ಈ ಬಾರಿಯ ಬಜೆಟ್ ಅಧಿವೇಶನ ಆರಂಭವಾದಾಗ ಸಂಸತ್ತಿನಲ್ಲಿ ಮಂಡಿಸಲಾದ ಆರ್ಥಿಕ ಸಮೀಕ್ಷೆಯ ವರದಿ ಕೆಲವು ಮಾಹಿತಿಯನ್ನು ವಿಕಿಪೀಡಿಯದಿಂದ ಪಡೆದಿತ್ತು. ದೇಶದ ಸ್ಥಿತಿ ಗತಿ ತಿಳಿಸಿ, ಬಜೆಟ್ ಮೇಲೆ ಪರಿಣಾಮ ಬೀರಿ, ದೇಶದ ಆರ್ಥಿಕ ಭವಿಷ್ಯವನ್ನು ನಿರ್ಧರಿಸುವ ಶಕ್ತಿ ಇರುವ ಈ ಆರ್ಥಿಕ ಸಮೀಕ್ಷೆ ಎಷ್ಟು ಪ್ರಮುಖವಾದ ದಾಖಲೆ ಎಂಬುದು ಎಲ್ಲರಿಗೂ ಗೊತ್ತಿರುವುದೇ. ಅಂತಹ ದಾಖಲೆಗಾಗಿ ಸರ್ಕಾರ ವಿಕೀಪೀಡಿಯಾವನ್ನು ಮಾಹಿತಿಯ ಮೂಲವಾಗಿ ಪರಿಗಣಿಸಿತ್ತು ಎಂಬುದು ಆಘಾತಕಾರಿ ಅಂಶ.
ವಿಕಿಪೀಡಿಯಾ ಪೇಜುಗಳನ್ನು ಯಾರು ಬೇಕಾದರೂ ಹೇಗೆ ಬೇಕಾದರೋ ತಿದ್ದಬಹುದು. ತಮಾಷೆಗಾಗಿ, ದುರುದ್ದೇಶಕ್ಕಾಗಿ, ಯಾವುದೋ ಲಾಭಕ್ಕಾಗಿ ವಿಕಿಪೀಡಿಯಾ ಪೇಜುಗಳಲ್ಲಿ ತಪ್ಪು ಮಾಹಿತಿಗಳನ್ನು ಸೇರಿಸುವವರು ಅದನ್ನು ತಪ್ಪಾಗಿ ತಿದ್ದುವವರು ಸಾಕಷ್ಚಿದ್ದಾರೆ. ಹೀಗಿರುವಾಗ ವಿಕಿಪೀಡಿಯಾಗೆ ಮಾಹಿತಿ ಮೂಲವಾಗಬೇಕಿದ್ದ ಆರ್ಥಿಕ ಸಮೀಕ್ಷೆ, ವಿಕಿಪೀಡಿಯಾವನ್ನೇ ತನ್ನ ಮಾಹಿತಿ ಮೂಲವನ್ನಾಗಿಸಿಕೊಂಡಿದ್ದು ನಿಜಕ್ಕೂ ಶೋಚನೀಯ ಸ್ಥಿತಿ.
ಇನ್ನು, ಬಜೆಟ್ ಮಂಡನೆ ನಂತರ ರಾಷ್ಚ್ರಪತಿಗಳ ಭಾಷಣದ ಮೇಲೆ ವಂದನಾ ನಿರ್ಣಯದ ಚರ್ಚೆಯಲ್ಲಿ ದೀರ್ಘವಾಗಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಕಾಶ್ಮೀರದ ಸ್ಥಿತಿಯ ಬಗ್ಗೆ ಮಾತನಾಡುತ್ತಾ ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ 370ನೇ ವಿಧಿ ತೆಗೆದುಹಾಕಿದರೆ ಭೂಕಂಪ ಸಂಭವಿಸಿ ಕಾಶ್ಮೀರ ಭಾರತದಿಂದ ಬೇರೆಯಾಗುತ್ತದೆ ಎಂದು ಹೇಳಿದ್ದಾರೆ ಎಂದರು. ಇದರ ಬೆನ್ನಲ್ಲೇ ಒಮರ್ ಮೇಲೆ ಸಾರ್ವಜನಿಕಾ ಸುರಕ್ಷತಾ ಕಾಯ್ದೆ ಹೇರಿ ಅವರ ಗೃಹ ಬಂಧನ ಮತ್ತೆ ಮುಂದವರಿಸಲಾದ ಸುದ್ದಿ ಬಂತು. ಆದರೆ, ಪ್ರಧಾನಿಯವರು ಒಮರ್ ಹೇಳಿಕೆಯನ್ನು ಹೆಕ್ಕಿ ತೆಗೆದದ್ದು ಫೇಕಿಂಗ್ ನ್ಯೂಸ್ ಎಂಬ ವಿಡಂಬನಾತ್ಮಕ ಸುಳ್ಳು ಸುದ್ದಿಗಳನ್ನು ತಮಾಷೆಗಾಗಿ ಪ್ರಕಟಿಸುವ ವೆಬ್ ಸೈಟ್ ನಿಂದ. ಒಮರ್ ಆ ಮಾತನ್ನು ಹೇಳಿಯೇ ಇಲ್ಲ.
ದೇಶ ಸುಳ್ಳು ಸುದ್ದಿಗಳ, ಗಾಳಿಮಾತುಗಳ ಬಲೆಗೆ ಬಿದ್ದು ಹಲವು ವರ್ಷಗಳಾಗಿವೆ. ಇಂತಹ ವಾಟ್ಸ್ಅಪ್ ಫಾರ್ವಾರ್ಡ್ ಗಳು ಚುನಾವಣೆಯನ್ನು ಗೆಲ್ಲಿಸಿಕೊಡುವಷ್ಚು ಶಕ್ತಿಶಾಲಿಯಾಗಿ ಬೆಳೆದು ನಿಂತಿವೆ. ಅಧೀಕೃತವಲ್ಲದ ಸುದ್ದಿ ಮೂಲಗಳು, ತಮಗೆ ಹೊಂದುವ ಸುಳ್ಳು ಸುದ್ದಿಗಳ ಬಳಕೆಯನ್ನು ನಮ್ಮ ರಾಜಕೀಯ ನಾಯಕರು ಮಾಡುತ್ತಿದ್ದರೂ ಕೂಡ ಅದು ಚುನಾವಣಾ ಭಾಷಣಗಳಿಗೆ ಬಹುತೇಕ ಸೀಮಿತವಾಗಿತ್ತು. ಆದರೆ, ಒಂದು ವಾರದೊಳಗೆ ನಡೆದ ಮೇಲಿನ ಈ ಎರಡು ಘಟನೆಗಳು ಮಾಹಿತಿ ಮಾಲಿನ್ಯ ಸಂಸತ್ತನ್ನು ಪ್ರವೇಶಿಸಿರುವುದಕ್ಕೆ ಸಾಕ್ಷಿಯಾಗಿವೆ.
ಸಂಸತ್ತಿನಲ್ಲಿ ನೀಡುವ ಹೇಳಿಕೆಗಳು. ಆಡುವ ಮಾತುಗಳು. ಕೊಡುವ ಉತ್ತರಗಳು, ಮಂಡಿಸುವ ದಾಖಲೆಗಳು ಅತ್ಯಂತ ಅಧಿಕೃತವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ, ಕಡತದೊಳಗೆ ಏನು ಹೋಗುತ್ತದೆ ಎಂಬುದು ಅತೀ ಮುಖ್ಯ. ಕಡತದಿಂದ ತೆಗೆದುಹಾಕುವಂತೆ ಗಲಾಟೆಗಳು ಆಗುವುದು ಇದೇ ಕಾರಣಕ್ಕೆ. ಭವಿಷ್ಯದಲ್ಲಿ ಇವೇ ಅತ್ಯಂತ ಪ್ರಮುಖ ದಾಖಲೆಗಳು. ಹಾಗಾಗಿಯೇ, ಈ ಎರಡು ಘಟನೆಗಳನ್ನು ಹಗುರವಾಗಿ ಪರಿಗಣಿಸುವಂತಿಲ್ಲ.
ಸಾಮಾಜಿಕ ಜಾಲತಾಣಗಳು ಬೆಳೆದಂತೆ, ಅವುಗಳ ಬಳಕೆದಾರರು ಹೆಚ್ಚಾದಂತೆ ಬೆಳೆದ ಪಿಡುಗು ಈ ಮಾಹಿತಿ ಮಾಲಿನ್ಯ. ಸುಳ್ಳು ಸುದ್ದಿಗಳ ದೊಡ್ಡ ಸೃಷ್ಚಿಕರ್ತರೆಂದರೆ ರಾಜಕೀಯ ಪಕ್ಷಗಳ ಐಟ್ ಸೆಲ್ ಗಳು. ಇದರಲ್ಲಿ ಯಾವುದೇ ಪಕ್ಷಭೇದವಿಲ್ಲ. ಎಲ್ಲಾ ಪಕ್ಷಗಳೂ ಅಪರಾಧಿಗಳೇ. ಆದರೆ, ಕೆಲವು ಪಕ್ಷಗಳು ಈ ರೇಸ್ ನಲ್ಲಿ ಮುಂದಿವೆ ಅಷ್ಟೇ. ತಮ್ಮ ತಮ್ಮ ಶಕ್ತ್ಯಾನುಸಾರ, ಪಕ್ಷಗಳು ಆಧಾರರಹಿತ ಸುದ್ದಿಗಳನ್ನು ಹುಟ್ಟುಹಾಕುತ್ತವೆ ಮತ್ತು ಹರಡುತ್ತವೆ. ಇಂತಹ ಸುದ್ದಿಗಳು ಮಾಹಿತಿಗಳು ಎಷ್ಟು ಶಕ್ತಿಶಾಲಿಯೆಂದರೆ. ಜನರು ನಿಜ ಸುದ್ದಿಯನ್ನೇ ನಂಬಲಾರದೇ ಹೋಗುತ್ತಾರೆ.
ರಾಹುಲ್ ಗಾಂಧಿಯನ್ನು ಟ್ರೋಲ್ ಮಾಡಲು ಎಲ್ಲರೂ ಬಳಸಿದ ಈಗಲೂ ಬಳಸುತ್ತಿರುವ ಆಲೂಗಡ್ಡೆಯಿಂದ ಚಿನ್ನ ತೆಗೆಯುವ ಮಿಷಿನ್ ಕುರಿತ ಭಾಷಣ ಸುಳ್ಳು ಸುದ್ದಿಗಳ ಶಕ್ತಿಗೆ ದೊಡ್ಡ ಉದಾಹರಣೆ. ಆಲೂಗಡ್ಡೆ ಬೆಳೆದು ಚಿನ್ನ ಪಡೆಯಬಹುದೆಂದು ಮೋದಿ ಎಲ್ಲರನ್ನೂ ನಂಬಿಸುತ್ತಿದ್ದಾರೆ ಎಂದು ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ಹೇಳಿದ್ದರು, ಆ ಭಾಷಣದ ಕೆಲವು ವಾಕ್ಯಗಳನ್ನು ಮಾತ್ರ ತೆಗೆದುಕೊಂಡು ರಾಹುಲ್ ತಾವೇ ಅಂತಹದೊಂದು ಮಿಷಿನ್ ತರಲಿದ್ದಾರೆ ಎಂಬಂತೆ ತಿರುಚಿ ಅದನ್ನು ವೈರಲ್ ಮಾಡಿದ್ದು ಬಿಜೆಪಿ ಐಟಿ ಸೆಲ್. ಹಲವು ಬಾರಿ ಹಲವು ಮಾಧ್ಯಮಗಳು ಇದರ ಹಿಂದಿರುವ ಸತ್ಯವನ್ನು ವರದಿ ಮಾಡಿದ್ದರೂ, ಜನರ ಪಾಲಿಗೆ ಈಗಲೂ ಆಲೂಗಡ್ಡೆಯಿಂದ ಚಿನ್ನ ತೆಗೆಯುವ ವ್ಯಕ್ತಿ ರಾಹುಲ್ ಗಾಂಧಿಯಾಗಿಯೇ ಉಳಿದಿದ್ದಾರೆ.
ಈ ಸುಳ್ಳು ಸುದ್ದಿಗಳ ಹಿಂದಿರುವುದು ಕೇವಲ ರಾಜಕೀಯ ಲಾಭ ಅಥವಾ ಕೆಲವು ಸೈದ್ಧಾಂತಿಕ ನಿಲುವುಗಳಿಗೆ ಜನರನ್ನು ಆಕರ್ಷಿಸುವ ಉದ್ದೇಶ ಮಾತ್ರವಲ್ಲ. ಆರ್ಥಿಕತೆಯೂ ಇಲ್ಲಿ ಕೆಲಸ ಮಾಡುತ್ತಿದೆ. ಹಲವಾರು ಯೂ ಟ್ಯೂಬ್ ಚಾನಲ್ ಗಳು ಸುಳ್ಳು ಸುದ್ದಿಗಳಿಂದಲೇ ಹಣಗಳಿಸುತ್ತವೆ. ಎಷ್ಟೋ ಜನ ಇಂತಹ ಸುದ್ದಿಗಳನ್ನು ತಮ್ಮ ಅಕೌಂಟ್ ಗಳಲ್ಲಿ ಶೇರ್ ಮಾಡಿ, ಲೈ ಕ್ ಮಾಡಿಯೇ ಅದಕ್ಕಾಗಿ ಹಣ ಪಡೆಯುತ್ತಾರೆ. ಲಕ್ಷಾಂತರ ಫೇಕ್ ಟ್ವಿಟರ್ ಅಕೌಂಟ್ ಗಳು, ಫೇಕ್ ಫೇಸ್ ಬುಕ್ ಅಕೌಂಟ್ ಗಳು ಈ ಕೆಲಸ ಮಾಡುತ್ತವೆ. ಅಷ್ಟೇ ಏಕೆ ಅತೀ ಹೆಚ್ಚು ಫಾಲೋವರ್ಸ್ ಗಳು ಸಿಗುವಂತಂಹ ಪೇಜ್ ಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಸೃಷ್ಚಿಸಿ ದೊಡ್ಡ ಫಾಲೋವರ್ಸ್ ಸಂಖ್ಯೆಯ ಜೊತೆಗೆ ಆ ಪೇಜನ್ನೇ ಇತರರಿಗೆ ಮಾರುವ ದಂಧೆಯೂ ನಡೆಯುತ್ತದೆ. ಸುಳ್ಳು ಸುದ್ದಿಗಳನ್ನೇ ಮೂಲವಾಗಿಟ್ಟುಕೊಂಡ ಇಂತಹ ಹಲವು ನಿಯಮ ಬಾಹಿರ ವ್ಯವಹಾರಗಳು ಅಂತರ್ ಜಾಲದಲ್ಲಿ ನಡೆಯುತ್ತವೆ.
ಇವೆಲ್ಲಾ ಸೋಷಿಯಲ್ ಮೀಡಿಯಾ ಸಂಸ್ಥಗಳಿಗೆ ಗೊತ್ತಿಲ್ಲವೇ, ಗೊತ್ತಿದ್ದೂ ಏಕೆ ಸುಮ್ಮನಿವೆ ಎಂದರೆ ಅಲ್ಲಿ ಮತ್ತೆ ಹಣಕಾಸಿನ ಅಂಶ ಎದ್ದು ಕಾಣುತ್ತದೆ. ಯಾವುದೋ ತಿರುಚಿದ ವೀಡಿಯೋ, ಫೋಟೋಗಳನ್ನು ಇಟ್ಟುಕೊಂಡು ತಮ್ಮ ಯೂಟ್ಯೂಬ್ ಚಾನಲ್ ಗಳನ್ನು ನಡೆಸುವ ವ್ಯಕ್ತಿಗಳಿಗೆ ಮಾತ್ರ ಅದರಿಂದ ಜಾಹೀರಾತು ಹಣ ದೊರೆಯುವುದಿಲ್ಲ. ಅವರಿಗೆ ದೊರಕುವ ಆ ಹಣದಲ್ಲಿ ಯೂಟ್ಯೂಬ್ ಗೂ ಪಾಲಿರುತ್ತದೆ. ಫೇಸ್ ಬುಕ್ ಬಳಕೆದಾರರ ಸಂಖ್ಯೆ ಹೆಚ್ಚಿದ್ದಷ್ಟು ಫೇಸ್ ಬುಕ್ ಗೆ ದೊರಕುವ ಜಾಹೀರಾತುಗಳು ಹೆಚ್ಚು. ಹೀಗಾಗಿಯೇ, ಸುಳ್ಳು ಸುದ್ದಿಗಳನ್ನು ತಡೆಯುವ ನಿಟ್ಟಿನಲ್ಲಿ ಫೇಸ್ ಬುಕ್ ಆಗಲಿ ಅಥವಾ ಯಾವುದೇ ಸೋಷಿಯಲ್ ಮೀಡಿಯಾ ಸಂಸ್ಥೆಯಾಗಲೀ ತೆಗೆದುಕೊಂಡಿರುವ ಕ್ರಮಗಳು ಏನೇನೂ ಸಾಲದು. ಸಣ್ಣ ಪುಟ್ಟ ಸಂಸ್ಥೆಗಳೇ ಸುಳ್ಳು ಸುದ್ದಿಯನ್ನು ಬಯಲಿಗೆಳೆಯುವ ನಿಟ್ಟಿನಲ್ಲಿ ಯಶಸ್ವಿಯಾಗಿ ಕೆಲಸ ಮಾಡುತ್ತಿರುವಾಗ ಇಂತಹ ಸುಳ್ಳು ಸುದ್ದಿಗಳನ್ನು, ಸುಳ್ಳು ಮಾಹಿತಿಗಳನ್ನು ಪತ್ತೆ ಹಚ್ಚುವುದು, ತಡೆಯುವುದು ದೊಡ್ಡ ಲಾಭದಲ್ಲಿ ನಡೆಯುತ್ತಿರುವ ಈ ಬೃಹತ್ ಸಂಸ್ಥೆಗಳಿಗೆ ಅಸಾಧ್ಯವೇನಲ್ಲ.
ಆಧಾರರಹಿತ ಸುದ್ದಿಗಳು, ಸುಳ್ಳು ಸುದ್ದಿಗಳು, ಯಾವುದೋ ಅನಧೀಕೃತ ಮೂಲದಿಂದ ಪಡೆದ ಮಾಹಿತಿಗಳು ಈಗಾಗಲೇ ಸಾಕಷ್ಟು ಜೀವ, ಆಸ್ತಿ, ಜೀವನ ಹಾಳುಮಾಡಿಬಿಟ್ಟಿವೆ. ಒಂದು ಸುಳ್ಳು ವಾಟ್ಸಪ್ ಫಾರ್ವರ್ಡ್ ನಿಂದಾಗಿ ಮಕ್ಕಳ ಕಳ್ಳರೆಂಬ ಪಟ್ಟ ಹೊತ್ತು ಜೀವ ಕಳೆದುಕೊಂಡವರೆಷ್ಟೋ. ಆಧಾರರಹಿತ ಸುದ್ದಿಯಿಂದಾಗಿ ಬಾಂಗ್ಲಾದೇಶಿಯರೆನಿಸಿಕೊಂಡು ಆಶ್ರಯ ಕಳೆದುಕೊಂಡವರೆಷ್ಟೋ. ಇನ್ನೂ ಇತ್ತೀಚಿನ ಉದಾಹರಣೆ ಬೇಕೆಂದರೆ ಕೊರೋನಾ ವೈರಸ್ ಕುರಿತ ಹುಸಿ ಮಾಹಿತಿಯಿಂದಾಗಿ ತೊಂದರೆಗೆ ಒಳಗಾದ ಚೀನೀಯರೆಷ್ಟೋ. ಆಧಾರ ರಹಿತ ಸುದ್ದಿಗಳ, ಸುಳ್ಳು ಸುದ್ದಿಗಳ ಈ ವಿನಾಶಕಾರಿ ಗುಣದ ಅರಿವಿದ್ದ ಯಾರೇ ಆದರೂ ಯಾವುದನ್ನಾಗಲಿ ನಂಬುವ ಮೊದಲು, ಪ್ರತಿಕ್ರಿಯಿಸುವ ಮೊದಲು ಇದು ನಿಜವೇ ಎಂದು ತಮ್ಮನ್ನೇ ತಾವು ಒಮ್ಮೆ ಪ್ರಶ್ನಿಸಿಕೊಳ್ಳಲೇ ಬೇಕು.
ಆದರೆ, ನಮ್ಮ ರಾಜಕಾರಣಿಗಳೇ ಇದನ್ನು ಪಾಲಿಸುವುದಿಲ್ಲ, ಹಲವರು ಈ ಸುಳ್ಳು ಸುದ್ದಿ ಹರಡುವುದರ ಭಾಗವಾಗಿದ್ದಾರೆ. ಇದುವರೆಗೆ ಅವರ ಟ್ವಿಟರ್, ಫೇಸ್ ಬುಕ್ ಖಾತೆಗಳು, ಚುನಾವಣಾ ಭಾಷಣಗಳಿಗೆ ಸೀಮಿತವಾಗಿದ್ದ ಇಂತಹ ಆಧಾರ ರಹಿತ ಸುದ್ದಿಗಳ ಹಾವಳಿ ಈಗ ಸಂಸತ್ತನ್ನೂ ಪ್ರವೇಶಿಸಿಬಿಟ್ಟಿದೆ. ಇನ್ನು ಇಂತಹ ಸುದ್ದಿಗಳನ್ನು ನಂಬುವ ಪ್ರಜೆಗಳನ್ನು ದೂರಿ ಏನು ಪ್ರಯೋಜನ?