ಕರೋನಾ ಅಟ್ಟಹಾಸ ವಿಶ್ವಾದ್ಯಂತ ಮುಂದುವರಿದಿದ್ದು, ಸಾವಿನ ಸಂಖ್ಯೆ 55 ಸಾವಿರ ಗಡಿ ದಾಟಿ ಮುನ್ನುಗ್ಗುತ್ತಿದೆ. ಸೋಂಕಿತರ ಸಂಖ್ಯೆ 10 ಲಕ್ಷ ಮೀರಿ ಸಾಗಿದೆ. ಭಾರತ ಸರ್ಕಾರ ಕರೋನಾ ವೈರಸ್ ತಡೆಗಟ್ಟಲು 21 ದಿನಗಳ ಲಾಕ್ ಡೌನ್ ಘೋಷಣೆ ಮಾಡಿದೆ. 21 ದಿನಗಳ ಪೈಕಿ ಈಗಾಗಲೇ 10 ದಿನಗಳ ಲಾಕ್ ಡೌನ್ ಮುಗಿದಿದೆ. ಭಾನುವಾರ ರಾತ್ರಿ 9 ಗಂಟೆಗೆ ದೀಪ ಹಚ್ಚುವ ಮೂಲಕ ಒಗ್ಗಟ್ಟು ಪ್ರದರ್ಶನ ಮಾಡೋಣ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ಕೊಟ್ಟಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮೊದಲು ಚಪ್ಪಾಳೆ ಹೊಡಿಯಿರಿ ಎಂದಿದ್ದರು. ಇದೀಗ ರಾತ್ರಿ 9 ಗಂಟೆಗೆ 9 ನಿಮಿಷ ಮನೆಯ ಎಲೆಕ್ಟ್ರಿಕ್
ದೀಪಗಳನ್ನು ಆರಿಸಿ, ಮೊಬೈಲ್ ಟಾರ್ಚ್ , ಹ್ಯಾಂಡ್ ಟಾರ್ಚ್ ಅಥವಾ ದೀಪಗಳನ್ನು ಬೆಳಗಿಸಿ ಎಂದಿರುವು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯನ್ನು ಹುಟ್ಟು ಹಾಕಿದೆ. ಈ ನಡುವೆ ಭಾರತದಲ್ಲಿ ವಲಸೆ ಕಾರ್ಮಿಕರನ್ನು ನಡೆಸಿಕೊಳ್ಳುತ್ತಿರುವ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪಸ್ವರ ಎದ್ದಿದೆ. 21 ದಿನಗಳ ಕಾಲ ಲಾಕ್ ಡೌನ್
ಮಾಡಿ ತಮ್ಮ ತಮ್ಮ ತವರು ಊರಿಗೆ ಹೋಗಲು ಸಾರ್ವಜನಿಕ ಸಂಪರ್ಕ ಸಾರಿಗೆ ರದ್ದು ಮಾಡಿರುವ ಬಗ್ಗೆ ಬೆಸರ ವ್ಯಕ್ತವಾಗಿದೆ.
ಪ್ರಪಂಚದಾದ್ಯಂತ ಹರಡುತ್ತಿರುವ ಸಾಂಕ್ರಾಮಿಕ ರೋಗವನ್ನು ತಡೆಯಲು ಪ್ರಧಾನಿ ನರೇಂದ್ರ ಮೋದಿ ಕೈಗೊಂಡಿರುವ ಕ್ರಮವನ್ನು ಸ್ವಾಗತಿಸುತ್ತೇವೆ. ಆದರೆ ಭಾರತದ ಹಳ್ಳಿ ಹಳ್ಳಿಗಳಿಂದ ಲಕ್ಷಾಂತರ ಜನರು ನಗರ ಪ್ರದೇಶಗಳಿಗೆ ದುಡಿಯುವ ಉದ್ದೇಶದಿಂದ ಬಂದಿರುತ್ತಾರೆ. ಅವರನ್ನು ತಮ್ಮ ಊರುಗಳಿಗೆ ಹೋಗಲು ಬಿಡದೆ ರಾಷ್ಟ್ರವ್ಯಾಪಿ ಲಾಕ್
ಡೌನ್ ಮಾಡಿದ್ದರಿಂದ ಲಕ್ಷಾಂತರ ವಲಸಿಗರ ದುಸ್ಥಿತಿ ಬಗ್ಗೆ ಕಳವಳ ಉಂಟಾಗಿದೆ ಎಂದಿದ್ದಾರೆ ವಿಶ್ವಸಂಸ್ಥೆ ಮಾನವ ಹಕ್ಕುಗಳ ಮುಖ್ಯಸ್ಥರು. ನಂತರ ವಲಸೆ ಕಾರ್ಮಿಕರ ಕ್ಷೇಮಕ್ಕಾಗಿ ಪರಿಹಾರ ಮಾರ್ಗಗಳನ್ನು ಕೈಗೊಂಡ ಕ್ರಮಗಳನ್ನು ಸ್ವಾಗತಿಸಿದ್ದಾರೆ.
ಸಾವಿರಾರು ವಲಸೆ ಕಾರ್ಮಿಕರು ನಗರಗಳಲ್ಲಿ ತಮ್ಮ ಕೆಲಸದ ಸ್ಥಳದಿಂದ ಮನೆಗಳಿಗೆ ತೆರಳಲು ಅವಕಾಶ ಸಿಗಲಿಲ್ಲ. ಭಾರತದಲ್ಲಿ ಜಾರಿಯಾದ ಲಾಕ್ಡೌನ್ ಜನಸಂಖ್ಯೆಯ ಗಾತ್ರ ಮತ್ತು ಅದರ ಸಾಂದ್ರತೆಯನ್ನು ಗಮನದಲ್ಲಿಟ್ಟುಕೊಂಡು ಮಾಡಬೇಕಿತ್ತು. ಅನುಷ್ಠಾನ ಮಾಡುವ ಸವಾಲನ್ನು ಮೊದಲೇ ಚಿಂತಿಸಬೇಕಿತ್ತು ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್ ಮಿಚೆಲ್ ಬ್ಯಾಚೆಲೆಟ್ ಗುರುವಾರ ಜಿನೀವಾದಲ್ಲಿ ಹೇಳಿದ್ದಾರೆ. ಭಾರತದಲ್ಲಿ ಘೋಷಿಸಲಾದ ಹಠಾತ್ ಲಾಕ್ಡೌನ್ನಿಂದ ಸಂಕಷ್ಟಕ್ಕೆ ಒಳಗಾದ ಲಕ್ಷಾಂತರ ದೇಶೀಯ ವಲಸಿಗರ ದುಃಸ್ಥಿತಿಯಿಂದ ನಾನು ಹಿಂಸೆಗೆ ಒಳಗಾದೆ ಎಂದು ಆತಂಕವನ್ನು ವ್ಯಕ್ತಪಡಿಸಿದ್ದಾರೆ. ವಿಶ್ವ ಜನಸಂಖ್ಯೆಯ ಆರನೇ ಒಂದು ಭಾಗವನ್ನು ಹೊಂದಿರುವ ಭಾರತ ದೇಶದಲ್ಲಿ ಕೋವಿಡ್ – 19ಗೆ ಕಡಿವಾಣ ಹಾಕಲು ಶಕ್ತಿಮೀರಿ ಪ್ರಯತ್ನ ಅಗತ್ಯ ಎಂದು ವಿಶ್ವಸಂಸ್ಥೆ ಮಾನವಹಕ್ಕು ಆಯೋಗ ಒತ್ತಿ ಹೇಳಿದೆ.
ನಾಗರಿಕ ಸಮಾಜದೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡಬೇಕು. ಇದು ದೇಶೀಯ ಒಗ್ಗಟ್ಟು ಮತ್ತು ಐಕ್ಯತೆಯ ಸಮಯ. ಈ ಬಿಕ್ಕಟ್ಟಿನ ಸಮಯದಲ್ಲಿ ಅತ್ಯಂತ ದುರ್ಬಲ ವಲಯಗಳಿಗೆ ಸರ್ಕಾರ ತಲುಪಲಿ ಎಂದು ಸರ್ಕಾರವನ್ನು ಒತ್ತಾಯಿಸುತ್ತೇನೆ ಎಂದಿದ್ದಾರೆ. ಕಳೆದ ವಾರ ರಾಷ್ಟ್ರ ರಾಜಧಾನಿ ದೆಹಲಿಯಿಂದ ಸುಮಾರು 800 ಕಿಲೋ ಮೀಟರ್ ದೂರದ ತನಕ ಕಾಲ್ನಡಿಗೆಯಲ್ಲಿ ಹೊರಟಿದ್ದರು. ಈ ವೇಳೆ ಕಾರ್ಮಿಕರೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದರು. ಈ ಘಟನೆ ಆದ ಬಳಿಕ ರಾಜ್ಯ ಸರ್ಕಾರಗಳು ವಲಸೆ ಕಾರ್ಮಿಕರಿಗೆ ಆಹಾರ ಮತ್ತು ಇತರ ಸೌಲಭ್ಯಗಳನ್ನು ಒದಗಿಸಲು ವಿಶೇಷ ಕ್ರಮಗಳನ್ನು ಘೋಷಿಸಿವೆ. ಕೆಲವರು ವಿಶೇಷ ಬಸ್ಸುಗಳಲ್ಲಿ ತಮ್ಮ ಸ್ಥಳಗಳಿಗೆ ಸಾಗಿಸಲು ವ್ಯವಸ್ಥೆ ಮಾಡಿದ್ದಾರೆ. ಮಾರ್ಚ್ 31 ರಿಂದ ಭಾರತೀಯ ಸುಪ್ರೀಂಕೋರ್ಟ್ ನೀಡಿದ ಸೂಚನೆ ಸೂಕ್ತವಾಗಿದೆ ಎಂದಿದ್ದಾರೆ. ವಲಸಿಗರಿಗೆ ಸಾಕಷ್ಟು ಆಹಾರ, ನೀರು, ಹಾಸಿಗೆಗಳನ್ನು ಒದಗಿಸಲಾಗಿದೆಯಾ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದಿದ್ದಾರೆ. ಒಟ್ಟಾರೆ, ಅಂತಿಮವಾಗಿ ಭಾರತ ಲಾಕ್ ಡೌನ್ ಮಾಡುವಾಗ ಆತುರ ತೋರಿದ್ದು, ವಲಸಿಗ ಕಾರ್ಮಿಕರಿಗೆ ಸಂಕಷ್ಟ ತಂದಿದ್ದು ಸರಿಯಲ್ಲ ಎನ್ನುವುದನ್ನು ಪರೋಕ್ಷವಾಗಿ ಹೇಳಿದ್ದಾರೆ.