ಕೇಂದ್ರ ಸರ್ಕಾರ ಜಾರಿಗೆ ತಂದ ವಿವಾದಿತ ತಿದ್ದುಪಡಿ ಕಾಯ್ದೆ CAA-NRC ದೇಶದುದ್ದಗಲಕ್ಕೂ ಜನರ ಸಂಘಟಿತ ಹೋರಾಟಕ್ಕೆ ಕಾರಣವಾಯಿತು. ಪ್ರಜಾಪ್ರಭುತ್ವದ ಮೇಲೆ ನಂಬಿಕೆಯಿಟ್ಟಿರುವ ಹಲವಾರು ಸಂಘಟನೆಗಳು, ಪಕ್ಷಗಳು ದೇಶವ್ಯಾಪಿ ಪ್ರತಿಭಟನೆಗೆ ಕರೆ ನೀಡಿದ್ದವು, ಕೇಂದ್ರದ ವಿರುದ್ಧದ ಪ್ರತಿಭಟನೆಗಳು ನಿತ್ಯ ಸುದ್ದಿಯಾಗಿಬಿಟ್ಟವು. ದೆಹಲಿಯ ಶಾಹೀನ್ ಭಾಗ್‌ನಲ್ಲಿ ರಾತ್ರಿ-ಹಗಲು ಪ್ರತಿಭಟನೆ ಜರುಗಿತು, ಪ್ರಯಾಗ್‌ರಾಜ್, ಕೊಲ್ಕತ್ತಾ, ಬೆಂಗಳೂರು ಮುಂತಾದ ಕಡೆಗಳಲ್ಲಿ ಶಾಹೀನ್ ಬಾಗ್ ಮಾದರಿಯದ್ದೇ ಪ್ರತಿಭಟನೆಗಳು ಕರೋನಾ ಹಾವಳಿ ದೇಶವನ್ನು ತಟ್ಟುವವರೆಗೆ ನಡೆಯಿತು.
ಮಂಗಳೂರಿನ ಅಡ್ಯಾರ್ ಮೈದಾನದಲ್ಲಿ ಜನವರಿ 15 ರಂದು ನಡೆದ ಸಿಎಎ- ಎನ್‌ಆರ್‌ಸಿ ವಿರೋಧಿ ಪ್ರತಿಭಟನೆಯಲ್ಲಿ ಲಕ್ಷೋಪಾದಿಯಲ್ಲಿ ಪ್ರತಿಭಟನಕಾರರು ಸೇರಿದ್ದರು. ಮಂಗಳೂರಿನ ಇತಿಹಾಸದ ಸ್ಮೃತಿಪಟಲದಲ್ಲಿ ಅಚ್ಚಳಿಯದೆ ಉಳಿದುಬಿಡುವ ಸಿಎಎ-ಎನ್‌ಆರ್‌ಸಿ ಪ್ರತಿಭಟನೆಗೆ ಲಕ್ಷಗಳ ಸಂಖ್ಯೆಯಲ್ಲಿ ಜನಸೇರಲು ಡಿಸೆಂಬರ್ 19 ರಂದು ನಡೆದ ಮಂಗಳೂರು ಗೋಲಿಬಾರ್ ಬಹುಮುಖ್ಯ ಕಾರಣವಾಗಿ ಹೊರಹೊಮ್ಮಿತ್ತು.

ಡಿಸೆಂಬರ್ 19; ಮಂಗಳೂರು ಗೋಲಿಬಾರ್
ಡಿಸೆಂಬರ್ 19 ರಂದು ಸಿಎಎ- ಎನ್‌ಆರ್‌ಸಿ ವಿರುದ್ಧ ಮಂಗಳೂರು ಜಿಲ್ಲಾಧಿಕಾರಿ ಕಛೇರಿ ಎದುರು ಹಮ್ಮಿಕೊಂಡಿದ್ದ ಪ್ರತಿಭಟನೆಗೆ ಪೊಲೀಸರು ಅನುಮತಿ ಕೊಡದ ಹಿನ್ನಲೆಯಲ್ಲಿ ಕೊನೆ ಘಳಿಗೆಯಲ್ಲಿ ಪ್ರತಿಭಟನೆ ರದ್ದು ಗೊಂಡಿತ್ತು. ಅದಕ್ಕೂ ಒಂದು ದಿನ ಮೊದಲು, ಪ್ರತಿಭಟನೆ ಮಾಡಿದ್ದ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದರು. ಡಿ.19ರಂದು ಕೆಲವು ಎಸ್‌ಕೆಎಸ್‌ಎಸ್‌ಎಫ್ ಸಂಘಟನೆಯಡಿಯಲ್ಲಿ ಪ್ರತಿಭಟನೆ ನಡೆಸಲು ಪೊಲೀಸರು ಅನುಮತಿ ಪತ್ರ ನೀಡಿದ್ದರು, ಅದರಂತೆ ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟನೆಯಲ್ಲಿ ಭಾಗಿಯಾಗಬೇಕೆಂದು ತಯಾರಿಯೂ ನಡೆದಿತ್ತು. ಆದರೆ ಕೊನೆ ಕ್ಷಣದಲ್ಲಿ ಪೊಲೀಸರು ಪ್ರತಿಭಟನೆಗೆ ಅನುಮತಿ ನಿರಾಕರಿಸಿದ್ದಾರೆ. ಕೊನೆ ಕ್ಷಣದ ರದ್ದಾಗುವಿಕೆ, ಹಾಗೂ ತರಾತುರಿಯ ಸೆಕ್ಷನ್144 ಹೇರುವಿಕೆಯ ತಿಳಿಯದ ಹಲವಾರು ಮಂದಿ ಯೋಜನೆಯಂತೆ ಜಿಲ್ಲಾಧಿಕಾರಿ ಕಛೇರಿಗೆ ಆಗಮಿಸಿದ್ದರು, ಈ ಸನ್ನಿವೇಶವನ್ನು ಸಾಧಕವಾಗಿ ಬಳಸಿಕೊಂಡ ಪೊಲೀಸರು ಪ್ರತಿಭಟನೆಗೆ ಆಗಮಿಸಿದವರ ಮೇಲೆ ಏಕಾಏಕಿ ಲಾಠಿ ಪ್ರಹಾರ ನಡೆಸಿದ್ದಾರೆ.

ಹಿಂದಿನ ದಿನ ವಿದ್ಯಾರ್ಥಿಗಳ ಮೇಲೆ ನಡೆದ ಲಾಠಿಚಾರ್ಜ್ ನಿಂದ ಮೊದಲೇ ಅಸಮಾಧಾನಗೊಂಡಿದ್ದ ಪ್ರತಿಭಟನಾಗಾರರಿಗೆ, ಕೊನೇ ಕ್ಷಣದ ಪೊಲೀಸರ ಅನಿರೀಕ್ಷಿತ ತಿರುವು ಹಾಗೂ ಏಕಾಏಕಿ ಲಾಠೀಚಾರ್ಜ್ ಇನ್ನಷ್ಟು ಆಕ್ರೋಶ ಹೆಚ್ಚಿಸಿ ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾಯಿತು. ಮಂಗಳೂರು ಉತ್ತರ ಪೊಲೀಸ್ ಠಾಣೆ, ಬೀಬಿ ಆಲಾಬಿ, ನೆಲ್ಲಿಕಾಯಿ ರಸ್ತೆ, ಕುದ್ರೋಳಿ ಮೊದಲಾದ ಭಾಗದಲ್ಲಿ ಆಕ್ರೋಶ ಹೊತ್ತಿ ಉರಿಯತೊಡಗಿತು. ಪರಿಸ್ಥಿತಿ ಕೈಮೀರಿ ಹೋದವು. ಇದನ್ನೇ ಎದುರು ನೋಡುತ್ತಿದ್ದಂತಿದ್ದ ಪೊಲೀಸರು ಯಾವುದೇ ಮುನ್ನೆಚ್ಚರಿಕೆ ನೀಡದೆ ಪ್ರತಿಭಟನಕಾರರ ಮೇಲೆ ಬಂದೂಕು ಗುರಿಯಿಟ್ಟು, ಟ್ರಿಗರ್ ಎಳೆದರು. ಸ್ಥಳದಲ್ಲೇ ಇಬ್ಬರು ದಿನಗೂಲಿ ಕಾರ್ಮಿಕರು ನೆಲಕ್ಕುರುಳಿದರು. ಪೊಲೀಸರ ವಿನಂತಿಯ ಮೇರೆಗೆ ಸಮಾಧಾನ ಪಡಿಸಲು ಘಟನಾಸ್ಥಳಕ್ಕೆ ಆಗಮಿಸಿದ ಮುಸ್ಲಿಂ ಮುಖಂಡ ಅಶ್ರಫ್ ಸೇರಿದಂತೆ ಹಲವಾರು ಮಂದಿ ಪೊಲೀಸ್ ಗುಂಡೇಟಿನಿಂದ ಗಾಯಗೊಂಡಿದ್ದರು.

ಮಂಗಳೂರು ಪೊಲೀಸರ ರಕ್ತಪಿಪಾಸುತನ
ಪ್ರತಿಭಟನಾಕಾರರು ದೊಂಬಿಯೆಬ್ಬಿಸಿದರು, ಪೋಲಿಸರೆಡೆಗೆ ಕಲ್ಲೆಸೆದರು ಹಾಗಾಗಿ ಪೊಲೀಸರು ಗುಂಡು ಹೊಡೆಯಬೇಕಾಗಿ ಬಂತು ಎಂಬ ಆರೋಪಗಳು ಕೇಳಿಬರುತ್ತಿದ್ದಂತೆಯೇ, ಪೊಲೀಸರ ರಕ್ತಪಿಪಾಸುತನ ಅನಾವರಣಗೊಳಿಸುವಂತಹ ಚಿತ್ರಗಳು, ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲಾರಂಭಿಸಿದವು. ಒಂದು ವಿಡಿಯೋದಲ್ಲಂತೂ ಓರ್ವ ಪೊಲೀಸ್ ʼಇಷ್ಟು ಗುಂಡು ಹೊಡೆದರೂ ಒಬ್ರೂ ಸಾಯಲಿಲ್ವಲ್ಲʼ ಎಂದು ಹೇಳುವುದು ಸ್ಪಷ್ಟವಾಗಿ ಕೇಳಿಸಿಕೊಂಡಿತ್ತು. ಪೊಲೀಸರು ಪ್ರತಿಭಟನಾಕಾರರೆಡೆಗೆ ಕಲ್ಲು ತೂರುವ ಚಿತ್ರಗಳೂ ಹರಡಲಾರಂಭಿಸಿದವು. ಗುಂಪನ್ನು ಚದುರಿಸಲು, ಶಾಂತಿ ಸ್ಥಾಪಿಸಲು ಗುಂಡು ಹೊಡೆಯಲಿಲ್ಲ, ಬದಲಾಗಿ ಪ್ರತಿಭಟನಾಕಾರರನ್ನು ಕೊಲ್ಲಲೆಂದೇ ಪೊಲೀಸರು ಬಂದೂಕು ಚಲಾಯಿಸಿದ್ದರು ಎಂಬುದಕ್ಕೆ ಪೂರಕವೆಂಬಂತೆ ಇನ್ನೊಂದು ವಿಡಿಯೋ ಕೂಡಾ ವೈರಲಾಗಿತ್ತು. ಗುಂಪನ್ನು ಹಿಮ್ಮಟ್ಟಿಸಲು ಕುಳಿತ ಭಂಗಿಯಲ್ಲಿ, ಮೊಣಕಾಲಿಗಿಂತ ಕೆಳಗೆ ಗುರಿಯಿಡಬೇಕಿದ್ದ ಪೊಲೀಸರು ಬಂದೂಕಿನ ನಳಿಕೆಯನ್ನು ಎತ್ತರಿಸಿ ಗುಂಡು ಹೊಡೆಯುವುದು ಆ ವಿಡಿಯೋದಲ್ಲಿ ವೈರಲಾಗಿತ್ತು. ಅದಾಗ್ಯೂ, ಪ್ರತಿಭಟನಕಾರರನ್ನಷ್ಟೇ ತಪ್ಪಿತಸ್ಥರನ್ನಾಗಿಸುವ ಹುನ್ನಾರಕ್ಕೆ ಆಳುವ ಪಕ್ಷದ ಪರವಿದ್ದ ಮಾಧ್ಯಮಗಳೂ ಜೊತೆಗೂಡಿದ್ದವು.
ಹೈಕೋರ್ಟ್ ಜಾಮೀನು- ಸುಪ್ರೀಂ ತಡೆಯಾಜ್ಞೆ; 9 ತಿಂಗಳಾದರೂ ಜೈಲಲ್ಲೇ ಬಂಧಿಯಾದ ಪ್ರತಿಭಟನಾಕಾರರು
ಘಟನೆ ಸಂಬಂಧಪಟ್ಟಂತೆ, ಪೊಲೀಸರ ವಿರುದ್ಧ ಹಿಂಸಾಚಾರ ನಡೆಸಿದ ಆರೋಪದ ಮೇಲೆ ಮಂಗಳೂರು ಪೊಲೀಸರು 24 ಮಂದಿಯನ್ನು ಬಂಧಿಸಿದ್ದರು. ಆರೋಪಿಗಳ ಬಂಧನ ಮಾಡುವಾಗ ಪೊಲೀಸರು ಸರಿಯಾದ ಕ್ರಮ ಕೈಗೊಂಡಿಲ್ಲ. ಆರೋಪಿಗಳು ಗಲಭೆಯಲ್ಲಿ ಭಾಗಿಯಾಗಿರುವುದಕ್ಕೆ ಸಂಬಂಧಿಸಿದಂತೆ ಸರಿಯಾದ ಸಾಕ್ಷ್ಯಗಳನ್ನು ನ್ಯಾಯಾಲಯಕ್ಕೆ ಒದಗಿಸದೆ ಇರುವ ಅಂಶಗಳನ್ನು ಪರಿಗಣಿಸಿದ ಹೈಕೋರ್ಟ್ ಎಲ್ಲಾ 24 ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿತ್ತು. ಅಲ್ಲದೆ ಸಾಕ್ಷ್ಯ ಎಂದು ಪರಿಗಣಿಸಿರುವ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಆರೋಪಿಗಳು ನೇರವಾಗಿ ಭಾಗಿಯಾಗಿದ್ದಾರೆ ಎನ್ನುವುದಕ್ಕೆ ಸಾಕ್ಷ್ಯ ಇಲ್ಲ ಎಂದು ಹೈ ಕೋರ್ಟ್ ಏಕ ಸದಸ್ಯ ಪೀಠ ಮನಗಂಡು ಜಾಮೀನು ಮಂಜೂರು ಮಾಡಿತ್ತು.

ಜಾಮೀನು ನೀಡಿದ ಹೈಕೋರ್ಟ್ ತನ್ನ ಆದೇಶದಲ್ಲಿ, “SPP (Special Public Prosecutor) ದಾಖಲೆಗಳಾಗಿ ನೀಡಿರುವ ಛಾಯಾಚಿತ್ರಗಳಲ್ಲಿ, ಆರೋಪಿಸಲ್ಪಟ್ಟ ಯಾರ ಕೈಯಲ್ಲಿಯೂ ಯಾವುದೇ ಮಾರಕಾಸ್ತ್ರಗಳಿಲ್ಲ. ಓರ್ವ ವ್ಯಕ್ತಿಯ ಕೈಯಲ್ಲಿ ಬಾಟಲ್ ಇರುವುದು ಹೊರತುಪಡಿಸಿದರೆ, ಪೊಲೀಸರನ್ನು ಅಥವಾ ಪೊಲೀಸ್ ಸ್ಟೇಷನ್ ಅನ್ನು ಸುತ್ತುವರೆದಿರುವ ಬೇರೆ ಯಾವುದೇ ಚಿತ್ರಗಳು ಲಭ್ಯವಾಗಿಲ್ಲ. ಆದರೆ ಅರ್ಜಿದಾರರು ಸಲ್ಲಿಸಿರುವ ಚಿತ್ರಗಳಲ್ಲಿ ಗುಂಪಿನ ಮೇಲೆ ಪೊಲೀಸರೇ ಕಲ್ಲು ತೂರಾಟ ನಡೆಸುತ್ತಿದ್ದ ಘಟನೆಗಳು ಚಿತ್ರಿತವಾಗಿವೆ.” ಎಂದು ಸ್ಪಷ್ಟವಾಗಿ ಉಲ್ಲೇಖಿಸಿತ್ತು.
ಆದರೆ, ಹೈಕೋರ್ಟ್ ಜಾಮೀನು ಪಡೆದ ಪ್ರತಿಭಟನಾಕಾರರು ಬಿಡುಗಡೆಯಾಗಬೇಕಾದ ದಿನವೇ ಸುಪ್ರೀಂ ಕೋರ್ಟ್, ಹೈಕೋರ್ಟ್ ಜಾಮೀನಿಗೆ ಮಧ್ಯಂತರ ತಡೆ ವಿಧಿಸಿ ಆದೇಶ ಹೊರಡಿಸಿದ್ದು, ಹೈಕೋರ್ಟ್ ಜಾಮೀನು ರದ್ದಾಗಿದೆ. ಪ್ರಕರಣದ ಕುರಿತಂತೆ ಸುಪ್ರಿಂ ಕೋರ್ಟಿನಲ್ಲಿ ಇದುವರೆಗೂ ಎರಡು ಹಿಯರಿಂಗ್ ನಡೆದಿದೆ. ಇದೇ ಆಗಸ್ಟ್ 11 ರಂದು ನಡೆದ ವಿಚಾರಣೆಯಲ್ಲಿ ಮುಂದಿನ ಇನ್ನೆರಡು ವಾರಗಳಲ್ಲಿ ವಿಚಾರಣೆ ನಡೆಸಲಾಗುವುದು ಎಂದು ಹೇಳಿದರೂ, ದಿನಾಂಕ ನಿಗದಿಪಡಿಸಿಲ್ಲ ಎಂದು ಪ್ರತಿಭಟನಾಕಾರರ ಪರ ವಕೀಲರಲ್ಲೊಬ್ಬರಾದ ಅಶ್ರಫ್ ಅಗ್ನಾಡಿ, ಪ್ರತಿಧ್ವನಿಯೊಂದಿಗೆ ಹೇಳಿದ್ದಾರೆ.
ಕಳೆದ 9 ತಿಂಗಳಿನಿಂದ ಮಂಗಳೂರಿನ ಪ್ರತಿಭಟನಾಕಾರರು ಜೈಲುವಾಸಿಗಳಾಗಿದ್ದಾರೆ. ಕರೋನಾ ಸಾಂಕ್ರಾಮಿಕ ರೋಗದೊಂದಿಗೆ ಕೇಂದ್ರ ಸರ್ಕಾರದ ವಿಭಜಕ ಕಾಯ್ದೆ ಸಿಎಎ-ಎನ್‌ಆರ್‌ಸಿ ವಿರೋಧಿ ಪ್ರತಿಭಟನೆಗಳು ತಣ್ಣಗಾಗಿವೆ. ಅದರೊಂದಿಗೆ ಜೈಲುಪಾಲಾಗಿರುವ ಸಿಎಎ- ಎನ್‌ಆರ್‌ಸಿ ವಿರೋಧಿ ಪ್ರತಿಭಟನಕಾರರ ಕುರಿತಾದ ಕಾಳಜಿ, ಚರ್ಚೆಗಳೂ ಹಿನ್ನಲೆಗೆ ಸರಿದಿವೆ.
Also Read: ಮಂಗಳೂರು ಗೋಲಿಬಾರ್, ದೆಹಲಿ ಕೋಮು ಗಲಭೆ ಪ್ರಭುತ್ವ ಪ್ರೇರಿತವೇ? ಅನುಮಾನಕ್ಕೀಡಾದ ಚಾರ್ಜ್ ಶೀಟ್











