ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರವನ್ನು ಹಾಗೂ ರಾಜಕೀಯ ಘಟನೆಗಳನ್ನು ಟೀಕಿಸಿದವರ ವಿರುದ್ದ ದೇಶದ ಮೂಲೆ ಮೂಲೆಗಳಲ್ಲಿ ಪ್ರಕರಣಗಳು ದಾಖಲಾಗುತ್ತಿರುವುದರ ಕುರಿತು ಸುಪ್ರಿಂಕೋರ್ಟ್ ಕಳವಳ ವ್ಯಕ್ತಪಡಿಸಿದೆ. ಭಾರತವನ್ನು ಸ್ವತಂತ್ರ ರಾಷ್ಟ್ರವಾಗಿ ಇರಲು ಬಿಡಿ ಎಂದು ಸರ್ಕಾರಕ್ಕೆ ಹಾಗೂ ಪೊಲೀಸರಿಗೆ ತಿಳಿಸಿದೆ.
ಪಶ್ಚಿಮ ಬಂಗಾಳದಲ್ಲಿ ಲಾಕ್‌ಡೌನ್ ನಿಯಮಗಳನ್ನು ಸರಿಯಾಗಿ ಪಾಲಿಸಿಲ್ಲ ಎಂಬದು ದೆಹಲಿ ಮೂಲದ ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಟೀಕಿಸಿದ್ದರು. ಈ ಕಾರಣಕ್ಕೆ ಅವರ ವಿರುದ್ದ ಪಶ್ಚಿ ಬಂಗಾಳದಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಜಸ್ಟೀಸ್ ಡಿ ವೈ ಚಂದ್ರಚೂಡ್ ಹಾಗೂ ಜಸ್ಟೀಸ್ ಇಂದಿರಾ ಬ್ಯಾನರ್ಜಿ ಅವರಿದ್ದ ಪೀಠವು, “ಭಾರತವನ್ನು ಸ್ವತಂತ್ರ ರಾಷ್ಟ್ರವಾಗಿರಲು ಬಿಡಿ. ಹದ್ದು ಮೀರಬೇಡಿ. ಸಾಮಾನ್ಯ ಜನರು ಸರ್ಕಾರಗಳಿಂದ ತೊಂದರೆಗೆ ಒಳಗಾಗಬಾರದು ಎಂಬ ಕಾರಣಕ್ಕೆ ಸಂವಿಧಾನವು ಸುಪ್ರಿಂಕೋರ್ಟ್ ಅನ್ನು ರೂಪಿಸಿದೆ,” ಎಂದು ಹೇಳಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
“ನಾಳೆ ಕೊಲ್ಕತ್ತಾ, ಮುಂಬೈ, ಚೆನ್ನೈ ಮತ್ತು ಮಣಿಪುರ ಪೊಲೀಸರು ದೇಶದ ಮೂಲೆ ಮೂಲೆಯ ನಾಗರಿಕರಿಗೆ ಸಮನ್ಸ್ ನೀಡುತ್ತಾರೆ. ನಿಮಗೆ ವಾಕ್ ಸ್ವಾತಂತ್ರ್ಯ ಬೇಕಲ್ಲವೇ, ನಾವು ನಿಮಗೆ ಬುದ್ದಿ ಕಲಿಸುತ್ತೇವೆ ಎಂದು ಸಂದೇಶ ನೀಡುತ್ತಾರೆ. ಇದು ತುಂಬಾ ಅಪಾಯಕಾರಿ. ಸರ್ಕಾರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸಿದ ಕಾರಣಕ್ಕೆ ದೇಶದ ನಾಗರಿಕರನ್ನು ಒಂದು ಮೂಲೆಯಿಂದ ಒನ್ನೊಂದು ಮೂಲೆ ಪದೇ ಪದೇ ಕರೆಸಿಕೊಳ್ಳುವುದು ತಪ್ಪು,” ಎಂದು ಸುಪ್ರಿಂ ಹೇಳಿದೆ.
ಸಂವಿಧಾನದ 19(1) ನೇ ವಿಧಿಯು ಪ್ರತಿಯೊಬ್ಬ ನಾಗರಿಕರಿಗೂ ವಾಕ್ ಸ್ವಾತಂತ್ರ್ಯವನ್ನು ನೀಡಿ, ಎಷ್ಟೇ ಕಷ್ಟವಾದರೂ ಆ ಹಕ್ಕನ್ನು ರಕ್ಷಿಸಬೇಕು ಎಂದು ಹೇಳುತ್ತದೆ, ಎಂದು ಎಲ್ಲಾ ರಾಜ್ಯ ಸರ್ಕಾರಗಳಿಗೂ ನೇರವಾದ ಹಾಗೂ ಸ್ಪಷ್ಟವಾದ ಸಂದೇಶವನ್ನು ರವಾನಿಸಿದೆ.
ದೆಹಲಿಯಿಂದ ಕೊಲ್ಕತ್ತಾಗೆ ಸಮನ್ಸ್ ನೀಡಿದ್ದು ದೌರ್ಜನ್ಯ
ಕೊಲ್ಕತ್ತಾದ ರಾಜಾ ಬಜಾ಼ರ್ ಪ್ರದೇಶದಲ್ಲಿ ಹೆಚ್ಚಿನ ಜನಸಂದಣಿ ಇರುವುದನ್ನು ದೆಹಲಿಯ ರೋಶನಿ ಬಿಸ್ವಾಸ್ ಎಂಬ ಮಹಿಳೆ ಫೇಸ್‌ಬುಕ್‌ನಲ್ಲಿ ಟೀಕಿಸಿದ್ದರು. ಇದನ್ನು ಗಮನಿಸಿದ ಕೊಲ್ಕತ್ತಾ ಪೊಲೀಸರು ರೋಶನಿ ವಿರುದ್ದ ಪ್ರಕರಣವನ್ನು ದಾಖಲಿಸಿದ್ದರು. ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಕೂಡಾ ಜಾರಿ ಮಾಡಿದ್ದರು. ಈ ಸಮನ್ಸ್ ವಿರುದ್ದ ರೋಶನಿ ಅವರು ಸುಪ್ರಿಂ ಮೆಟ್ಟಿಲೇರಿದ ಕಾರಣ, ಕೊಲ್ಕತ್ತಾ ಪೊಲೀಸರ ವಿರುದ್ದ ಸುಪ್ರಿಂ ಕೋರ್ಟ್ ಕಿಡಿಕಾರಿದೆ.
ಸುಪ್ರಿಂ ಕೋರ್ಟ್‌ನಲ್ಲಿ ವಿವರಣೆ ನೀಡಿದ ಪಶ್ಚಿಮ ಬಂಗಾಳದ ವಕೀಲರು, ರೋಶನಿ ಅವರನ್ನು ಕೇವಲ ವಿಚಾರಣೆಗಾಗಿ ಮಾತ್ರ ಕರೆಸಿಕೊಳ್ಳಲಾಗುವುದು. ಅವರರನ್ನು ಬಂಧಿಸುವುದಿಲ್ಲ ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಕೋರ್ಟ್ “ಈ ಪ್ರಕ್ರಿಯೆಯು ನಾಗರಿಕರನ್ನು ಬೆದರಿಸಿದಂತಾಗುತ್ತದೆ. ಅವರ ವಾಕ್ ಸ್ವಾತಂತ್ರ್ಯವನ್ನು ಮೊಟಕುಗೊಳಿಸದಂತಾಗುತ್ತದೆ. ಕರೋನಾ ಸೋಂಕನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಿಲ್ಲ ಎಂದು ಟೀಕಿಸಿದ ಕಾರಣಕ್ಕೆ ಅವರ ವಿರುದ್ದ ಪ್ರಕರಣ ದಾಖಲಿಸಲು ಆಗುವುದಿಲ್ಲ,” ಎಂದು ಹೇಳಿದೆ.
“ರೋಶನಿ ಅವರನ್ನು ದೆಹಲಿಯಿಂದ ಕೊಲ್ಕತ್ತಾಗೆ ಬರಲು ಸಮನ್ಸ್ ನೀಡಿದ್ದು ದೌರ್ಜನ್ಯ,” ಎಂದು ಸುಪ್ರಿಂಕೋರ್ಟ್ ಹೇಳಿದೆ.