ಕರೊನಾ ಸೋಂಕು ತಡೆಯಲು ಘೋಷಿಸಿದ ಲಾಕ್ಡೌನ್ ನಿಂದಾಗಿ ವ್ಯಾಪಾರ ವಹಿವಾಟು ಇಲ್ಲದೇ ಬೊಕ್ಕಸ ಬರಿದು ಮಾಡಿಕೊಂಡಿರುವ ರಾಜ್ಯ ಸರ್ಕಾರಗಳು ಆದಾಯ ಕ್ರೋಢೀಕರಣಕ್ಕೆ ವಿವಿಧ ಮಾರ್ಗೋಪಾಯಗಳನ್ನು ಹುಡುಕುತ್ತಿವೆ. ರಾಜ್ಯ ಸರ್ಕಾರಗಳಿಗೆ ತಕ್ಷಣ ದಕ್ಕುವ ಮಾರ್ಗಗಳೆಂದರೆ ಇನ್ನೂ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವ್ಯಾಪ್ತಿಗೆ ಸೇರದ ಮದ್ಯ ಮತ್ತು ಪೆಟ್ರೋಲಿಯಂ ಉತ್ಪನ್ನಗಳು.
ದೆಹಲಿ ಸರ್ಕಾರ ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದೆ ಇಟ್ಟಿದೆ. ತಕ್ಷಣವೇ ಜಾರಿಗೆ ಬರುವಂತೆ ಪೆಟ್ರೋಲ್ ಮತ್ತು ಡಿಸೇಲ್ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು (ವ್ಯಾಟ್) ಹೆಚ್ಚಿಸಿದೆ. ಆ ಮೂಲಕ ಎಲ್ಲಾ ರಾಜ್ಯಗಳಿಗೂ ತೆರಿಗೆ ಹೆಚ್ಚಿಸುವ ಮಾರ್ಗದಲ್ಲಿ ಮೇಲ್ಪಂಕ್ತಿ ಹಾಕಿಕೊಟ್ಟಿದೆ.
ಆಘಾತದ ಸಂಗತಿ ಎಂದರೆ ದೆಹಲಿ ಸರ್ಕಾರ ಪೆಟ್ರೋಲ್ ದರವನ್ನು 1.67 ರುಪಾಯಿ ಹೆಚ್ಚಿಸಿದ್ದರೆ, ಡಿಸೇಲ್ ದರವನ್ನು 7.10 ರುಪಾಯಿಗಳಷ್ಟು ಹೆಚ್ಚಳ ಮಾಡಿದೆ. ಡಿಸೇಲ್ ದರವನ್ನು ಈ ಪ್ರಮಾಣದಲ್ಲಿ ಹೆಚ್ಚಿಸಿರುವುದು ದೆಹಲಿ ಸರ್ಕಾರದ ಇತಿಹಾಸದಲ್ಲಿ ಇದೇ ಮೊದಲು. ಅಂದರೆ, ಡಿಸೇಲ್ ದರವನ್ನು ಏಕಾಏಕಿ ಶೇ.11.41ರಷ್ಟು ಹೆಚ್ಚಳ ಮಾಡಿದೆ. ಈ ಹೆಚ್ಚಳದಿಂದಾಗಿ ದೆಹಲಿಯಲ್ಲಿ 16.75ರಷ್ಟಿದ್ದ ಡಿಸೇಲ್ ಮೇಲಿನ ವ್ಯಾಟ್ ತೆರಿಗೆಯು ಶೇ.30ಕ್ಕೆ ಏರಿದೆ. ಹಾಗೆಯೇ 27ರಷ್ಟಿದ್ದ ಪೆಟ್ರೋಲ್ ಮೇಲಿನ ವ್ಯಾಟ್ ತೆರಿಗೆಯೂ ಶೇ.30ಕ್ಕೆ ಏರಿದೆ. ವ್ಯಾಟ್ ತೆರಿಗೆಯು ಪೆಟ್ರೋಲ್ ಮತ್ತು ಡಿಸೇಲ್ ಮೇಲೆ ಏಕರೂಪದಲ್ಲಿ ಇರುವುದರಿಂದ ಈ ಎರಡೂ ಇಂಧನಗಳ ನಡುವಿನ ದರ ವ್ಯತ್ಯಾಸ ಗಣನೀಯವಾಗಿ ತಗ್ಗಿದೆ. ಸದ್ಯ ದೆಹಲಿಯಲ್ಲಿ ಪರಿಷ್ಕೃತವಾದ ಪೆಟ್ರೋಲ್ ದರ ಪ್ರತಿ ಲೀಟರ್ ಗೆ 71.26 ರುಪಾಯಿ ಇದ್ದರೆ, ಡಿಸೇಲ್ ದರ 69.ರುಪಾಯಿಗಳು.
ಅಂದಹಾಗೆ ದೆಹಲಿಯಲ್ಲಿನ ದರ ಏರಿಕೆ ವಿದ್ಯಮಾನಕ್ಕೆ ನಾವೇಕೆ ತಲೆಕೆಡಿಸಿಕೊಳ್ಳಬೇಕು ಎನ್ನುತ್ತೀರಾ? ವಾರ್ಷಿಕ ಗರಿಷ್ಠ ತೆರಿಗೆ ಆದಾಯ ಗಳಿಸುತ್ತಿದ್ದ ದೆಹಲಿ ಸರ್ಕಾರವೇ ಹಣಕಾಸು ಸಂಪನ್ಮೂಲದ ಕೊರತೆಯಿಂದಾಗಿ ಈ ಪ್ರಮಾಣದಲ್ಲಿ ತೆರಿಗೆ ಹೇರಿದೆ ಎಂದರೆ, ಪ್ರತಿ ವರ್ಷವೂ ವಿತ್ತೀಯ ಕೊರತೆ ಎದುರಿಸುತ್ತಿರುವ ಕರ್ನಾಟಕ ಸರ್ಕಾರದ ಗತಿ ಏನು? ಸಂಬಳ ಕೊಡಲೂ ಕಷ್ಟವಾಗಿರುವ ಪರಿಸ್ಥಿತಿಯಲ್ಲಿ ಕರ್ನಾಟಕ ಸರ್ಕಾರ ಇದೆ. ಮಾರ್ಚ್ ಅಂತ್ಯದಲ್ಲಿ ಸಂಗ್ರಹವಾಗಬೇಕಿದ್ದ ಸುಮಾರು ಶೇ. 10-20ರಷ್ಟು ತೆರಿಗೆ ಮತ್ತು ತೆರಿಗೆಯೇತರ ಆದಾಯವು ಲಾಕ್ಡೌನ್ ಪರಿಣಾಮ ಸಂಗ್ರಹವಾಗಿಲ್ಲ. ಅಲ್ಲದೇ ಹೊಸ ವಿತ್ತೀಯ ವರ್ಷದ ಮೊದಲ ಮೂವತ್ಮೂರು ದಿನಗಳು ಲಾಕ್ಡೌನ್ ಆಗಿದ್ದರಿಂದ ಹೊಸ ವರ್ಷದಲ್ಲಿ ಬರಬೇಕಿದ್ದ ಮೊದಲ ತಿಂಗಳ ತೆರಿಗೆಯೂ ಬಂದಿಲ್ಲ. ಹೀಗಾಗಿ ದಿನ ನಿತ್ಯದ ಖರ್ಚು ವೆಚ್ಚ ತೂಗಿಸಲು ಕಷ್ಟಪಡಬೇಕಾದ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರ ಇದೆ.
ಇಂತಿಪ್ಪ ಸಂದರ್ಭದಲ್ಲಿ ಕರ್ನಾಟಕದ ಮುಖ್ಯಮಂತ್ರಿಗಳು ದೆಹಲಿ ರಾಜ್ಯ ಸರ್ಕಾರದ ಹಾದಿಯನ್ನು ತುಳಿಯಲಾರರು ಎಂದು ಹೇಳಲಾಗದು. ಏಕೆಂದರೆ- ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸಂಪನ್ಮೂಲ ಕ್ರೌಢೀಕರಣಕ್ಕೆ ಇರುವ ಏಕೈಕ ದಾರಿ ಎಂದರೆ ಮದ್ಯ ಮತ್ತು ಪೆಟ್ರೋಲ್ ಹಾಗೂ ಡಿಸೇಲ್. ಈ ಎರಡೂ ಸರಕುಗಳು ನಿತ್ಯವೂ ತೆರಿಗೆಯನ್ನು ಸರ್ಕಾರದ ಖಜಾನೆಗೆ ತುಂಬಿಸುವ ಮಾರ್ಗಗಳಾಗಿವೆ. ಖಜಾನೆಗೆ ಹೆಚ್ಚಿನ ಆದಾಯ ತರುತ್ತಿದ್ದ ಸ್ಟಾಂಪ್ ಮತ್ತು ರಿಜಿಸ್ಟ್ರೇಷನ್ ಶುಲ್ಕಗಳ ಮೂಲದ ತೆರಿಗೆಯು ಬಹುತೇಕ ಸ್ಥಬ್ಧವಾಗಿದೆ.
ಅಷ್ಟಕ್ಕೂ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮದ್ಯ ಮತ್ತು ಪೆಟ್ರೋಲ್ ಹಾಗೂ ಡಿಸೇಲ್ ಮೇಲೆ ತೆರಿಗೆ ಹೇರುವುದು ಸುಲಭವಲ್ಲ. ಏಕೆಂದರೆ 2020-21ನೇ ಸಾಲಿನ ಬಜೆಟ್ ನಲ್ಲಿ ಅಂದರೆ ಏಪ್ರಿಲ್ 1ರಿಂದ ಜಾರಿಯಾಗುವಂತೆ ಪೆಟ್ರೋಲ್ ಮತ್ತು ಡಿಸೇಲ್ ಹಾಗೂ ಮದ್ಯದ ಮೇಲೆ ತೆರಿಗೆಯನ್ನು ಹೇರಿದ್ದಾರೆ. ಏಪ್ರಿಲ್ 1ರಿಂದ ಮದ್ಯಪಾನೀಯಗಳ ಮೇಲೆ ಹೆಚ್ಚುವರಿಯಾಗಿ ಹೇರಿರುವ ತೆರಿಗೆಯೇ ಶೇ.6ರಷ್ಟು.
ಬಜೆಟ್ ಮಂಡನೆ ವೇಳೆ ಪೆಟ್ರೋಲ್ ಮತ್ತು ಡಿಸೇಲ್ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು ಶೇ.3ರಷ್ಟು ಹೆಚ್ಚಿಸಿದ್ದಾರೆ. ಹೀಗಾಗಿ ಏಪ್ರಿಲ್ ರಿಂದ ರಾಜ್ಯದಲ್ಲಿ ವ್ಯಾಟ್ ತೆರಿಗೆಯು ಪೆಟ್ರೋಲ್ ಮೇಲೆ ಶೇ.32 ರಿಂದ ಶೇ.35ಕ್ಕೂ, ಡಿಸೇಲ್ ಮೇಲೆ ಶೇ.21ರಿಂದ 24ಕ್ಕೂ ಹೆಚ್ಚಿಸಲಾಗಿದೆ.
ಪ್ರಸ್ತುತ ಬೆಂಗಳೂರಿನಲ್ಲಿ ಪೆಟ್ರೋಲ್ ದರವು 73.55 ರುಪಾಯಿ ಮತ್ತು ಡಿಸೇಲ್ ದರವು 65.96 ರುಪಾಯಿ ಇದೆ.
ಯಡಿಯೂರಪ್ಪ ಮುಂದಿನ ಆಯ್ಕೆಗಳೇನು?
ಪ್ರಸ್ತುತ ಪೆಟ್ರೋಲ್ ಮತ್ತು ಡಿಸೇಲ್ ನಡುವೆ ಮೌಲ್ಯವರ್ಧಿತ ತೆರಿಗೆ ಅಂತರವು ಶೇ.11ರಷ್ಟಿದೆ. ಅಂದರೆ, ಪೆಟ್ರೋಲ್ ಮೇಲಿನ ವ್ಯಾಟ್ ಶೇ.35ರಷ್ಟಿದ್ದರೆ ಡಿಸೇಲ್ ಮೇಲಿನ ವ್ಯಾಟ್ ಶೇ.24ರಷ್ಟಿದೆ. ಪೆಟ್ರೋಲ್ ಮೇಲೆ ಈಗಾಗಲೇ ಶೇ.3ರಷ್ಟು ವ್ಯಾಟ್ ಹೆಚ್ಚಿಸಿದ್ದರೂ ಕೊರೊನಾ ಸಂಕಷ್ಟದ ಅವಧಿಯಲ್ಲಾದ ನಷ್ಟವನ್ನು ಭರಿಸಲು ಮತ್ತೆ ಶೇ.3ರಷ್ಟು ವ್ಯಾಟ್ ಹೆಚ್ಚಳ ಮಾಡಿ ಶೇ.35ರಿಂದ ಶೇ.38ಕ್ಕೆ ಏರಿಸಬಹುದು. ಇದರಿಂದಾಗಿ ಗ್ರಾಹಕರು ಪೆಟ್ರೋಲ್ ಖರೀದಿಸಿದಾಗ ಪ್ರತಿಲೀಟರ್ ಗೆ ಹೆಚ್ಚುವರಿಯಾಗಿ ಸುಮಾರು 1.70 ರುಪಾಯಿ ತೆರಬೇಕಾಗುತ್ತದೆ. ಡಿಸೇಲ್ ಮೇಲಿನ ವ್ಯಾಟ್ ಅನ್ನು ಶೇ.14ರಷ್ಟು ಹೆಚ್ಚಿಸಿ ಪೆಟ್ರೋಲ್ ಸರಿಸಮನಾಗಿ (ಅಂದರೆ ಪೆಟ್ರೋಲ್ ಮೇಲೆ ಹೊಸದಾಗಿ ಹೆಚ್ಚಿಸಬಹುದಾದ ಶೇ.3ರಷ್ಟು ಸೇರಿದಂತೆ) ಶೇ.38ಕ್ಕೆ ನಿಗದಿ ಮಾಡಬಹುದು. ಆಗ ಪೆಟ್ರೋಲ್ ಮತ್ತು ಡಿಸೇಲ್ ದರಗಳ ನಡುವಿನ ವ್ಯತ್ಯಾಸವು ಬಹುತೇಕ ತಗ್ಗಲಿದೆ. ಆದರೆ, ಡಿಸೇಲ್ ದರವು ಸುಮಾರು 73.50 ರುಪಾಯಿ ಆಜುಬಾಜಿಗೆ ಏರಲಿದೆ.
ಮದ್ಯದ ಮೇಲಿನ ಎಕ್ಸೈಜ್ ಸುಂಕವನ್ನು ಈಗಾಗಲೇ ಮಾಡಲಾಗಿರುವ ಶೇ.6ರಷ್ಟು ಏರಿಕೆಯ ಜತೆಗೆ ಶೇ.4ರಷ್ಟು ಹೆಚ್ಚಿಸಬಹುದು. ಇದರಿಂದಾಗಿ ಪ್ರಸಕ್ತ ವಿತ್ತೀಯ ವರ್ಷದಲ್ಲಿ ಮದ್ಯದ ಮೇಲಿನ ಎಕ್ಸೈಜ್ ಸುಂಕದ ಏರಿಕೆಯು ಶೇ.10ರಷ್ಟಾಗಲಿದೆ. 22,700 ಕೋಟಿ ಉದ್ದೇಶಿತ ಬಜೆಟ್ ಪ್ರಸ್ತಾವಿತ ನಿರೀಕ್ಷಿತ ಆದಾಯಕ್ಕಿಂತ ಸುಮಾರು 1,300 ಕೋಟಿ ರುಪಾಯಿ ಹೆಚ್ಚು ಅಂದರೆ, 2020-21 ನೇ ಸಾಲಿನಲ್ಲಿ ಮದ್ಯಮಾರಾಟದಿಂದ 24,000 ಕೋಟಿ ರುಪಾಯಿ ತೆರಿಗೆ ನಿರೀಕ್ಷಿಸಬಹುದಾಗಿದೆ.
ಒಂದಂತೂ ನಿಜ. ಮುಖ್ಯಮಂತ್ರಿ ಯಡಿಯೂರಪ್ಪ ನಾಳೆಯೇ ಪೆಟ್ರೋಲ್ ಮತ್ತು ಡಿಸೇಲ್ ಮೇಲಿನ ವ್ಯಾಟ್ ಹೆಚ್ಚಳ ಮಾಡುತ್ತಾರೆ ಎಂದಲ್ಲಾ, ಬರುವ ದಿನಗಳಲ್ಲಿ ಅದು ವಾರದ ನಂತರವೋ, ತಿಂಗಳ ನಂತರವೋ ಏರಿಕೆ ಮಾಡುವುದು ಅನಿವಾರ್ಯ. ಮಾಡಿಯೇ ಮಾಡುತ್ತಾರೆ. ಮದ್ಯಪಾನೀಯಗಳ ಮೇಲಿನ ಎಕ್ಸೇಜ್ ತೆರಿಗೆ ಬರುವ ದಿನಗಳಲ್ಲಿ ಹೆಚ್ಚಳ ಆಗುವುದು ಖಚಿತ.
ಹೀಗಾಗಿ ಕರ್ನಾಟಕದ ಜನರು ಪೆಟ್ರೋಲ್ ಮತ್ತು ಡಿಸೇಲ್ ಮೇಲೆ ಹೆಚ್ಚಿನ ದರ ತೆರಲು ಸಿದ್ದರಾಗಬೇಕಿದೆ. ಹಾಗೆಯೇ ನಲ್ವತ್ತು ದಿನಗಳ ಕಾಲ ಮದ್ಯಪಾನ ತೊರೆದಿದ್ದ ಪಾನಪ್ರಿಯರು ಈ ಅವಧಿಯಲ್ಲಿ ಉಳಿಸಿದ್ದಷ್ಟೂ ದುಡ್ಡನ್ನು ಮುಂದೆ ಸರ್ಕಾರ ಹೇರುವ ಹೆಚ್ಚುವರಿ ತೆರಿಗೆಗೆ ಪಾವತಿಸಬೇಕಾಗುತ್ತದೆ!