ಒಂದು ರೀತಿಯಲ್ಲಿ ದೇಶದ ಅರ್ಥವ್ಯವಸ್ಥೆಯನ್ನೇ ಒತ್ತೆ ಇಟ್ಟು ಲಾಕ್ಡೌನ್ ಜಾರಿಗೊಳಿಸಲಾಯಿತು. ಒಂದಲ್ಲ, ಎರಡು ಸಲ. ಆದರೆ ದೇಶ ಸ್ಥಬ್ದವಾದರೂ ಕರೋನಾದ ಸದ್ದಡಗಿಲ್ಲ. ರೋಗದ ಹುಟ್ಟಡಗಿಸಲು ಇಷ್ಟೆಲ್ಲಾ ಮಾಡಿದ ಮೇಲೂ ಕರೋನಾ ಸೋಂಕು ಹರಡುವಿಕೆ ಮಾತ್ರ ನಿಯಂತ್ರಣಕ್ಕೆ ಬಂದಿಲ್ಲ. ಸದ್ಯ ಇನ್ನೊಂದು ಹಂತದ ಲಾಕ್ಡೌನ್ ಜಾರಿಗೊಳಿಸುವುದು ಅಷ್ಟು ಸುಲಭವಲ್ಲ. ಏಕೆಂದರೆ ಈಗಾಗಲೇ ದೇಶದ ಆರ್ಥಿಕತೆ ಮತ್ತು ಉತ್ಪಾದನೆ ಪಾತಾಳಕ್ಕೆ ಕುಸಿದಿವೆ. ಉದ್ಯೋಗ, ವ್ಯಾಪಾರ, ವಹಿವಾಟು ಇಲ್ಲದೆ ಜನರ ಸಹನೆಯ ಕಟ್ಟೆ ಹೊಡೆಯಲಾರಂಭಿಸಿದೆ. ಅದರಲ್ಲೂ ದಿನದ ದುಡಿಮೆ ನಂಬಿ ಬದುಕುವವರ ಸ್ಥಿತಿ ಶೋಚನೀಯವಾಗಿದೆ. ಹಾಗಂತ ಲಾಕ್ಡೌ ನ್ ತೆರವುಗೊಳಿಸುವುದಕ್ಕೂ ಸಾಧ್ಯವಿಲ್ಲ. ಅದು ಇನ್ನೂ ಅಪಾಯದ ಕೆಲಸ. ಏಕೆಂದರೆ ಇಷ್ಟು ದಿನ ಮಾಡಿದ್ದೆಲ್ಲವೂ ಹೊಳೆಯಲ್ಲಿ ಹುಣಸೆ ಹಣ್ಣು ತೇದಂತಾಗುತ್ತದೆ. ಹಾಗಾದರೆ ಮುಂದೇನು ಮಾಡಬೇಕು?
ಕೇಂದ್ರ ಸರ್ಕಾರಕ್ಕೆ ಮೊದಲ ಹಂತದ ಲಾಕ್ಡೌನ್ ಜಾರಿಯಿದ್ದಾಗಲೂ ಇಂಥದೇ ಜಿಜ್ಞಾಸೆ ಇತ್ತು. ಆರೋಗ್ಯ, ಆರ್ಥಿಕ, ಗೃಹ ಇಲಾಖೆಗಳ ಕಾರ್ಯಪಡೆ ರಚಿಸಿ ಮುಂದೇನು ಮಾಡಬೇಕೆಂದು ಸಲಹೆ ಕೇಳಿತು. ವೈಯಕ್ತಿಕವಾಗಿ ಆರೋಗ್ಯ ಮತ್ತು ಆರ್ಥಿಕ ಕ್ಷೇತ್ರಗಳ ತಜ್ಞರಿಂದ ಸಲಹೆಗಳನ್ನು ಪಡೆಯಿತು. ತನ್ನದೇ ಸರ್ಕಾರದ ಗ್ರೂಪ್ ಆಫ್ ಮಿನಿಸ್ಟರ್ಸ್ ರಚಿಸಿ ಶಿಫಾರಸು ತರಿಸಿಕೊಂಡಿತು. ಜಿಲ್ಲಾಧಿಕಾರಿಗಳ ಮಟ್ಟದಿಂದಲೂ ಮಾಹಿತಿ ತರಿಸಿಕೊಂಡಿತು. ಸಂಸತ್ತಿನ ಸಭಾ ನಾಯಕರು, ಪ್ರತಿಪಕ್ಷದ ನಾಯಕರೊಂದಿಗೂ ಸಮಾಲೋಚನೆ ನಡೆಸಿತು. ಆದರೂ ಗೊಂದಲ ಬಗೆಹರಿದಿರಲಿಲ್ಲ. ಕಡೆಗೆ ‘ಇದು ಒಕ್ಕೂಟ ವ್ಯವಸ್ಥೆ’ ಎಂಬುದು ಅರಿವಾಗಿ ಮುಖ್ಯಮಂತ್ರಿಗಳಿಗೆ ಸಲಹೆ ನೀಡುವಂತೆ ಮನವಿ ಮಾಡಿಕೊಂಡಿತು. ಕೇಂದ್ರ ಸರ್ಕಾರ ಮುಂದೇನು ಮಾಡಬೇಕೆಂದು ನಿರ್ಣಯಿಸಲೆಂದೇ ಸಭೆ ಕರೆದಿದೆ ಎಂದು ಗೊತ್ತಿದ್ದರೂ ಕೆಲ ಮುಖ್ಯಮಂತ್ರಿಗಳು ತಮ್ಮ ತಮ್ಮ ರಾಜ್ಯಗಳಲ್ಲಿ ಲಾಕ್ಡೌನ್ ಘೋಷಿಸಿಬಿಟ್ಟರು. ಆ ಮುಖಾಂತರ ರಾಜ್ಯಗಳ ಸ್ವಾಯತ್ತತೆ, ಮಹತ್ವ ಮತ್ತು ಶಕ್ತಿಯನ್ನು ಕೇಂದ್ರ ಸರ್ಕಾರಕ್ಕೆ ತಿಳಿಸಿಕೊಟ್ಟರು. ಲಾಕ್ಡೌನ್ ಮುಂದುವರೆಸುವುದರಿಂದ ದೇಶದ ಆರ್ಥಿಕತೆಗೆ ಪಾರ್ಶ್ವವಾಯು ಬಡಿಯಲಿದೆ ಎಂದು ಗೊತ್ತಿದ್ದರೂ ಅನಿವಾರ್ಯವಾಗಿ ಎರಡನೇ ಹಂತದ ಲಾಕ್ಡೌನ್ ಘೋಷಣೆ ಮಾಡಲಾಯಿತು.
ಈಗ ಪರಿಸ್ಥಿತಿ ಬದಲಾಗಿದೆ. ಸದ್ಯಕ್ಕೆ ಮತ್ತೊಮ್ಮೆ ‘ಮುಂದೇನು ಮಾಡಬೇಕೆಂದು ಚರ್ಚಿಸಲು’ ಈವರೆಗೆ ಕೇಂದ್ರ ಸರ್ಕಾರ ಮುಖ್ಯಮಂತ್ರಿಗಳ ಸಭೆ ಕರೆದಿಲ್ಲ. ಅಲ್ಲದೆ ಏಪ್ರಿಲ್ 20ರಿಂದ ಲಾಕ್ಡೌನ್ ನಿಯಮಗಳನ್ನು ಸಡಿಲಿಸಿದೆ. ಲಾಕ್ಡೌನ್ ಸಡಿಲಿಸುವ ಅಥವಾ ಬಿಗಿಗೊಳಿಸುವ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೂ ಬಿಟ್ಟುಕೊಟ್ಟಿದೆ. ಇದರನ್ವಯವೇ ಕರ್ನಾಟಕದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮೊದಲಿಗೆ ಲಾಕ್ಡೌನ್ ಸಡಿಲಿಸಿ ನಂತರ ಸಾರ್ವಜನಿಕರಿಂದ ತೀವ್ರ ಟೀಕೆ ಬಂದ ಬಳಿಕ ಹಿಂತೆಗೆದುಕೊಂಡಿದ್ದು. ದೆಹಲಿಯಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ ಕಿಂಚಿತ್ತೂ ಬದಲಾವಣೆ ಮಾಡುವುದಿಲ್ಲ ಎಂದು ಖಡಕ್ ಆಗಿ ಹೇಳಿದ್ದು. ಎರಡೂ ಕಡೆ ಭಿನ್ನ ನಿಲುವುಗಳಿಂದ ಏನೇನು ಆಯಿತು ಎಂಬುದು ಈಗ ಎಲ್ಲರಿಗೂ ತಿಳಿದಿದೆ.
ಬಹುತೇಕ ಮುಖ್ಯಮಂತ್ರಿಗಳ ನಿಲುವು ಈಗ ಬದಲಾಗಿರಬಹುದು. ಖಡಾಖಂಡಿತವಾಗಿ ಲಾಕ್ಡೌನ್ ಇರಲಿ ಎಂದು ಹೇಳಲಾರರು. ಏಕೆಂದರೆ ದೇಶದ ಆರ್ಥಿಕತೆ ಮತ್ತು ಉತ್ಪಾದನೆ ಕುಸಿಯುವುದರಿಂದ ಉಂಟಾಗುವ ಅನಾಹುತಗಳಿಗೆ ರಾಜ್ಯಗಳನ್ನು ಮುನ್ನಡೆಸುತ್ತಿರುವವರು ಕೂಡ ಹೆಗಲು ಕೊಡಬೇಕಾಗುತ್ತದೆ. ಕೇಂದ್ರ ಸರ್ಕಾರದಿಂದ ಸಂಪನ್ಮೂಲದ ಸಹಕಾರ ಸಿಗದೆ ಕಂಗೆಟ್ಟಿರುವ ರಾಜ್ಯಗಳಿಗೆ ದಿನ ಕಳೆದಂತೆ ಪರಿಸ್ಥಿತಿಯನ್ನು ನಿಭಾಯಿಸುವುದು ದುಸ್ತರವಾಗುತ್ತಿದೆ. ಆದುದರಿಂದ ಕರೋನಾ ಕಷ್ಟದ ನಡುವೆಯೂ ದೈನಂದಿನ ಚಟುವಟಿಕೆಗಳಿಗೆ ತೆರೆದುಕೊಳ್ಳುವುದೇ ಲೇಸು ಎಂಬ ನಿರ್ಧಾರಕ್ಕೆ ಅವರುಗಳು ಬಂದಂತಿದೆ.
ಮುಖ್ಯಮಂತ್ರಿಗಳ ನಿಲುವುಗಳ ಜೊತೆಗೆ ಆರ್ಥಿಕ ಮತ್ತು ಉತ್ಪಾದನಾ ವಲಯ ಇನ್ನೊಂದು ರೀತಿಯಲ್ಲಿ ಸರ್ಕಾರವನ್ನು ಬೆಚ್ಚಿ ಬೀಳಿಸುತ್ತಿವೆ. ಇನ್ನೊಂದು ಬಾರಿಗೆ ಲಾಕ್ಡೌನ್ ಘೋಷಣೆ ಮಾಡಿದರೆ ಅರ್ಥಿಕವಾಗಿ ಮತ್ತೆ ಮೇಲೇಳಲು ಬಹಳಷ್ಟು ವರ್ಷ ಬೇಕಾಗಲಿದೆ. ಮೊದಲ ಹಂತದ ಲಾಕ್ಡೌನ್ ವೇಳೆ ಶೇಕಡ 80ರಷ್ಟು ಕುಸಿದಿದ್ದ ಉತ್ಪಾದನೆ ಎರಡನೇ ಹಂತದಲ್ಲಿ ಶೇಕಡ 50ರಷ್ಟಾದರೂ ಆಗಬಹುದು ಎಂದು ಮಾಡಲಾಗಿರುವ ಅಂದಾಜು ಮಕಾಡೆ ಮಲಗಲಿದೆ. ಸದ್ಯದ ಪರಿಸ್ಥಿತಿಯಲ್ಲಿ ಕನಿಷ್ಠ ಶೇಕಡ 50ರಷ್ಟಾದರೂ ಉತ್ಪಾದನೆ ಆಗದಿದ್ದರೆ ಮುಂದೆ ಸಮಸ್ಯೆಗಳ ಸರಮಾಲೆ ಸೃಷ್ಟಿಯಾಗುತ್ತದೆ. ಕೃಷಿ ಕ್ಷೇತ್ರಕ್ಕೆ ಮಾತ್ರ ಸೀಮಿತಗೊಳಿಸಿಕೊಂಡು ನೋಡುವುದಾದರೆ ಈಗ ಬಿತ್ತನೆಗೆ ಉತ್ತೇಜನ ನೀಡದಿದ್ದರೆ ಮುಂದೆ ಆಹಾರದ ಅಭಾವ ಸೃಷ್ಟಿಯಾಗಲಿದೆ ಎಂಬೆಲ್ಲಾ ಮಾಹಿತಿಗಳು ಹೊರಬೀಳುತ್ತಿವೆ.
ಇನ್ನೂ ಕರೋನಾ ನಿಯಂತ್ರಣದ ವಿಷಯಕ್ಕೆ ಬಂದರೆ ದೇಶದಲ್ಲಿ ಮೊದಲ ಬಾರಿಗೆ ಲಾಕ್ಡೌನ್ ಘೋಷಣೆ ಮಾಡುವ ಮುನ್ನ, ಅಂದರೆ ಏಪ್ರಿಲ್ 19ರಂದು ಇಡೀ ದೇಶದಲ್ಲಿ ಕೇವಲ 166 ಕರೋನಾಸೋಂಕು ಪೀಡಿತರು ಇದ್ದರು. ಅವರ ಪೈಕಿ 87 ಜನರನ್ನು ಇಂಟೆನ್ಸೀವ್ ಸೆಂಟರ್ ಯುನಿಟ್ ಇಡಲಾಗಿತ್ತು. 24 ಮಂದಿಗೆ ವೆಂಟಿಲೇಟರ್ ಮತ್ತು 55 ಜನರಿಗೆ ಆಕ್ಸಿಜನ್ ವ್ಯವಸ್ಥೆ ಮಾಡಲಾಗಿತ್ತು ಎಂದು ಕೇಂದ್ರ ಆರೋಗ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್ ಹೇಳಿದ್ದಾರೆ. ಅದೇ ಕೇಂದ್ರ ಆರೋಗ್ಯ ಇಲಾಖೆಯು ಏಪ್ರಿಲ್ 21ರಂದು ದೇಶದಲ್ಲಿರುವ ಕರೋನಾಸೋಂಕು ಪೀಡಿತರ ಸಂಖ್ಯೆಯನ್ನೂ ಬಿಡುಗಡೆ ಮಾಡಿದೆ. ಈಗ ಬರೊಬ್ಬರಿ 19,161ಜನ ಕರೋನಾ ಸೋಂಕು ಪೀಡಿತರಿದ್ದಾರೆ. ಇವರುಗಳ ಪೈಕಿ ಗುಣಮುಖರಾದವರು 3,547 ಮಂದಿ ಮಾತ್ರ. ಕರೋನಾದಿಂದ ಮೃತಪಟ್ಟವರ ಸಂಖ್ಯೆ 609ಕ್ಕೆ ಏರಿಕೆಯಾಗಿದೆ.
ಕೇಂದ್ರ ಆರೋಗ್ಯ ಇಲಾಖೆ ಕರೋನಾ ಸೋಂಕು ಪೀಡಿತರ ಸಂಖ್ಯೆ ಯಾವ್ಯಾವ ರಾಜ್ಯಗಳಲ್ಲಿ ಎಷ್ಟೆಷ್ಟು ದಿನಕ್ಕೆ ದ್ವಿಗುಣಗೊಳ್ಳುತ್ತಿದೆ ಎಂಬ ಮಾಹಿತಿಯನ್ನೂ ಬಿಡುಗಡೆ ಮಾಡಿದೆ. ಒಟ್ಟು 9 ರಾಜ್ಯಗಳಲ್ಲಿ 20ದಿನದೊಳಗೆ ಕರೋನಾ ಸೋಂಕು ಪೀಡಿತರ ಸಂಖ್ಯೆ ದುಪ್ಪಟ್ಟಾಗುತ್ತಿದೆ. 8.5ದಿನಗಳಲ್ಲಿ ಕರೋನಾ ಸೋಂಕು ಪೀಡಿತರು ಸಂಖ್ಯೆ ದ್ವಿಗುಣ ಗೊಳ್ಳುತ್ತಿರುವ ರಾಷ್ಟ್ರ ರಾಜಧಾನಿ ದೆಹಲಿ ಮೊದಲ ಸ್ಥಾನದಲ್ಲಿದೆ. 2ನೇ ಸ್ಥಾನದಲ್ಲಿರುವ ಕರ್ನಾಟಕದಲ್ಲಿ 9.2ದಿವಸದಲ್ಲಿ ದ್ವಿಗುಣವಾಗುತ್ತಿದೆ. 3ನೇ ಸ್ಥಾನದಲ್ಲಿರುವ ತೆಲಂಗಾಣದಲ್ಲಿ 9.4ದಿನಕ್ಕೆ, 4ನೇ ಸ್ಥಾನದಲ್ಲಿರುವ ಆಂಧ್ರದಲ್ಲಿ 10.6 ದಿನಕ್ಕೆ, 5ನೇ ಸ್ಥಾನದಲ್ಲಿರುವ ಜಮ್ಮು ಕಾಶ್ಮೀರದಲ್ಲಿ11.5 ದಿನಕ್ಕೆ, 6ನೇ ಸ್ಥಾನದಲ್ಲಿರುವ ಪಂಜಾಬಿನಲ್ಲಿ 13.1 ದಿನಕ್ಕೆ, 7ನೇ ಸ್ಥಾನದಲ್ಲಿರುವ ಛತ್ತೀಸ್ಘಡದಲ್ಲಿ 13.3 ದಿನಕ್ಕೆ, 8ನೇ ಸ್ಥಾನದಲ್ಲಿರುವ ತಮಿಳುನಾಡಿನಲ್ಲಿ14 ದಿನಕ್ಕೆ ಹಾಗೂ 9ನೇ ಸ್ಥಾನದಲ್ಲಿರುವ ಬಿಹಾರದಲ್ಲಿ16.4 ದಿನಕ್ಕೆ ದ್ವಿಗುಣಗೊಳ್ಳುತ್ತಿದೆ. ಇದಲ್ಲದೆ 20 ರಿಂದ 30 ದಿನಗಳ ಅಂತರದಲ್ಲಿ 7 ರಾಜ್ಯಗಳಲ್ಲಿ ಕರೋನಾ ಪೀಡಿತರ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ. ಇವೆಲ್ಲದರ ನಡುವೆ ಒರಿಸ್ಸಾ ಮತ್ತು ಕೇರಳದಲ್ಲಿ ಮಾತ್ರ ಕರೋನಾ ನಿಯಂತ್ರಣಕ್ಕೆ ಬಂದಿದೆ. ಆ ಎರಡೂ ರಾಜ್ಯಗಳಲ್ಲಿ ತಿಂಗಳಾದರೂ ಒರಿಸ್ಸಾ, ಕೇರಳದಲ್ಲಿ ಕರೋನಾ ಪೀಡಿತರ ಸಂಖ್ಯೆ ದ್ವಿಗುಣ ಆಗಿಲ್ಲ.
ಕರೋನಾ ಸೋಂಕು ಹರಡುವಿಕೆಯ ಈ ಅಂಕಿ – ಅಂಶಗಳನ್ನು ಕೇಂದ್ರ ಸರ್ಕಾರದ ಮುಂದಿಟ್ಟಿರುವ ಆರೋಗ್ಯ ಇಲಾಖೆ ಸಹಜವಾಗಿ ಲಾಕ್ಡೌನ್ ಮುಂದುವರೆಸುವುದೊಳಿತು ಎಂಬ ಅಭಿಪ್ರಾಯವನ್ನೇ ನೀಡಿದೆ. ‘ಝಾನ್ ಹೈ ಥೋ ಜೀವನ್’ ಎಂಬ ಮಾತೇ ಮುಖ್ಯವಾಗುವುದಾದರೆ ಲಾಕ್ಡೌನ್ ಮುಂದುವರೆಸಲೇಬೇಕಾಗುತ್ತದೆ. ‘ಈಗ ಕರೋನಾ ನಿಯಂತ್ರಣಕ್ಕಾಗಿ ಲಾಕ್ಡೌನ್ ಮಾಡಿದರೆ ಮುಂದೆ ಹಸಿವಿನಿಂದ ಜನ ಸಾಯಬೇಕಾಗುತ್ತದೆ’ ಎಂಬ ಮಾತು ಕೇಳಿಬರುತ್ತಿವೆ. ಅದನ್ನು ಕೇಳಿದರೆ ಲಾಕ್ಡೌನ್ ತೆರವುಗೊಳಿಸಬೇಕಾಗುತ್ತದೆ. ಒಂಥರಾ ‘ಇತ್ತ ಹುಲಿ ಅತ್ತ ದರಿ’ ಎಂಬ ಸ್ಥಿತಿ ನಿರ್ಮಾಣವಾಗಿದೆ. ಕಳೆದ ಬಾರಿ ಮುಖ್ಯಮಂತ್ರಿಗಳ ಸಲಹೆ ಆಧರಿಸಿ ಅಂತಿಮ ನಿರ್ಧಾರಕ್ಕೆ ಬರಲಾಗಿತ್ತು. ಈ ಬಾರಿ ಅವರಾದರೂ ಏನು ಹೇಳಿಯಾರು? ಕೇಂದ್ರ ಸರ್ಕಾರವನ್ನು ಕಾಡುತ್ತಿರುವ ಗೊಂದಲ ಅವರುಗಳನ್ನೂ ಬಿಟ್ಟಿಲ್ಲ.