ಹೊಸ ದಶಕಕ್ಕೆ ಕಾಲಿಡುವ ಹೊತ್ತಿಗೆ, ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಸಾಲಗಳ ಮೇಲಿನ ಬಡ್ಡಿದರವನ್ನು 25 ಮೂಲ ಅಂಶಗಳಷ್ಟು ಅಂದರೆ ಶೇ.0.25ರಷ್ಟು ಕಡಿತ ಮಾಡಿದೆ. ಇದರರ್ಥ ಗ್ರಾಹಕರು ತಮ್ಮ ಸಾಲದ ಮೇಲೆ ಪಾವತಿಸುವ ಬಡ್ಡಿದರವು ಶೇ.0.25ರಷ್ಟು ಕಡಿತವಾಗಲಿದೆ. ಗ್ರಾಹಕರು ಪಾವತಿಸಬೇಕಾದ ಮಾಸಿಕ ಸಮಾನ ಕಂತುಗಳ (ಇಎಂಐ) ಮೊತ್ತವು ತಗ್ಗಲಿದೆ.
ಎಸ್ಬಿಐ ಸೋಮವಾರ ಬಡ್ಡಿದರ ಪರಿಷ್ಕರಿಸುವ ಸಿಹಿಸುದ್ದಿಯನ್ನು ನೀಡಿದೆ. ಪರಿಷ್ಕೃತ ಬಡ್ಡಿದರವು 2020ರ ಜನವರಿ 1ರಿಂದಲೇ ಜಾರಿಗೆ ಬರಲಿದೆ. ಪ್ರಸ್ತುತ ಬಾಹ್ಯ ಮಾನದಂಡ ಆಧಾರಿತ ದರವು (external benchmark based rate) ಶೇ.8.05ರಷ್ಟಿದ್ದು ಜನವರಿ 1ರಿಂದ ಶೇ.7.80ಕ್ಕೆ ಇಳಿಯಲಿದೆ. ಈ ದರವು ಹಾಲಿ ಗ್ರಾಹಕರಿಗೆ ಅನ್ವಯವಾಗಲಿದೆ. ಅಂದರೆ ಈಗಾಗಲೇ ಇಬಿಆರ್ ದರದಲ್ಲಿ ಸಾಲ ಪಡೆದಿರುವ ಗ್ರಾಹಕರು ಪಾವತಿಸುತ್ತಿರುವ ಬಡ್ಡಿದರವು ಶೇ.0.25ರಷ್ಟು ತಗ್ಗಲಿದೆ. ಎಸ್ಬಿಐ ಪರಿಷ್ಕೃತ ದರದಿಂದ ಗೃಹಸಾಲ ಪಡೆದವರು, ಅತಿಸಣ್ಣ, ಸಣ್ಣ ಮತ್ತು ಮಧ್ಯಮವರ್ಗದ ಉದ್ಯಮಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ.
ಹೊಸದಾಗಿ ಮನೆ ಕಟ್ಟುವವರು, ಫ್ಲ್ಯಾಟ್ ಖರೀದಿಸುವವರಿಗೆ ಎಸ್ಬಿಐ ಶೇ.7.90ರಷ್ಟು ಬಡ್ಡಿದರದಲ್ಲಿ ಸಾಲ ನೀಡಲಿದೆ. ಇದುವರೆಗೆ ಈದರವು ಶೇ.8.15ರಷ್ಟಿತ್ತು. ಎಸ್ಬಿಐ ನಿರ್ಧಾರದಿಂದಾಗಿ ಈಗಾಗಲೇ ನಿಧಾನಗತಿಗೆ ಮರಳಿರುವ ಸಾಲ ನೀಡಿಕೆಗೆ ಚೇತರಿಕೆ ದಕ್ಕಲಿದೆ.
ಆರ್ಥಿಕತೆಗೆ ಚೇತರಿಕೆ ನೀಡುವ ಸಲುವಾಗಿ ಭಾರತೀಯ ರಿಸರ್ವ್ ಬ್ಯಾಂಕ್ 2019ನೇ ಸಾಲಿನಲ್ಲಿ ಸತತ ಐದು ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆ ವೇಳೆ ರೆಪೊದರವನ್ನು (ಆರ್ಬಿಐ ಬ್ಯಾಂಕುಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿದರ) 135 ಮೂಲ ಅಂಶಗಳಷ್ಟು ಅಂದರೆ ಶೇ.1.35ರಷ್ಟು ಕಡಿತ ಮಾಡಿದೆ. ಆದರೆ, ಬ್ಯಾಂಕುಗಳು ಆರ್ಬಿಐ ಕಡಿತ ಮಾಡಿದ ಪ್ರಮಾಣಕ್ಕೆ ಅನುಗುಣವಾಗಿ ಗ್ರಾಹಕರಿಗೆ ಬಡ್ಡಿದರದ ಸೌಲಭ್ಯವನ್ನು ವರ್ಗಾಹಿಸಿರಲಿಲ್ಲ. ಈ ಕಾರಣಕ್ಕಾಗಿ ಬ್ಯಾಂಕುಗಳು ಗ್ರಾಹಕರಿಗೆ ನೀಡುವ ಸಾಲಗಳ ಮೇಲಿನ ಬಡ್ಡಿದರವನ್ನು ಇಬಿಆರ್ ದರಕ್ಕೆ ಸಂಪರ್ಕಿಸುವಂತೆ ಆದೇಶ ನೀಡಿತ್ತು.
ತಿಂಗಳ ಹಿಂದಷ್ಟೇ ಎಸ್ಬಿಐ ತನ್ನ ಎಂಸಿಎಲ್ಆರ್ ದರವನ್ನು (ನಿಧಿಯ ಕನಿಷ್ಠ ವೆಚ್ಚ ಆಧಾರಿತ ಸಾಲದರ) ಶೇ.0.10ರಷ್ಟು ಕಡಿತ ಮಾಡಿತ್ತು. ಈ ಕಡಿತವು ಪ್ರಸಕ್ತ ಸಾಲಿನಲ್ಲಿ ಎಂಟನೇ ಬಾರಿಗೆ ಮಾಡಿದಾಗಿತ್ತು. ಎಂಸಿಎಲ್ಆರ್ ಪರಿಷ್ಕೃತ ದರವು ಡಿಸೆಂಬರ್ 10 ರಿಂದಲೇ ಜಾರಿಯಾಗಿದೆ. ಪ್ರಸ್ತುತ ಘೋಷಿತ ಬಡ್ಡಿದರ ಕಡಿತವು ಇಬಿಆರ್ ದರದಡಿಯಲ್ಲಿ ಪಡೆದಿರುವ ಎಲ್ಲಾ ಸಾಲಗಳಿಗೂ ಅನ್ವಯವಾಗಲಿದೆ. ಎಂಸಿಎಲ್ಆರ್ ದರದಡಿ ಸಾಲ ಪಡೆದವರು ತಮ್ಮ ಸಾಲವನ್ನು ಇಬಿಆರ್ ದರದಡಿಗೆ ವರ್ಗಾಹಿಸಿಕೊಳ್ಳಲೂಬಹುದು.
ಇದು ಆರಂಭ: ಸತತ ಕುಸಿಯುತ್ತಿರುವ ಆರ್ಥಿಕತೆಗೆ ಎಸ್ಬಿಐ ಪ್ರಕಟಿಸಿರುವ ಬಡ್ಡಿದರ ಕಡಿತವು ಚೇತರಿಕೆ ನೀಡುವ ನಿರೀಕ್ಷೆ ಇದೆ. ಸೋಮವಾರ ಪ್ರಕಟಿಸಿರುವ ಬಡ್ಡಿದರ ಕಡಿತದೊಂದಿಗೆ ದಶಕದಲ್ಲಿ ಅತಿ ಕನಿಷ್ಠ ಬಡ್ಡಿದರದಲ್ಲಿ ಗೃಹ ಸಾಲ ಲಭ್ಯವಾಗಲಿದೆ. ಇದು ಖರೀದಿಯಾಗದೇ ಉಳಿದಿರುವ ಲಕ್ಷಾಂತಾರ ವಸತಿ ಘಟಕಗಳ ಮಾರಾಟಕ್ಕೆ ಉತ್ತೇಜನ ನೀಡಲಿದೆ. ಬಡ್ಡಿದರ ಕಡಿತವು ಇತರ ಸಾಲಗಳಿಗೂ ವಿಸ್ತರಣೆಯಾಗುವುದರಿಂದ ವಾಹನ, ಗೃಹೋಪಯೋಗಿ ವಸ್ತುಗಳು, ವೈಯಕ್ತಿಕ ಸಾಲದ ಮೇಲಿನ ಬಡ್ಡಿದರವು ಕಡಿತವಾಗಲಿದ್ದು, ಸಾಲದ ಮೇಲಿನ ಬೇಡಿಕೆಯೂ ಹೆಚ್ಚುವ ನಿರೀಕ್ಷೆ ಇದೆ.
ಎಸ್ಬಿಐ ಅತಿದೊಡ್ಡ ಬ್ಯಾಂಕ್ ಆಗಿರುವುದರಿಂದ ಮತ್ತು ಅತಿ ಹೆಚ್ಚು ಗ್ರಾಹಕರನ್ನು ಹೊಂದಿರುವುದರಿಂದ ಉಳಿದೆಲ್ಲ ಬ್ಯಾಂಕುಗಳು, ಅದು ಸಾರ್ವಜನಿಕ ವಲಯದ ಬ್ಯಾಂಕುಗಳೇ ಆಗಲೀ ಅಥವಾ ಖಾಸಗೀವಲಯದ ಬ್ಯಾಂಕುಗಳೇ ಆಗಲೀ ಎಸ್ಬಿಐ ದಾರಿಯಲ್ಲೇ ಹೆಜ್ಜೆ ಹಾಕುತ್ತವೆ. ಅಂದರೆ, ಉಳಿದ ಬ್ಯಾಂಕುಗಳು ಶೀಘ್ರವೇ ಬಡ್ಡಿದರ ಕಡಿತವನ್ನು ಪ್ರಕಟಿಸಲಿವೆ.
ಪ್ರಸ್ತುತ ಗೃಹ ಸಾಲಗಳ ಮೇಲಿನ ಬಡ್ಡಿದರವು ಶೇ.8.25ರಿಂದ 9.75ರ ಆಜುಬಾಜಿನಲ್ಲಿದೆ. ವಿವಿಧ ಬ್ಯಾಂಕುಗಳು ವಿವಿಧ ರೀತಿಯಲ್ಲಿ ಬಡ್ಡಿದರ ವಿಧಿಸುತ್ತವೆ. ಆದರೆ, ಅತಿ ದೊಡ್ಡ ಬ್ಯಾಂಕಾಗಿರುವ ಎಸ್ಬಿಐ ಶೇ.8ಕ್ಕಿಂತ ಕಡಮೆ ಬಡ್ಡಿದರದಲ್ಲಿ ಗೃಹ ಸಾಲ ನೀಡಲಾರಂಭಿಸಿದರೆ ರಿಯಲ್ ಎಸ್ಟೇಟ್ ವಲಯಕ್ಕೆ ವರವಾಗಿ ಪರಿಣಮಿಸುತ್ತದೆ. ಇದು ನಿಧಾನವಾಗಿ ನಿರ್ಮಾಣವಲಯದಲ್ಲಿನ ಚಟುವಟಿಕೆಗಳಿಗೂ ಚೇತರಿಕೆ ನೀಡುತ್ತದೆ.
ಪ್ರಸಕ್ತ ವಿತ್ತೀಯ ವರ್ಷದ ದ್ವಿತೀಯ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ಕಳೆದ ಆರು ವರ್ಷಗಳಲ್ಲೇ ಅತಿ ಕನಿಷ್ಠ ಮಟ್ಟಕ್ಕೆ ಅಂದರೆ ಶೇ.4.5ಕ್ಕೆ ಕುಸಿದಿದೆ. ಈಗ ಘೋಷಿತ ಅರ್ಧ ವರ್ಷದ ಜಿಡಿಪಿ ಶೇ.4.75ರಷ್ಟಾಗಿದೆ. ಉಳಿದ ಎರಡು ತ್ರೈಮಾಸಿಕಗಳಲ್ಲಿ ಶೇ.4 – 4.5ರ ಆಜುಬಾಜಿನಲ್ಲಿರಲಿದೆ. ಆಗ ಇಡೀ ವರ್ಷದ ಜಿಡಿಪಿ ಶೇ.4.5ರ ಆಜುಬಾಜಿಗೆ ತಗ್ಗಲಿದೆ. 2008ರಲ್ಲಾದ ಜಾಗತಿಕ ಆರ್ಥಿಕ ಹಿಂಜರಿತದ ನಂತರದಲ್ಲಿ ದಾಖಲಾಗುತ್ತಿರುವ ಅತಿ ಕನಿಷ್ಟ ಮಟ್ಟದ ಆರ್ಥಿಕ ಬೆಳವಣಿಗೆ ಆಗಲಿದೆ.
ಪ್ರಸ್ತುತ ಬಡ್ಡಿದರ ಕಡಿತ ಮತ್ತು ಬಜೆಟ್ ನಲ್ಲಿ ಘೋಷಿಸಬಹುದಾದ ವೈಯಕ್ತಿಕ ಆದಾಯ ತೆರಿಗೆ ಕಡಿತ ಮತ್ತಿತರ ಉತ್ತೇಜನ ಕ್ರಮಗಳಿಂದಾಗಿ ಬರುವ ವಿತ್ತೀಯ ವರ್ಷದಲ್ಲಿ ಕೊಂಚ ಚೇತರಿಕೆ ನೀಡುವ ನಿರೀಕ್ಷೆ ಇದೆ. ಆದರೆ, ತೆರಿಗೆ ಸಂಗ್ರಹ ಕುಂಠಿತ ಮತ್ತು ವ್ಯಾಪಾರ ಕೊರತೆಯಿಂದಾಗಿ ಈಗಾಗಲೇ ವಿತ್ತೀಯ ಕೊರತೆ ಮಿತಿಯನ್ನು ದಾಟಿರುವುದರಿಂದ ಬಜೆಟ್ ನಲ್ಲಿ ಘೋಷಿಸಿರುವ ಶೇ.3.3ರ ವಿತ್ತೀಯ ಗುರಿ ಸಾಧಿಸುವುದು ಕಷ್ಟ. ಹೀಗಾಗಿ ಪರಿಷ್ಕೃತ ವಿತ್ತೀಯ ಕೊರತೆಯು ಶೇ.3.5-3.7ರ ಆಜುಬಾಜಿನಲ್ಲಿರಲಿದೆ. ಇದೇನು ಆರೋಗ್ಯಕರ ಬೆಳವಣಿಗೆ ಅಲ್ಲ. ಈಗಾಗಲೇ ಘೋಷಿಸಿರುವ ಕಾರ್ಪೊರೆಟ್ ತೆರಿಗೆ ಕಡಿತದಿಂದ ಆಗಬಹುದಾದ ತೆರಿಗೆ ಮೂಲದ ಆದಾಯ ಕೊರತೆಯು 1.40ಲಕ್ಷ ರುಪಾಯಿಗಳಾಗಿದ್ದು, ಈ ಮೊತ್ತವನ್ನು ಸರಿದೂಗಿಸುವುದು ಸರ್ಕಾರದ ಮುಂದಿನ ದೊಡ್ಡ ಸವಾಲಾಗಿದೆ.
ಈಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಘೋಷಿಸಿರುವ ಬಡ್ಡಿದರ ಕಡಿತ ಮತ್ತು ಬಹುತೇಕ ಬ್ಯಾಂಕುಗಳು ಎಸ್ಬಿಐ ಹಾದಿ ಅನುಸರಿಸುವುದರಿಂದ ಆರ್ಥಿಕತೆಗೆ ನಿಧಾನಗತಿಯಲ್ಲಿ ಚೇತರಿಕೆ ಕಂಡು ಬರುತ್ತದೆ. ಆದರೆ, ಅದರಿಂದಾಗಿ ಕುಸಿಯುತ್ತಿರುವ ಆರ್ಥಿಕತೆ ಮತ್ತಷ್ಟು ಕುಸಿಯುವುದನ್ನು ತಡೆಯಬಹುದು. ಅಷ್ಟರಿಂದಲೇ ಕುಸಿಯುತ್ತಿರುವ ಆರ್ಥಿಕತೆಯು ಮತ್ತೆ ಏರುಹಾದಿಯಲ್ಲಿ ಸಾಗುತ್ತದೆಂದು ನಿರೀಕ್ಷೆ ಮಾಡುವಂತಿಲ್ಲ.