ಭಾರತವು ಇಂದು ಮುಂಜಾನೆ ಬಾಲಿವುಡ್ನ ದೈತ್ಯ ತಾರೆ ರಿಷಿ ಕಪೂರ್ ಅವರನ್ನು ಕಳೆದುಕೊಂಡರೆ, ಸಂಜೆಯ ವೇಳೆಗೆ ಭಾರತದ ಖ್ಯಾತ ಫುಟ್ಬಾಲ್ ಆಟಗಾರ ಸುಬಿಮಲ್ ಗೋಸ್ವಾಮಿ ಅವರನ್ನು ಕಳೆದುಕೊಂಡಿದೆ. ಚುನಿ ಗೋಸ್ವಾಮಿಯೆಂದೇ ಪ್ರಖ್ಯಾತರಾದ ಇವರು, ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. 82 ವಯಸ್ಸಿನವರಾದು ಚುನಿ ಅವರು ಕೇವಲ ಫುಟ್ಬಾಲ್ ಮಾತ್ರವಲ್ಲದೇ, ಬಂಗಾಳದ ಪರವಾಗಿ ಪ್ರಥಮ ದರ್ಜೆಯ ಕ್ರಿಕೆಟ್ನಲ್ಲಿ ಕೂಡಾ ಮಿಂಚಿದ್ದರು.
ಡಯಾಬಿಟಿಸ್, ನರ ಸಂಬಂಧೀ ಕಾಯಿಲೆಯಿಂದ ಬಳಲುತ್ತಿದ್ದ ಗೋಸ್ವಾಮಿ ಅವರನ್ನು ಗುರುವಾರ ಬೆಳಿಗ್ಗೆ ಕೊಲ್ಕೊತ್ತಾದ ಆಸ್ಪತ್ರೆಗೆ ಕರೆತರಲಾಯಿತು. ಸಂಜೆ ಸುಮಾರು 4 ಗಂಟೆಯ ವೇಳೆಗೆ ಅವರು ಕೊನೆಯುಸಿರೆಳೆದಿದ್ದಾರೆ.
ಈಗ ಬಾಂಗ್ಲಾದೇಶದಲ್ಲಿರುವ ಕಿಶೋರ್ಗಂಜ್ನಲ್ಲಿ ಹುಟ್ಟಿದ್ದ ಗೋಸ್ವಾಮಿ, ಕೊಲ್ಕೊತ್ತಾದ ಪ್ರಖ್ಯಾತ ಮೋಹನ್ ಬಾಗನ್ ಫುಟ್ಬಾಲ್ ಕ್ಲಬ್ನ ಸದಸ್ಯರಾಗಿದ್ದರು. ಭಾರತಕ್ಕೆ ಸ್ವಾತಂತ್ರ್ಯ ಸಿಗುವ ಮುನ್ನವೇ ಮೋಹನ್ ಬಾಗನ್ ಜೂನಿಯರ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದ ಗೋಸ್ವಾಮಿ, ಅಲ್ಲಿಂದ ಸುಮಾರು ಎರಡು ದಶಕಗಳ ಕಾಲ ಆ ತಂಡದ ಆಸ್ತಿಯಾಗಿದ್ದರು.
1957ರಲ್ಲಿ ಮೊತ್ತ ಮೊದಲ ಬಾರಿಗೆ ಭಾರತದ ಪರವಾಗಿ ಅಂತರಾಷ್ಟ್ರೀಯ ಪಂದ್ಯವಾನ್ನಾಡಿದ ಚುನಿ ಗೋಸ್ವಾಮಿ, ನಂತರ ತಂಡದ ಕಪ್ತಾನನ ಸ್ಥಾನ ಅಲಂಕರಿಸಿದ್ದರು. 1962 ಏಷಿಯನ್ ಗೇಮ್ಸ್ನಲ್ಲಿ ಭಾರತಕ್ಕೆ ಚಿನ್ನದ ಪದಕ ತಂದು ಕೊಟ್ಟ ಖ್ಯಾತಿ ಇವರದು. 1964ರ ಏಷಿಯನ್ ಗೇಮ್ಸ್ ಮತ್ತು ಮರ್ಡೇಕಾ ಕಪ್ ಪಂದ್ಯಾವಳಿಯಲ್ಲಿ ಎರಡನೇ ಸ್ಥಾನವನ್ನು ಜಯಿಸುವ ಮೂಲಕ ಭಾರತದ ಫುಟ್ಬಾಲ್ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಿದ್ದರು.
ನಂತರ 1968ರಲ್ಲಿ ಫುಟ್ಬಾಲ್ ತ್ಯಜಿಸಿ ಭಾರತದ ಅತ್ಯಂತ ಪ್ರಖ್ಯಾತ ಕ್ರೀಡೆಯಾದ ಕ್ರಿಕೆಟ್ ಕಡೆಗೆ ಗಮನ ಹರಿಸಿದ್ದ ಗೋಸ್ವಾಮಿ, ಅಲ್ಲೂ ಸೈ ಎನ್ನಿಸಿಕೊಂಡಿದ್ದರು. ಬಂಗಾಳದ ಭರವಸೆಯ ಆಲ್-ರೌಂಡರ್ ಎನಿಸಿಕೊಂಡಿದ್ದ ಚುನಿ ಗೋಸ್ವಾಮಿ, ಬಂಗಾಳ ತಂಡವನ್ನು ರಣಜಿ ಟ್ರೋಫಿಯ ಫೈನಲ್ಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಇನ್ನು, ಕ್ರೀಡಾ ಕ್ಷೇತ್ರದಲ್ಲಿನ ಇವರ ಸಾಧನೆಗಾಗಿ ಅರ್ಜುನ ಪ್ರಶಸ್ತಿ ಹಾಗೂ ಪದ್ಮಶ್ರಿ ಪ್ರಶಸ್ತಿಯನ್ನು ಪಡೆದಿರುವ ಇವರ ಹೆಸರಿನಲ್ಲಿ ಭಾರತೀಯ ಅಂಚೆ ಇಲಾಖೆಯು ಇವರ ಭಾವಚಿತ್ರದ ಅಂಚೆಚೀಟಿಯನ್ನು ಬಿಡುಗಡೆಗೊಳಿಸಿ ಗೌರವಿಸಿದೆ.
ಇವರ ಅಗಲಿಕೆಗೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.