ಕಳೆದ 24 ಗಂಟೆಗಳಲ್ಲಿ ಬೆಂಗಳೂರು ನಗರವೊಂದರಲ್ಲೇ 107 ಹೊಸ ಪ್ರಕರಣಗಳು ಪತ್ತೆಯಾಗಿವೆ. ನಗರದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ1505 ತಲುಪಿದೆ. ಒಟ್ಟು 435 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಕರೋನಾ ಸೋಂಕಿನಿಂದಾಗಿ ರಾಜ್ಯ ರಾಜಧಾನಿಯಲ್ಲಿ 73 ಮಂದಿ ಮರಣಹೊಂದಿದ್ದಾರೆ. ಕರೋನಾ ಕಂಡು ಬಂದಿದ್ದ ಓರ್ವ ವ್ಯಕ್ತಿ ಬೇರೆ ಕಾರಣಗಳಿಂದಾಗಿ ಮೃತಪಟ್ಟಿದ್ದಾರೆ ಎಂದು ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ ಜೂನ್ 23 ರ ಸಂಜೆ ಬಿಡುಗಡೆಗೊಳಿಸಿರುವ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಬೆಂಗಳೂರಿನಲ್ಲಿ ಕರೋನಾ ಪ್ರಕರಣಗಳ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಸರ್ಕಾರದ ವೈಫಲ್ಯವನ್ನು ಟೀಕಿಸಿರುವ ಕುಮಾರಸ್ವಾಮಿ, ʼಜನರ ಪ್ರಾಣದ ಜೊತೆ ಚೆಲ್ಲಾಟ ನಿಲ್ಲಿಸಿ. ಕೆಲವೇ ಪ್ರದೇಶಗಳಲ್ಲಿ ಸೀಲ್ ಡೌನ್ ಲಾಕ್ ಡೌನ್ ಮಾಡಿದರೆ ಪ್ರಯೋಜನವಿಲ್ಲ. ಬೆಂಗಳೂರು ನಿವಾಸಿಗಳು ಬದುಕುಳಿಯಬೇಕಾದರೆ ಈ ಕೂಡಲೇ ಕನಿಷ್ಟ 20 ದಿನ ಸಂಪೂರ್ಣ ಲಾಕ್ ಡೌನ್ ಮಾಡಿ. ಇಲ್ಲವಾದಲ್ಲಿ ಬೆಂಗಳೂರು ಮತ್ತೊಂದು ಬ್ರೆಜಿಲ್ ಆಗಲಿದೆ. ಜನರ ಆರೋಗ್ಯ ಮುಖ್ಯವೇ ಹೊರತು ಆರ್ಥಿಕತೆಯಲ್ಲ.ʼ ಎಂದು ಟ್ವೀಟ್ ಮಾಡಿದ್ದಾರೆ.
ಜನರ ಪ್ರಾಣದ ಜೊತೆ ಚೆಲ್ಲಾಟ ನಿಲ್ಲಿಸಿ. ಕೆಲವೇ ಪ್ರದೇಶಗಳಲ್ಲಿ ಸೀಲ್ ಡೌನ್ ಲಾಕ್ ಡೌನ್ ಮಾಡಿದರೆ ಪ್ರಯೋಜನವಿಲ್ಲ. ಬೆಂಗಳೂರು ನಿವಾಸಿಗಳು ಬದುಕುಳಿಯಬೇಕಾದರೆ ಈ ಕೂಡಲೇ ಕನಿಷ್ಟ 20 ದಿನ ಸಂಪೂರ್ಣ ಲಾಕ್ ಡೌನ್ ಮಾಡಿ. ಇಲ್ಲವಾದಲ್ಲಿ ಬೆಂಗಳೂರು ಮತ್ತೊಂದು ಬ್ರೆಜಿಲ್ ಆಗಲಿದೆ. ಜನರ ಆರೋಗ್ಯ ಮುಖ್ಯವೇ ಹೊರತು ಆರ್ಥಿಕತೆಯಲ್ಲ.
1/3— H D Kumaraswamy (@hd_kumaraswamy) June 23, 2020
ಬೆಂಗಳೂರು ಸೇರಿ ರಾಜ್ಯಾದ್ಯಂತ ಒಟ್ಟು 322 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಇದುವರೆಗೂ 9,721 ಕರೋನಾ ಪ್ರಕರಣಗಳು ರಾಜ್ಯದಲ್ಲಿ ಧೃಡಪಟ್ಟಿವೆ. ಇಂದು 274 ಮಂದಿ ಕರೋನಾ ಸೋಂಕಿತರು ಸೋಂಕಿನಿಂದ ಚೇತರಿಸಿಕೊಂಡಿದ್ದು ಒಟ್ಟು 6004 ಮಂದಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ.
ರಾಜ್ಯದಲ್ಲಿ ಸದ್ಯ 3563 ಸಕ್ರಿಯ ಕರೋನಾ ಪ್ರಕರಣಗಳಿವೆ. ತೀವ್ರ ನಿಗಾ ಘಟಕದಲ್ಲಿ 120 ಮಂದಿ ಕರೋನಾ ಸೋಂಕಿತರನ್ನು ಇಡಲಾಗಿದೆ. ಇಂದು ಸೋಂಕಿನಿಂದ 08 ಮಂದಿ ಮೃತಪಟ್ಟರೆ, ಒಟ್ಟು ಮೃತಪಟ್ಟವರ ಸಂಖ್ಯೆ 150 ತಲುಪಿದೆ.
ಇನ್ನು ಭಾರತದಲ್ಲಿ 14,933 ಹೊಸ ಕರೋನಾ ಪ್ರಕರಣಗಳು ಕಂಡುಬಂದಿದೆ. ದೇಶದಲ್ಲಿ ಧೃಡಪಟ್ಟ ಪ್ರಕರಣಗಳ ಸಂಖ್ಯೆ 4,40,215 ಕ್ಕೇರಿದೆ. ಇಂದು 10,994 ಮಂದಿ ಸೋಂಕಿನಿಂದ ಚೇತರಿಸಿರುವುದಾಗಿ ವರದಿ ಬಂದಿದೆ. ದೇಶದಲ್ಲಿ ಒಟ್ಟು 2,48,190 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಕಳೆದ ದಿನ 312 ಮಂದಿ ಸೋಂಕು ಕಾರಣಕ್ಕೆ ಮೃತಪಟ್ಟಿದ್ದಾರೆ. ದೇಶಾದ್ಯಂತ 14,011 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.
