೆಸ್, ಎಡ ಪಕ್ಷಗಳು ಹೇಳುವುದೆಲ್ಲಾ ಸರಿಯಲ್ಲ. ಕರೋನಾ ಮನುಷ್ಯರಿಂದ ಮನುಷ್ಯರಿಗೆ ಹರಡುವ ಸೋಂಕಾಗಿರುವುದರಿಂದ ಇದನ್ನು ವರ್ಷವಿಡೀ ಹರಡದಂತೆ ತಡೆಯಲು ಸಾಧ್ಯವಿಲ್ಲ. ಇಂದಲ್ಲ ನಾಳೆ ಇದು ಹರಡಿಯೇ ಹರಡುತ್ತದೆ.
6) ಕರೋನಾ ಸೋಂಕಿಗೆ ಲಸಿಕೆ ಬರಲು ಒಂದರಿಂದ ಎರಡು ವರ್ಷ ಬೇಕಾಗಬಹುದೆಂಬ ಅಭಿಪ್ರಾಯವಿದೆ. ಲಸಿಕೆ ಬರಲು ಇನ್ನೂ ತಡವಾದರೆ ಅದರಿಂದ ಉಂಟಾಗಬಹುದಾದ ಸಮಸ್ಯೆಗಳೇನು ?
ಬಹುಪಾಲು ಲಸಿಕೆ ಬರುವುದಿಲ್ಲವೆಂದು ನನಗನ್ನಿಸುತ್ತದೆ. ಯಾಕೆಂದ್ರೆ ಇದು ಈಗಾಗಲೇ ಎಲ್ಲರಿಗೂ ಇದು ಹರಡಿಯಾಗಿದೆ. ಅಂಕಿ ಅಂಶದ ಅಂದಾಜಿನಲ್ಲಿ ಡಿಸೆಂಬರ್ ವೇಳೆಗೆ ಅರ್ಧದಷ್ಟು ಜನಸಂಖ್ಯೆಗೆ ಸೋಂಕು ಬರುತ್ತದೆ ಎಂದು ನಿಮ್ಹಾನ್ಸ್ ಡಾಕ್ಟರ್ ರವಿ ಹೇಳಿದ್ದಾರೆ. ಎಲ್ಲರಿಗೂ ಸೋಂಕು ಬಂದು ಹೋದ ಮೇಲೆ ಲಸಿಕೆ ಯಾರಿಗೆ ಕೊಡಬೇಕು? ಅಲ್ಲದೆ ಕರೋನಾ ವೈರಸ್‌ನಲ್ಲಿ 300 ಉಪವಿಧಗಳನ್ನು ಗುರುತಿಸಲಾಗಿದೆ. ಹಾಗಾಗಿ ಲಸಿಕೆ ದೊಡ್ಡ ಮಟ್ಟಿಗೆ ಪ್ರಯೋಜನ ಆಗುವುದಿಲ್ಲ. ಈಗಾಗಲೇ ಅದಕ್ಕೆ ಪ್ರಯೋಗಗಳು ನಡೆಯುತ್ತಿದೆ. ಆದರೆ ಲಸಿಕೆಗಾಗಿ ನಾವು ನಿರೀಕ್ಷೆ ಇಡುವುದಾಗಲಿ, ಹಾತೊರೆಯುವ ಅಗತ್ಯವಾಗಲಿ ಇಲ್ಲ.
7) ಕರೋನಾ ಸೋಂಕು ವೈದ್ಯಕೀಯ ಕ್ಷೇತ್ರಕ್ಕೆ ತಂದಿಟ್ಟಿರುವ ಸಮಸ್ಯೆಗಳೇನು?
ನಮ್ಮ ದೇಶದಲ್ಲಿ ವೈದ್ಯರ ಸಂಖ್ಯೆ ಕಡಿಮೆಯಿದೆ. ಕರ್ನಾಟಕದಲ್ಲಿ 30 ಶೇಕಡಾ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆಯಿದೆ. ವೈದ್ಯರನ್ನು ಮೊದಲೇ ನೇಮಿಸಬೇಕಿತ್ತು. ಈಗ ನೇಮಿಸುತ್ತೀವೆಂದರೆ ಯಾರು ಕೇಳುತ್ತಾರೆ? ಹಾಗಾಗಿ ಈಗಾಗಲೇ ಇರುವ ವೈದ್ಯರ ಮೇಲೆ ಒತ್ತಡ ಜಾಸ್ತಿ ಬಿದ್ದಿದೆ. ಗಂಭೀರ ಖಾಯಿಲೆಗೆ ಒಳಗಾದವರಲ್ಲಿ ಕರೋನಾ ವೈರಸ್ ಪ್ರಮಾಣ ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತದೆ. ಎಷ್ಟೇ ಜಾಗರೂಕ ಕ್ರಮ ಕೈಗೊಂಡರೂ ಅವರೊಂದಿಗೆ ಪ್ರಾಥಮಿಕ ಸಂಪರ್ಕಕ್ಕೆ ಬರುವ ವೈದ್ಯರು, ನರ್ಸುಗಳಿಗೆ ಸೋಂಕು ಹರಡುವ ಸಾಧ್ಯತೆ ಹೆಚ್ಚಿರುತ್ತದೆ.
ಇನ್ನೊಂದು ದೊಡ್ಡ ಸಮಸ್ಯೆ ಏನೆಂದರೆ ಕರೋನಾದ ಹೆಸರಿನಲ್ಲಿ ಉಳಿದ ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ನೀಡಲಾಗುತ್ತಿಲ್ಲ. ಎಷ್ಟೋ ರೋಗಿಗಳ ಶಸ್ತ್ರ ಚಿಕಿತ್ಸೆ ನಿಂತು ಹೋಗಿದೆ, ಕ್ಯಾನ್ಸರ್ ಕೀಮೋಥೆರಪಿ ನಡೆಯುತ್ತಿಲ್ಲ. ಹೃದ್ರೋಗದಿಂದ ಬಳಲುತ್ತಿರುವವರಿಗೆ ಚಿಕಿತ್ಸೆ ನೀಡಲಾಗ್ತಿಲ್ಲ. ಇದಕ್ಕೆಲ್ಲಾ ಹೋಲಿಸಿದರೆ ಕರೋನಾ ಅಂತಹ ಅಪಾಯಕಾರಿ ಏನಲ್ಲ. ಇಂತಹ ಕರೋನಾದ ಹೆಸರಿನಲ್ಲಿ ಉಳಿದ ರೋಗಿಗಳನ್ನು ಕಡೆಗಣಿಸುತ್ತಿರುವುದು ಸರಿಯಲ್ಲ.