ಈ ಲೇಖನದ ಆಡಿಯೋ ಆವೃತ್ತಿ ಇಲ್ಲಿದೆ. ಕ್ಲಿಕ್ ಮಾಡಿ ಕೇಳಿ
ರಾಜ್ಯ ವಿಧಾನಸಭೆ ಉಪ ಚುನಾವಣೆ ಮುಗಿದು ಫಲಿತಾಂಶವೂ ಬಂದಾಗಿದೆ. ಸ್ಪೀಕರ್, ಸುಪ್ರೀಂ ಕೋರ್ಟ್ ನಲ್ಲಿ ಅನರ್ಹರು ಎನಿಸಿಕೊಂಡ 15 ಮಂದಿ ಪೈಕಿ 11 ಮಂದಿ ಮತದಾರರಿಂದ ಅರ್ಹರು ಎನಿಸಿಕೊಂಡಾಗಿದೆ. 12 ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಭಾರಿಸುವ ಮೂಲಕ ಸರ್ಕಾರ ಸುಭದ್ರ ಎನ್ನುವಂತಾಗಿದೆ. 15 ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಹೆಚ್ಚು ಅಚ್ಚರಿಯ ಫಲಿತಾಂಶ ಸಿಕ್ಕಿರುವುದು ಕೆ.ಆರ್.ಪೇಟೆ, ಕಾಗವಾಡ, ರಾಣೆಬೆನ್ನೂರು ಕ್ಷೇತ್ರಗಳಲ್ಲಿ. ಅದರಲ್ಲೂ ಕೆ.ಆರ್.ಪೇಟೆಯಲ್ಲಿ ಬಿಜೆಪಿಯಿಂದ ನಾರಾಯಣಗೌಡ ಅವರು ಗೆಲ್ಲುವ ಮೂಲಕ ಕಮಲ ಅರಳಿಸಿದ್ದಾರೆ ಮಾತ್ರವಲ್ಲ, ಜೆಡಿಎಸ್ ಭದ್ರಕೋಟೆಯನ್ನು ಛಿದ್ರಗೊಳಿಸಿದ್ದಾರೆ.
ಇಲ್ಲಿ ನಾರಾಯಣಗೌಡ ಗೆದ್ದಿರಬಹುದು. ಬಿಜೆಪಿ ತನ್ನ ಖಾತೆ ತೆರೆದಿರಬಹುದು. ತಮ್ಮ ಹುಟ್ಟೂರು ಕೆ.ಆರ್.ಪೇಟೆಯಲ್ಲಿ ಗೆಲ್ಲಬೇಕೆಂಬ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕನಸು ನನಸಾಗಿರಬಹುದು. ಜೆಡಿಎಸ್ ಭದ್ರ ಕೋಟೆಯನ್ನು ಒಡೆದು ಹಾಕಿದ್ದೇವೆ ಎಂದು ಬಿಜೆಪಿಯವರು ಬೀಗಬಹುದು. ಆದರೆ, ಕೆ.ಆರ್.ಪೇಟೆಯಲ್ಲಿ ನಿಜವಾಗಿ ಗೆದ್ದಿರುವುದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ. ಕ್ಷೇತ್ರದ ಉಸ್ತುವಾರಿಯಾಗಿ ನಾರಾಯಣಗೌಡರನ್ನು ಗೆಲ್ಲಿಸುವ ಜವಾಬ್ದಾರಿ ಹೊತ್ತಿದ್ದ ವಿಜಯೇಂದ್ರ ಅದರಲ್ಲಿ ಯಶಸ್ಸು ಸಾಧಿಸಿದ್ದಾರೆ. ಈ ಹೋರಾಟದಲ್ಲಿ ವಿಜಯೇಂದ್ರ ಜತೆಗೆ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ಹಾಸನ ಕ್ಷೇತ್ರದ ಶಾಸಕ ಪ್ರೀತಂ ಗೌಡ ಅವರ ಸಹಕಾರ ಇದ್ದರೂ ಗೆಲುವಿನ ಒಟ್ಟಾರೆ ಶ್ರೇಯ ಸಲ್ಲಬೇಕಾಗಿರುವುದು ವಿಜಯೇಂದ್ರ ಹೂಡಿದ ಕಾರ್ಯತಂತ್ರಕ್ಕೆ.
ಬಿಜೆಪಿಗೆ ಠೇವಣಿಯೇ ಕಷ್ಟ ಎಂಬಂತಿದ್ದ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ನಾರಾಯಣ ಗೌಡ 9,509 ಮತಗಳಿಂದ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಲು ಕಾರಣವಾಗಿದ್ದು ಕೆ.ಆರ್.ಪೇಟೆ ಪಟ್ಟಣದ ಹೊರವಲಯದ ತೋಟದ ಮನೆ ಮತ್ತು 15 ದಿನ ಅಲ್ಲಿ ತಂಗಿದ್ದು ರಣತಂತ್ರಗಳನ್ನು ರೂಪಿಸಿ ಅದನ್ನು ಜಾರಿಗೊಳಿಸುವಲ್ಲಿ ಖುದ್ದಾಗಿ ಕೆಲಸ ಮಾಡಿದ ವಿಜಯೇಂದ್ರ. ತಂದೆ ಬಿ.ಎಸ್.ಯಡಿಯೂರಪ್ಪ ಅವರ ಹುಟ್ಟೂರು ಬೂಕನಕೆರೆಯನ್ನು ಒಳಗೊಂಡಿರುವ ಕೆ.ಆರ್.ಪೇಟೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಬೇಕು ಎಂದು ಪಣತೊಟ್ಟಿದ್ದ ಅವರು ಅಲ್ಲೇ ಇದ್ದು 43 ರೋಡ್ ಶೋ, 10 ಬೈಕ್ ರ‍್ಯಾಲಿ ಮತ್ತು 20ಕ್ಕಿಂತ ಹೆಚ್ಚು ಸಭೆಗಳನ್ನು ಮಾಡಿದ್ದರು. ಸಣ್ಣ ಸಣ್ಣ ಜಾತಿಗಳ ಜನರನ್ನು ತಮ್ಮೆಡೆ ಸೆಳೆದುಕೊಂಡರು. ಪ್ರತಿದಿನ ಊರಿನ ದೇವಸ್ಥಾನ, ಕಟ್ಟೆಗಳಲ್ಲಿ ಬಿಜೆಪಿ ಮುಖಂಡರು ಸಭೆ ಮಾಡಿದ್ದರಲ್ಲದೆ, ಕಾರ್ಯಕರ್ತರ ಜತೆ ಸೇರಿ ಊರಿನ ಮುಖಂಡರನ್ನು ಭೇಟಿಯಾಗಿದ್ದರು. ಬಹುತೇಕ ಎಲ್ಲಾ ಹಳ್ಳಿಗಳಿಗೂ ಖುದ್ದು ಭೇಟಿ ನೀಡಿದ್ದರು. ಸುಮಾರು 600 ಸ್ವಸಹಾಯ ಸಂಘಗಳನ್ನು ಸಂಪರ್ಕಿಸಿದ್ದರು.
ಇದಷ್ಟೇ ಮಾಡಿಲ್ಲ. ಊರಿನ ಸಮಸ್ಯೆ, ಸ್ವಸಹಾಯ ಸಂಘಗಳ ಸಮಸ್ಯೆ ಹೇಳಿಕೊಂಡವರಿಗೆ, ಬೇಡಿಕೆಗಳನ್ನು ಮುಂದಿಟ್ಟವರಿಗೆ ತನ್ನ ಮೊಬೈಲ್ ನಂಬರ್ ಹಾಗೂ ಆಪ್ತ ಸಹಾಯಕನ ಮೊಬೈಲ್ ನಂಬರ್ ಕೊಟ್ಟು ಫಲಿತಾಂಶ ಬಂದ ನಂತರ ಸಂಪರ್ಕಿಸುವಂತೆ ಹೇಳಿದ್ದರು. ಇದರ ಪರಿಣಾಮ ಜನ ನಾರಾಯಣಗೌಡ ಪರ ಮತ ಹಾಕಿದರು. ಬಿಜೆಪಿ ಗೆಲುವಿನ ನಗೆ ಬೀರಿತು. ಆದರೆ, ಇಷ್ಟಕ್ಕೇ ವಿಜಯೇಂದ್ರ ಅವರ ಕೆಲಸ ಮುಗಿದಿಲ್ಲ. ಯಾರಿಗೆಲ್ಲಾ ತಾವು ತಮ್ಮ ಮೊಬೈಲ್ ನಂಬರ್ ಕೊಟ್ಟಿದ್ದರೋ ಅವರು ಸಂಪರ್ಕಿಸಿದಾಗ ನೀಡಿದ ಭರವಸೆಯಂತೆ ಕೆಲಸ ಮಾಡಿಕೊಡಲಿದ್ದಾರೆ. ಈಗಾಗಲೇ ಕೆಲವರನ್ನು ಬೆಂಗಳೂರಿಗೆ ಕರೆಸಿಕೊಂಡು ಸಣ್ಣ ಪುಟ್ಟ ಸಮಸ್ಯೆಗಳಿಗೆ ಪರಿಹಾರವನ್ನೂ ಒದಗಿಸಿದ್ದಾರೆ.
ಭವಿಷ್ಯದಲ್ಲಿ ಕೆ.ಆರ್.ಪೇಟೆ ಮೇಲೆ ಕಣ್ಣಿಟ್ಟೇ ಇಷ್ಟೆಲ್ಲಾ ಮಾಡಿದ್ದು
ವಿಜಯೇಂದ್ರ ಇಷ್ಟೆಲ್ಲಾ ಮುತುವರ್ಜಿ ವಹಿಸಿ ಕ್ಷೇತ್ರದಲ್ಲಿ ಕೆಲಸ ಮಾಡಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿದ್ದಾರೆ. ತಮ್ಮ ಜವಾಬ್ದಾರಿಯನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ಅಲ್ಲಿಗೆ ಅವರ ಕೆಲಸ ಮುಕ್ತಾಯ ಎಂದು ಭಾವಿಸಿದ್ದರೆ ಅದು ಖಂಡಿತಾ ಸುಳ್ಳು. ಏಕೆಂದರೆ, ಅವರ ನಿಜವಾದ ಆಟ ಆರಂಭವಾಗಿರುವುದೇ ಈಗ. ಈ ಆಟವನ್ನು ಮುಂದುವರಿಸುವ ಮೂಲಕ ಕ್ಷೇತ್ರದಲ್ಲಿ ನಿಧಾನವಾಗಿ ತಮ್ಮ ಹಿಡಿತವನ್ನು ಗಟ್ಟಿಗೊಳಿಸುವುದು ವಿಜಯೇಂದ್ರ ಅವರ ಉದ್ದೇಶ.
ಇದಕ್ಕೆ ಕಾರಣವೂ ಇಲ್ಲದಿಲ್ಲ. ಕೆ.ಆರ್.ಪೇಟೆ ಕ್ಷೇತ್ರದ ವ್ಯಾಪ್ತಿಗೆ ಬರುವ ಭೂಕನಕೆರೆಯಲ್ಲಿ ಜನಿಸಿದ ಯಡಿಯೂರಪ್ಪ ಅವರು ನಂತರದಲ್ಲಿ ಕಾರಣಾಂತರಗಳಿಂದ ದೂರದ ಶಿಕಾರಿಪುರಕ್ಕೆ ತೆರಳಬೇಕಾಗಿ ಬಂದಿತ್ತು. ಅಲ್ಲಿಯೇ ಅವರು ತಮ್ಮ ರಾಜಕೀಯ ಭವಿಷ್ಯವನ್ನೂ ಕಂಡುಕೊಂಡರು. ಇದೀಗ ತಾತನ (ಯಡಿಯೂರಪ್ಪ ಅವರ ತಂದೆ) ಊರಿನಲ್ಲಿ ತಮ್ಮ ರಾಜಕೀಯ ಭವಿಷ್ಯವನ್ನು ಕಂಡುಕೊಳ್ಳುವುದು ವಿಜಯೇಂದ್ರ ಅವರ ಉದ್ದೇಶವಾಗಿದೆ. ಇದರ ಜತೆಗೆ ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿಯನ್ನು ಬೆಳೆಸಿ ತಾವೂ ನಾಯಕನಾಗಿ ಬೆಳೆಯುವುದು ಅವರ ಇಂಗಿತವಾಗಿದೆ.
ಶಿಕಾರಿಪುರದಲ್ಲಿ ಹೇಗೂ ತಂದೆ ಯಡಿಯೂರಪ್ಪ ಇದ್ದಾರೆ. ಸಹೋದರ ಬಿ.ವೈ.ರಾಘವೇಂದ್ರ ಇದ್ದಾರೆ. ಇವರ ಬಳಿಕ ಕುಟುಂಬದ ಇನ್ಯಾರಾದರೂ ಸದಸ್ಯರನ್ನು ನಿಲ್ಲಿಸಿ ಗೆಲ್ಲಿಸಿಕೊಳ್ಳುವುದು ಕಷ್ಟವೇನೂ ಅಲ್ಲ. ರಾಘವೇಂದ್ರ ಸಂಸದರಾಗಿರುವುದರಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಕುಟುಂಬದ ಹಿಡಿತ ಗಟ್ಟಿಯಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಮಂಡ್ಯ ಜಿಲ್ಲೆಯನ್ನು ತಮ್ಮ ಕಾರ್ಯಕ್ಷೇತ್ರವಾಗಿಸಿಕೊಂಡು ರಾಜಕೀಯದಲ್ಲಿ ಬೆಳೆಯಬೇಕು ಎಂಬುದು ವಿಜಯೇಂದ್ರ ಅವರ ಅಲೋಚನೆಯಾಗಿದೆ. ಈ ಕಾರಣಕ್ಕಾಗಿಯೇ ಅವರು ತಮ್ಮ ತಾತನ ಊರಾದ ಕೆ.ಆರ್.ಪೇಟೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಪ್ರಸ್ತುತ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಗೆದ್ದಿರುವ ನಾರಾಯಣಗೌಡ ಅವರು ಯಡಿಯೂರಪ್ಪ ಅವರ ಸರ್ಕಾರದಲ್ಲಿ ಮಂತ್ರಿಯಾಗಲಿದ್ದಾರೆ. ಆದರೆ, ಅವರು ಪೂರ್ಣಾವಧಿ ಬಿಜೆಪಿಯಲ್ಲೇ ಇರುತ್ತಾರೆ ಅಥವಾ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎಂಬ ಖಾತರಿ ಇಲ್ಲ. ಹೀಗಾಗಿ ಈಗಿನಿಂದಲೇ ಕ್ಷೇತ್ರದ ಜನರನ್ನು ತಮ್ಮತ್ತ ಸೆಳೆದುಕೊಂಡರೆ ಮುಂದೆ ಚುನಾವಣೆಗೆ ಸ್ಪರ್ಧಿಸಿ ಗೆಲ್ಲಲು ಅನುಕೂಲವಾಗುತ್ತದೆ. ತಂದೆಯ ನೆರಳು ಇಲ್ಲದೆ ಸ್ವಂತ ಬಲದಿಂದ ರಾಜಕೀಯ ನೆಲೆ ಕಂಡುಕೊಂಡರೆ ಆಗ ಬಿಜೆಪಿಯಲ್ಲೂ ಸ್ಥಾನಮಾನ ಸಿಕ್ಕೇ ಸಿಗುತ್ತದೆ. ಈ ಎಲ್ಲಾ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡೇ ವಿಜೇಯೇಂದ್ರ ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಅಹರ್ನಿಶಿ ಕೆಲಸ ಮಾಡಿ ಬಿಜೆಪಿಯನ್ನು ಗೆಲ್ಲಿಸಿದ್ದು.