ದೇಶದಲ್ಲಿ ಕೋವಿಡ್ -19 ಪ್ರಕರಣಗಳ ಒಟ್ಟು ಸಂಖ್ಯೆ ಒಂದು ಕೋಟಿ ದಾಟಿದೆ. ಶುಕ್ರವಾರದ ಮಾಹಿತಿ ಪ್ರಕಾರ, ದಿನದ ಹೊಸ ಪ್ರಕರಣಗಳ ಸಂಖ್ಯೆ 20,036 ದಾಟಿದ್ದು, ಒಟ್ಟು ಪ್ರಕರಣಗಳು 1,02,86,710ನ್ನು ದಾಟಿದೆ. ಈವರೆಗಿನ ಸಾವಿನ ಪ್ರಮಾಣ 1,48,994ರಷ್ಟಾಗಿದೆ. ಈ ನಡುವೆ ಶುಕ್ರವಾರ ನಡೆದ ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯ ತಜ್ಞರ ಸಮಿತಿ ಸಭೆಯಲ್ಲಿ ಆಕ್ಸ್ ಫರ್ಡ್-ಅಸ್ಟ್ರಾಜೆನೆಕಾದ ಕೋವಿಡ್ ಲಸಿಕೆ ‘ಕೋವಿಶೀಲ್ಡ್’ನ ತುರ್ತು ಬಳಕೆಗೆ ಅನುಮೋದನೆ ನೀಡಲಾಗಿದೆ.
ಕೋವಿಶೀಲ್ಡ್ ಲಸಿಕೆಯ ಭಾರತೀಯ ಉತ್ಪಾದಕ ಸೀರಂ ಇನ್ಸ್ ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಕೋವಾಕ್ಸಿನ್ ಲಸಿಕೆಯ ಉತ್ಪಾದಕ ಭಾರತ್ ಬಯೋಟೆಕ್ ಮನವಿಗಳ ಹಿನ್ನೆಲೆಯಲ್ಲಿ ಹತ್ತು ಮಂದಿ ತಜ್ಞರನ್ನೊಳಗೊಂಡ ಉನ್ನತ ಮಟ್ಟದ ಸಮಿತಿ ಶುಕ್ರವಾರ ಸಭೆ ನಡೆಸಿದೆ. ಸದ್ಯ ಕೋವಿಶೀಲ್ಡ್ ಲಸಿಕೆಯ ತುರ್ತು ಬಳಕೆಗೆ ಮಾತ್ರ ಸಮಿತಿ ಅನುಮೋದನೆ ನೀಡಿದೆ. ಮುಂದಿನ ಪ್ರಕ್ರಿಯೆಯಾಗಿ ಈಗ ಭಾರತೀಯ ಔಷಧ ನಿಯಂತ್ರಣ ಮಹಾ ನಿರ್ದೇಶಕ ವಿ ಜಿ ಸೊಮಾನಿ ಅವರು ಅಂತಿಮ ಅನುಮೋದನೆ ನೀಡಬೇಕಿದೆ. ಆ ಮೂಲಕ ಭಾರತದಲ್ಲಿ ಜನಬಳಕೆಗೆ ಅನುಮೋದನೆ ಪಡೆದುಕೊಂಡ ಮೊಟ್ಟಮೊದಲ ಕೋವಿಡ್ ಲಸಿಕೆಯಾಗಿ ಕೋವಿಶೀಲ್ಡ್ ಹೊರಹೊಮ್ಮಲಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಈ ನಡುವೆ ಫಿಜರ್-ಬಯೋಎನ್ ಟೆಕ್ ಲಸಿಕೆಯನ್ನು ಯುರೋಪ್ ಮತ್ತು ಅಮೆರಿಕದಲ್ಲಿ ಆಂದೋಲನದೋಪಾದಿಯಲ್ಲಿ ಬಳಕೆ ಮಾಡಲಾಗುತ್ತಿದೆ. ಲಂಡನ್ ನಲ್ಲಿ ಡಿಸೆಂಬರ್ ಮೊದಲ ವಾರದ ಹೊತ್ತಿಗೇ ಅದರ ಜನಬಳಕೆ ಆರಂಭವಾಗಿತ್ತು. ಈ ನಡುವೆ ಅಮೆರಿಕದಲ್ಲಿಯೂ ದೊಡ್ಡ ಸಂಖ್ಯೆಯಲ್ಲಿ ಲಸಿಕೆ ಬಳಕೆಯಾಗಿದ್ದು, ಕ್ಯಾಲಿಫೋರ್ನಿಯಾದ ಪುರುಷ ಆರೋಗ್ಯ ಸಹಾಯಕರೊಬ್ಬರಿಗೆ ಲಸಿಕೆ ಪಡೆದ ವಾರದ ಬಳಿಕ ಕೋವಿಡ್ ಸೋಂಕು ಧೃಢಪಟ್ಟಿರುವುದು ದೊಡ್ಡ ಆತಂಕ ಹುಟ್ಟಿಸಿತ್ತು.
ವಿಶ್ವ ಆರೋಗ್ಯ ಸಂಸ್ಥೆ, ಭಾರತೀಯ ಔಷಧ ಗುಣಮಟ್ಟ ನಿಯಂತ್ರಣ ಮಹಾ ನಿರ್ದೇಶಕರಂತಹ ಲಸಿಕೆ ಗುಣಮಟ್ಟ, ಫಲಿತಾಂಶ, ಅಡ್ಡಪರಿಣಾಮ ಮುಂತಾದ ಸಂಗತಿಗಳ ಕುರಿತ ಕಣ್ಗಾವಲು ವ್ಯವಸ್ತೆಗಳ ಹೊರತಾಗಿಯೂ ಜನರಲ್ಲಿ ಹಿಂದೆ ಮುಂದೆ ಗೊತ್ತಿಲ್ಲದ ಒಂದು ಲಸಿಕೆಯನ್ನು ಏಕಾಏಕಿ ಪಡೆದುಕೊಳ್ಳುವ ಬಗ್ಗೆ ಹಿಂಜರಿಕೆ ಇದೆ. ಈ ನಡುವೆ ಕಾಲಿಫೋರ್ನಿಯಾದ ಲಸಿಕೆ ಪಡೆದ ಮೇಲೂ ಕರೋನಾ ದೃಢಪಟ್ಟಿರುವ ಪ್ರಕರಣಗಳು ಜನರ ಅಂತಹ ಆತಂಕ ಮತ್ತು ಅನುಮಾನಗಳನ್ನು ಇನ್ನಷ್ಟು ಹೆಚ್ಚಿಸಿವೆ.
ಆ ಹಿನ್ನೆಲೆಯಲ್ಲಿ ಕೋವಿಡ್ ಸೇರಿದಂತೆ ಯಾವುದೇ ಹೊಸ ಲಸಿಕೆಯ ವಿಷಯದಲ್ಲಿ ಸಂಬಂಧಪಟ್ಟ ಉತ್ಪಾದಕ ಸಂಸ್ಥೆಗಳು ಮತ್ತು ಅದರ ಜನಬಳಕೆಯ ವಿಷಯದಲ್ಲಿ ಕಣ್ಗಾವಲು ವ್ಯವಸ್ಥೆಗಳು ಯಾವೆಲ್ಲಾ ಹಂತಗಳಲ್ಲಿ, ಮಾನದಂಡಗಳ ಆಧಾರದಲ್ಲಿ ಒಂದು ಲಸಿಕೆಯನ್ನು ಜನಬಳಕೆಗೆ ಅನುಮೋದನೆ ನೀಡುತ್ತವೆ ಎಂಬ ಕುರಿತ ವಿವರ ಮಾಹಿತಿ ಇಲ್ಲಿದೆ;
Also Read: ಎಲ್ಲರಿಗೂ ಕೋವಿಡ್ ಲಸಿಕೆ ಎಂದು ಹೇಳಿಯೇ ಇಲ್ಲ: ಕೇಂದ್ರ ಯೂ ಟರ್ನ್!
ಲಸಿಕೆ ಸುರಕ್ಷಿತ ಎಂದು ತಿಳಿಯವುದು ಹೇಗೆ?
ಯಾವುದೇ ಲಸಿಕೆ ಅದನ್ನು ಪಡೆದುಕೊಳ್ಳುವವರ ಜೀವಕ್ಕೆ ಎಷ್ಟು ಸುರಕ್ಷಿತ, ಎಷ್ಟು ಪ್ರಯೋಜನಕಾರಿ ಎಂಬುದನ್ನು ಆರಂಭದಲ್ಲಿ ಪ್ರಿ ಕ್ಲಿನಿಕಲ್ ಪರೀಕ್ಷೆಗಳ ಮೂಲಕವೇ ಕಂಡುಕೊಳ್ಳಲಾಗುವುದು. ಜೀವಕೋಶಗಳು ಮತ್ತು ಪ್ರಾಣಿಗಳ ಮೇಲೆ ಲಸಿಕೆಯ ಪರಿಣಾಮಗಳನ್ನು ಅಧ್ಯಯನ ನಡೆಸಿದ ಬಳಿಕವೇ ಮಾನವರ ಮೇಲಿನ ಪ್ರಯೋಗಕ್ಕೆ ಮುಂದಾಗುತ್ತಾರೆ.
ಈ ಹಂತದಲ್ಲಿ ಪ್ರಯೋಗಗಳ ಪಾತ್ರವೇನು?
ಒಂದು ಲಸಿಕೆ ಅಭಿವೃದ್ಧಿಯ ಆರಂಭಿಕ ಹಂತದಲ್ಲಿ ಪ್ರಿ ಕ್ಲಿನಿಕಲ್ ಪರೀಕ್ಷೆ ಅತ್ಯಂತ ಮಹತ್ವದ್ದು. ಆ ಹಂತದಲ್ಲಿ ಲಸಿಕೆಯ ಪರಿಣಾಮ ಮತ್ತು ಸುರಕ್ಷತೆಗಳು ಖಾತರಿಯಾದರೆ ಮಾತ್ರ ವಿಜ್ಞಾನಿಗಳು ಆ ಲಸಿಕೆಯ ಅಭಿವೃದ್ಧಿಯ ಮುಂದಿನ ಹಂತಕ್ಕೆ ಹೋಗುತ್ತಾರೆ. ಸಣ್ಣ ಪ್ರಮಾಣದಲ್ಲಿ(ಜೀವಕೋಶ ಮತ್ತು ಇಲಿ ಮುಂತಾದ ಪ್ರಾಣಿಗಳ ಮೇಲೆ), ಮಿತ ಬಳಕೆಯಲ್ಲಿ(ಸಂಖ್ಯೆಯ ದೃಷ್ಟಿಯಲ್ಲಿ) ಲಸಿಕೆ ನಿರೀಕ್ಷಿತ ಪರಿಣಾಮ ನೀಡಿದೆ ಮತ್ತು ಸುರಕ್ಷತೆಯ ದೃಷ್ಟಿಯಲ್ಲಿಯೂ ಅದು ಎಷ್ಟು ವಿಶ್ವಾಸಾರ್ಹ ಎಂಬುದರ ಮೇಲೆ, ಕೆಲವೇ ಸ್ವಯಂಪ್ರೇರಿತ ಜನರ ಮೇಲೆ ಪ್ರಯೋಗದ ಮುಂದಿನ ಹಂತಕ್ಕೆ ಹೋಗುತ್ತಾರೆ.
Also Read: ಕೋವಿಡ್ ಲಸಿಕೆ ಎಂಬ ಚದುರಂಗದಾಟ
ಕೆಲವೇ ಮಂದಿಯನ್ನು ಆಯ್ದುಕೊಂಡು, ಆ ಪೈಕಿ ಅರ್ಧದಷ್ಟು ಜನರಿಗೆ ಲಸಿಕೆ ನೀಡಿ, ಉಳಿದರ್ಧ ಮಂದಿಗೆ ನೀಡದೇ ಹಾಗೇ ಬಿಡಲಾಗುತ್ತದೆ. ಆದರೆ, ಪ್ರಯೋಗ ನಡೆಸುವ ವಿಜ್ಞಾನಿಗಳಿಗೆ ಯಾರಿಗೆ ಲಸಿಕೆ ನೀಡಲಾಗಿದೆ ಮತ್ತು ಯಾರಿಗೆ ಇಲ್ಲ ಎಂಬ ಯಾವ ಸುಳಿವೂ ಇರುವುದಿಲ್ಲ. ಲಸಿಕೆಯ ಪರಿಣಾಮಗಳ ಕುರಿತ ಫಲಿತಾಂಶದ ಬಳಿಕವೇ ಆ ಮಾಹಿತಿಯನ್ನು ಬಹಿರಂಗಪಡಿಸಲಾಗುವುದು.
ಅಸ್ಟ್ರಾಜೆನೆಕಾದ ಕೋವಿಶೀಲ್ಡ್ ಲಸಿಕೆಯ ವಿಷಯದಲ್ಲಿ ಈ ಹಂತದಲ್ಲಿ ಲಸಿಕೆ ಪ್ರಯೋಗಕ್ಕೆ ಒಳಗಾದ ವ್ಯಕ್ತಿಯೊಬ್ಬ ಮೃತಪಟ್ಟ ಹಿನ್ನೆಲೆಯಲ್ಲಿ ಪ್ರಯೋಗವನ್ನು ಕೆಲ ಸಮಯ ಸ್ಥಗಿತಗೊಳಿಸಲಾಗಿತ್ತು. ಆದರೆ, ಆ ಸಾವು ಲಸಿಕೆಯ ಕಾರಣದಿಂದ ಸಂಭವಿಸಿಲ್ಲ ಎಂಬುದು ವೈಜ್ಞಾನಿಕವಾಗಿ ಧೃಢಪಟ್ಟ ಬಳಿಕ ಮತ್ತೆ ಪ್ರಯೋಗ ಮುಂದುವರಿಸಲಾಗಿತ್ತು.
ಲಸಿಕೆ ಬಳಕೆ ಮತ್ತು ಚಿಕಿತ್ಸೆಗೆ ಯಾರು ಅನುಮೋದನೆ ನೀಡುತ್ತಾರೆ?
ಭಾರತದಲ್ಲಿ ಔಷಧ ನಿಯಂತ್ರಣ ಮಹಾ ನಿರ್ದೇಶಕರು(ಡಿಸಿಜಿಐ) ಇರುವಂತೆ ಬಹುತೇಕ ಮುಂದುವರಿದ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಲಸಿಕೆ, ಔಷಧಗಳ ಅಭಿವೃದ್ಧಿ, ಬಳಕೆಯ ಮೇಲೆ ಕಣ್ಗಾವಲು ವ್ಯವಸ್ಥೆಗಳಿವೆ. ಅಂತಹ ಕಡೆ ಆಯಾ ಸಂಸ್ಥೆಗಳೇ ಲಸಿಕೆ ಬಳಕೆ ಮತ್ತು ಚಿಕಿತ್ಸೆಗೆ ಸಂಬಂಧಿಸಿದ ಪ್ರಯೋಗಗಳ ಫಲಿತಾಂಶದ ಮೇಲೆ ಅನುಮೋದನೆ ನೀಡುತ್ತವೆ. ಅಂತಹ ವ್ಯವಸ್ಥೆಗಳು ಇಲ್ಲದ ಬಡ ರಾಷ್ಟ್ರಗಳಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಆ ಕಾರ್ಯವನ್ನು ಮಾಡುತ್ತದೆ.
ಒಮ್ಮೆ ಅನುಮೋದನೆ ನೀಡಿದ ಬಳಿಕವೂ ಆ ಲಸಿಕೆಯ ಪರಿಣಾಮಗಳು ಮತ್ತು ಸುರಕ್ಷತೆಯ ಮೇಲೆ ನಿರಂತರ ಕಣ್ಣಿಡಲಾಗುತ್ತದೆ.
ಕೋವಿಡ್ ಲಸಿಕೆ ಹೇಗೆ ಕೆಲಸ ಮಾಡುತ್ತದೆ?
ಫಿಜರ್ ಸೇರಿದಂತೆ ಬಹುತೇಕ ವಂಶವಾಹಿ ಕೋಡ್ ಬಳಸಿ ಮನುಷ್ಯನ ದೇಹದಲ್ಲಿ ವೈರಾಣು ನಿರೋಧಕ ಪ್ರತಿಕ್ರಿಯೆಯನ್ನು ಹುಟ್ಟುಹಾಕುತ್ತದೆ. ಅದಕ್ಕಾಗಿ ಅದು ಎಂಆರ್ ಎನ್ ಎ ಎಂಬುದನ್ನು ಬಳಸುತ್ತದೆ. ಮಾನವ ಜೀವಕೋಶಗಳನ್ನು ಬದಲಾಯಿಸದೆ, ಈ ಲಸಿಕೆ, ದೇಹದಲ್ಲಿ ಕೋವಿಡ್ ವೈರಾಣು ವಿರುದ್ಧ ನಿರೋಧಕ ವ್ಯವಸ್ಥೆ ಜಾಗೃತವಾಗುವಂತೆ ಪ್ರೇರೇಪಿಸುತ್ತದೆ. ಕೋವಿಡ್ ವೈರಾಣುವನ್ನೇ ಹೋಲುವ, ಪರಿವರ್ತಿತ ವೈರಾಣುವನ್ನು ಬಳಸಿ ಲಸಿಕೆ ನೀಡಲಾಗುತ್ತದೆ. ಆ ಮೂಲಕ ದೇಹದ ಜೀವಕೋಶಗಳಲ್ಲಿ ಆರ್ ಎನ್ ಎ ಪ್ರಚೋದಿಸಿ ಪ್ರತಿದಾಳಿ ನಡೆಸುವಂತೆ ಮಾಡಲಾಗುತ್ತದೆ. ಲಸಿಕೆಯಲ್ಲಿ ಎಂಆರ್ ಎನ್ ಎ ಅಂಶದ ಜೊತೆಗೆ ಅಲ್ಯುಮಿನಿಯಂನಂತಹ ಅಂಶ ಒಳಗೊಂಡಿರುತ್ತದೆ.
ಲಸಿಕೆ ಪಡೆದುಕೊಂಡವರಲ್ಲಿ ಅನಾರೋಗ್ಯ ಕಾಣಿಸಿಕೊಳ್ಳುವುದೇ?
ಲಸಿಕೆ ತೆಗೆದುಕೊಂಡ ಬಳಿಕ ಕೆಲವರಲ್ಲಿ ಮೈಕೈ ನೋವು, ಜ್ವರ ಕಾಣಿಸಿಕೊಳ್ಳಬಹುದು. ಆದರೆ, ಅದಾವುದೂ ಯಾವುದೇ ರೋಗವಲ್ಲ. ಯಾವುದೇ ಲಸಿಕೆ ಯಾವುದೇ ರೋಗ ತರುವುದಿಲ್ಲ. ಬದಲಾಗಿ ಅದು ರೋಗಕಾರಕ ಬಾಹ್ಯ ಜೀವಕಾಯಗಳ ವಿರುದ್ಧ(ವೈರಸ್, ಬ್ಯಾಕ್ಟೀರಿಯಾ) ದೇಹದ ರೋಗನಿರೋಧಕ ಶಕ್ತಿಯನ್ನು ವೃದ್ಧಿಸಲು, ಜಾಗೃತಗೊಳಿಸಲು, ಪ್ರತಿಕಾಯಗಳನ್ನು ವೃದ್ಧಿಸಲು ಜೀವಕೋಶಗಳಿಗೆ ಪ್ರೇರೇಪಿಸುತ್ತವೆ.
Also Read: ಫಿಜರ್ ಲಸಿಕೆ ಪಡೆದ ಮೇಲ್ ನರ್ಸ್ ಗೆ ಕೋವಿಡ್ ಸೋಂಕು ದೃಢ!
ಲಸಿಕೆಯಿಂದ ಅಲರ್ಜಿ ಆಗುವುದೆ?
ಲಸಿಕೆಯಿಂದಾಗಿ ಅಲರ್ಜಿಯಾಗುವ ಸಾಧ್ಯತೆಗಳು ವಿರಳ. ಏಕೆಂದರೆ, ಲಸಿಕೆ ಜನಬಳಕೆಗೆ ಅನುಮೋದನೆ ನೀಡುವ ಮುಂಚಿನ ಮಾನವ ಪ್ರಯೋಗದ ವೇಳೆಯೇ ಅಂತಹ ಅಲರ್ಜಿ ಸಾಧ್ಯತೆಗಳನ್ನು ಅಧ್ಯಯನ ನಡೆಸಿ ನಿವಾರಣೆ ಮಾಡಲಾಗಿರುತ್ತದೆ. ಆದಾಗ್ಯೂ ಲಸಿಕೆಯ ಮೇಲೆ ಅದರಲ್ಲಿ ಬಳಸಿರುವ ರಾಸಾಯನಿಕ ಅಂಶಗಳ ಮಾಹಿತಿ ನೀಡಲಾಗಿದ್ದು, ಅಂತಹ ವಸ್ತುಗಳಿಗೆ ಈ ಮೊದಲೇ ಅಲರ್ಜಿ ಹೊಂದಿರುವವರು ತೆಗೆದುಕೊಳ್ಳದೇ ಇರುವುದು ಕ್ಷೇಮ ಎಂದು ತಜ್ಞರು ಹೇಳುತ್ತಾರೆ.
ಈಗಾಗಲೇ ಕೋವಿಡ್ ಸೋಂಕಿಗೆ ಒಳಗಾದವರು ಲಸಿಕೆ ತೆಗೆದುಕೊಳ್ಳಬಹುದೆ?
ಹೌದು, ಈಗಾಗಲೇ ಕೋವಿಡ್ ಸೋಂಕಿಗೆ ಒಳಗಾಗಿ ಗುಣಮುಖರಾಗಿರುವವರು ಲಸಿಕೆ ತೆಗೆದುಕೊಳ್ಳಬಹುದು. ಈಗಾಗಲೇ ದುರ್ಬಲವಾಗಿರುವ ಅವರ ದೇಹದ ಸ್ವಾಭಾವಿಕ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಈ ಲಸಿಕೆ ನೆರವಾಗಲಿದೆ. ಆದರೆ, ಹಾಲಿ ಕೋವಿಡ್ ನಿಂದ ಬಳಲುತ್ತಿರುವವರು ಗುಣಮುಖರಾಗುವವರೆಗೆ ಲಸಿಕೆ ಪಡೆಯದಿರುವುದು ಕ್ಷೇಮ ಎಂಬುದು ಬಿಬಿಸಿಯ ಆರೋಗ್ಯ ವಿಷಯ ಸಂಪಾದಕಿ ಮಿಷಲ್ ರಾಬರ್ಟ್ಸ್ ಅಭಿಪ್ರಾಯ.
Also Read: ಭಾರತದ ಮಾರುಕಟ್ಟೆಗೆ ಯಾವಾಗ ಬರಲಿದೆ ಕರೋನಾ ಲಸಿಕೆ?
ಎಲ್ಲರೂ ಲಸಿಕೆ ತೆಗೆದುಕೊಂಡರೆ, ಕೋವಿಡ್ ಹರಡುವ ಭೀತಿ ಇರುವುದಿಲ್ಲವೆ?
ಕೋವಿಡ್ ಲಸಿಕೆ ಸೋಂಕಿನ ಗಂಭೀರ ಅಪಾಯಗಳಿಂದ ಪಾರುಮಾಡುತ್ತದೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಆ ಮೂಲಕ ಲಸಿಕೆ ಜೀವರಕ್ಷಕ ಎಂಬುದು ಗೊತ್ತಾಗಿದೆ. ಆದರೆ, ಸೋಂಕಿತರು ಮತ್ತೊಬ್ಬರಿಗೆ ಸೋಂಕು ಹರಡುವುದನ್ನು ತಡೆಯುವಲ್ಲಿ ಆ ಲಸಿಕೆ ಎಷ್ಟರಮಟ್ಟಿಗೆ ಪರಿಣಾಮಕಾರಿ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಲಸಿಕೆಯಿಂದ ವೈರಾಣು ಹರಡುವುದನ್ನೂ ತಡೆಯುವುದು ಸಾಧ್ಯವಾದರೆ ಆಗ ವೈರಾಣು ನಾಶದ ದಿಕ್ಕಿನಲ್ಲಿ ದೊಡ್ಡ ಸಾಧನೆಯಾಗಲಿದೆ.