ರಾಜ್ಯದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಕರೋನಾ ಸೋಂಕು ಪ್ರಕರಣಗಳ ಸಂಖ್ಯೆ ರಾಜ್ಯ ಸರ್ಕಾರವನ್ನು ಆತಂಕಕ್ಕೀಡು ಮಾಡಿದೆ. ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಅತೀ ಹೆಚ್ಚು ಸೋಂಕು ಪತ್ತೆಯಾಗುತ್ತಿರುವ ಏರಿಯಗಳಲ್ಲಿ ಮತ್ತೆ ಲಾಕ್‌ಡೌನ್ ಹಾಕುವುದಾಗಿ ಸರ್ಕಾರ ಹೇಳಿದೆ. ಅದರಂತೆ ರಾಜ್ಯ ರಾಜಧಾನಿ ಬೆಂಗಳೂರಲ್ಲಿ 5 ಪ್ರದೇಶಗಳಲ್ಲಿ ಲಾಕ್‌ಡೌನ್ ಹೇರಲಾಗಿದೆ.
ಜೂನ್ 22 ರ ಸಂಜೆ 05 ಗಂಟೆಗೆ ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆಗೊಳಿಸಿರುವ ಪ್ರಕಟಣೆಯಂತೆ ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 249 ಹೊಸ ಕರೋನಾ ಪ್ರಕರಣಗಳು ಪತ್ತೆಯಾಗಿವೆ. ರಾಜ್ಯದಲ್ಲಿ ಒಟ್ಟು ಕಂಡುಬಂದ ಪ್ರಕರಣಗಳ ಸಂಖ್ಯೆ 9,399 ತಲುಪಿದೆ. ಒಂದು ದಿನದಲ್ಲಿ 111 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದು ಒಟ್ಟು 5,730 ಮಂದಿ ಸೋಂಕಿತರು ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ.
ಇಂದು 5 ಮಂದಿ ಸೋಂಕಿತರು ಮೃತಪಟ್ಟಿದ್ದು, ಇದುವರೆಗೂ ರಾಜ್ಯದಲ್ಲಿ 142 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರ ಸಂಖ್ಯೆ ಗಣನೀಯವಾಗಿ ಏರುತ್ತಿದೆ. ಸದ್ಯ 80 ಮಂದಿ ಕರೋನಾ ಸೋಂಕಿತರು ಐಸಿಯುನಲ್ಲಿ ದಾಖಲಾಗಿದ್ದಾರೆ.
ದೇಶಾದ್ಯಂತ 14,821 ಹೊಸ ಪ್ರಕರಣಗಳು ಕಂಡು ಬಂದಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 4,25,282 ತಲುಪಿದೆ. ಇದುವರೆಗೂ ದೇಶದಲ್ಲಿ 2,37,196 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ದೇಶಾದ್ಯಂತ 13699 ಮಂದಿ ಕರೋನಾದಿಂದಾಗಿ ಮೃತಪಟ್ಟಿದ್ದು, ಅದರಲ್ಲಿ ಮಹಾರಾಷ್ಟ್ರದಲ್ಲೇ 6,170 ಮಂದಿ ಸಾವನ್ನಪ್ಪಿದ್ದಾರೆ.
ಭಾರತದಲ್ಲಿ ಪ್ರಕರಣಗಳ ಸಂಖ್ಯೆ 4 ಲಕ್ಷ ಅತೀ ಹೆಚ್ಚು ಪ್ರಕರಣಗಳಿರುವ 5ನೇ ದೇಶವಾಗಿ ಹೊರಹೊಮ್ಮಿದ್ದರೂ, ಲಕ್ಷವಾರು ಜನಸಂಖ್ಯೆಯ ಎಣಿಕೆಯಲ್ಲಿ ಭಾರತ ಉಳಿದ ದೇಶಗಳಿಗಿಂತ ಕಡಿಮೆ ಇದೆ. ಉದಾಹರಣೆಗೆ ಅಮೇರಿಕಾದಲ್ಲಿ 1 ಲಕ್ಷ ಜನರಲ್ಲಿ 671 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದರೆ ಭಾರತದಲ್ಲಿ ಲಕ್ಷ ಜನರಲ್ಲಿ 30 ಜನರಿಗೆ ಸೋಂಕು ಕಾಣಿಸುತ್ತಿದೆ. ಅದೇ ವೇಳೆ ಜರ್ಮನಿಯಲ್ಲಿ 583 ಮಂದಿಗೆ ಸೋಂಕು ಕಾಣಿಸಿಕೊಂಡರೆ, ಸ್ಪೈನ್‌ನಲ್ಲಿ 526, ಇಂಗ್ಲಂಡ್ ನಲ್ಲಿ 448 ಮಂದಿಯಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ.

