ಭಾರತದಲ್ಲಿ ಅಧಿಕಾರದಲ್ಲಿರುವವರ ಹಿತಾಸಕ್ತಿಗಾಗಿಯೇ ಜಗತ್ತಿನಲ್ಲಿ ನೂರಾರು ನಕಲಿ ಜಾಲತಾಣಗಳು ಸೃಷ್ಟಿಯಾಗಿವೆಯಂತೆ!ಹೌದು ಇದನ್ನು ನಂಬಲೇಬೇಕು. ಅಧಿಕಾರ ಹಿಡಿಯುವವರು ಭಾರತದಲ್ಲಿಯಷ್ಟೇ ಅಲ್ಲ, ಜಾಗತಿಕ ಮಟ್ಟದಲ್ಲಿ ತಮಗೆ ಬೇಕಾದುದನ್ನು ಬರೆಸಿಕೊಂಡು ಹಿಂಬಾಗಿಲ ಮೂಲಕ ಹೇಗೆ ಜನಪ್ರಿಯತೆಯನ್ನು ಗಳಿಸಲು ಹೇಗೆ ಹಾತೊರೆಯುತ್ತವೆ ಎಂಬುದಕ್ಕೆ ಇದು ಸ್ಪಷ್ಟ ನಿದರ್ಶನವಾಗಿದೆ.
ಅಂದಹಾಗೆ ಜಗತ್ತಿನಾದ್ಯಂತ ಭಾರತದ ಅಧಿಕಾರಸ್ಥರ ಪರವಾಗಿ ಸುದ್ದಿಗಳನ್ನು ಮತ್ತು ನಕಲಿ ಸುದ್ದಿಗಳನ್ನು ಪ್ರಸಾರ ಮಾಡಲೆಂದೇ ಬರೋಬ್ಬರಿ 265 ನಕಲಿ ನ್ಯೂಸ್ ಮಾಧ್ಯಮ ತಾಣಗಳು ಕಾರ್ಯನಿರತವಾಗಿವೆ. ಈ ಮಾಧ್ಯಮ ಜಾಲತಾಣಗಳು ಭಾರತದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದವರ ಹಿತಾಸಕ್ತಿಗಾಗಿ ದಿನದ 24 ಗಂಟೆಯೂ ಕಾರ್ಯನಿರ್ವಹಣೆ ಮಾಡುತ್ತಿವೆ. ಇದನ್ನು ಭಾರತದಲ್ಲಿಯೇ ಕುಳಿತು ಮ್ಯಾನೇಜ್ ಮಾಡಲಾಗುತ್ತಿದೆ. ಹೀಗೆ ವಿಶ್ವದ 65 ದೇಶಗಳಲ್ಲಿ ಈ ಫೇಕ್ ನ್ಯೂಸ್ ಮೀಡಿಯಾ ಹೌಸ್ ಗಳು ಪತ್ತೆಯಾಗಿರುವ ಕರ್ಮಕಾಂಡವನ್ನು ಬ್ರುಸೆಲ್ಸ್ ಮೂಲದ ಇಯು ಡಿಸ್ಇನ್ಫೋ ಲ್ಯಾಬ್ ಎಂಬ ಸಂಸ್ಥೆ ಬಯಲು ಮಾಡಿದೆ.
ಮೂಲಗಳ ಪ್ರಕಾರ ಬಹುತೇಕ ಈ ಎಲ್ಲಾ ಫೇಕ್ ನ್ಯೂಸ್ ಮೀಡಿಯಾ ಹೌಸ್ ಗಳು ದೆಹಲಿ ಕೇಂದ್ರಿತ ಮಾಧ್ಯಮ ಸಂಸ್ಥೆಯೊಂದರ ಮೂಗಿನಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಈ ನಕಲಿ ನ್ಯೂಸ್ ಹೌಸ್ ಗಳ ಕರ್ಮಕಾಂಡದ ಜಾಡನ್ನು ಹಿಡಿದು ತನಿಖೆ ನಡೆಸಲು ಹೊರಟ ಡಿಸ್ಇನ್ಫೋ ಲ್ಯಾಬ್ ನ ತಂಡಕ್ಕೆ ಒಂದೊಂದೇ ಕರಾಳ ಮುಖಗಳು ಕಾಣಿಸಿಕೊಳ್ಳತೊಡಗಿದವು.
ಈ ನಕಲಿ ನ್ಯೂಸ್ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿದ್ದ ಸುದ್ದಿಯ ಪುಂಜಗಳನ್ನು ಎಳೆಎಳೆಯಾಗಿ ಬಿಡಿಸುತ್ತಾ ಹೋದಾಗ ಅವುಗಳ ಹಿಂದಿನ ದುರುದ್ದೇಶ ಬಯಲಾಗತೊಡಗಿದೆ. ಅಂದರೆ ಈ ಜಾಲತಾಣಗಳು ಭಾರತ ಸರ್ಕಾರದ ಪರವಾಗಿ ಯೂರೋಪಿಯನ್ ಯೂನಿಯನ್ ಮತ್ತು ವಿಶ್ವಸಂಸ್ಥೆಯ ಮೇಲೆ ಪ್ರಭಾವ ಬೀರುವಂತಹ ಮತ್ತು ಅಭಿಪ್ರಾಯವನ್ನು ಮೂಡಿಸುವಂತಹ ಸುದ್ದಿಗಳನ್ನೇ ಹೆಚ್ಚು ಪ್ರಸಾರ ಮಾಡುತ್ತಿದ್ದವು. ಇಷ್ಟೇ ಅಲ್ಲದೇ ನಮ್ಮ ದೇಶದಲ್ಲಿರುವ ಕೆಲವು ಸರ್ಕಾರದ ಮುಖವಾಣಿಯಂತಿರುವ ಮಾಧ್ಯಮ ಸಂಸ್ಥೆಗಳ ರೀತಿಯಲ್ಲಿ ಪಾಕಿಸ್ತಾನವನ್ನು ಟೀಕಿಸುವ ರೀತಿಯಲ್ಲಿನ ಲೇಖನಗಳು, ಟಿಪ್ಪಣಿಗಳನ್ನು ಹೆಚ್ಚಾಗಿ ಪ್ರಕಟಿಸುತ್ತಿದ್ದವು. ಈ ಮೂಲಕ ವಿಶ್ವಸಂಸ್ಥೆ ಮತ್ತು ಯೂರೋಪಿಯನ್ ಯೂನಿಯನ್ ಮೇಲೆ ಪ್ರಭಾವ ಬೀರುವ ಪ್ರಯತ್ನ ನಡೆಸುತ್ತಿದ್ದವು ಎಂದು ಸಂಸ್ಥೆ ಹೇಳಿದೆ.
ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಅಧಿಕಾರಸ್ಥರ ಪರವಾಗಿ ಸುದ್ದಿಗಳನ್ನು ಬಿತ್ತರ ಮಾಡುತ್ತಿದ್ದ ಈ ಜಾಲತಾಣಗಳನ್ನು ಭಾರತದ ಸುದ್ದಿ ಮಾಧ್ಯಮವೊಂದು ಹಿಡಿತದಲ್ಲಿಟ್ಟುಕೊಂಡಿದೆ. ಇತ್ತೀಚಿಗೆ ಯೂರೋಪಿಯನ್ ಸಂಸದರನ್ನು ಕಾಶ್ಮೀರಕ್ಕೆ ಆಹ್ವಾನಿಸಲಾಗಿತ್ತು. ಈ ಭೇಟಿಯನ್ನು ಆಯೋಜಿಸಿದ್ದು ನ್ಯೂಡೆಲ್ಲಿ ಟೈಮ್ಸ್ ಮತ್ತು ಶ್ರೀವಾಸ್ತವ ಗ್ರೂಪ್ ನೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡಿರುವ Non-Aligned Studies ಎಂಬ ಸಂಸ್ಥೆ. ತನಿಖೆ ನಡೆಸಿದ ಸಂಸ್ಥೆಯ ಪ್ರತಿನಿಧಿಗಳಿಗೆ ಮೂಡಿದ್ದ ಅನುಮಾನಗಳು ಗಟ್ಟಿಯಾಗಿದ್ದು ನ್ಯೂಡೆಲ್ಲಿ ಟೈಮ್ಸ್ ಮತ್ತು ಶ್ರೀವಾಸ್ತವ ಗ್ರೂಪಿನ ಐಪಿ ವಿಳಾಸ ಒಂದೇ ಎಂಬುದು ತಿಳಿದಾಗ.
ಇನ್ನು ಯೂರೋಪಿಯನ್ ಸಂಸದರು ಕಾಶ್ಮೀರಕ್ಕೆ ಭೇಟಿ ನೀಡಿದಾಗ ಈ ಎಲ್ಲಾ ಫೇಕ್ ನ್ಯೂಸ್ ಸಂಸ್ಥೆಗಳು ಎಲ್ಲಿಲ್ಲದ ಆಸಕ್ತಿ ತೋರಿಸಿ ಸಕ್ರಿಯವಾಗಿದ್ದವು.
ಇಯು ಡಿಸ್ಇನ್ಫೋ ಲ್ಯಾಬ್ ನ ತನಿಖಾ ತಂಡವು ನ್ಯೂಯಾರ್ಕ್ ಮಾರ್ನಿಂಗ್ ಟೆಲಿಗ್ರಾಫ್, ದಿ ಡಬ್ಲಿನ್ ಗೆಜೆಟ್ ಹಾಗೂ ಟೈಮ್ಸ್ ಆಫ್ ಪೋರ್ಚುಗಲ್ ಎಂಬ ಸುದ್ದಿ ಜಾಲತಾಣಗಳಲ್ಲಿ ಬರುತ್ತಿದ್ದ ಸುದ್ದಿಗಳನ್ನು ಆಳವಾಗಿ ಅಧ್ಯಯನಕ್ಕೆ ಒಳಪಡಿಸಿದೆ. ಆಗಲೇ ಗೊತ್ತಾದದ್ದು ಈ ಮೂರು ಜಾಲತಾಣಗಳು ಭಾರತ ಸರ್ಕಾರದ ಪರವಾದ ಸುದ್ದಿಗಳನ್ನು ಹೆಚ್ಚಾಗಿ ಪ್ರಸಾರ ಮಾಡುತ್ತಿವೆ ಎಂಬುದು. ಇವುಗಳು ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ಭಾರತ ಸರ್ಕಾರ ಮತ್ತು ಸರ್ಕಾರದ ಮುಂದಾಳತ್ವ ವಹಿಸಿರುವವರ ಪರವಾಗಿ ಸುದ್ದಿಗಳನ್ನು ಬಿತ್ತರಿಸುವ ಮೂಲಕ ಯೂರೋಪಿಯನ್ ಯೂನಿಯನ್ ದೇಶಗಳಿಂದ ಒಳ್ಳೆಯ ಅಭಿಪ್ರಾಯಗಳು ಬರುವಂತೆ ನೋಡಿಕೊಳ್ಳುತ್ತಿದ್ದವು.
ಈ ನಕಲಿ ಸುದ್ದಿ ಜಾಲತಾಣಗಳು ಇಷ್ಟಕ್ಕೇ ಸೀಮಿತವಾಗಿಲ್ಲ. ಯೂರೋಪಿನ ಪಾರ್ಲಿಮೆಂಟ್ ಹೆಸರನ್ನೂ ತಮ್ಮ ಸುದ್ದಿ ಬಿತ್ತರಕ್ಕೆ ದುರ್ಬಳಕೆ ಮಾಡಿಕೊಂಡಿವೆ. ಯೂರೋಪಿಯನ್ ಪಾರ್ಲಿಮೆಂಟ್ ಮ್ಯಾಗಜಿನ್ ಎಂದು ಸ್ವಘೋಷಣೆ ಮಾಡಿಕೊಂಡ EP Today ಎಂಬ ಜಾಲತಾಣವು ಭಾರತ ಸರ್ಕಾರದ ಮುಖವಾಣಿಯಂತೆ ಕಾರ್ಯನಿರ್ವಹಿಸುತ್ತಿತ್ತು.
EP Today ಯ ತುಂಬೆಲ್ಲಾ ಇದ್ದ ಹೆಚ್ಚು ಲೇಖನಗಳೆಂದರೆ ಪಾಕಿಸ್ತಾನಿ ವಿರೋಧಿಯವು ಮತ್ತು ಭಾರತ ಸರ್ಕಾರ ಅಂದರೆ ಬಿಜೆಪಿ ಸರ್ಕಾರವನ್ನು ಹೊಗಳುವ ಲೇಖನಗಳು.
EP Today ಸುಮಾರು ಒಂದೂವರೆ ಲಕ್ಷದಷ್ಟು ಫೇಸ್ ಬುಕ್ ಫ್ಯಾನ್ ಗಳನ್ನು ಹೊಂದಿದೆಯಾದರೂ, ಇದರಲ್ಲಿ ಪ್ರಕಟವಾಗುವ ಲೇಖನಗಳಲ್ಲಿ ಬಹುತೇಕ ಲೇಖನಗಳು ಅಮೇರಿಕಾದ ಜಾಲತಾಣಗಳು ಮತ್ತು rt.comನಿಂದ ಎರವಲು ಪಡೆದ ಲೇಖನಗಳಾಗಿರುತ್ತವೆ.