ಕೇಂದ್ರೀಯ ಸಾಂಖ್ಯಿಕ ಕಚೇರಿ (ಸಿಎಸ್ಒ) ಶುಕ್ರವಾರ ಬಿಡುಗಡೆ ಮಾಡುವ ದ್ವಿತೀಯ ತ್ರೈಮಾಸಿಕದ ಜಿಡಿಪಿ ಅಂಕಿಅಂಶಗಳತ್ತ ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದಾರೆ. ಸತತ ಆರ್ಥಿಕ ಕುಸಿತ ದಾಖಲಾಗುತ್ತಿರುವ ಹೊತ್ತಿನಲ್ಲಿ ಪ್ರಸಕ್ತ ವಿತ್ತೀಯ ವರ್ಷದ ದ್ವಿತೀಯ ತ್ರೈಮಾಸಿಕದಲ್ಲಿನ ಜಿಡಿಪಿ ಬೆಳವಣಿಗೆ ಅತ್ಯಂತ ಕಳಪೆ ಆಗಿರಲಿದೆ ಮತ್ತು ಹೆಚ್ಚು ವಾಸ್ತವಿಕವಾಗಿರಲಿದೆ. ಆ ಮಟ್ಟದಿಂದ ಚೇತರಿಸಿಕೊಳ್ಳಲು ಹಲವು ತ್ರೈಮಾಸಿಕಗಳೇ ಬೇಕಾಗಬಹುದು ಎಂದು ಆರ್ಥಶಾಸ್ತ್ರಜ್ಞರು ಮತ್ತು ಆರ್ಥಿಕ ವಿಶ್ಲೇಷಕರು ಅಂದಾಜಿಸಿದ್ದಾರೆ.
ಈ ಅಂಕಿಅಂಶಗಳು ಪ್ರಧಾನಿ ನರೇಂದ್ರಮೋದಿಯ ವರ್ಚಸ್ಸಿನ ಮಟ್ಟಿಗೆ ಅತ್ಯಂತ ನಿರ್ಣಾಯಕ. ಇತ್ತೀಚಿನ ವಿಧಾನಸಭಾ ಚುನಾವಣೆಗಳಲ್ಲಿ ನಿರೀಕ್ಷಿತ ಫಲಿತಾಂಶ ಬಾರದೇ ಇರುವುದು, ಮಹಾರಾಷ್ಟ್ರದಲ್ಲಿ ಅಧಿಕಾರ ಕಳೆದುಕೊಂಡಿರುವುದು ಮತ್ತು ದೇಶದ ಆರ್ಥಿಕತೆ ಕುಸಿಯುತ್ತಿರುವುದು ಪ್ರಧಾನಿ ‘ಮೋದಿ ಬ್ರಾಂಡ್’ ಮೌಲ್ಯ ಕುಸಿಯುತ್ತಿರುವುದನ್ನು ಪ್ರಾತಿನಿಧಿಕವಾಗಿ ಸಂಕೇತಿಸುತ್ತದೆ.
ಎಲ್ಲರೂ ಜಿಡಿಪಿ ಬೆಳವಣಿಗೆ ಶೇ.4ರ ಆಜುಬಾಜಿನಲ್ಲಿರುತ್ತದೆ ಎಂದೇ ಅಂದಾಜಿಸುತ್ತಿದ್ದಾರೆ. ಹಾಗಾದರೆ, ಅಷ್ಟು ನಿರ್ಣಾಯಕವಾಗಿ ಹೇಳಲು ಕಾರಣವೇನು? ಜಿಡಿಪಿಯನ್ನು ಅಂದಾಜಿಸುವ ಮಾನದಂಡಗಳು ಯಾವುವು? ಅವುಗಳ ದ್ವಿತೀಯ ತ್ರೈಮಾಸಿಕದ ಅಂದರೆ, ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ ನಲ್ಲಿನ ಬೆಳವಣಿಗೆ ಎಷ್ಟಿದೆ ಎಂಬುದರತ್ತ ಒಂದು ವಿಸ್ತೃತ ಪಕ್ಷಿನೋಟ ಇಲ್ಲಿದೆ.
ತರ್ಕರಹಿತ ಅಪನಗದೀಕರಣ ಮತ್ತು ತರಾತುರಿಯಲ್ಲಿ ಜಾರಿಗೆ ತಂದ ಸರಕು ಮತ್ತು ಸೇವಾ ತೆರಿಗೆ ಯೋಜನೆ ನಂತರದಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಕುಸಿಯುತ್ತಲೇ ಇದೆ. ಪ್ರಸಕ್ತ ವಿತ್ತೀಯ ವರ್ಷದ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ಶೇ.5ರಷ್ಟಿತ್ತು. ಇದು 2013ರಿಂದೀಚೆಗೆ ಅತಿ ನಿಧಾನಗತಿಯ ಬೆಳವಣಿಗೆ ಆಗಿತ್ತು. ದ್ವಿತೀಯ ತ್ರೈಮಾಸಿಕದ ಜಿಡಿಪಿ ಅಂಕಿಅಂಶಗಳನ್ನು ಶುಕ್ರವಾರ ಸಿಎಸ್ಒ ಬಿಡುಗಡೆ ಮಾಡಲಿದೆ. ದ್ವಿತೀಯ ತ್ರೈಮಾಸಿಕದ ಜಿಡಿಪಿ ಶೇ.5ಕ್ಕಿಂತ ಕೆಳಮಟ್ಟದಲ್ಲಿ ಮತ್ತು ಶೇ.4- 4.2ರ ಆಜುಬಾಜಿನಲ್ಲಿರುತ್ತದೆ ಎಂಬ ಅಂದಾಜು ಬಹುತೇಕ ಅರ್ಥಶಾಸ್ತ್ರಜ್ಞರು ಮತ್ತು ಆರ್ಥಿಕ ವಿಶ್ಲೇಷಕರದ್ದು.
ಜಿಡಿಪಿಯನ್ನು ಲೆಕ್ಕ ಹಾಕುವಾಗ ಹಲವು ವಲಯಗಳಲ್ಲಿ ಆಯಾ ತ್ರೈಮಾಸಿಕದ ಬೆಳವಣಿಗೆಯನ್ನು ಮಾನದಂಡವಾಗಿ ಬಳಸಲಾಗುತ್ತದೆ. ಎಂಟು ಪ್ರಮುಖ ಕೈಗಾರಿಕೆಗಳನ್ನೊಳಗೊಂಡ ಪ್ರಮುಖ ಕೈಗಾರಿಕೆಗಳ ಸೂಚ್ಯಂಕ ನಿರ್ಣಾಯಕವಾದುದು. ಈ ಸೂಚ್ಯಂಕವು ವಿದ್ಯುತ್, ಕಬ್ಬಿಣ, ರಿಫೈನರಿ ಉತ್ಪನ, ಕಚ್ಚಾ ತೈಲ, ಕಲ್ಲಿದ್ದಲು, ಸಿಮೆಂಟ್, ನೈಸರ್ಗಿಕ ಅನಿಲ ಮತ್ತು ರಸಗೊಬ್ಬರ ಉದ್ಯಮಗಳನ್ನು ಒಳಗೊಂಡಿರುತ್ತದೆ.
ಪ್ರಸ್ತುತ ಜಿಡಿಪಿ ಅಂಕಿ ಅಂಶ ಪ್ರಕಟಿಸಬೇಕಿರುವ ಎರಡನೇ ತ್ರೈಮಾಸಿಕದಲ್ಲಿ ಅಂದರೆ, ಜುಲೈ, ಆಗಸ್ಟ್ ,ಸೆಪ್ಟೆಂಬರ್ ನಲ್ಲಿ 8 ಪ್ರಮುಖ ಕೈಗಾರಿಕೆಗಳ ಸಾಧನೆ ತೀರಾ ಕಳಪೆಯಾಗಿದೆ. ಜುಲೈನಲ್ಲಿ ಶೇ.2.7ರಷ್ಟು ಇದ್ದದ್ದು ಆಗಸ್ಟ್ ನಲ್ಲಿ ಶೇ.-0.5 ಮತ್ತು ಸೆಪ್ಟೆಂಬರ್ ನಲ್ಲಿ ಶೇ. -5.4ಕ್ಕೆಕುಸಿದಿದೆ. ಕಳೆದ ವರ್ಷದ ದ್ವಿತೀಯ ತ್ರೈಮಾಸಿಕದಲ್ಲಿ ಶೇ.7.8ರಷ್ಟು ಬೆಳವಣಿಗೆಗೆ ಹೋಲಿಸಿದರೆ, ಈ ವರ್ಷದ ಋಣಾತ್ಮಕ ಬೆಳವಣಿಗೆಯು ಜಿಡಿಪಿ ತ್ವರಿತ ಕುಸಿತಕ್ಕೆ ಕಾರಣವಾಗಲಿದೆ. ಸಾಮಾನ್ಯವಾಗಿ ಜಿಡಿಪಿ ಬೆಳವಣಿಗೆ ಸ್ಥಿರತೆ ಕಾಯ್ದುಕೊಳ್ಳಬೇಕಾದರೆ ಯಾವ ವಲಯವೂ ಋಣಾತ್ಮಕ ಬೆಳವಣಿಗೆ ದಾಖಲಿಸಬಾರದು.
ರೈಲ್ವೆ ಸರಕು ಸಾಗಣೆ ಪ್ರಮಾಣವು ಜಿಡಿಪಿ ಅಳತೆಯ ಮತ್ತೊಂದು ಮಾನದಂಡ. ಜುಲೈ, ಆಗಸ್ಟ್, ಸೆಪ್ಟೆಂಬರ್ ನಲ್ಲಿ ಕ್ರಮವಾಗಿ ಶೇ.1.6, ಶೇ.-6.2 ಮತ್ತು ಶೇ.-6.6 ದಾಖಲಾಗಿದೆ. ಕಳೆದ ವರ್ಷ ದ್ವಿತೀಯ ತ್ರೈಮಾಸಿಕದಲ್ಲಿ ರೈಲ್ವೆ ಸರಕು ಸಾಗಣೆಯು ಶೇ.4.1ರಷ್ಟು ಬೆಳವಣಿಗೆ ದಾಖಲಿಸಿತ್ತು. ಅಂದರೆ, ಕಳೆದ ವರ್ಷದ ಶೇ.4.1ರ ಬೆಳವಣಿಗೆಗೆ ವ್ಯತಿರಿಕ್ತವಾಗಿ ಈ ಸಾಲಿನಲ್ಲಿ ಋಣಾತ್ಮಕ ಬೆಳವಣಿಗೆ ದಾಖಲಾಗಿದೆ.
ನಂತರದ್ದು, ಬಂದರುಗಳಲ್ಲಿನ ಸರಕು ಸಾಗಣೆ ಪ್ರಮಾಣ. ಜುಲೈನಲ್ಲಿ ಶೇ.3.2 ಆಗಸ್ಟ್ ನಲ್ಲಿ ಶೇ.1.2 ಮತ್ತು ಸೆಪ್ಟೆಂಬರ್ ನಲ್ಲಿ ಶೇ.-0.5ರಷ್ಟಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಶೇ.7.2ರಷ್ಟಿತ್ತು. ಅದಕ್ಕೆ ಹೋಲಿಸಿದರೆ ಪ್ರಸಕ್ತ ಸಾಲಿನ ಬಂದರು ಸರಕು ಸಾಗಣೆ ಬೆಳವಣೆಗೆ ತೀರಾ ಅತ್ಯಲ್ಪ ಮತ್ತು ಸೆಪ್ಟೆಂಬರ್ ನಲ್ಲಿ ಋಣಾತ್ಮಕ ಬೆಳವಣಿಗೆ ಸಾಧಿಸಿದೆ.
ನಂತರ ಪ್ರಮುಖ ಮಾನದಂಡವೆಂದರೆ ಬ್ಯಾಂಕುಗಳ ಸಾಲ ವಿತರಣೆ. ಇದು ಬಹುತೇಕ ಎಲ್ಲಾ ವಲಯಗಳಲ್ಲಿನ ಸಾಲ ನೀಡಿಕೆಯನ್ನು ಒಳಗೊಂಡಿರುತ್ತದೆ. ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ ನಲ್ಲಿ ಕ್ರಮವಾಗಿ ಶೇ.6.1 ಶೇ.3.9 ಮತ್ತು ಶೇ.2.7ಕ್ಕೆ ಕುಸಿದಿದೆ. ಏಪ್ರಿಲ್ ತಿಂಗಳಲ್ಲಿ ಶೇ.6.9ರಷ್ಟಿತ್ತು. ನಂತರ ಇಳಿಜಾರಿನಲ್ಲಿ ಸಾಗುತ್ತಾ ಬಂದಿದೆ. ಈ ಪ್ರವೃತ್ತಿ ಮುಂದುವರೆದೆರೆ ಮುಂಬರುವ ತ್ರೈಮಾಸಿಕಗಳಲ್ಲಿ ಋಣಾತ್ಮಕ ಬೆಳವಣಿಗೆ ಸಾಧಿಸುವ ಸಾಧ್ಯತೆಯನ್ನು ತಳ್ಳಿಹಾಕಲಾಗದು.
ದೇಶದ ವಿವಿಧ ವಲಯಗಳ ರಫ್ತು ಪ್ರಮಾಣವನ್ನು ಜಿಡಿಪಿ ಲೆಕ್ಕಹಾಕಲು ಪರಿಗಣಿಸಲಾಗುತ್ತದೆ. ಜುಲೈನಲ್ಲಿ ಶೇ.2ರಷ್ಟು ಬೆಳವಣಿಗೆ ದಾಖಲಿಸಿದ್ದ ರಫ್ತು ಆಗಸ್ಟ್ ತಿಂಗಳಲ್ಲಿ ಶೇ.-4ಕ್ಕೆ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಶೇ.-8ಕ್ಕೆ ಕುಸಿದಿದೆ. ಇದು ತೀವ್ರತರವಾದ ಕುಸಿತದ ಪ್ರಮಾಣ. ಕಳೆದ ವರ್ಷ ಇದೇ ಅವಧಿಯಲ್ಲಿ ರಫ್ತು ಶೇ.7.2ರಷ್ಟು ದಾಖಲಾಗಿತ್ತು. ಈಗ ಲಭ್ಯವಿರುವ ಅಕ್ಟೋಬರ್ ತಿಂಗಳ ಅಂಕಿ ಅಂಶಗಳೂ ಋಣಾತ್ಮಕ ಬೆಳವಣಿಗೆಯನ್ನೇ ತೋರಿಸುತ್ತಿರುವುದರಿಂದ ಕುಸಿತ ಆಬಾಧಿತ.
ಪೆಟ್ರೋಲಿಯಂ ಉತ್ಪನ್ನಗಳ ಬಳಕೆಯು ಡಿಜಿಪಿಯ ಪ್ರಮುಖ ಮಾನದಂಡಗಳಲ್ಲಿ ಒಂದು. ಜುಲೈ ಮತ್ತು ಆಗಸ್ಟ್ ನಲ್ಲಿ ಶೇ.3.3 ಮತ್ತು ಶೇ.3ರಷ್ಟು ಬೆಳವಣಿಗೆ ದಾಖಲಾಗಿದ್ದರೆ, ಸೆಪ್ಟೆಂಬರ್ ನಲ್ಲಿ ಶೇ0.3ರಷ್ಟು ಮಾತ್ರ ದಾಖಲಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಶೇ.9.5ರಷ್ಟು ಬೆಳವಣಿಗೆ ದಾಖಲಾಗಿದ್ದನ್ನು ಗಮನಿಸಿದರೆ ಪ್ರಸಕ್ತ ಅಂಕಿಅಂಶಗಳು ಜಿಡಿಪಿ ತೀವ್ರ ಕುಸಿತದ ಮುನ್ಸೂಚನೆ ನೀಡುತ್ತಿವೆ.

ದೇಶೀಯ ವಾಣಿಜ್ಯ ವಾಹನಗಳ ಮಾರಾಟವು ಜಿಡಿಪಿಯ ಲೆಕ್ಕಚಾರದಲ್ಲಿ ಪ್ರಮುಖ ಮಾನದಂಡ. ಎಲ್ಲಾ ರೀತಿಯ ವಾಹನಗಳ ಮಾರಾಟ ಕುಸಿತದ ಹಾದಿಯಲ್ಲಿದೆ. ವಾಣಿಜ್ಯ ವಾಹನಗಳ ಮಾರಾಟವು ಜುಲೈ ತಿಂಗಳಲ್ಲಿ ಶೇ.-26 ರಷ್ಟಿದ್ದರೆ, ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ತಲಾ ಶೇ.-39 ರಷ್ಟು ಕುಸಿತ ಕಂಡಿದೆ. ಇದು ದಶಕಗಳಲ್ಲೇ ಅತ್ಯಂತ ತೀವ್ರಪ್ರಮಾಣದ ಕುಸಿತವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಶೇ.76ರಷ್ಟು ಅಭಿವೃದ್ಧಿ ದಾಖಲಿಸಿದ್ದನ್ನು ಗಮನಿಸಿದರೆ ಒಟ್ಟಾರೆ ಕುಸಿತವು ಯಾರೂ ಊಹಿಸಲಾರದಷ್ಟಾಗಿದೆ. ದೇಶೀಯ ಪ್ರಯಾಣಿಕರ ವಾಹನಗಳ ಮಾರಾಟ ಸಹ ಋಣಾತ್ಮಕ ಬೆಳವಣಿಗೆ ದಾಖಲಿಸಿದೆ. ಮೂರು ತಿಂಗಳಲ್ಲಿ ಕ್ರಮವಾಗಿ ಶೇ.-31, ಶೇ.-32 ಮತ್ತು ಶೇ.-24ರಷ್ಟು ಕುಸಿತ ದಾಖಲಿಸಿದೆ. ಟ್ರ್ಯಾಕ್ಟರ್ ಗಳ ಮಾರಾಟದ ಕತೆಯೂ ಇದೆ. ಮೂರು ತಿಂಗಳಲ್ಲಿ ಶೇ.-13, ಶೇ.-16 ಮತ್ತು ಶೇ.-4.2ರಷ್ಟು ಕುಸಿದಿದೆ. ದ್ವಿಚಕ್ರವಾಹನಗಳ ಮಾರಾಟವು ತೀವ್ರ ಕುಸಿತ ದಾಖಲಿಸಿದೆ. ಜುಲೈನಲ್ಲಿ ಶೇ.-17ರಷ್ಟಿದ್ದರೆ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ತಲಾ ಶೇ.-22ರಷ್ಟು ಕುಸಿತ ದಾಖಲಾಗಿದೆ.
ದೇಶೀಯ ವಿಮಾನ ಪ್ರಯಾಣಿಕರ ಹಾರಾಟ ಪ್ರಮಾಣವು ಧನಾತ್ಮಕವಾಗಿದ್ದರೂ ಇಳಿಜಾರಿನಲ್ಲಿ ಸಾಗಿದೆ. ಜುಲೈನಲ್ಲಿ ಶೇ.1.2ರಷ್ಟು ಇದ್ದದ್ದು ಆಗಸ್ಟ್ ನಲ್ಲಿ ಶೇ.3.2ಕ್ಕೆ ಏರಿದ್ದು ಸೆಪ್ಟೆಂಬರ್ ನಲ್ಲಿ ಶೇ.0.2ಕ್ಕೆ ಕುಸಿದಿದೆ.
ವ್ಯಾಪಾರ, ಹೋಟೆಲ್, ಸಾರಿಗೆ ಸಂಚಾರದ ಅಂಕಿಅಂಶಗಳು ಲಭ್ಯವಿಲ್ಲ. ಜತೆಗೆ ರಿಯಲ್ ಎಸ್ಟೇಟ್ ಅಂಕಿಅಂಶಗಳೂ ಲಭ್ಯವಿಲ್ಲ. ಜಿಡಿಪಿ ಲೆಕ್ಕಾಚಾರದಲ್ಲಿ ಇವುಗಳ ವೇಟೇಜ್ ಗಣನೀಯವಿದೆ. ಸಾಮಾನ್ಯವಾಗಿ ಅಂಕಿಅಂಶಗಳು ಲಭ್ಯವಿಲ್ಲದ ವಲಯಗಳ ಅಂಕಿಅಂಶಗಳನ್ನೂ ಜಿಡಿಪಿ ವ್ಯಾಪ್ತಿ ಪರಿಗಣಿಸಲಾಗುತ್ತದೆ ಮತ್ತು ಹಿಂದಿನ ನಾಲ್ಕು ಅಥವಾ ಎಂಟು ತ್ರೈಮಾಸಿಕಗಳ ಬೆಳವಣಿಕೆಯ ಸರಾಸರಿಯನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಾಗುತ್ತದೆ. ಅಂಕಿ ಅಂಶಗಳು ಲಭ್ಯವಾದ ನಂತರ ಪರಿಷ್ಕೃತ ಜಿಡಿಪಿ ಅಂಕಿ ಅಂಶಗಳನ್ನು ಪ್ರಕಟಿಸುವಾಗ ಇವುಗಳನ್ನು ಸೇರ್ಪಡೆ ಮಾಡಲಾಗುತ್ತದೆ.
ಮೇಲೆ ಪ್ರಸ್ತಾಪಿಸಿದ ಎಲ್ಲಾ ವಲಯಗಳಲ್ಲೂ ಬೆಳವಣಿಗೆ ಇಳಿಜಾರಿನಲ್ಲಿ ಸಾಗಿದೆ ಇಲ್ಲವೇ ಋಣಾತ್ಮಕ ಬೆಳವಣಿಗೆ ದಾಖಲಾಗಿದೆ. ಈ ಕಾರಣಕ್ಕಾಗಿಯೇ ಭಾರಿ ಪ್ರಮಾಣದಲ್ಲಿ ಜಿಡಿಪಿ ಕುಸಿಯುವ ಸಾಧ್ಯತೆಯನ್ನು ನಿರೀಕ್ಷಿಸಲಾಗುತ್ತಿದೆ. ಅಂಕಿಅಂಶಗಳನ್ನು ತಿರುಚದೇ ಪ್ರಮಾಣಿಕ ಮತ್ತು ನಿಖರ ಅಂಕಿಅಂಶಗಳನ್ನು ಪ್ರಕಟಿಸಿದ್ದೇ ಆದರೆ, ಜಿಡಿಪಿ ಶೇ.4.2-4.4ರ ಆಜುಬಾಜಿನಲ್ಲಿರುವುದು ನಿಶ್ಛಿತ.