ಜಗತ್ತಿಗೇ ಸ್ಫೂರ್ತಿಯಾಗಲು ಕಾತರರಾಗಿರುವ ಅನೇಕ ಜನರು ಭಾರತದಲ್ಲಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ‘ಕರೊನಾ ಸಂದರ್ಭದಲ್ಲಿ ಖಾದಿ ಮಾಸ್ಕ್ಗಳು ಜನಪ್ರಿಯವಾಗಿವೆ. ಮೆಕ್ಸಿಕೊದ ಒಕ್ಸಾಕ ಪ್ರದೇಶದಲ್ಲಿಯೂ ಖಾದಿ ಮಾಸ್ಕ್ ತಯಾರಿಸಲಾಗುತ್ತಿದೆ. ಖಾದಿಯು ಪರಿಸರಸ್ನೇಹಿ ಮಾತ್ರವಲ್ಲ ಶರೀರ ಸ್ನೇಹಿಯೂ ಆಗಿದೆ’ ಎಂದು ಅವರು ಹೇಳಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಆಧ್ಯಾತ್ಮಿಕತೆ, ಯೋಗ, ಆಯುರ್ವೇದದಂತೆಯೇ ಇಡೀ ಜಗತ್ತನ್ನು ಆಕರ್ಷಿಸಿದೆ. ನಮ್ಮ ಅನೇಕ ಸ್ಥಳೀಯ ಕ್ರೀಡೆಗಳು ಪ್ರಪಂಚದಾದ್ಯಂತ ಗಮನ ಸೆಳೆಯುತ್ತವೆ. ನಮ್ಮ ವಿಷಯಗಳ ಕುರಿತು ನಾವು ಹೆಮ್ಮೆ ಪಟ್ಟರೆ ಜಗತ್ತು ಅದರ ಕುರಿತು ಕುತೂಹಲದಿಂದ ನೋಡುತ್ತದೆ ಎಂದು ಅವರು ಹೇಳಿದ್ದಾರೆ.
ಸರ್ವರಿಗೂ ವಿಜಯ ದಶಮಿ ಹಬ್ಬದ ಶುಭಾಶಯಗಳನ್ನು ಕೋರಿದ ಮೋದಿ ಹಬ್ಬವು ಅಸತ್ಯದ ವಿರುದ್ಧ ಸತ್ಯ, ಕೆಡುಕಿನ ವಿರುದ್ಧ ಒಳಿತು ಜಯ ಸಾಧಿಸುವಂತೆ ಮಾಡಲಿ. ಪ್ರತಿಯೊಬ್ಬರ ಬಾಳಿನಲ್ಲೂ ಸ್ಫೂರ್ತಿ ತರಲಿ ಎಂದು ಹಾರೈಸಿದ್ದಾರೆ. ದುರ್ಗಾ ಪೂಜೆಯಂತಹ ಹಬ್ಬಗಳಿಗೆ ಈ ಬಾರಿ ಕರೊನಾದಿಂದಾಗಿ ಅಡ್ಡಿಯಾಗಿದೆ.
ಕರೊನಾ ಕಾಲದಲ್ಲಿ ನಮ್ಮ ನೆರವಿಗೆ ಬಂದ ಸ್ವಚ್ಛತಾ ಕಾರ್ಮಿಕರು, ಆರೋಗ್ಯ ಕಾರ್ಯಕರ್ತರ ಕೊಡುಗೆಯನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ಗಡಿಯಲ್ಲಿರುವ ಯೋಧರಿಗಾಗಿ ನಾವು ಮನೆಯಲ್ಲಿ ದೀಪಗಳನ್ನು ಬೆಳಗಬೇಕು. ಮಲ್ಲಕಂಭದಂತಹ ಅನೇಕ ಭಾರತೀಯ ಕ್ರೀಡೆಗಳು ಇಂದು ವಿಶ್ವಮಟ್ಟದಲ್ಲಿ ಜನಪ್ರಿಯಗೊಂಡಿವೆ.
ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರಿಗೆ ನಮನ ಸಲ್ಲಿಸಿದ ಮೋದಿ, ಅಕ್ಟೋಬರ್ 31ರಂದು ನಾವು ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ಅವರನ್ನು ಕಳೆದುಕೊಂಡಿದ್ದೆವು. ಅವರಿಗೆ ನನ್ನ ಗೌರವ ನಮನಗಳು ಎಂದಿದ್ದಾರೆ
ಕೃಷಿ ಮಸೂದೆಗಳ ಕುರಿತು ಸಮರ್ಥಿಸಿಕೊಂಡ ಪ್ರಧಾನಿ ಮೋದಿ ರೈತರ ಆದಾಯ ಹೆಚ್ಚಿಸಲು ಹೊಸ ಕೃಷಿ ಮಸೂದೆಗಳು ನೆರವಾಗಲಿವೆ ಎಂದು ಹೇಳಿದ್ದಾರೆ