ಕರೋನಾ ಸೋಂಕಿನ ತೀವ್ರತೆ ಸರ್ಕಾರ ಅಂಕಿ ಅಂಶದ ಪ್ರಕಾರ ನಿಧಾನಗತಿಯಲ್ಲಿ ಇಳಿಯುತ್ತಲಿದೆ. ಆದರೆ, ಸೋಂಕು ಇನ್ನೂ ಸಂಪೂರ್ಣವಾಗಿ ನಿರ್ಣಾಮವಾಗದ ಕಾರಣ ಹಲವು ನಿಬಂಧನೆಗಳೊಂದಿಗೆ ಸಾರ್ವಜನಿಕರನ್ನು ತಮ್ಮ ಮನೆಗಳಿಂದ ಹೊರಬರಲು ಅವಕಾಶ ಮಾಡಿಕೊಡುತ್ತಿದೆ. ಅದರಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಕೂಡಾ ಒಂದು.
ಮಾಸ್ಕ್ ಧರಿಸದಿದ್ದಲ್ಲಿ ದಂಡ ಅಥವಾ ಶಿಕ್ಷೆ ವಿಧಿಸಲು ಆಯಾ ರಾಜ್ಯ ಸರ್ಕಾರಗಳಿಗೆ ಅಧಿಕಾರವಿದೆ. ಕರ್ನಾಟಕದಲ್ಲಿ ಮಾಸ್ಕ್ ಧರಿಸದಿದ್ದರೆ ಒಂದು ಸಾವಿರ ದಂಡ ವಿಧಿಸಲು ಆದೇಶ ನೀಡಿದ್ದ ಸರ್ಕಾರ ನಂತರ ಜನರ ವಿರೋಧ ಎದುರಿಸಲಾಗದೇ, ನಗರ ವ್ಯಾಪ್ತಿಯಲ್ಲಿ ದಂಡದ ಮೊತ್ತವನ್ನು ರೂ. 250ಕ್ಕೆ ಇಳಿಸಿತ್ತು. ಇದೇ ರೀತಿ ಮಹಾರಾಷ್ಟ್ರದಲ್ಲಿಯೂ, ಮಾಸ್ಕ್ ಧರಿಸದಿದ್ದರೆ ರೂ. 200 ದಂಡ ಕಟ್ಟಬೇಕಾಗುತ್ತದೆ. ದಂಡ ಕಟ್ಟಲು ನಿಮ್ಮ ಬಳಿ ಹಣವಿಲ್ಲದಿದ್ದರೆ, ಅದಕ್ಕೆ ಪರ್ಯಾಯವಾದ ಶಿಕ್ಷೆಯೂ ಇದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಒಂದು ವೇಳೆ ಮುಂಬೈ ಒಳಗೆ ಯಾರಾದರೂ ಮಾಸ್ಕ್ ಧರಿಸದೇ ಇರುವುದು ಕಂಡುಬಂದರೆ, ಅವರಿಗೆ ಸ್ಥಳದಲ್ಲಿಯೇ ರೂ. 200 ದಂಡ ಹಾಕುವಂತೆ BMC ಆದೇಶ ನೀಡಿದೆ. ಒಂದು ವೇಳೆ ನಿಯಮ ಮುರಿದವರ ಬಳಿ ಹಣವಿಲ್ಲದಿದ್ದರೆ, ಸಮುದಾಯ ಸೇವೆಯ ಹೆಸರಿನಲ್ಲಿ ರಸ್ತೆಯ ಕಸ ಗುಡಿಸುವ ಶಿಕ್ಷೆ ವಿಧಿಸಲಾಗುತ್ತದೆ.
ಈಗಾಗಲೇ, ಅಂಧೇರಿ ಪಶ್ಚಿಮ, ಜುಹು ಮತ್ತು ವಾರ್ಸೋವಾ ಪ್ರದೇಶಗಳಲ್ಲಿ ಹಲವು ಜನರು ಕಸ ಗುಡಿಸುವ ʼಸೇವೆʼಯನ್ನು ಮಾಡಿದ್ದಾರೆ. ಪ್ರತೀ ಬಾರಿ ಮಾಸ್ಕ್ ಧರಿಸದೇ ಮನೆಯಿಂದ ಹೊರ ಬಂದವರಿಂದ ತಲಾ ಒಂದು ಗಂಟೆಗಳ ಸಮುದಾಯ ಸೇವೆಯ ರೂಪದಲ್ಲಿ ಕಸ ಗುಡಿಸಲಾಗುತ್ತದೆ.
ಗುರುವಾರ ಸಂಜೆಯ ವೇಳೆಗೆ ಅಂಧೇರಿ ಪಶ್ಚಿಮ ಭಾಗದಲ್ಲಿ ಸುಮಾರು 35 ಜನರು ಈ ರೀತಿ ಕಸ ಗುಡಿಸಿದ್ದಾರೆ. ಉಳಿದವರು ರೂ. 200 ದಂಡ ಕಟ್ಟಿದ್ದಾರೆ.
ಮೊದಲು ರಸ್ತೆಯಲ್ಲಿ ಕಸ ಗುಡಿಸಲು ಒಪ್ಪದೇ ಇದ್ದ ಜನರು, ನಂತರ ಪೊಲೀಸರ ಭಯದಿಂದ ಕಸ ಗುಡಿಸಲು ಒಪ್ಪಿಕೊಳ್ಳುತ್ತಾರೆ. ಕೆಲವರು ಹೇಳಿದ ತಕ್ಷಣವೇ ಒಪ್ಪಿಕೊಳ್ಳುತ್ತಾರೆ, ಎಂದು ಬಿಎಂಸಿಯ ಅಧಿಕಾರಿಯೊಬ್ಬರು NDTV ಗೆ ತಿಳಿಸಿದ್ದಾರೆ.
ಕರೋನಾ ಸೋಂಕಿನಿಂದ ರಕ್ಷಿಸಿಕೊಳ್ಳಲು ಮಾಸ್ಕ್ ಧರಿಸುವುದು ಕಡ್ಡಾಯ ಎಂಬ ನಿಯಮವನ್ನು ಸಾರ್ವಜನಿಕರಿಗೆ ತಿಳಿಸಿಕೊಡಲು ಬೃಹನ್‌ಮುಂಬೈ ಮುನಿಸಿಪಲ್ ಕಾರ್ಪೊರೇಷನ್ ಆಯ್ಕೆ ಮಾಡಿರುವ ವಿಧಾನ ನಿಜಕ್ಕೂ ಒಳ್ಳೆಯದಾಗಿದೆ