ಮತ್ತೆ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಅರ್ಥಾತ್ ನಾಯಕತ್ವ ಬದಲಾವಣೆ ವಿಷಯ ಚರ್ಚೆ ಆಗುತ್ತಿದೆ. ರಾಜ್ಯ ಸರ್ಕಾರದಲ್ಲಿ ಹಾಗೂ ರಾಜ್ಯ ರಾಜಕೀಯದಲ್ಲಿ ಆಗುತ್ತಿರುವ ಸಣ್ಣಪುಟ್ಟ ಬದಲಾವಣೆಗಳಿಗೆ ಬಣ್ಣ ಬಳಿದು ಈ ಸಂಚಲನಗಳು ಮುಖ್ಯಮಂತ್ರಿ ಕುರ್ಚಿಗೆ ಸಂಚಕಾರ ತರಲಿವೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಆದರೆ ‘ಪ್ರತಿಧ್ವನಿ‘ಗೆ ಲಭ್ಯವಾಗಿರುವ ಖಚಿತ ಮಾಹಿತಿಗಳ ಪ್ರಕಾರ ಮುಖ್ಯಮಂತ್ರಿ ಕುರ್ಚಿಯಲ್ಲಿ ಬಿ.ಎಸ್. ಯಡಿಯೂರಪ್ಪ ಮುಂದುವರೆಯಲು ಯಾವುದೇ ಅಪಾಯ ಸದ್ಯಕ್ಕಿಲ್ಲ.
ಕರೋನಾ ಕಂಟಕ
ಕರೋನಾ ಆರಂಭಿಕ ಹಂತದಲ್ಲಿದ್ದಾಗ ಕರ್ನಾಟಕದ ಸ್ಥಿತಿ ಉತ್ತಮವಾಗಿತ್ತು. ಮುಂಬೈ, ದೆಹಲಿ, ಚೆನ್ನೈ, ಅಹಮದಾಬಾದ್, ಪುಣೆ, ಕೋಲ್ಕತ್ತಾನಂಥ ನಗರಗಳು ಕರೋನಾ ಹೊಡೆತಕ್ಕೆ ಕಂಗೆಟ್ಟಿದ್ದಾಗ ಬೆಂಗಳೂರು ‘ಬೆಸ್ಟ್’ ಎನಿಸಿಕೊಂಡಿತ್ತು. ಪ್ರದಾನ ಮಂತ್ರಿ ನರೇಂದ್ರ ಮೋದಿ ಸ್ವತಃ ಯಡಿಯೂರಪ್ಪ ಅವರೊಂದಿಗೆ ಮಾತನಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆನಂತರ ಯಡಿಯೂರಪ್ಪ ಟ್ವೀಟ್ ಮಾಡಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳನ್ನು ಅಭಿನಂದಿಸಿದ್ದರು. ಆದರೀಗ ಪರಿಸ್ಥಿತಿ ಭಿನ್ನವಾಗಿದೆ. ರಾಜ್ಯದಲ್ಲಿ ಪ್ರತಿದಿನ 5 ಸಾವಿರಕ್ಕೂ ಹೆಚ್ಚು ಕರೋನಾ ಪ್ರಕರಣಗಳು ವರದಿಯಾಗುತ್ತಿವೆ. ಸಾವಿನ ಸಂಖ್ಯೆಯೂ ಹೆಚ್ಚುತ್ತಿದೆ. ಮತ್ತು ಇದಕ್ಕೆ ರಾಜ್ಯ ಸರ್ಕಾರದ ವೈಫಲ್ಯವೇ ಕಾರಣ ಎಂದು ಹೇಳಲಾಗುತ್ತಿದೆ.
ವಾಸ್ತವವಾಗಿ ಕರೋನಾ ರಾಜ್ಯದಲ್ಲಿ ಹರಡಲು ಕೇಂದ್ರ ಸರ್ಕಾರದ ಕೊಡುಗೆಯೇ ಹೆಚ್ಚು. ಮೊದಲನೆಯದಾಗಿ ಪರಿಸ್ಥಿತಿ ನಿಯಂತ್ರಣವಿದ್ದಾಗ ಲಾಕ್ಡೌನ್ ಮಾಡಲಾಯಿತು. ಕಷ್ಟದ ಸಂದರ್ಭದಲ್ಲಿ ಲಾಕ್ಡೌನ್ ತೆರವುಗೊಳಿಸಲಾಯಿತು. ಇದಲ್ಲದೆ ರಾಜ್ಯಕ್ಕೆ ಆರಂಭದಲ್ಲಿ ಪಿಪಿಇ ಕಿಟ್ ಕೊಡಲು ಕೇಂದ್ರ ಸರ್ಕಾರ ತಡ ಮಾಡಿತು. ಆನಂತರ ವೆಂಟಿಲೇಟರುಗಳನ್ನು ಕೊಡಲು ಮೀನಾ ಮೇಷ ಎಣಿಸಿತು. ಹಣಕಾಸಿನ ನೆರವನ್ನಂತೂ ನೀಡಲೇ ಇಲ್ಲ. ಉತ್ತರ ಭಾರತದ ರಾಜ್ಯಗಳಿಗೆ ಹೋಲಿಸಿಕೊಂಡರೆ ಕರ್ನಾಟಕದ ಆರೋಗ್ಯ ಸೇವಾ ವ್ಯವಸ್ಥೆ ಮತ್ತು ಜನರ ಅರಿವಿನ ಪ್ರಮಾಣಗಳೆಲ್ಲವೂ ಉತ್ಕೃಷ್ಟವಾಗಿವೆ. ಆದರೆ ಕೇಂದ್ರ ಸರ್ಕಾರದ ಅಸಹಕಾರದಿಂದ ರಾಜ್ಯದ ಅಧಿಕಾರಿಗಳು ಅಸಹಾಯಕರಾಗಬೇಕಾಯಿತು. ಇದರಿಂದಾಗಿ ರಾಜ್ಯದಲ್ಲಿ ಕರೋನಾ ನಿಯಂತ್ರಿಸುವಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗಿಂತ ಕೇಂದ್ರ ಸರ್ಕಾರದ ಪಾತ್ರವೇ ಹೆಚ್ಚಿದೆ. ಇದು ಹೈಕಮಾಂಡ್ ನಾಯಕರಿಗೂ ಗೊತ್ತಿದೆ. ಆದುದರಿಂದ ಕರೋನಾ ಕಾರಣ ಕೊಟ್ಟು ಯಡಿಯೂರಪ್ಪ ಅವರನ್ನು ಮನೆಗೆ ಕಳಿಸುವುದು ಬಿಜೆಪಿ ಹೈಕಮಾಂಡಿಗೆ ಅಸಾಧ್ಯವಾಗದ ಸಂಗತಿಯಾಗಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ವೈಯಕ್ತಿಕ ಕಾರಣಗಳಿಗಾಗಿ...
ಯಡಿಯೂರಪ್ಪ ಅವರಿಗೆ ವಯಸ್ಸಾಯಿತು. ವಯಸ್ಸು ಮತ್ತು ಆರೋಗ್ಯ ಅವರಿಗೆ ಸಹಕಾರ ನೀಡುತ್ತಿಲ್ಲ. ಸರ್ಕಾರದಲ್ಲಿ ಯಡಿಯೂರಪ್ಪ ಅವರಿಗಿಂತ ಪುತ್ರ ಬಿ.ವೈ. ವಿಜಯೇಂದ್ರ ಪ್ರಭಾವವೇ ಹೆಚ್ಚಾಗಿದೆ. ವಿಜಯೇಂದ್ರ ಸೂಪರ್ ಸಿಎಂ ಆಗಿದ್ದಾರೆ ಎಂಬ ಟೀಕೆಗಳು ಬಿಜೆಪಿ ಹೈಕಮಾಂಡಿಗೆ ಮುಟ್ಟಿವೆ. ಇದರಿಂದ ಪಕ್ಷದ ವರ್ಚಸ್ಸಿಗೆ ಹೊಡೆತ ಬೀಳುತ್ತದೆ. ಆ ಕಾರಣಕ್ಕೆ ಯಡಿಯೂರಪ್ಪ ಅವರನ್ನು ಬದಲಿಸುತ್ತಾರೆ ಎಂಬ ಇನ್ನೊಂದು ವಾದ ಇದೆ. ಆದರೆ ಯಡಿಯೂರಪ್ಪ ಅವರ ವಯಸ್ಸು ಮತ್ತು ಆರೋಗ್ಯದ ಬಗ್ಗೆ ಗೊತ್ತಿದ್ದೇ ಅವರಿಗೆ ಮುಖ್ಯಮಂತ್ರಿಗಾದಿ ಕುರ್ಚಿಯಲ್ಲಿ ಕೂರಿಸಲಾಗಿತ್ತು. ಆದುದರಿಂದ ಈಗ ಅದೇ ಕಾರಣಕ್ಕೆ ಇಳಿಸುವುದು ಕೂಡ ಸುಲಭವಾಗಿ ಸಾಧ್ಯ ಆಗುವಂತಹದ್ದಲ್ಲ ಎನ್ನಲಾಗುತ್ತಿದೆ.
ಜಾತಿ ಎಂಬ ರಕ್ಷಾಕವಚ
ರಾಜ್ಯದ ಪ್ರಮುಖ ಸಮುದಾಯವಾದ ಲಿಂಗಾಯತರ ಏಕೈಕ ಪ್ರಬಲನಾಯಕನೆಂದರೆ ಅದು ಬಿ.ಎಸ್. ಯಡಿಯೂರಪ್ಪ. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರೆ ಲಿಂಗಾಯತರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ ಎಂಬ ಭಯ ಕೂಡ ಬಿಜೆಪಿ ನಾಯಕರನ್ನು ಕಾಡುತ್ತಿದೆ. ಹೇಗೂ ಈ ಅವಧಿಯ ಬಳಿಕ ಯಡಿಯೂರಪ್ಪ ನೇಪಥ್ಯಕ್ಕೆ ಸರಿಯುತ್ತಾರೆ ಎಂಬ ವಿಚಾರವೂ ಇದೆ. ಆದರೂ ಯಡಿಯೂರಪ್ಪ ಕಾರಣಕ್ಕೆ ಲಿಂಗಾಯತ ಮತಗಳು ಚದುರದಂತೆ ನೋಡಿಕೊಳ್ಳಲು ಮತ್ತೊಬ್ಬ ಲಿಂಗಾಯತ ನಾಯಕನ್ನೇ ಮುಖ್ಯಮಂತ್ರಿ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ. ರಾಜಕೀಯವಾಗಿ ಇದು ಸೂಕ್ತ ತಂತ್ರ ಹೌದು. ಆದರೆ ಯಡಿಯೂರಪ್ಪಗೆ ಪರ್ಯಾಯ ಆಗುವಂತಹ ಸೂಕ್ತ ವ್ಯಕ್ತಿ ಸಿಗುತ್ತಿಲ್ಲ.
ಸವದಿ, ಶೆಟ್ಟರ್, ಜೋಷಿ
ಯಡಿಯೂರಪ್ಪ ಅವರಿಗೆ ಅಧಿಕಾರ ಕೊಡುವಾಗಲೇ ಒಂದು ವರ್ಷ ಎಂದು ಅವಧಿ ನಿಗಧಿ ಮಾಡಲಾಗಿತ್ತು, ಈಗ ಬದಲಾವಣೆ ನಿಶ್ಚಿತ ಎಂಬ ಸುದ್ದಿ ಹಬ್ಬಿಸಲಾಗುತ್ತಿದೆ. ಅಲ್ಲದೆ ಲಿಂಗಾಯತರ ಪೈಕಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹಾಗೂ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೆಸರನ್ನು ಮತ್ತು ಬ್ರಾಹ್ಮಣರ ಪೈಕಿ ಪ್ರಹ್ಲಾದ್ ಜೋಷಿ ಹೆಸರುಗಳನ್ನು ಚರ್ಚೆಯ ಮುನ್ನೆಲೆಗೆ ತರಲಾಗಿದೆ. ಆದರೆ ಇವರೆಲ್ಲರಲ್ಲಿ ಅವರದೇ ಸಮಸ್ಯೆಗಳಿವೆ. ಜಗದೀಶ್ ಶೆಟ್ಟರ್ ಈಗಾಗಲೇ ಮುಖ್ಯಮಂತ್ರಿ ಆಗಿ ವಿಫಲರಾದವರು. ಜೊತೆಗೀಗ ಅವರು ಸಚಿವ ಸ್ಥಾನ ಸ್ವೀಕರಿಸದೆ ಸುಮ್ಮನಿದ್ದರೆ ಬೇರೆ ಏನೋ ಆಗುತ್ತಿತ್ತೇನೋ. ಈಗ ಅವರು ಮಂತ್ರಿಯಾಗಿ ಕೂಡ ವೈಫಲ್ಯ ಹೊಂದಿದ್ದಾರೆ.
ವಿಧಾನ ಸಭೆ ಚುನಾವಣೆಯಲ್ಲಿ ಸೋತಿದ್ದ ಲಕ್ಷ್ಮಣ ಸವದಿ ಅವರನ್ನು ಉಪ ಮುಖ್ಯಮಂತ್ರಿ ಮಾಡಿದ್ದೇ ಹೆಚ್ಚು. ಅದು ಅವರ ಮೇಲಿನ ಪ್ರೀತಿಗಲ್ಲ, ಯಡಿಯೂರಪ್ಪ ಅವರಿಗೆ ಮೂಗುದಾರ ಹಾಕಲು ಎಂಬುದು ಗೊತ್ತಿರುವ ಸತ್ಯವೇ. ಆದರೆ ಉಪ ಮುಖ್ಯಮಂತ್ರಿ ಆದಮೇಲಾದರೂ ಅವರು ಪ್ರಬಲ ನಾಯಕನಾಗಿ ಹೊರಹೊಮ್ಮುವ ಯಾವ ಪ್ರಯತ್ನವನ್ನೂ ಮಾಡಿಲ್ಲ. ಈಗಲೂ ಅವರು ದೆಹಲಿ ದಂಡಯಾತ್ರೆ ಹಮ್ಮಿಕೊಂಡಿರುವುದು ಅನಾಯಾಸವಾಗಿ ಸಿಕ್ಕಿರುವ ಉಪ ಮುಖ್ಯಮಂತ್ರಿ ಸ್ಥಾನವನ್ನು ಉಳಿಸಿಕೊಳ್ಳುವುದಕ್ಕಾಗಿಯೇ ಹೊರತು ಯಡಿಯೂರಪ್ಪ ವಿರುದ್ಧ ತೊಡೆ ತಟ್ಟಿ ನಿಲ್ಲುವುದಕ್ಕಲ್ಲ.
ಬಿಜೆಪಿಯನ್ನು ಬ್ರಾಹ್ಮಣರ ಪಕ್ಷ ಎಂದೇ ಹೇಳಲಾಗುತ್ತದೆ. ಪಕ್ಷದ ಅಧ್ಯಕ್ಷ ಹಾಗೂ ಮುಖ್ಯಮಂತ್ರಿಗಳ ಸ್ಥಾನಕ್ಕೆ ಸದಾ ಬ್ರಾಹ್ಮಣರನ್ನೇ ಪರಿಗಣಿಸಲಾಗುತ್ತದೆ. ಅದೇ ರೀತಿ ಈ ಬಾರಿ ನನಗೆ ಅದೃಷ್ಟ ಒಲಿದು ಬರುತ್ತದೆ ಎಂದು ನಂಬಿ ಕೂತಿದ್ದಾರೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ. ಹಿಂದೆ ಸಚಿವ ಸುರೇಶ್ ಕುಮಾರ್ ಹೆಸರು ಕೇಳಿಬಂದಿತ್ತು. ಆದರೆ ‘ಗುಡ್ ಫಾರ್ ನಥಿಂಗ್’ ಕುಖ್ಯಾತಿಯಿಂದ ಅವರು ಈ ಬಾರಿ ಸ್ಪರ್ಧೆಯಲ್ಲಿ ಇಲ್ಲ. ಇದು ಪ್ರಹ್ಲಾದ್ ಜೋಷಿ ಕನಸಿಗೆ ಇನ್ನಷ್ಟು ಇಂಬು ಕೊಟ್ಟಿದೆ. ಇದೇ ಹಿನ್ನಲೆಯಲ್ಲಿ ಅವರು ಉತ್ತರ ಕರ್ನಾಟಕದ ಶಾಸಕರ ಮನಗೆಲ್ಲುವ ಕೆಲಸ ಮಾಡುತ್ತಿದ್ದಾರೆ. ಊಟದ ನೆಪದಲ್ಲಿ ಸಭೆ ನಡೆಸಿ ಬೆಂಬಲ ಕೇಳಿದ್ದಾರೆ. ಲಕ್ಷ್ಮಣ ಸವದಿಗೆ ಟಾಂಗ್ ಕೊಡಲೆಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಸೆಳೆಯಲು ಯತ್ನಿಸುತ್ತಿದ್ದಾರೆ. ಆದರೆ ರಾಷ್ಟ್ರೀಯ ಬಿಜೆಪಿಯಲ್ಲಿ ಎಲ್ಲವೂ ಬಿ.ಎಲ್. ಸಂತೋಷ್ ಹೇಳಿದಂತೆಯೇ ನಡೆಯುವುದಿಲ್ಲ. ಯಾವ ರಾಜ್ಯದಲ್ಲೂ ಮುಖ್ಯಮಂತ್ರಿ ಅಭ್ಯರ್ಥಿ ಘೋಷಿಸದ ಅಮಿತ್ ಶಾ ಕಳೆದ ವಿಧಾನಸಭಾ ಚುನಾವಣೆ ವೇಳೆ ಯಡಿಯೂರಪ್ಪ ಅವರೇ ನಮ್ಮ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಹಿರಂಗ ಸಭೆಯಲ್ಲಿ ಘೋಷಣೆ ಮಾಡಿದ್ದನ್ನೂ ಮರೆಯುವಂತಿಲ್ಲ.