ದೇಶದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ದೇಶವ್ಯಾಪಿ ವಿಧಿಸಿರುವ ಲಾಕ್ ಡೌನ್ ಅನ್ನು ಮೇ 3ರವರೆಗೆ ವಿಸ್ತರಿಸಲಾಗಿದೆ. ಲಾಕ್ ಡೌನ್ ಘೋಷಿಸಿದ ನಂತರ ದೇಶದ ಪ್ರಮುಖ ನಗರಗಳಲ್ಲಿನ ವಲಸಿಗರನ್ನು ನಿರ್ವಹಿಸುವಲ್ಲಿ ಮೋದಿ ಸರ್ಕಾರದ ವೈಫಲ್ಯ ಎದ್ದುಕಾಣುತ್ತಿದ್ದರೆ, ಮೋದಿ ಸರ್ಕಾರ ನಾಲ್ಕು ವರ್ಷಗಳ ಹಿಂದೆ ಜಾರಿ ಮಾಡಿದ್ದ ಅಪನಗದೀಕರಣ ಯೋಜನೆಯು ವೈಫಲ್ಯವಾಗಿರುವುದಕ್ಕೆ ಈಗಲೂ ಸಾಕ್ಷಿ ಲಭ್ಯವಾಗುತ್ತಿವೆ.
ಲಾಕ್ ಡೌನ್ ಅವಧಿಯಲ್ಲೇ ಗ್ರಾಹಕರು ಎಟಿಎಂಗಳಿಂದ ನಗದು ಹಿಂಪಡೆಯುವ ಪ್ರಮಾಣವು ಗರಿಷ್ಠ ಮಟ್ಟಕ್ಕೆ ಏರಿದೆ. ಅತ್ತ ದಿನಸಿ ಮತ್ತಿತರ ದಿನಬಳಕೆ ವಸ್ತುಗಳನ್ನು ಹೆಚ್ಚುವರಿಯಾಗಿ ಸಂಗ್ರಹಿಸಿಟ್ಟುಕೊಂಡಂತೆ ಎಟಿಎಂಗಳಿಂದ ನಗದನ್ನು ಹೆಚ್ಚಿನ ಪ್ರಮಾಣದಲ್ಲಿ ಹಿಂದಕ್ಕೆ ಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ನಗದು ಕೊರತೆಯಾಗದಂತೆ ನೋಡಿಕೊಳ್ಳಲು ಮತ್ತು ಎಲ್ಲಾ ಬ್ಯಾಂಕು ಮತ್ತು ಎಟಿಎಂಗಳಲ್ಲಿ ನಗದು ಲಭ್ಯವಾಗುವಂತೆ ನೋಡಿಕೊಳ್ಳಲು ಆರ್ಬಿಐ ನಗದು ನಿರ್ವಹಣಾ ಬ್ಯಾಂಕುಗಳು ಮತ್ತು ಏಜೆನ್ಸಿಗಳಿಗೆ ಸೂಚಿಸಿದೆ. ಇಂತಹ ಸಂದಿಗ್ದ ಕಾಲದಲ್ಲಿ ಒಂದೇ ಒಂದು ಎಟಿಎಂನಲ್ಲಿ ನಗದು ಇಲ್ಲ ಎಂಬುದು ಗೊತ್ತಾದರೆ, ಜನರಿಂದ ಜನರಿಗೆ ಹರಡಿ ಇದ್ದಬದ್ದ ನಗದೆಲ್ಲವನ್ನೂ ಹಿಂದಕ್ಕೆ ಪಡೆದಿಟ್ಟುಕೊಳ್ಳುವ ಪ್ರವೃತ್ತಿ ಜನರಲ್ಲಿದೆ. ಅಂತಹ ಸ್ಥಿತಿ ಉದ್ಭವಿಸದಂತೆ ನೋಡಿಕೊಳ್ಳುವುದು ಈಗ ಆರ್ಬಿಐ ಮುಂದಿರುವ ಸವಾಲಾಗಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ಅಂಕಿಅಂಶಗಳ ಪ್ರಕಾರ 2020ನೇ ಸಾಲಿನಲ್ಲಿ ಜನರ ಬಳಯಿರುವ ನಗದು ಪ್ರಮಾಣವು ಗರಿಷ್ಠ ಮಟ್ಟಕ್ಕೆ ಅಂದರೆ 23.41 ಲಕ್ಷ ಕೋಟಿ ರುಪಾಯಿಗೆ ಏರಿಕೆಯಾಗಿದೆ. ಕಳೆದ ಸಾಲಿನಲ್ಲಿ ಇದೇ ಅವಧಿಯಲ್ಲಿ ಇದ್ದ ನಗದು ಪ್ರಮಾಣಕ್ಕಿಂತಲೂ ಈಗ ಶೇ.14ರಷ್ಟು ನಗದು ಪ್ರಮಾಣ ಹೆಚ್ಚಿದೆ. ಇಂಡಿಯನ್ ಎಕ್ಸ್ಪ್ರೆಸ್ ವರದಿ ಪ್ರಕಾರ, ಮಾರ್ಚ್ ತಿಂಗಳೊಂದರಲ್ಲೇ ಭಾರತೀಯರ ಕೈಯಲ್ಲಿದ್ದ ನಗದು ಪ್ರಮಾಣವು 86,000 ಕೋಟಿ ರುಪಾಯಿಗೆ ಜಿಗಿದಿದೆ. ಮಾರ್ಚ್ ತಿಂಗಳಲ್ಲಿ ಜನರು ಎಟಿಎಂಗಳಿಂದ ಹಣ ಹಿಂಪಡೆದಿರುವ ಪ್ರಮಾಣವು ಕಳೆದ ವಿತ್ತೀಯ ವರ್ಷದ ಸರಾಸರಿ ಮಾಸಿಕ ಪ್ರಮಾಣಕ್ಕೆ ಹೋಲಿಸಿದರೆ ನಾಲ್ಕು ಪಟ್ಟು ಹೆಚ್ಚಾಗಿದೆ. ದೇಶದಲ್ಲಿ ಕೊರೊನಾ ಸೋಂಕು ವ್ಯಾಪಕವಾಗುತ್ತಿರುವ ಮುನ್ಸೂಚನೆ ಸಿಕ್ಕ ನಂತರ ಜನರು ಗರಿಷ್ಠ ಪ್ರಮಾಣದಲ್ಲಿ ನಗದು ಹಿಂಪಡೆದಿದ್ದಾರೆ. ಮಾರ್ಚ್ 13 ಮತ್ತು 27ರ ನಡುವೆ 33,359 ಕೋಟಿ ರುಪಾಯಿ ನಗದನ್ನು ಎಟಿಎಂಗಳಿಂದ ಪಡೆದಿದ್ದಾರೆ. ಸೋಂಕು ತೀವ್ರವಾದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಮಾರ್ಚ್ 24ರಂದು ದೇಶವ್ಯಾಪಿ 21 ದಿನಗಳ ಲಾಕ್ ಡೌನ್ ಘೋಷಿಸಿದ್ದರು. ಇಂದಿನಿಂದ (ಏಪ್ರಿಲ್ 15) ಮತ್ತೆ ಎರಡನೇ ಹಂತದ ಲಾಕ್ ಡೌನ್ ಘೋಷಿಸಲಾಗಿದೆ.
ದೇಶವ್ಯಾಪಿ ಬ್ಯಾಂಕುಗಳು, ಎಟಿಎಂಗಳು ಕಾರ್ಯನಿರ್ವಹಿಸುತ್ತವೆ ಎಂದು ಪ್ರಧಾನಿ ಮೋದಿ, ಆರ್ಬಿಆ ಗವರ್ನರ್ ಶಕ್ತಿಕಾಂತದಾಸ್ ಅವರು ಘೋಷಿಸಿದ ನಂತರವೂ ಜನರು ಹೆಚ್ಚು ನಗದನ್ನು ಹಿಂಪಡೆಯುತ್ತಿರುವುದು ಕಂಡುಬರುತ್ತಿದೆ. ಮುಂದೆ ಏನಾಗಬಹುದೋ ಏನೋ ಎಂಬ ಅನಿಶ್ಛಿತ ಭಾವನೆಯಿಂದಾಗಿ ಜನರು ಹೆಚ್ಚಿನ ನಗದು ಸಂಗ್ರಹಿಸಿಟ್ಟುಕೊಳ್ಳುತ್ತಿದ್ದಾರೆ. ಅಂದರೆ ಪ್ರಧಾನಿ ಮೋದಿ ಅವರು ಪ್ರೈಮ್ ಟೈಮ್ ಭಾಷಣದಲ್ಲಿ ನೀಡುತ್ತಿರುವ ಭರವಸೆಗಳ ಬಗ್ಗೆ ಜನರಿಗೆ ನಂಬಿಕೆ ಬಂದಂತೆ ಕಾಣುತ್ತಿಲ್ಲ.
2016ರಲ್ಲಿ ಪ್ರಧಾನಿ ನರೇಂದ್ರ ಮೋದಿ, ಹಳೆಯ 500 ಮತ್ತು 1000 ರುಪಾಯಿ ನೋಟುಗಳನ್ನು ಅಪನಗದೀಕರಣಗೊಳಿಸಿದ ನಂತರದಲ್ಲಿ ದೇಶದಲ್ಲಿದ್ದ ನಗದು ಪ್ರಮಾಣವು 7.8 ಲಕ್ಷ ಕೋಟಿ ರುಪಾಯಿಗೆ ತಗ್ಗಿತ್ತು. ನಗದು ವಹಿವಾಟು ತಗ್ಗಿಸಿ, ಡಿಜಿಟಲ್ ವಹಿವಾಟು ಪ್ರೋತ್ಸಾಹಿಸುವುದೂ ಅಪನಗದೀಕರಣದ ಪ್ರಮುಖ ಉದ್ದೇಶಗಳಲ್ಲಿ ಒಂದು ಎಂದು ಪ್ರಧಾನಿ ಮೋದಿ ಆಗಲೂ ಪ್ರೈಮ್ ಟೈಮ್ ಭಾಷಣದಲ್ಲಿ ಹೇಳಿಕೊಂಡಿದ್ದರು.
ಆದರೆ, ಪ್ರಧಾನಿ ನರೇಂದ್ರ ಮೋದಿ ಅವರ ಉದ್ದೇಶ ಈಡೇರಿದಂತಿಲ್ಲ. ಅಪನಗದೀಕರಣದಿಂದಾಗಿ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟು, ನಗದು ಕೊರತೆಯಿಂದಾಗಿ ದೇಶವ್ಯಾಪಿ ಸಣ್ಣಪುಟ್ಟ ಉದ್ಯಮಗಳು ಮುಚ್ಚಿ, ಕೋಟ್ಯಂತರ ಜನರು ನಿರುದ್ಯೋಗಿಗಳಾದರು. ಆಗ ಬಿದ್ದ ಆರ್ಥಿಕ ಹೊಡೆತದಿಂದ ದೇಶವಿನ್ನೂ ಚೇತರಿಸಿಕೊಂಡಿಲ್ಲ. ಈಗ ಕೊರೊನಾ ಸೋಂಕು ದೇಶದ

ಆರ್ಥಿಕತೆಯನ್ನು ಕುಗ್ಗಿಸುತ್ತಿದೆ. ನಾಲ್ಕು ವರ್ಷಗಳ ಹಿಂದೆ ಜಾರಿಗೆ ತಂದು ಆರ್ಥಿಕತೆ ಕುಸಿತಕ್ಕೆ ನಾಂದಿ ಹಾಡಿದ ಮೋದಿ ಪ್ರಣೀತ ಅಪನಗದೀಕರಣ ಸಂಪೂರ್ಣ ವಿಫಲವಾಗಿದೆ ಎಂಬುದಕ್ಕೆ ದೇಶದಲ್ಲೀಗ ನಗದು ಹರಿವಿನ ಪ್ರಮಾಣವು 23.41 ಲಕ್ಷ ಕೋಟಿ ರುಪಾಯಿಗೆ ಏರಿರುವುದೇ ಸಾಕ್ಷಿಯಾಗಿದೆ!
ಹಣಕಾಸು ವಲಯಕ್ಕೆ ಗೃಹ ಸಚಿವಾಲಯ ಹೊರಡಿಸಿರುವ ಪರಿಷ್ಕೃತ ಮಾರ್ಗಸೂಚಿಗಳೇನು?
ಈ ನಡುವೆ, ದೇಶದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ದೇಶವ್ಯಾಪಿ ವಿಧಿಸಿರುವ ಲಾಕ್ ಡೌನ್ ಅನ್ನು ಮೇ 3ರವರೆಗೆ ವಿಸ್ತರಿಸಲಾಗಿದೆ. ಈ ಹಿನ್ನೆಲೆಯಲ್ಲಿ ವಿಸ್ತರಿತ ಲಾಕ್ ಡೌನ್ ಅವಧಿಗೆ ಪೂರಕವಾಗಿ ಕೇಂದ್ರ ಗೃಹಸಚಿವಾಲಯವು ಈ ಹಿಂದೆ ಹೊರಡಿಸಿದ್ದ ಮಾರ್ಗಸೂಚಿಗಳನ್ನು ಪರಿಷ್ಕರಿಸಿದೆ. ಪರಿಷ್ಕೃತ ಮಾರ್ಗಸೂಚಿಗಳು ತಕ್ಷಣದಿಂದಲೇ ಜಾರಿಗೆ ಬಂದಿವೆ.
ಹಣಕಾಸು ವಲಯಕ್ಕೆ ಸಂಬಂಧಿಸಿದಂತೆ ಪರಿಷ್ಕೃತ ಮಾರ್ಗಸೂಚಿಗಳಂತೆ, ಭಾರತೀಯ ರಿಸರ್ವ್ ಬ್ಯಾಂಕ್, ಬ್ಯಾಂಕುಗಳು, ಎಟಿಎಂ, ಬಂಡವಾಳ ಮತ್ತು ಷೇರುಪೇಟೆ, ವಿಮಾ ಕಂಪನಿಗಳು ಪೂರ್ಣವಾಗಿ ಕಾರ್ಯ ನಿರ್ವಹಿಸಲಿವೆ.
ಪರಿಷ್ಕೃತ ಆದೇಶದ ಪ್ರಕಾರ ಯಾವುದೆಲ್ಲ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ಹಿಸುತ್ತದೆ?
ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಮತ್ತು ಆರ್ಬಿಐ ನಿಯಂತ್ರಿಸುವ ಹಣಕಾಸು ಮಾರುಕಟ್ಟೆ ಮತ್ತು ಎಪಿಸಿಐ, ಸಿಸಿಐಎಲ್, ಪೇಮೆಂಟ್ ಸಿಸ್ಟಮ್ ಆಪರೇಟರ್ಸ್ ಮತ್ತು ಪ್ರೈಮರಿ ಡೀಲರ್ ಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ.
ಬ್ಯಾಂಕುಗಳ ಶಾಖೆಗಳು, ಎಟಿಎಂಗಳು, ಬ್ಯಾಂಕಿಂಗ್ ವಲಯಕ್ಕೆ ಐಟಿ ಸೇವೆ ಒದಗಿಸುವ ಸಂಸ್ಥೆಗಳು, ಬ್ಯಾಂಕಿಂಗ್ ಕರೆಸ್ಪಾಂಡೆಂಟ್ಸ್, (ಬಿಸಿ) ಎಟಿಎಂ ಆಪರೇಟರ್ಸ್ ಮತ್ತು ನಗದು ನಿರ್ವಹಣಾ ಏಜೆನ್ಸಿಗಳು ಪೂರ್ಣಪ್ರಮಾಣದಲ್ಲಿ ಕಾರ್ಯನಿರ್ವಹಿಸಲಿವೆ.
ಬ್ಯಾಂಕುಗಳ ಶಾಖೆಗಳು ಎಲ್ಲಾ ಫಲಾನುಭವಿಗಳಿಗೆ ನೇರ ನಗದು ಪಾವತಿ (ಡಿಬಿಟಿ) ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ಪೂರ್ಣಾವಧಿಗೆ ಕಾರ್ಯನಿರ್ವಹಿಸಲಿವೆ. ಸ್ಥಳೀಯ ಆಡಳಿತವು ಬ್ಯಾಂಕುಗಳ ಶಾಖೆಗಳು, ಸಿಬ್ಬಂದಿಗಳ ಸುರಕ್ಷತೆಗೆ ಮತ್ತು ಬ್ಯಾಂಕುಗಳಿಗೆ ಬರುವ ಗ್ರಾಹಕರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಳ್ಳಲು ರಕ್ಷಣಾ ಸಿಬ್ಬಂದಿಯನ್ನು ಒದಗಿಸಬೇಕು.
ಸೆಕ್ಯುರಿಟೀಸ್ ಅಂಡ್ ಎಕ್ಸ್ಚೆಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಅಧಿಸೂಚಿಸಿರುವ ಬಂಡವಾಳ ಮತ್ತು ಸಾಲ ಮಾರುಕಟ್ಟೆಗಳು ಪೂರ್ಣಾವಧಿಯಲ್ಲಿ ಕಾರ್ಯನಿರ್ವಹಿಸಬೇಕು. ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್ಡಿಎಐ) ಮತ್ತು ವಿಮಾಕಂಪನಿಗಳು ಪೂರ್ಣಪ್ರಮಾಣದಲ್ಲಿ ಕಾರ್ಯನಿರ್ವಹಿಸಬೇಕು. ಪರಿಷ್ಕೃತ ಮಾರ್ಗಸೂಚಿಗಳು ರಾಜ್ಯ ಸರ್ಕಾರಗಳು ಘೋಷಿಸಿರುವ ಸೋಂಕು ಪೀಡಿತ ಕೆಂಪುವಲಯಗಳಿಗೆ ಅನ್ವಯಿಸುವುದಿಲ್ಲ ಎಂದು ಪರಿಷ್ಕೃತ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.