ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ2020) ಗಣರಾಜ್ಯದ ಜೀವನದಲ್ಲಿ ಭಾರತದ ಶಿಕ್ಷಣ ವ್ಯವಸ್ಥೆಯ ಮೂರನೇ ರಾಷ್ಟ್ರೀಯ ಶಿಕ್ಷಣದ ನೀತಿ. ಭಾರತದ ಜನರಲ್ಲಿ ಶಿಕ್ಷಣವನ್ನುಉತ್ತೇಜಿಸಲು ಭಾರತ ಸರ್ಕಾರವು ರೂಪಿಸಿದ ಒಂದು ನೀತಿ. ಈ ನೀತಿಯು ಭಾರತದ ಗ್ರಾಮೀಣ ಮತ್ತು ನಗರ ಪ್ರಾಥಮಿಕ ಮತ್ತು ಕಾಲೇಜು ಶಿಕ್ಷಣವನ್ನು ಒಳಗೊಂಡಿದೆ. 1968 ರಲ್ಲಿ ಪ್ರಧಾನ ಮಂತ್ರಿ ಇಂದಿರಾಗಾಂಧಿಯವರಿಂದ ಮೊದಲ ಬಾರಿಗೆ ರಾಷ್ಟ್ರೀಯ ಶಿಕ್ಷಣದ ನೀತಿ ಘೋಷಿಸಲ್ಪಟ್ಟಿತು. 1986 ರಲ್ಲಿ ಪ್ರಧಾನಿ ರಾಜೀವ್ ಗಾಂಧಿ ಅವರಿಂದ ಎರಡನೇ ಬಾರಿಗೆ ಘೋಷಿಸಲ್ಪಟ್ಟಿತು. ಅಸ್ತಿತ್ವದಲ್ಲಿರುವ ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಹಲವಾರು ಬದಲಾವಣೆಗಳನ್ನುಪರಿಚಯಿಸುವ ಉದ್ದೇಶದಿಂದ 2020 ರ ಜುಲೈ 29 ರಂದು ಕ್ಯಾಬಿನೆಟ್ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅಂಗೀಕರಿಸುವ ಮೂಲಕ ಪ್ರದಾನಮಂತ್ರಿಗಳಾದ ನರೇಂದ್ರ ಮೋದಿಯವರು ಮೂರನೇ ಶಿಕ್ಷಣ ನೀತಿ ಘೋಷಿಸಿದ್ದಾರೆ. 2022-23 ರಿಂದ ಈ ನೀತಿ ಜಾರಿ ಆಗಲಿದೆ. ಇದು ಶಾಲೆ ಮತ್ತು ಉನ್ನತ ಶಿಕ್ಷಣ ಕ್ಷೇತ್ರಗಳಲ್ಲಿ ದೊಡ್ಡ ಪ್ರಮಾಣದ, ಪರಿವರ್ತನೆಯ ಸುಧಾರಣೆಗಳಿಗೆ ದಾರಿ ಮಾಡಿಕೊಟ್ಟಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಇದು 21ನೇ ಶತಮಾನದ ಮೊದಲ ಶಿಕ್ಷಣ ನೀತಿಯಾಗಿದೆ ಮತ್ತು ಮೂವತ್ತನಾಲ್ಕು ವರ್ಷದಷ್ಟು ಹಳೆಯದಾದ 1986 ರ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಪಿಇ) ಗೆ ಬದಲಿಯಾಗಿದೆ. ಲಭ್ಯತೆ, ಸಮಾನತೆ, ಗುಣಮಟ್ಟ, ಕೈಗೆಟುಕುವಿಕೆ ಮತ್ತು ಉತ್ತರದಾಯಿತ್ವದ ಅಡಿಪಾಯದ ಆಧಾರ ಸ್ತಂಭಗಳ ಮೇಲೆ ಈ ನೀತಿಯನ್ನು ರೂಪಿಸಲಾಗಿದೆ. 2030ಕ್ಕೆ ಸುಸ್ಥಿರ ಅಭಿವೃದ್ಧಿಯ ಕಾರ್ಯಸೂಚಿ ಮತ್ತು 21ನೇ ಶತಮಾನದ ಅಗತ್ಯಗಳಿಗೆ ಸೂಕ್ತವಾದ ಮತ್ತು ಪ್ರತಿ ವಿದ್ಯಾರ್ಥಿಯ ವಿಶಿಷ್ಟ ಸಾಮರ್ಥ್ಯಗಳನ್ನುಹೊರತೆಗೆಯುವ ಗುರಿಯನ್ನು ಇದು ಹೊಂದಿದೆ. ಶಾಲೆ ಮತ್ತು ಕಾಲೇಜು ಶಿಕ್ಷಣವನ್ನು ಹೆಚ್ಚು ಸಮಗ್ರ, ಹೊಂದಿಕೊಳ್ಳುವ, ಬಹುಶಿಸ್ತೀಯವನ್ನಾಗಿ ಮಾಡುವ ಮೂಲಕ ಭಾರತವನ್ನು ಜ್ಞಾನ ಸಮಾಜ ಮತ್ತು ಜಾಗತಿಕ ಜ್ಞಾನದ ನಾಯಕನಾಗಿ ಪರಿವರ್ತಿಸುವ ಗುರಿಯನ್ನು ಈ ನೀತಿಯು ಹೊಂದಿದೆ.ಆದರೆಈ ನೂತನ ಶಿಕ್ಷಣ ವ್ಯವಸ್ಥೆ ಸಂಪೂರ್ಣವಾಗಿ ಕಾರ್ಯರೂಪಕ್ಕೆ ತರಲು ಸರಕಾರ ನಿಗದಿ ಮಾಡಿರುವ ಅವಧಿ 20 ವರುಷಗಳು. ಅಂದರೆ ಈ ನೂತನ ಶಿಕ್ಷಣ ನೀತಿ 2040 ಗೆ ಸಂಪೂರ್ಣವಾಗಿ ಕಾರ್ಯಗತವಾಗಿ ಚಾಲನೆಗೆ ಬರುತ್ತದೆ. ಕೇವಲ ತಿಂಗಳುಗಳಲ್ಲಿ ಅಥವಾ ವರುಷಗಳಲ್ಲಿ ಹೊಸ ವ್ಯವಸ್ಥೆಯನ್ನು ಕಾರ್ಯರೂಪಕ್ಕೆ ತರಲಾಗವುದಿಲ್ಲ. ನೂರಾರು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಈಗಿರುವ ಶಾಲಾ ಕಟ್ಟಡಗಳು, ಶಿಕ್ಷಕರುಗಳು, ಪಠ್ಯಕ್ರಮಗಳು, ತರಬೇತಿಗಳು ಹೀಗೆ ಅನೇಕ ಹಳೆಯ ವ್ಯವಸ್ಥೆಗಳನ್ನು ಬದಲಾಯಿಸಲು ಸಮಯ ಮತ್ತು ಪ್ರಯತ್ನ ಮಾಡಬೇಕಾಗಿದೆ.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಧನಾತ್ಮಕ ಅಂಶಗಳೆಂದರೆ:
ಹೊಸ ನೀತಿಯು 2030 ರ ವೇಳೆಗೆ ಶಾಲಾ ಶಿಕ್ಷಣದಲ್ಲಿ ಶೇ.100 ಒಟ್ಟು ದಾಖಲಾತಿ ಅನುಪಾತ (ಜಿಇಆರ್) ದೊಂದಿಗೆ ಪೂರ್ವ ಶಾಲಾ ಹಂತದಿಂದ ಪ್ರೌಢಶಾಲಾ ಹಂತದವರೆಗೆ ಶಿಕ್ಷಣವನ್ನು ಸಾರ್ವತ್ರಿಕಗೊಳಿಸುವ ಗುರಿ ಹೊಂದಿದೆ. ರಾಷ್ಟ್ರೀಯ ಶಿಕ್ಷಣ ನೀತಿ 2020 ಶಾಲೆಯಿಂದ ಹೊರಗಿರುವ 2 ಕೋಟಿ ಮಕ್ಕಳನ್ನು ಮತ್ತೆ ಮುಖ್ಯ ವಾಹಿನಿಗೆ ತರುತ್ತದೆ. ಹೊಸ 5 + 3 + 3 + 4 ವ್ಯಾಸಂಗ ಕ್ರಮದೊಂದಿಗೆ 12 ವರ್ಷಗಳ ಶಾಲಾ ಶಿಕ್ಷಣ ಮತ್ತು 3 ವರ್ಷಗಳ ಅಂಗನವಾಡಿ/ಪೂರ್ವ ಶಾಲಾ ಶಿಕ್ಷಣ. ತಳಹದಿಯ ಸಾಕ್ಷರತೆ ಮತ್ತು ಗಣಿತಜ್ಞತೆಗೆ ಒತ್ತು, ಶಾಲೆಗಳಲ್ಲಿ ಶೈಕ್ಷಣಿಕ, ಪಠ್ಯೇತರ, ವೃತ್ತಿಪರ ವಿಭಾಗಗಳ ನಡುವೆ ಕಟ್ಟುನಿಟ್ಟಿನ ಪ್ರತ್ಯೇಕತೆ ಇಲ್ಲ; 6ನೇ ತರಗತಿಯಿಂದ ಇಂಟರ್ನ್ಶಿಪ್ನೊಂದಿಗೆ ವೃತ್ತಿ ಶಿಕ್ಷಣ ಪ್ರಾರಂಭವಾಗಲಿದೆ, ಕನಿಷ್ಠ 5ನೇ ತರಗತಿಯವರೆಗೆ ಮಾತೃಭಾಷೆ/ ಪ್ರಾದೇಶಿಕ ಭಾಷೆಯಲ್ಲಿ ಶಿಕ್ಷಣ. ವಿದ್ಯಾರ್ಥಿಗಳ ಕಲಿಕೆಯ ಫಲಿತಾಂಶಗಳ ಪ್ರಗತಿಯನ್ನು ಪತ್ತೆ ಮಾಡುವ ಸಮಗ್ರ ಪ್ರಗತಿ ಕಾರ್ಡ್ನೊಂದಿಗೆ ಮೌಲ್ಯಮಾಪನ ಸುಧಾರಣೆಗಳು.
ಉನ್ನತ ಶಿಕ್ಷಣದಲ್ಲಿ ಒಟ್ಟು ದಾಖಲಾತಿ ಅನುಪಾತ 2035 ರ ವೇಳೆಗೆ ಶೇ.50ಕ್ಕೆ ಹೆಚ್ಚಳ; ಉನ್ನತ ಶಿಕ್ಷಣದಲ್ಲಿ 3.5 ಕೋಟಿ ಸೀಟುಗಳ ಸೇರ್ಪಡೆ. ಉನ್ನತ ಶಿಕ್ಷಣ ವ್ಯಾಸಂಗದಲ್ಲಿ ವಿಷಯಗಳ ಆಯ್ಕೆಯಲ್ಲಿ ನಮ್ಯತೆ. ಸೂಕ್ತ ಪ್ರಮಾಣೀಕರಣದೊಂದಿಗೆ ಬಹು ಪ್ರವೇಶ/ನಿರ್ಗಮನಕ್ಕೆ ಅನುಮತಿ. ಬಲವಾದ ಸಂಶೋಧನಾ ಸಂಸ್ಕೃತಿಯನ್ನು ಉತ್ತೇಜಿಸಲು ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನದ ಸ್ಥಾಪನೆ. ಉನ್ನತ ಶಿಕ್ಷಣದಲ್ಲಿ ಲಘುವಾದ ಆದರೆ ಬಿಗಿಯಾದ ನಿಯಂತ್ರ; ವಿಭಿನ್ನ ಕಾರ್ಯಗಳಿಗಾಗಿ ನಾಲ್ಕು ಪ್ರತ್ಯೇಕ ಅಂಗಗಳನ್ನು ಹೊಂದಿರುವ ಏಕ ನಿಯಂತ್ರಕ ವ್ಯವಸ್ಥೆ. ಕಾಲೇಜುಗಳಿಗೆ ಶ್ರೇಣೀಕೃತ ಸ್ವಾಯತ್ತತೆಯೊಂದಿಗೆ 15 ವರ್ಷಗಳಲ್ಲಿ ಸಹವರ್ತಿ ವ್ಯವಸ್ಥೆಯನ್ನು ಹಂತಹಂತವಾಗಿ ತೆಗೆದುಹಾಕಲಾಗುವುದು. ಹೊಸ ಶಿಕ್ಷಣ ನೀತಿ 2020 ಸಮಾನತೆಯೊಂದಿಗೆ ತಂತ್ರಜ್ಞಾನದ ಬಳಕೆಯನ್ನು ಉತ್ತೇಜಿಸುತ್ತದೆ; ರಾಷ್ಟ್ರೀಯ ಶೈಕ್ಷಣಿಕ ತಂತ್ರಜ್ಞಾನ ವೇದಿಕೆಯನ್ನು ರಚಿಸಲಾಗುವುದು. ಹೊಸ ಶಿಕ್ಷಣ ನೀತಿಯು ಲಿಂಗ ಸೇರ್ಪಡೆ ನಿಧಿ, ಹಿಂದುಳಿದ ಪ್ರದೇಶಗಳು ಮತ್ತು ಗುಂಪುಗಳಿಗೆ ವಿಶೇಷ ಶಿಕ್ಷಣ ವಲಯಗಳನ್ನು ಸ್ಥಾಪಿಸಲು ಒತ್ತು ನೀಡುತ್ತದೆ. ಹೊಸ ನೀತಿಯು ಶಾಲೆಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಬಹುಭಾಷಾ ಸಿದ್ಧಾಂತವನ್ನು ಉತ್ತೇಜಿಸುತ್ತದೆ; ಪಾಲಿ, ಪರ್ಷಿಯನ್ ಮತ್ತು ಪ್ರಾಕೃತ ರಾಷ್ಟ್ರೀಯ ಸಂಸ್ಥೆ, ಭಾರತೀಯ ಅನುವಾದ ಮತ್ತು ವ್ಯಾಖ್ಯಾನ ಸಂಸ್ಥೆ ಸ್ಥಾಪಿಸಲಾಗುವುದು. ಬಹುಭಾಷಾ ಸಿದ್ಧಾಂತದಲ್ಲಿ ಯಾವುದೇ ವಿದ್ಯಾರ್ಥಿಯ ಮೇಲೆ ಯಾವುದೇ ಭಾಷೆಯನ್ನು ಹೇರುವುದಿಲ್ಲ, ಎಂಬುದು ಇದರ ಪ್ರಮುಖಾಂಶಗಳಾಗಿವೆ.
ಕಲಿಕೆಯ ಫಲಿತಾಂಶಗಳು ಮತ್ತು ಸಾಮರ್ಥ್ಯ ಆಧಾರಿತ ಮೌಲ್ಯಮಾಪನಗಳ ಮಹತ್ವವನ್ನು ಪುನರಾವರ್ತಿತವಾಗಿ ಉಲ್ಲೇಖಿಸಿರುವುದು ಮತ್ತು ಒತ್ತಿ ಹೇಳಿರುವುದು ಅತ್ಯುತ್ತಮವಾಗಿದೆ. ಒಟ್ಟಾರೆ ವಿಧಾನದ ಭಾಗವಾಗಿ ಐಸಿಟಿಯನ್ನು ತರುವುದು –ಮಾಧ್ಯಮಿಕ ಶಾಲೆಯಿಂದ ಕೋಡಿಂಗ್ ಕೌಶಲ್ಯಗಳು ಮತ್ತು ಕೌಶಲ್ಯ ನಿರ್ಮಾಣದಲ್ಲಿ ಗಣಿತದ ಮಹತ್ವವಿದೆ. ಶಾಲಾಪೂರ್ವ 3 ವರ್ಷಗಳ ವ್ಯಾಪ್ತಿಯನ್ನು ಔಪಚಾರಿಕಗೊಳಿಸುವುದು ಸಹ ಒಂದು ಉತ್ತಮ ಹೆಜ್ಜೆಯಾಗಿದೆ. ನೀತಿಯು ಪಠ್ಯಕ್ರಮ, ಸಹಪಠ್ಯ ಮತ್ತು ಪಠ್ಯೇತರವನ್ನು ಮನಬಂದಂತೆ ಮಿಶ್ರಣ ಮಾಡಲು ಉದ್ದೇಶಿಸಿದೆ ಎಂಬ ಅಂಶವನ್ನು ಇಷ್ಟಪಟ್ಟಿದ್ದಾರೆ. ಶಾಲೆಗಳಾದ್ಯಂತ ನಮ್ಮ ಯುವ ಕಲಿಯುವವರ ಕೌಶಲ್ಯಗಳ ಮೇಲೆ ಇದು ನಿಜವಾಗಿಯೂ ಪರಿಣಾಮ ಬೀರುತ್ತದೆ. ಆನ್ಲೈನ್ ಕಲಿಕೆಯ ಪ್ರಾಮುಖ್ಯತೆ, ನೀತಿಯಾದ್ಯಂತ ಡಿಜಿಟಲ್ ಫ್ಲಾಟ್ಫಾರ್ಮ್ಗಳನ್ನು ತರುವುದನ್ನು ಪ್ರಶಂಸಿಸಬೇಕು.
ನೀತಿಯ ಅನುಷ್ಠಾನದಲ್ಲಿನ ಸವಾಲುಗಳೆಂದರೆ:
ಸಾರ್ವಜನಿಕ ನಿಧಿಯನ್ನು ಜಿಡಿಪಿಯ 6% ಕ್ಕೆ ದ್ವಿಗುಣಗೊಳಿಸಲು ಮತ್ತು ಶಿಕ್ಷಣದ ಒಟ್ಟಾರೆ ಸಾರ್ವಜನಿಕ ವೆಚ್ಚವನ್ನು ಪ್ರಸ್ತುತ 10% ರಿಂದ 20% ಕ್ಕೆ ಹೆಚ್ಚಿಸಲು ಇದು ಶಿಫಾರಸು ಮಾಡುತ್ತದೆ, ಮುಂದಿನ ದಿನಗಳಲ್ಲಿ ಹೆಚ್ಚಿನ ಹಣವು ರಾಜ್ಯಗಳಿಂದ ಬರಬೇಕಾಗಿರುವುದರಿಂದ ಇದು ಕಾರ್ಯಸಾಧ್ಯವಲ್ಲ. ಇದನ್ನು ಕಡ್ಡಾಯಗೊಳಿಸುವ ಯಾವುದೇ ಶಾಸನಾತ್ಮಕ ಅಥವಾ ಸಂವಿಧಾನಾತ್ಮಕ ಕ್ರಮಗಳ ಪ್ರಸ್ತಾಪ ನೀತಿಯಲ್ಲಿಲ್ಲ. ಕಳಪೆ ಗುಣಮಟ್ಟದ ಶಿಕ್ಷಣವು ಅಸಮಾಧಾನಕರ ಕಲಿಕೆಯಲ್ಲಿ ಪರ್ಯವಸಾನವಾಗುತ್ತಿರುವುದು ತುಂಬಾ ಕಳವಳಕಾರಿಯಾಗಿದೆ. ಅಸಮರ್ಪಕ ಪಠ್ಯಕ್ರಮ, ತರಬೇತಾದ ಶಿಕ್ಷಕರ ಕೊರತೆ, ಅದಕ್ಷ ಕಲಿಕಾ ಕ್ರಮಗಳು ಶಾಲಾಪೂರ್ವ ಶಿಕ್ಷಣದ ಪ್ರಮುಖ ಸವಾಲುಗಳಾಗಿವೆ. ಶಾಲಾ ಪೂರ್ವ ಶಿಕ್ಷಣವನ್ನು ಮುಗಿಸಿದ ಗಮನಾರ್ಹ ಸಂಖ್ಯೆಯ ಮಕ್ಕಳು ಶಾಲೆಗೆ ಹೋಗುವುದಕ್ಕೆ ಬೇಕಾದ ಭಾಷೆ ಮತ್ತು ಜ್ಞಾನ ಗ್ರಹಣದ ಸಾಮಾರ್ಥ್ಯವನ್ನು ಹೊದಿರುವುದಿಲ್ಲ. ಬಹುತೇಕ ಶಾಲಾ ಪೂರ್ವ ಶಿಕ್ಷಕರು ಸೂಕ್ತವಾಗಿ ತರಬೇತಾಗಿರುವುದಿಲ್ಲ. ಹಲವು ಪ್ರಕರಣಗಳಲ್ಲಿ ಶಾಲಾ ಪೂರ್ವ ಪಠ್ಯಕ್ರಮವು ಪ್ರಾಥಮಿಕ ಶಿಕ್ಷಣ ಪಠ್ಯಕ್ರಮದ ಕಡಿಮೆ ಗುಣಮಟ್ಟದ ವಿಸ್ತರಣೆಯೇ ಆಗಿರುತ್ತದೆ.
ಶಾಲಾ ಶಿಕ್ಷಣಕ್ಕೆ ಸಂಬಂಧಿಸಿದಂತೆ ಇರುವ ಅತಿದೊಡ್ಡ ಸವಾಲೆಂದರೆ ವಿದ್ಯಾರ್ಥಿ ಕಲಿಕೆಯ ಮಟ್ಟವು ಅಸಮಾಧಾನಕರ ಪ್ರಮಾಣದಲ್ಲಿರುವುದು. 3,5,8 ಮತ್ತು 10ನೇ ಗ್ರೇಡ್ ಗಳನ್ನು ಒಳಗೊಂಡ ರಾಷ್ಟ್ರೀಯ ಸಾಧನಾ ಸಮೀಕ್ಷೆಗಳು (ಎನ್ ಎ ಎಸ್)ಗಮನಾರ್ಹ ಪ್ರಮಾಣದ ವಿದ್ಯಾರ್ಥಿಗಳ ಕಲಿಕಾಮಟ್ಟವು ನಿರೀಕ್ಷಿತ ಪ್ರಮಾಣದಲ್ಲಿ ಇರುತ್ತಿಲ್ಲ ಎಂದು ಸೂಚಿಸುತ್ತಿವೆ. ಪ್ರಾಥಮಿಕ ಮತ್ತು ಉನ್ನತ ಪ್ರಾಥಮಿಕ ಹಂತಗಳಲ್ಲಿನ ಕಳಪೆ ಗುಣಮಟ್ಟದ ಕಲಿಕೆಯು ಮಾಧ್ಯಮಿಕ ಹಂತದ ಕಲಿಕೆಯ ಮೇಲೆ ಪರಿಣಾಮಬೀರುತ್ತದೆ. ಮಾಧ್ಯಮಿಕ ಹಂತದ ಕಳಪೆ ಗುಣಮಟ್ಟದ ಕಲಿಕೆಯು ಕಾಲೇಜು/ವಿಶ್ವವಿದ್ಯಾಲಯದ ವರ್ಷಗಳಿಗೂ ವಿಸ್ತರಣೆಯಾಗುತ್ತದೆ. ಇದು ಉನ್ನತ ಶಿಕ್ಷಣರಂಗದ ಕಳಪೆ ಗುಣಮಟ್ಟದ ಕಲಿಕೆಗೆ ಕಾರಣವಾಗುತ್ತದೆ.
ಪ್ರಸ್ತುತ ವಿಕಲಾಂಗ ವಿದ್ಯಾರ್ಥಿಗಳ ಅರ್ಥಪೂರ್ಣ ಒಳಗೊಳ್ಳುವಿಕೆಯ ಅರ್ಥವನ್ನು ಹೊಂದಿಲ್ಲ. ಭಾರತದ ಶ್ರೀಮಂತ ಮತ್ತು ಬಡ ಮಕ್ಕಳ ನಡುವಿನ ಗುಣಮಟ್ಟದ ಶಿಕ್ಷಣದ ಪ್ರವೇಶದ ಅಂತರವನ್ನು ಮುಚ್ಚಲು ಇದು ಪರಿಹಾರಗಳನ್ನು ಒದಗಿಸುವುದನ್ನು ತಪ್ಪಿಸುತ್ತದೆ. ಪ್ರತಿ ಶಾಲೆಯು ನಿರ್ವಹಿಸಬೇಕಾದ ಸಾಮಾನ್ಯ ಕನಿಷ್ಠ ಮಾನದಂಡವನ್ನು ಕರಡು ನಿರ್ದಿಷ್ಟಪಡಿಸಿಲ್ಲ. ಕೆಲವು ಶಾಲೆಗಳಲ್ಲಿನ ಸೌಲಭ್ಯಗಳ ಗುಣಮಟ್ಟ ಕಡಿಮೆಯಾಗುವಂತಹ ಪರಿಸ್ಥಿತಿಗಳನ್ನು ಇದು ಸೃಷ್ಟಿಸುತ್ತದೆ, ಇದು ಬಡ ಮತ್ತು ಶ್ರೀಮಂತರ ನಡುವಿನ ಅಂತರವನ್ನು ಮತ್ತಷ್ಟು ವಿಸ್ತರಿಸುತ್ತದೆ. ಪೋಷಕ ವಿಕೇಂದ್ರೀಕೃತ ಕಾರ್ಯವಿಧಾನಗಳಿಗೆ ಸಾಕಷ್ಟು ಒತ್ತು ನೀಡುತ್ತದೆ. ಆದಾಗ್ಯೂ, ಇದು ಪೂರ್ಣ ಸಮಯದ ಚಟುವಟಿಕೆಯಾಗಿದ್ದರೂ ಇದಕ್ಕಾಗಿ ಯಾವುದೇ ಪ್ರತ್ಯೇಕ ಹಣವನ್ನು ಮೀಸಲಿಡಲಾಗಿಲ್ಲ ಮತ್ತು ಅದಕ್ಕೆ ಅನುಗುಣವಾಗಿ ಸಿಬ್ಬಂದಿ ಮತ್ತು ಸಂಪನ್ಮೂಲವನ್ನುಪಡೆಯಬೇಕಾಗಿದೆ.
ಅಸಂತೃಪ್ತಿಕರ ಗುಣಮಟ್ಟಕ್ಕೆ ಹಲವಾರು ಕಾರಣಗಳು ಅವುಗಳೆಂದರೆ ಈಗಿರುವ ಶಾಲೆಗಳಲ್ಲಿ ಬಹುತೇಕ ಶಾಲೆಗಳು ಒಂದು ಶಾಲೆಗೆ ಇರಬೇಕೆಂದು ಸೂಚಿಸಿದ ಗುಣಮಟ್ಟಗಳು ಮತ್ತು ನಿಯಮಗಳನ್ನು ಅನುಸರಿಸದೇ ಇರುವುದು; ವಿದ್ಯಾರ್ಥಿ ಮತ್ತು ಶಿಕ್ಷಕರ ಗೈರು ಹಾಜರು, ಶಿಕ್ಷಕರ ಉತ್ತೇಜನದ ಮತ್ತು ತರಬೇತಿ ವಿಷಯದಲ್ಲಿ ಗಂಬೀರ ಕೊರತೆಗಳು, ಇದರ ಪರಿಣಾಮವಾಗಿ ಶಿಕ್ಷಣ ಗುಣಮಟ್ಟ ಮತ್ತು ಕಾರ್ಯಕ್ಷಮತೆಯಲ್ಲಿ ಕೊರತೆಗಳು. ಶಿಕ್ಷಣದಲ್ಲಿ ಮಾಹಿತಿ ಮತ್ತು ಸಂವಹನದ ತಂತ್ರಜ್ಞಾನಗಳನ್ನು ಬಳಸುವಲ್ಲಿನ ನಿಧಾನಗತಿಯ ಪ್ರಗತಿ, ಸಿಬ್ಬಂದಿಗಳನ್ನು ಅಗತ್ಯ ಪ್ರಮಾಣಕ್ಕಿಂತ ಕಡಿಮೆಮಟ್ಟದಲ್ಲಿ ನಿರ್ವಹಿಸುವುದು, ಕಾರ್ಯಕ್ಷಮತೆಯ ಮೇಲ್ವಿಚಾರಣೆಯ ಕಡೆಗೆ ಗಮನ ಮುಂತಾದವುಗಳು. ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವಲ್ಲಿ ಸರ್ಕಾರಿ ವ್ಯವಸ್ಥೆಯಲ್ಲಿ ಇರುವ ಶಾಲೆಗಳು ವಿಫಲವಾಗಿರುವುದರಿಂದ ಭಾರೀ ಪ್ರಮಾಣದಲ್ಲಿ ಖಾಸಗಿ ಶಾಲೆಗಳು ಪ್ರವೇಶಿಸುವುದಕ್ಕೆ ಕಾರಣವಾಗಿವೆ. ಈ ಶಾಲೆಗಳಲ್ಲಿ ಬಹುತೇಕ ಶಾಲೆಗಳು ಮೂಲ ಸೌಕರ್ಯದ ಕೊರತೆ, ಕಲಿಕೆಯ ವಾತಾವರಣದ ಕೊರತೆ ಮತ್ತು ದಕ್ಷ ಶಿಕ್ಷಕರ ಕೊರತೆಯನ್ನು ಎದುರಿಸುತ್ತಿದೆ.
ಭಾರೀ ಪ್ರಮಾಣದಲ್ಲಿ ಇರುವ ಉನ್ನತ ಶಿಕ್ಷಣದಲ್ಲಿ ಗುಣಮಟ್ಟಗಳನ್ನು ಹೆಚ್ಚಿಸುವುದಕ್ಕಾಗಿ ಮತ್ತು ಇಂಥ ಗುಣಮಟ್ಟವನ್ನು ಖಾತ್ರಿಪಡಿಸಿಕೊಳ್ಳಲೆಂದು 1994ರಲ್ಲಿ ಭಾರತದಲ್ಲಿ ಅಕ್ರೆಡಿಟೇಶನ್ ಸಂಸ್ಥೆಗಳನ್ನು ಸ್ಥಾಪಿಸಲಾಯಿತು. ನ್ಯಾಷನಲ್ ಅಸೆಸ್ ಮೆಂಟ್ ಎಂಡ್ ಅಕ್ರೆಡಿಟೇಶನ್ ಕೌನ್ಸಿಲ್ (ನ್ಯಾಕ್) ಗುಣಮಟ್ಟದ ಖಾತ್ರಿ ನೀಡಿದ1 40 ವಿಶ್ವವಿದ್ಯಾಲಯಗಳ ಪೈಕಿ ಕೇವಲ ಶೇಕಡ 32ರಷ್ಟು ವಿವಿಗಳು ಎ ಶ್ರೇಣಿಯನ್ನು ಹೊಂದಿದ್ದವು. ನ್ಯಾಕ್ ಶ್ರೇಣೀಕೃತಗೊಳಿಸಿದ 2789 ಕಾಲೇಜುಗಳಲ್ಲಿ ಶೇಕಡ 7 ರಷ್ಟು ಕಾಲೇಜುಗಳು ಮಾತ್ರ ಎ ಶ್ರೇಣಿಯನ್ನು ಪಡೆದಿವೆ. ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ಅಣಬೆಗಳಂತೆ ಬೆಳೆದಿದ್ದು. ಹಲವು ಸಂಸ್ಥೆಗಳು ಕಳಪೆ ಗುಣಮಟ್ಟದ್ದಾಗಿವೆ. ಉನ್ನತ ಶಿಕ್ಷಣದ ಉಪರಂಗವು ಅರ್ಹತೆಯನ್ನು ಹೊಂದಿದ ಶಿಕ್ಷಕ ಸಿಬ್ಬಂದಿಯ ನೇಮಖಾತಿಯಾಗದೆ ಕೊರತೆಯನ್ನು ಎದುರಿಸುತ್ತಿದೆ. ಹಲವು ಖಾಸಗಿ ಮತ್ತು ಸಾಕಷ್ಟು ಪ್ರಮಾಣದಲ್ಲಿ ಸಾರ್ವಜನಿಕ ರಂಗದ ಶಿಕ್ಷಣ ಸಂಸ್ಥೆಗಳು ಕಳಪೆ ಮೂಲ ಸೌಕರ್ಯವನ್ನು ಹೊಂದಿವೆ. ವೈವಿದ್ಯಮಯ ಆರ್ಥಿಕತೆಗೆ ಉನ್ನತ ಶಿಕ್ಷಣ ಪಠ್ಯಕ್ರಮವನ್ನು ಪರಿಷ್ಕರಿಸುವ ಕೆಲಸವೂ ನಿಧಾನಗತಿಯಲ್ಲಿ ನಡೆಯುತ್ತಿದೆ. ಸಂಶೋಧನೆ ಮತ್ತು ಅಭಿವೃದ್ಧಿಗೆ ನೀಡುವ ನಿಧಿಯ ಪ್ರಮಾಣವು ಸೂಕ್ತವಾಗಿಲ್ಲ.
ಶಾಲಾ ಪೂರ್ವ ಮಕ್ಕಳನ್ನು ಸೇರಿಸಲು ಆರ್ಟಿಇ ಕಾಯ್ದೆಯಡಿ ವ್ಯಾಪ್ತಿಯನ್ನು ವಿಸ್ತರಿಸುವುದು ಅತ್ಯಂತ ಮುಖ್ಯ, ಆದರೆ ಮೂಲಸೌಕರ್ಯ ಮತ್ತು ಶಿಕ್ಷಕರ ಖಾಲಿ ಹುದ್ದೆಗಳ ಗುಣಮಟ್ಟವನ್ನು ಗಮನದಲ್ಲಿಟ್ಟುಕೊಂಡು ಅದನ್ನು ಕ್ರಮೇಣ ಪರಿಚಯಿಸಬೇಕು. ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಹೆಚ್ಚಿಸುವ ಪ್ರಸ್ತಾಪಕ್ಕೆ ಈಗಿರುವ ಸರಕಾರಿ ಅಂಗನವಾಡಿ, ಶಾಲಾಕಾಲೇಜುಗಳ ಹಾಗೂ ಅಲ್ಲಿನ ಉಪಧ್ಯಾಯರ ಸಂಖ್ಯೆಯ ಜೊತೆಗೆ ಗುಣಮಟ್ಟವನ್ನು ಹೆಚ್ಚಿಸುವ ನೀತಿ ಹಾಗೂ ಸಂಪನ್ಮೂಲ ಅಗತ್ಯವಿತ್ತು. ಆದರೆ ಹತ್ತಿರದಲ್ಲಿರುವ ಶಾಲೆಗಳನ್ನು ಮುಚ್ಚಿ ಹತ್ತು ಕಿ.ಮೀ ದೂರದಲ್ಲಿ ಹಾಗೂ ಅಂಗನವಾಡಿ ಗಳಿರುವ ಕ್ಲಸ್ಟರ್ ಸೃಷ್ಟಿಸುವ ಪ್ರಸ್ತಾಪವನ್ನು ಮಾಡಿದೆ ಇದರಿಂದ ಗ್ರಾಮೀಣ ಭಾಗದ ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಮಕ್ಕಳ ಹಾಜರಾತಿಯಲ್ಲಿ ಕುಂಠಿತಗೊಳ್ಳುವ ಸಾಧ್ಯತೆ ಇದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಅಶಿಕ್ಷಕತರ ಸಂಖ್ಯೆಯನ್ನು ತಗ್ಗಿಸುವುದರಲ್ಲಿ ಕಾಣುತ್ತಿರುವ ನಿಧಾನಗತಿಯ ಪ್ರಗತಿಯು ಈಗಲೂ ಒಂದು ಕಳವಳದ ಸಂಗತಿಯಾಗಿದೆ. ಭಾರತವು ಪ್ರಸ್ತುತ ಜಗತ್ತಿನಲ್ಲಿಯೇ ಅತಿ ಹೆಚ್ಚಿನ ಪ್ರಮಾಣದಲ್ಲಿ ಅಶಿಕ್ಷಿತರನ್ನು ಹೊಂದಿರುವ ದೇಶವಾಗಿದೆ. ಭಾರತದಲ್ಲಿ 7 ಮತ್ತು ಅದಕ್ಕಿಂತ ಹೆಚ್ಚು ವಯಸ್ಸಿನ ಜನರಲ್ಲಿ ಅಶಿಕ್ಷಿತರಾರುವವರ ಪ್ರಮಾಣವು 2011 ರಲ್ಲಿ 28.26 ಕೋಟಿಯಾಗಿತ್ತು. ಇಲ್ಲಿ ಯುವಕರ ಸಾಕ್ಷರತಾ ಪ್ರಮಾಣ (15-24ವರ್ಷವಯಸ್ಸು) ಮತ್ತು ವಯಸ್ಕರ ಸಾಕ್ಷರತಾ ಪ್ರಮಾಣವು (15 ವರ್ಷಗಳು ಮತ್ತು ಮೇಲ್ಪಟ್ಟು) 2011 ರಲ್ಲಿ ಕ್ರಮವಾಗಿ ಶೇಕಡ 86.1 ಮತ್ತು 69.3 ಆಗಿದೆ.
ರಾಷ್ಟ್ರೀಯ ಶಿಕ್ಷಣ ಆಯೋಗ ಸ್ಥಾಪಿಸುವುದರಿಂದ ಅನೇಕ ಆಡಳಿತಾತ್ಮಕ ಸಮಸ್ಯೆಗಳು ಎದುರಾಗುತ್ತವೆ. ವೈದ್ಯಕೀಯ ಅಥವಾ ಕೃಷಿ ಅಥವಾ ಕಾನೂನು ಶಿಕ್ಷಣವನ್ನು ಒಂದೇ ಛತ್ರಿ ಅಡಿಯಲ್ಲಿ ತರುವುದು ತೀವ್ರ ವಿರೋಧವನ್ನು ಎದುರಿಸಬೇಕಾಗುತ್ತದೆ. ನಿರೀಕ್ಷಿತ ಬದಲಾವಣೆಗಳ ಸಂಪೂರ್ಣ ಪ್ರಮಾಣ, ಕ್ಷಿಪ್ರ ವೇಳಾಪಟ್ಟಿ, ಶಿಕ್ಷಣ ನೀತಿಯ ಮೇಲೆ ರಾಜ್ಯಗಳನ್ನು ಕೈಗೆತ್ತಿಕೊಳ್ಳಲು ಬಲವಾದ ಕಾರ್ಯವಿಧಾನದ ಅನುಪಸ್ಥಿತಿ ಮತ್ತು ಅಸಮರ್ಪಕ ಬಜೆಟ್ ಈ ನೀತಿಯ ಸಂಪೂರ್ಣ ಅನುಷ್ಠಾನದ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.
2030 ರ ವೇಳೆಗೆ 250 ಮಿಲಿಯನ್ ಗೂ ಹೆಚ್ಚು ವಿದ್ಯಾರ್ಥಿಗಳು ಭಾರತದ 12 ವಾರ್ಷಿಕ ಶುಲ್ಕ ವಿಧಿಸುವ ಶಾಲೆಗಳಿಗೆ ದಾಖಲಾಗುತ್ತಾರೆ ಎಂದು ಅಂದಾಜಿಸಲಾಗಿದೆ. 1:35 ರ ಶಿಕ್ಷಕ-ವಿದ್ಯಾರ್ಥಿ ಅನುಪಾತದಲ್ಲಿ, ಈ ಬೆಳೆಯುತ್ತಿರುವ ವಿದ್ಯಾರ್ಥಿ ಜನಸಂಖ್ಯೆಯನ್ನು ಪರಿಹರಿಸಲು ಭಾರತಕ್ಕೆ ಅಂದಾಜು 7 ಮಿಲಿಯನ್ ಶಿಕ್ಷಕರು ಬೇಕಾಗುತ್ತಾರೆ. ಇದನ್ನು ಒದಗಿಸುವುದು ಕಷ್ಟಸಾಧ್ಯ. ಇಂಗ್ಲಿಷ್ ಭಾಷೆಯನ್ನು ಕೌಶಲ್ಯವಾಗಿ ಕಲಿಯುವ ಮಹತ್ವವನ್ನು ನಿರ್ಲಕ್ಷಿಸುವುದು. ಬಿ.ಎಡ್. ಪ್ರೋಗ್ರಾಂ ನಿಜವಾಗಿಯೂ ಪ್ರಸ್ತುತತೆಯನ್ನು ಕಳೆದುಕೊಂಡಿದೆ. ಅದನ್ನು ಅನೇಕ ವಿಧದ ಬಿ.ಎಡ್ ಆಗಿ ಪುನರುಜ್ಜೀವನಗೊಳಿಸುವ ಮತ್ತು ಆದರೆ ಇದನ್ನು ಹೇಗೆ ಬಳಸಲಾಗುತ್ತದೆ ಎಂದು ಊಹಿಸಿಕೊಳ್ಳುವುದು ಕಷ್ಟ. ಶಾಲೆಗಳಲ್ಲಿ ಡಿಜಿಟಲ್ ಮೂಲಸೌಕರ್ಯವನ್ನು ಹೇಗೆ ಹೆಚ್ಚಿಸಲಾಗುವುದು ಎಂಬುದರ ಬಗ್ಗೆ ಸ್ಪಷ್ಟ ಉಲ್ಲೇಖವಿಲ್ಲ. ಕೌಶಲ್ಯ ಮತ್ತು ಉದ್ಯೋಗಾರ್ಹತೆಯಲ್ಲಿ ಭಾರತವು ಪ್ರಪಂಚದಲ್ಲೆ ಅತಿ ಯುವದೇಶಗಳಲ್ಲಿ ಒಂದಾಗಿದೆ. ಭಾರತದ ಒಟ್ಟು ಜನಸಂಖ್ಯೆಯ ಶೇಕಡಾ 54 ಕ್ಕಿಂತ ಹೆಚ್ಚುಜನರು ೨೫ ವರ್ಷಗಳಿಗಿಂತ ಕಡಿಮೆ ವಯಸ್ಸಿವನವರಾಗಿದ್ದಾರೆ. ಈ ಅಂಶವು ಈ ದೇಶದ ಯುವ ಸಮುದಾಯವು ಶಿಕ್ಷಣ ಮತ್ತು ತರಬೇತಿಯ ಮೂಲಕ ಕಾರ್ಮಿಕ ಬಲವನ್ನು ಪ್ರವೇಶಿಸುವ ಕೌಶಲ್ಯ ಮತ್ತು ಜ್ಞಾನವನ್ನು ಹೊಂದಿ ಸನ್ನಧರಾಗಿರಬೇಕು. ಹಿಗಿದ್ದೂ ವೃತ್ತಿಪರ ಮತ್ತು ತಾಂತ್ರಿಕ ಶಿಕ್ಷಣ ಕಾರ್ಯಕ್ರಮಗಳನ್ನು ಬೆಂಬಲಿಸುವ ಸಾಂಸ್ಥಿಕ ವ್ಯವಸ್ಥೆಗಳು ಸಮರ್ಪಕವಾಗಿಲ್ಲ.
ನೀತಿಯ ಅನುಷ್ಠಾನಕ್ಕೆ ಬೇಕಾದ ಸಲಹೆಗಳು:
ಉದ್ದೇಶಿತ ಗುರಿಗಳನ್ನು ತಲುಪಲು ಹಾಗೂ ಕಾರ್ಯತಂತ್ರಗಳನ್ನು ಯಶಸ್ವಿಗೊಳಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಹಕಾರಿ ಮನೋಭಾವದ ಸ್ಪೂರ್ತಿಯೊಂದಿಗೆ ಕೈಜೋಡಿಸಿ ಕೆಲಸಮಾಡಬೇಕಿದೆ. ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶವೂ ತನ್ನ ಪ್ರಾದೇಶಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಅಗತ್ಯತೆಗಳಿಗೆ ಸೂಕ್ತವಾದ ಕಾರ್ಯಚರಣೆಯ ರೂಪುರೇಷೆಯನ್ನು ಸೂತ್ರೀಕರಿಸುವುದು ಅನಿವಾರ್ಯ ಹಾಗೂ ಪ್ರಶಸ್ತವಾದ ವಿಚಾರವಾಗಿದೆ. ಪ್ರಜಾಸತ್ತಾತ್ಮಕ ವಿಕೇಂದ್ರೀಕರಣ ಮತ್ತು ಸಾಮುದಾಯಿಕ ಭಾಗವಹಿಸುವಿಕೆಯ ಹಿನ್ನಲೆ ಹಾಗೂ ದೃಷ್ಟಿಯಿಂದ ಕಾರ್ಯತಂತ್ರಗಳನ್ನು ನಿಗದಿಗೊಳಿಸುವ ಪ್ರಕ್ರಿಯೆಯು ಅತ್ಯಂತ ಕೆಳಹಂತದವರೆಗೂ ತಲುಪಿ ಪ್ರತಿಯೊಂದು ಜಿಲ್ಲೆ ಹಾಗೂ ಬ್ಲಾಕ್ ಕೂಡ ತನ್ನದೇ ಆದ ಕಾರ್ಯಾಚರಣೆಯ ರೂಪುರೇಷೆಯನ್ನು ಸೂತ್ರೀಕರಿಸಿ ಅಳವಡಿಸಿಕೊಳ್ಳುವುದು ಬಹಳ ಮುಖ್ಯವಾಗಿದೆ. ಅಂತೆಯೇ ಪ್ರತಿಯೊಂದು ಶಿಕ್ಷಣ ಸಂಸ್ಥೆಯೂ ತನ್ನದೇ ಆದ ಸೂಕ್ಷ್ಮ ಹಂತದ ಕ್ರಿಯಾಯೋಜನೆಯನ್ನು ತಯಾರಿಸಿ ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ. ಆರ್ಥಿಕ ಸಂಪನ್ಮೂಲವು ಯಾವಾಗಲೂ ಹಿನ್ನಡೆಯುಂಟು ಮಾಡುವ ಸವಾಲಾಗಿದೆ.
ಸರ್ಕಾರಿ ಯಂತ್ರ, ಖಾಸಗಿ ವಲಯ, ಎಲ್ಲ ಸರ್ಕಾರೇತರ ಸಂಸ್ಥೆಗಳು ಮತ್ತು ದೇಶ ಒಂದಾಗಿ ಶಿಕ್ಷಣಕ್ಕೆ ಸಂಪನ್ಮೂಲವನ್ನು ಒದಗಿಸುವ ರಾಷ್ಟ್ರೀಯ ಜವಬ್ದಾರಿಗೆ ಹೆಗಲು ನೀಡಬೇಕಿದೆ. ಆದುದರಿಂದ ಮಿತವ್ಯಯ ಹಾಗೂ ಜವಾಬ್ದಾರಿಯುತ ಖರ್ಚಿನ ಸಂಸ್ಕೃತಿಯು ಶಿಕ್ಷಣ ವ್ಯವಸ್ಥೆಯನ್ನು ಮುನ್ನೆಡೆಸಬೇಕಾಗಿದೆ. ಅನುಷ್ಠಾನದ ರೂಪುರೇಷೆಗಳನ್ನು ರಚಿಸುವಾಗ ಶಿಕ್ಷಣ ಹಾಗೂ ಇತರ ಸಂಬಂಧಿತ ಕ್ಷೇತ್ರಗಳಾದ ಶಿಶುಪಾಲನೆ, ಪೌಷ್ಠಿಕಾಂಶ, ಆರೋಗ್ಯ, ಕ್ರೀಢೆ, ನೈರ್ಮಲ್ಯ ಮತ್ತು ನೀರು ಪೂರೈಕೆ ಇತ್ಯಾದಿ ಕ್ಷೇತ್ರಗಳ ನಡುವಿನ ಸಂಬಂಧದ ಅಂಶಗಳನ್ನೂ ಸಮರ್ಪಕವಾಗಿ ಅಳವಡಿಸಿಕೊಂಡು ಎಲ್ಲ ಕ್ಷೇತ್ರಗಳಲ್ಲೂ ಸಮಾನವಾದ ಫಲಿತಾಂಶಗಳನ್ನು ಕಾಣುವ ಆಶ್ವಾಸನೆಯೊಂದಿಗೆ ಕೆಲಸ ಮಾಡಲಾಗುತ್ತದೆ. ಸಂಬಂಧಿತ ಹಲವಾರು ಸಂಸ್ಥೆಗಳು, ಶಿಕ್ಷಣ ಇಲಾಖೆ ಹಾಗೂ ಇತರ ಇಲಾಖೆಗಳ ನಡುವೆ ಸಮರ್ಪಕವಾದ ತಾಳಮೇಳದ ಅಗತ್ಯವಿರುವುದರಿಂದ ಅದನ್ನು ಸಾಧಿಸಲು ಬೇಕಾದ ಹೊಂದಾಣಿಕೆಗಳ ತಂತ್ರಗಳನ್ನು ಅಭಿವೃದ್ಧಿಪಡಿಸುವುದು. ಸಮರ್ಪಕವಾದ ಹೊಸ ಸೂಕ್ತ ಉಸ್ತುವಾರಿ, ತಂತ್ರಗಳು ಮತ್ತು ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳುವುದು ಪ್ರತಿಯೊಂದು ಕಾರ್ಯ ನಿರ್ವಾಹಕ ಘಟಕದ ಪ್ರಯತ್ನವಾಗಬೇಕು. ಇದರಿಂದ ಪ್ರತಿಯೊಂದು ಕಾರ್ಯ ವಿಧಾನದ ನಿಯತ ಕಾಲಿಕ ಮೌಲ್ಯಮಾಪನ ಸಾಧ್ಯವಾಗಲಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳೆರಡರಲ್ಲಿಯೂ ಸೂಕ್ಷ್ಮ ಹಂತದಿಂದ ಹಿಡಿದು ಸಮಗ್ರ ಹಂತದವರೆಗೂ ಉಸ್ತುವಾರಿ ನಡೆಯುತ್ತದೆ. ಇದರಿಂದ ಅರ್ಧ ಹಂತದಲ್ಲಿನ ತಿದ್ದುಪಡಿ, ಅನುಷ್ಠಾನದ ತಂತ್ರದ ಪುನರ್ವಿಮರ್ಶೆಯಿಂದ ಉತ್ತಮ ಫಲಿತಾಂಶ, ಇವೆಲ್ಲವೂಗಳನ್ನು ಸಾಧ್ಯವಾಗಿಸ ಬಲ್ಲಂತಹ ವ್ಯವಸ್ಥಿತ ಕಾರ್ಯವಿಧಾನಗಳನ್ನು ಹುಟ್ಟು ಹಾಕಬಹುದಾಗಿದೆ. ಮತ್ತು ಇದರಿಂದ ಈ ನೀತಿಯ ಉದ್ದೇಶಿತ ಗುರಿಗಳನ್ನು ತಲುಪುವುದನ್ನು ವಿಫಲವಾಗಿಸಬಲ್ಲಂತಹ ವ್ಯವಸ್ಥೆಯ ಕಾರ್ಯಚರಣೆಯಲ್ಲಿನ ಲೋಪದೋಷಗಳನ್ನು ಮೊದಲೇ ಪತ್ತೆ ಹಚ್ಚಿ ತಡೆಯಬಹುದಾಗಿರುತ್ತದೆ. ಶಿಕ್ಷಣವು ರಾಜ್ಯದ ವಿಷಯವಾಗಿರುವುದರಿಂದ, ಪ್ರತಿ ರಾಜ್ಯವು ಈ ಹೊಸ ನೀತಿಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರವು ಯಾಂತ್ರಿಕ ವ್ಯವಸ್ಥೆಯನ್ನು ರಚಿಸುವುದು ಮುಖ್ಯವಾಗಿದೆ.
ಭಾರತದ ಮುಂದಿನ ಪೀಳಿಗೆಯನ್ನು ರೂಪಿಸುವ ಮತ್ತು ದೇಶಾದ್ಯಂತ ಗುಣಮಟ್ಟದ ಮಾನದಂಡಗಳನ್ನು ಜಾರಿಗೊಳಿಸುವ ರಾಷ್ಟ್ರೀಯ ಶಿಕ್ಷಣ ವ್ಯವಸ್ಥೆಯತ್ತ ಭಾರತ ಸಾಗಬೇಕು. ನಿಯಂತ್ರಣವನ್ನು ರಾಷ್ಟ್ರೀಯ ಉನ್ನತ ಶಿಕ್ಷಣ ನಿಯಂತ್ರಣ ಪ್ರಾಧಿಕಾರದ ಅಡಿಯಲ್ಲಿ ತರಲಾಗುವುದು, ಸಾಮಾನ್ಯ ಶಿಕ್ಷಣ ಮಂಡಳಿಯಡಿಯಲ್ಲಿ ಪ್ರಮಾಣಿತ ಸೆಟ್ಟಿಂಗ್ ಮತ್ತು ಉನ್ನತ ಶಿಕ್ಷಣ ಧನಸಹಾಯ ಮಂಡಳಿಯಡಿಯಲ್ಲಿ ಧನಸಹಾಯವನ್ನು ಮರುಪರಿಶೀಲಿಸುವ ಅಗತ್ಯವಿರುತ್ತದೆ, ಇದರಿಂದಾಗಿ ಭಾರತದ ಉನ್ನತ ಶಿಕ್ಷಣ ಆಯೋಗದ ಪ್ರಸ್ತುತ ನೀತಿಯೊಂದಿಗೆ ಒಳಗೊಳ್ಳುತ್ತದೆ. ಪಾಲಿ, ಪ್ರಾಕೃತ ಮತ್ತು ಪರ್ಷಿಯನ್ ಭಾಷೆಗಳಿಗೆ ಹೊಸ ಸಂಸ್ಥೆಗಳನ್ನು ಸ್ಥಾಪಿಸುವುದು ಒಂದು ಹೊಸ ಉಪಾಯವಾಗಿದ್ದು, ಮೈಸೂರಿನಲ್ಲಿರುವ ಕೇಂದ್ರೀಯ ಭಾರತೀಯ ಭಾಷಾ ಸಂಸ್ಥೆಯನ್ನು ಬಲಪಡಿಸುವುದು ಮತ್ತು ಈ ಭಾಷೆಗಳನ್ನು ನೋಡಿಕೊಳ್ಳುವ ವಿಸ್ತೃತ ಆದೇಶದೊಂದಿಗೆ ವಿಶ್ವವಿದ್ಯಾಲಯಕ್ಕೆ ನವೀಕರಿಸುವುದು ಉತ್ತಮ ಆಯ್ಕೆಯಾಗಿದೆ. ಶಿಕ್ಷಕರ ಅರ್ಹತಾ ಪರೀಕ್ಷೆಗಳ (ಟಿಇಟಿ) ಜೊತೆಗೆ ಶಿಕ್ಷಕರ ಶಿಕ್ಷಣಕ್ಕಾಗಿ ಸಮಗ್ರ ರಾಷ್ಟ್ರೀಯ ಪಠ್ಯಕ್ರಮದ ಚೌಕಟ್ಟನ್ನು ಶೀಘ್ರವಾಗಿ ಘೋಷಿಸಬೇಕಿದೆ. ಶಿಕ್ಷಣ ಪರಿಸರ ವ್ಯವಸ್ಥೆಯಲ್ಲಿ ಶಿಕ್ಷಕರ ಸಂಭಾವನೆಯಲ್ಲಿನ ರಚನಾತ್ಮಕ ನಿರ್ಬಂಧವನ್ನು ಸರಿಪಡಿಸದವರೆಗೆ, ಉತ್ಸಾಹ ಮತ್ತು ರೂಪದಲ್ಲಿ ಎನ್ಇಪಿಅ ನುಷ್ಠಾನವು ಸವಾಲಾಗಿ ಉಳಿಯುತ್ತದೆ.
ನೀತಿಯದೃಷ್ಟಿ ಮಹತ್ವಾಕಾಂಕ್ಷೆಯಾಗಿದೆ. ಅನುಷ್ಠಾನದ ಮಾರ್ಗಸೂಚಿ ಮತ್ತು ಕಠಿಣತೆಯಿಂದ ಕೂಡಿದೆ, ಇದು ಎಲ್ಲರಿಗೂ ಶಿಕ್ಷಣ ಮತ್ತು ಉದ್ಯೋಗ ಸೃಷ್ಟಿಗೆ ನಿಜವಾಗಿಯೂ ಉತ್ತೇಜನ ನೀಡುತ್ತದೆಯೇ ಎಂದು ರಾಜಕೀಯ ಇಚ್ಚಾಶಕ್ತಿ ನಿರ್ಧರಿಸುತ್ತದೆ. ಭಾರತವನ್ನುರೋಮಾಂಚಕ ಜ್ಞಾನ ಸಮಾಜ ಮತ್ತು ಜಾಗತಿಕ ಜ್ಞಾನದ ನಾಯಕನಾಗಿ ಪರಿವರ್ತಿಸುವ ಜೊತೆ ಜೊತೆಗೆ 21ನೇ ಶತಮಾನದ ಉಳಿದ ಕಾಲಾವಧಿಯು ಭಾರತಕ್ಕೆ ಸೇರಲಿದೆಯೇ? ನೋಡೋಣ.
ಲೇಖಕರು-ಡಾ ರಾಜೇಂದ್ರಪ್ರಸಾದ್ ಪಿ, ಎಂಎಸ್ಡಬ್ಲೂ, ಪಿಹೆಚ್ಡಿ
ಹಿರಿಯ ಸಂಶೋಧಕರು -ಗ್ರಾಸ್ರೂಟ್ಸ್ ರಿಸರ್ಚ್ ಅಂಡ್ ಅಡ್ವೊಕಸಿ ಮೂವ್ಮೆಂಟ್, ಮೈಸೂರು