ಸ್ವತಂತ್ರ ಹೋರಾಟಗಾರ ಸಂಗೊಳ್ಳಿ ರಾಯಣ್ಣನನ್ನು ಕೇವಲ ಕರ್ನಾಟಕಕ್ಕೆ ಸೀಮಿತಗೊಳಿಸಿ ಮೈಸೂರು ಸಂಸದ ಪ್ರತಾಪ ಸಿಂಹ ಹೊಸತೊಂದು ವಿವಾದ ಸೃಷ್ಟಿಸಿದ್ದಾರೆ. ಕಿತ್ತೂರು ಸಂಸ್ಥಾನಕ್ಕಾಗಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯ ವಿರುದ್ದ ಹೋರಾಡಿ ಗಲ್ಲು ಶಿಕ್ಷೆ ಅನುಭವಿಸಿದ ಸಂಗೊಳ್ಳಿ ರಾಯಣ್ಣ ಭಾರತದ ಹೆಮ್ಮೆಯ ಸ್ವಾತಂತ್ರ ಸೇನಾನಿ. ಅಂತಹ ಸ್ವಾತಂತ್ರ ಸೇನಾನಿಯನ್ನು ಕೇವಲ ಕರ್ನಾಟಕಕ್ಕೆ ಸೀಮಿತಗೊಳಿಸಿರುವುದು ಸರಿಯಲ್ಲ ಎಂಬ ಅಭಿಪ್ರಾಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿದೆ.
ಅದೇ ವೇಳೆ ಮರಾಠ ದೊರೆ ಛತ್ರಪತಿ ಶಿವಾಜಿಯನ್ನು ದೇಶದ ಸ್ವಾಭಿಮಾನದ ಪ್ರತೀಕ ಎಂದಿರುವ ಪ್ರತಾಪ್ ಸಿಂಹ, ಸಂಗೊಳ್ಳಿ ರಾಯಣ್ಣ ರಾಜ್ಯದ ಸ್ವಾಭಿಮಾನದ ಪ್ರತೀಕ ಎಂದಿದ್ದಾರೆ. ಮರಾಠರ ದೊರೆ ಶಿವಾಜಿ ದೇಶದ ಸ್ವಾಭಿಮಾನದ ಪ್ರತೀಕ ಆಗಬಹುದಾದರೆ ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪೆನಿ ವಿರುದ್ಧ ಹೋರಾಡಿ ಮರಣದಂಡನೆ ಅನುಭವಿಸಿದ ಸಂಗೊಳ್ಳಿ ರಾಯಣ್ಣ ದೇಶದ ಸ್ವಾಭಿಮಾನದ ಪ್ರತೀಕ ಯಾಕಾಗುವುದಿಲ್ಲ ಎಂದು ಮೈಸೂರು-ಕೊಡಗು ಸಂಸದರೇ ಉತ್ತರಿಸಬೇಕು.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಶಿವಾಜಿಯನ್ನು ಹಿಂದುತ್ವದ ಐಕಾನ್ ಮಾಡಿದ ಬಿಜೆಪಿ ರಾಯಣ್ಣನಿಗೆ ಅನ್ಯಾಯ ಮಾಡೀತೇ?
ಮರಾಠ ದೊರೆಯನ್ನು ಓರ್ವ ಅರಸ, ಪರಾಕ್ರಮಿ ಯೋಧನನ್ನಾಗಿ ನೋಡದೆ, ಬಿಜೆಪಿ ಹಾಗೂ ಸಂಘಪರಿವಾರ ಆತನನ್ನು ಹಿಂದುತ್ವದ ಐಕಾನ್ ಆಗಿ ಬಳಸಿಕೊಂಡಿತು. ಮುಸ್ಲಿಂ ಅರಸರೊಂದಿಗೆ ಯುದ್ಧ ಮಾಡಿರುವುದನ್ನು ವಿಪರೀತವಾಗಿ ಮುನ್ನಲೆಗೆ ತಂದು ಶಿವಾಜಿಯನ್ನು ಮುಸ್ಲಿಂ ಧ್ವೇಷದ ರಾಜಕಾರಣಕ್ಕೆ ಬಳಸಿಕೊಂಡಿತು. ಆದರೆ. ಶಿವಾಜಿಯ ಸೇನೆಯಲ್ಲಿ ಮುಸಲ್ಮಾನ ಸೈನಿಕರಿದ್ದರು. ಮರಾಠ ಸೇನೆಯಲ್ಲಿ ಮುಸಲ್ಮಾನ ದಂಡನಾಯಕರಿದ್ದರು. ಹಿಂದುತ್ವ ರಾಜಕಾರಣ ಮುಸ್ಲಿಂ ಧ್ವೇಷದ ರಾಜಕಾರಣಕ್ಕಾಗಿ ಶಿವಾಜಿಯನ್ನು ಕೇಸರೀಕರಣಗೊಳಿಸಿತು.
ಬಿಜೆಪಿ ಇರಿಸು- ಮುರಿಸುಗೊಳಗಾಗುವುದೇ ಇಲ್ಲಿ. ಶಿವಾಜಿಯನ್ನು ವಿಜೃಂಭಿಸುವ ಭರದಲ್ಲಿ ಕನ್ನಡ ಮಣ್ಣಿನ ವೀರಪುತ್ರ ಸಂಗೊಳ್ಳಿ ರಾಯಣ್ಣನನ್ನು ಕಡೆಗಣಿಸುತ್ತಿದೆ ಎಂಬ ಆರೋಪಗಳು ಬಿಜೆಪಿ ಮೇಲಿದೆ. ಕನ್ನಡ ಅಸ್ಮಿತೆ ರಾಜಕಾರಣ ಬೆಳೆಯಬಾರದೆಂಬ ಕುತಂತ್ರದಿಂದ ಕನ್ನಡದ ಮೇಲೆ ಹಿಂದಿ ಹೇರಿಕೆ ಮಾಡುತ್ತಿರುವ ಬಿಜೆಪಿ, ಕನ್ನಡದ ಚಾರಿತ್ರಿಕ ಪುರುಷರ ಮೇಲೂ ಪರಭಾಷೆಯವರನ್ನು ಹೇರಿ ಕನ್ನಡಿಗರ ಪ್ರಭಾವವನ್ನು ಕುಗ್ಗಿಸಲು ಪ್ರಯತ್ನಿಸುತ್ತಿದೆ ಎಂದು ಕನ್ನಡಾಭಿಮಾನಿಗಳ ಆಕ್ರೋಶ.
ಶಿವಾಜಿಯನ್ನು ರಾಷ್ಟ್ರೀಯ ವ್ಯಕ್ತಿಯಂತೆ ಬಿಂಬಿಸುವುದು ತಪ್ಪಲ್ಲ, ಆದರೆ ಬ್ರಿಟೀಷರ ವಿರುದ್ಧ ಹೋರಾಡಿದ ಸಂಗೊಳ್ಳಿ ರಾಯಣ್ಣನನ್ನು ಕೇವಲ ಕರ್ನಾಟಕದ ಗಡಿಗೆ ಸೀಮಿತಗೊಳಿಸಲು ಪ್ರಯತ್ನಿಸುವುದು ಎಷ್ಟು ಸರಿ? ಸಂಗೊಳ್ಳಿ ರಾಯಣ್ಣನನ್ನು ರಾಜ್ಯಕ್ಕೆ ಸೀಮಿತಗೊಳಿಸುವುದರೊಂದಿಗೆ ಕರ್ನಾಟಕದ ಚರಿತ್ರೆಯ ವೀರಗಾಥೆಯನ್ನು ವ್ಯವಸ್ಥಿತವಾಗಿ ಮುಚ್ಚಿಹಾಕುವ ಷಡ್ಯಂತ್ರದಲ್ಲಿ ಬಿಜೆಪಿಯ ಪಾತ್ರ ಬಯಲಾಗುತ್ತಿದೆ. ದೇಶದಾದ್ಯಂತ ಪ್ರಚಾರ ಪಡೆಯಬೇಕಿದ್ದ ಸಂಗೊಳ್ಳಿ ರಾಯಣ್ಣನ ವೀರ ಚರಿತ್ರೆ ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತಗೊಳಿಸುವುದು ಸರಿಯಲ್ಲ. ಅವರು ಬ್ರಿಟೀಷರ ವಿರುದ್ದ ಹೋರಾಟ ನಡೆಸಿ ತಮ್ಮ ಪ್ರಾಣ ತ್ಯಾಗ ಮಾಡಿದ್ದು ಕೇವಲ ಕರುನಾಡಿಗಾಗಿ ಮಾತ್ರವಲ್ಲ. ಇಂತಹ ಇತಿಹಾಸಪುರುಷ ರಾಯಣ್ಣ ದೇಶದ ಅಭಿಮಾನ ಎಂದು ಕರ್ನಾಟಕದ ಪ್ರತಿನಿಧಿಯಾಗಿ ಪ್ರತಾಪ್ ಸಿಂಹ ಹೇಳಬೇಕಿತ್ತು. ಆದರೆ ಶಿವಾಜಿಯನ್ನು ದೇಶಕ್ಕೂ ರಾಯಣ್ಣನನ್ನು ರಾಜ್ಯಕ್ಕೂ ಮಿತಿಗೊಳಿಸಿ ನಾಡದ್ರೋಹಿ ರಾಜಕಾರಣವನ್ನು ಪ್ರತಾಪ ಸಿಂಹ ಮಾಡುತ್ತಿದ್ದಾರೆ.
ಅದೂ ಅಲ್ಲದೆ, ರಾಯಣ್ಣನನ್ನು ಕನ್ನಡಕ್ಕೆ, ಕರ್ನಾಟಕಕ್ಕೆ ಸೀಮಿತಗೊಳಿಸಿರುವ ಇದೇ ಪ್ರತಾಪ ಸಿಂಹ ಮಾಧ್ಯಮದವರೊಂದಿಗೆ ಮಾತನಾಡುವ ಭರದಲ್ಲಿ ರಾಯಣ್ಣ – ಶಿವಾಜಿ ವಿಚಾರದಲ್ಲಿ ಮರಾಠ-ಕನ್ನಡಿಗ ಎಂಬ ವಿಚಾರ ಎತ್ತಬಾರದು ಎಂದಿದ್ದಾರೆ. ಇದು ಎಂತಹಾ ವೈರುಧ್ಯ? ಶಿವಾಜಿಯನ್ನು ದೇಶೀಯ ನಾಯಕನಾಗಿಯೂ, ರಾಯಣ್ಣನನ್ನು ಕರ್ನಾಟಕ ನಾಯಕನಾಗಿಯೂ ಬಿಂಬಿಸಿದ ಪ್ರತಾಪ ಸಿಂಹ ಕನ್ನಡಿಗ- ಮರಾಠಿಗ ಎಂಬ ತಗಾದೆ ಎತ್ತಬಾರದೆಂದರೆ ಹೇಗೆ? ರಾಯಣ್ಣ ರಾಷ್ಟ್ರೀಯ ನಾಯಕನೆಂದು ಒಪ್ಪಿಕೊಳ್ಳಲು ಇವರಿಗಿರುವ ಸಂಕೋಚವಾದರೂ ಏನು?
ಕನ್ನಡಿಗರು ಶಿವಾಜಿಯನ್ನು ಒಪ್ಪಿಕೊಂಡಂತೆಯೇ ಮರಾಠಿಗರು ರಾಯಣ್ಣನನ್ನು ಒಪ್ಪಿಕೊಂಡರೆ ಬಗೆಹರಿಯಬಹುದಾದ ಸಮಸ್ಯೆಯನ್ನು ಇಷ್ಟು ಕ್ಲಿಷ್ಟಕರವಾಗಿ ಪರಿವರ್ತಿಸುತ್ತಿರುವುದು ಯಾರು? ಶಿವಾಜಿಯಂತೆಯೇ ರಾಯಣ್ಣನನ್ನೂ ರಾಷ್ಟ್ರೀಯ ನಾಯಕ ಎಂದು ಅರ್ಥಮಾಡಿಸಿದ್ದರೆ ಬಹುಷಃ ರಾಯಣ್ಣನ ಪ್ರತಿಮೆಯನ್ನು ಸ್ಥಾಪಿಸಿದ ಬಳಿಕ ಮರಾಠಿಗರು ಪ್ರತಿಭಟನೆ ನಡೆಸುವ ಪ್ರಮೇಯವೇ ಬರುತ್ತಿರಲಿಲ್ಲ. ಆದರೆ ಸ್ವಾತಂತ್ರ್ಯ ಹೋರಾಟಗಾರನ ಪ್ರತಿಮೆಯನ್ನು ವಿರೋಧಿಸುವವರನ್ನು ಓಲೈಸುತ್ತಾ ಕನ್ನಡಪರ ಹೋರಾಟಗಾರರನ್ನು ಪುಂಡರು ಎಂಬರ್ಥದಲ್ಲಿ ಹೇಳಿಕೆ ನೀಡುತ್ತಿರುವ ಬಿಜೆಪಿ ನಾಯಕರು ಎಷ್ಟು ಕನ್ನಡ ಪರ, ಕರ್ನಾಟಕದ ಪರ ಇರುವರೆಂದು ಜಿಎಸ್ಟಿ(GST), ನೆರೆ ಪರಿಹಾರಗಳಾಗಿ ಕರ್ನಾಟಕದ ಪಾಲಿಗೆ ಬಂದಿರುವ ಮೊತ್ತದಲ್ಲೇ ಅರ್ಥವಾಗುತ್ತದೆ.
Also Read: ಜಿಎಸ್ಟಿ ಅನ್ಯಾಯ; ಪ್ರಶ್ನೆ ಮಾಡುವ ತಾಕತ್ತು 25 ಬಿಜೆಪಿ ಸಂಸದರ ಪೈಕಿ ಒಬ್ಬರಿಗೂ ಇಲ್ಲವೇ?