ರಾಜ್ಯದ ಪ್ರವಾಹಪೀಡಿತ ಪ್ರದೇಶದ ಜನರ ಸಂಕಷ್ಟಕ್ಕೆ ಸ್ಪಂದಿಸದ ತಮ್ಮದೇ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಧ್ವನಿ ಎತ್ತಿದ ವಿಜಯಪುರ ಜಿಲ್ಲೆಯ ವಿವಾದಾತ್ಮಕ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ಕೇಂದ್ರ ಶಿಸ್ತುಪಾಲನಾ ಸಮಿತಿ ಶೋ ಕಾಸ್ ನೋಟಿಸ್ ಜಾರಿಗೊಳಿಸುವ ಮೂಲಕ ರಾಜ್ಯ ಬಿಜೆಪಿಯಲ್ಲಿನ ಕ್ಷಿಪ್ರ ಬೆಳವಣಿಗೆಗೆ ಮುನ್ನುಡಿ ಬರೆದಿದೆ.
ತಮಗೆ ನೀಡಲಾದ ನೋಟಿಸ್ ಗೆ ಖಾಸಗಿ ಸುದ್ದಿಯೊಂದಿಗೆ ಮಾತನಾಡುತ್ತಾ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಯತ್ನಾಳ್ ಅವರು ಪಕ್ಷದಲ್ಲಿ ಬಣ ರಾಜಕೀಯ ತಾರಕಕ್ಕೇರಿರುವುದು ಹಾಗೂ ಪಕ್ಷದಲ್ಲಿ ಮೇಲುಗೈ ಸಾಧಿಸಲು ನಡೆಯುತ್ತಿರುವ ಹಗ್ಗಜಗ್ಗಾಟದ ಸೂಚನೆಗಳನ್ನು ಸ್ಪಷ್ಟವಾಗಿ ಗುರುತಿಸಿದ್ದಾರೆ. ಯತ್ನಾಳ್ ಮಾತಿನಲ್ಲಿ ಮೂರು ಪ್ರಮುಖ ವಿಚಾರಗಳು ಸ್ಪಷ್ಟವಾಗಿವೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಕಾಲದಲ್ಲಿದ್ದ ಬಿಜೆಪಿಗೂ ಇಂದಿನ ನಾಯಕತ್ವಕ್ಕೂ ಸಾಕಷ್ಟು ವ್ಯತ್ಯಾಸವಿದೆ ಎಂಬುದನ್ನು ಉದಾಹರಣೆ ಸಮೇತ ವಿವರಿಸಿದ್ದಾರೆ. ಈ ಮೂಲಕ ಕೇಂದ್ರ ನಾಯಕತ್ವ ಏಕಪಕ್ಷೀಯವಾಗಿದೆ ಎಂಬ ಸಾರ್ವಜನಿಕ ಅಭಿಪ್ರಾಯಕ್ಕೆ ಅಧಿಕೃತ ಮುದ್ರೆ ಒತ್ತಿದ್ದಾರೆ.
ಬಿಜೆಪಿ ರಾಜ್ಯ ಘಟಕದಲ್ಲಿ ಮೇಲುಗೈ ಸಾಧಿಸಲು ಕಳೆದೊಂದು ದಶಕದಿಂದ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿವೆ ಎನ್ನುವ ಮೂಲಕ ಬಣ ರಾಜಕೀಯದ ಕರಾಳಮುಖವನ್ನೂ ಪರಿಚಯಿಸಿದ್ದಾರೆ. ಇದೆಲ್ಲಕ್ಕೂ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ಕಾರಣ ಎಂಬುದನ್ನು ಪರೋಕ್ಷವಾಗಿ ಧ್ವನಿಸುವ ಮೂಲಕ ರೋಗದ ಮೂಲವನ್ನೂ ಯತ್ನಾಳ್ ಗುರುತಿಸಿದ್ದಾರೆ. ತಮ್ಮ ಆರೋಪಗಳಿಗೆ ಬಿ ಎಸ್ ಯಡಿಯೂರಪ್ಪ ಅವರ ಅಸಹಾಯಕ ಪರಿಸ್ಥಿತಿಯನ್ನು ಪ್ರಸ್ತಾಪಿಸಿರುವ ಯತ್ನಾಳ್ ಅವರು ತಮಗೆ ಆಗುತ್ತಿರುವ ಅನ್ಯಾಯಗಳಿಗೆ ಸಮುದಾಯದ ಅಸ್ಮಿತೆಯನ್ನು ಬಡಿದೆಬ್ಬಿಸುವ ಕೆಲಸವನ್ನೂ ಸೂಕ್ಷ್ಮವಾಗಿ ಆರಂಭಿಸಿದ್ದಾರೆ. ಇದರ ಭಾಗವಾಗಿಯೇ ಯಡಿಯೂರಪ್ಪ ಅವರ ಹೆಸರನ್ನು ಪ್ರಸ್ತಾಪಿಸಿರುವುದು. ಪ್ರವಾಹಪೀಡಿತರ ಸಂಕಷ್ಟದ ಬಗ್ಗೆ ಪ್ರಧಾನ ಮಂತ್ರಿಗೆ ಮನವರಿಕೆ ಮಾಡಲು ಯತ್ನಿಸಿರುವ ಬಿ ಎಸ್ ವೈ ಗೆ ಕಾಲಾವಕಾಶ ನಿರಾಕರಿಸಲಾಗಿದೆ ಎನ್ನುವ ಮೂಲಕ ಕೇಂದ್ರ ನಾಯಕತ್ವದ ವಿರುದ್ಧ ನೇರ ಸಮರ ಸಾರಿದ್ದಾರೆ.
ಇದೆಲ್ಲಕ್ಕಿಂತಲೂ ಮಿಗಿಲಾಗಿ, ಬಿಜೆಪಿ ಹೊರತಾಗಿಯೂ ವಿಧಾನ ಪರಿಷತ್ ಚುನಾವಣೆಯಲ್ಲಿ ಅತ್ಯಧಿಕ ಮತಗಳಿಂದ ಗೆದ್ದು ತನ್ನ ಸಾಮರ್ಥ್ಯ ಪ್ರದರ್ಶಿಸಿದ್ದೇನೆ ಎನ್ನುವ ಮೂಲಕ ಮತ್ತೊಮ್ಮೆ ಉಚ್ಚಾಟನೆ ಶಿಕ್ಷೆಗೆ ಗುರಿಯಾದರೆ ಅದಕ್ಕೂ ಲೆಕ್ಕಿಸುವುದಿಲ್ಲ ಎಂಬುದನ್ನೂ ಬಿಜೆಪಿ ನಾಯಕತ್ವಕ್ಕೆ ಉತ್ತರಿಸಿದ್ದಾರೆ.
ವಿಧಾನಸಭಾ ಚುನಾವಣೆ ಹಾಗೂ ಅನಂತರದ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ಅನಪೇಕ್ಷಿತ ಹಾಗೂ ಅನಾವಶ್ಯಕ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಉತ್ತರ ಕನ್ನಡದ ಸಂಸದ ಅನಂತಕುಮಾರ್ ಹೆಗಡೆಯನ್ನು ಮೀರಿಸಿ, ಸಂಘ-ಪರಿವಾರವನ್ನು ಓಲೈಸುವ ವಿಫಲ ಸಾಹಸ ಮಾಡಿದ ಯತ್ನಾಳ್ ಸಕಾರಣವಾಗಿ ಪ್ರವಾಹಪೀಡಿತ ಜನರ ಪರವಾಗಿ ಧ್ವನಿ ಎತ್ತುವ ಮೂಲಕ ತಮ್ಮ ನೈಜ ವ್ಯಕ್ತಿತ್ವ ಅನಾವರಣಗೊಳಿಸಿದ್ದಾರೆ.
ಹುಸಿ, ನಕಲಿತನವೇ ಇಂದಿನ ಭಾರತದ ಮುಖ್ಯವಾಹಿನಿಯ ಭಾಗವಾಗಿರುವಾಗ ಕಹಿಸತ್ಯಗಳನ್ನು ಮಾತನಾಡುವ ಮೂಲಕ ಬಿಜೆಪಿಯಿಂದ ಹೊರನಡೆದ ಹಿರಿಯ ನಾಯಕರಾದ ಯಶವಂತ್ ಸಿನ್ಹಾ, ಅರುಣ್ ಶೌರಿ, ಶತ್ರುಘ್ನಾ ಸಿನ್ಹಾ ಅವರಿಗೆ ಎದುರಾದ ಸ್ಥಿತಿ ಯತ್ನಾಳ್ ಗೆ ಎದುರಾದರೆ ಆಶ್ಚರ್ಯವಿಲ್ಲ. ಒಟ್ಟಾರೆ ಪ್ರವಾಹ ಪರಿಸ್ಥಿತಿಯ ನೆಪದಲ್ಲಿ ಬಿಜೆಪಿಯ ಆಂತರಿಕ ಕಚ್ಚಾಟ ಸ್ಫೋಟಗೊಳ್ಳಬಹುದು. ಇದನ್ನು ಯಡಿಯೂರಪ್ಪ ನಿಷ್ಠರು ಸ್ವಾಭಿಮಾನದ ಹೋರಾಟವಾಗಿ ಬದಲಿಸುವರೋ ಇಲ್ಲ, ದೆಹಲಿ ಸುಲ್ತಾನರ ಮುಂದೆ ಕೈಕಟ್ಟಿ ನಿಲ್ಲುವರೋ ಎಂಬುದು ಕುತೂಹಲ ಮೂಡಿಸಿದೆ. ಎರಡನೇ ಸಾಧ್ಯತೆಯೇ ವಾಸ್ತವಕ್ಕೆ ಹತ್ತಿರ ಎನಿಸುತ್ತದೆ.