ಸಿಲಿಕಾನ್ ಸಿಟಿ, ಉದ್ಯಾನ ನಗರಿ ಎಂದೆಲ್ಲಾ ಕರೆಸಿಕೊಳ್ಳುವ ಬೆಂಗಳೂರಿನ ಮರಗಳನ್ನು ನೋಡುವುದೇ ಒಂದು ಸೊಬಗು. ನಗರದ ರಸ್ತೆಗಳ ಇಕ್ಕೆಲಗಳಲ್ಲಿ ಕಾಣ ಸಿಗುವ ಮರಗಳು ಈ ಹಿಂದೆ ಪಾದಾಚಾರಿಗಳಿಗೆ ತಂಪು ನೀಡುತ್ತಿದ್ದರೆ, ಇತ್ತೀಚಿನ ದಿನಗಳಲ್ಲಿ ಅವು ಜಾಹಿರಾತುಗಳನ್ನು ಅಂಟಿಸುವ ಜಾಗಗಳಾಗಿ ಮಾರ್ಪಟ್ಟಿವೆ. ಇದರಿಂದಾಗಿ ನಗರದ ಅಂದ ಕೆಡುವುದು ಮಾತ್ರವಲ್ಲದೇ, ಮರಗಳಿಗೂ ಹಾನಿಯಾಗುತ್ತಿದೆ. ಈ ಕಾರಣಕ್ಕೆ ಸಂಪಂಗಿರಾಮ ನಗರದ ವಿನೋದ್ ಎಂಬುವವರು, ʼಮೊಳೆ ಮುಕ್ತ ಮರʼ ಎಂಬ ಅಭಿಯಾನವನ್ನು ಆರಂಭಿಸಿದ್ದಾರೆ.
ಸಂಪಂಗಿರಾಮ ನಗರದ ಮರಗಳಲ್ಲಿನ ಮೊಳೆಗಳನ್ನು ತೆಗೆದ ನಂತರ ಬೆಂಗಳೂರಿನ ಹಲವು ಕಡೆಗಳಲ್ಲಿ ಮರಗಳ ಪರಿಸ್ಥಿತಿ ಇದೇ ರೀತಿ ಇರುವುದನ್ನು ಗಮನಿಸಿದ ವಿನೋದ್ ಅವರು, ತಮ್ಮ ಸ್ನೇಹಿತರ ಸಹಾಯದಿಂದ ಇತರೆಡೆಗಳಲ್ಲಿ ಮರಗಳಿಂದ ಮೊಳೆಗಳನ್ನು ತೆಗೆಯಲು ಆರಂಭಿಸಿದ್ದಾರೆ. ಈ ಕಾಯಕಕ್ಕೆ ಈಗ ಅವರು ಇತರರ ಸಹಕಾರವನ್ನೂ ಕೋರಿದ್ದು, ಮರಗಳಿಂದ ಮೊಳೆಗಳನ್ನು ತೆಗೆದುಹಾಕಿ ʼNail free treeʼ ಎಂಬ ಹ್ಯಾಷ್‌ಟ್ಯಾಗ್‌ನೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಫೋಟೊ ಹಾಕಲು ಜನರನ್ನು ಕೇಳಿಕೊಂಡಿದ್ದಾರೆ.
DRDOನಲ್ಲಿ ತಾಂತ್ರಿಕ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿನೋದ್ ಅವರು ಶಿಕ್ಷಣ ಎಂಬ ಯುವಕರ ಗುಂಪಿನ ಸಹಾಯದೊಂದಿಗೆ ಸರ್ಕಾರಿ ಶಾಲೆಗಳ ಮಕ್ಕಳಿಗೆ, ಕಂಪ್ಯೂಟರ್, ಸ್ಪೋಕನ್ ಇಂಗ್ಲಿಷ್ ತರಗತಿಗಳನ್ನು ನಡೆಸುತ್ತಿದ್ದಾರೆ. ಐಪಿಎಸ್ ಅಧಿಕಾರಿ ರವಿ ಡಿ ಚೆನ್ನಣ್ಣನವರ್ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರ ಮಾರ್ಗದರ್ಶನದಲ್ಲಿ ನಗರದ ಏಳು ಸರ್ಕಾರಿ ಶಾಲೆಗಳಲ್ಲಿ ಈ ತರಗತಿಗಳು ನಡೆಯುತ್ತಿವೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಒಟ್ಟಿನಲ್ಲಿ, ಪರಿಸರ ಹಾಗೂ ಶಿಕ್ಷಣದ ಕುರಿತು ಕಾಳಜಿ ಹೊಂದಿರುವ ವಿನೋದ್ ಅವರ ಈ ಕೆಲಸಕ್ಕೆ ಅಭಿನಂದನೆಗಳು ಸಲ್ಲಲೇಬೇಕು. ಇದರೊಂದಿಗೆ, ಸಾರ್ವಜನಿಕರು ಕೂಡಾ ಮೊಳೆ ಮುಕ್ತ ಮರ ಅಭಿಯಾಕ್ಕೆ ಕೈಜೋಡಿಸಿದಲ್ಲಿ, ನಗರದ ಮರಗಳು ಶೀಘ್ರವೇ ಮೊಳೆ ಮುಕ್ತವಾಗುವುದರಲ್ಲಿ ಸಂಶಯವಿಲ್ಲ.