ಪೆಟ್ರೋಲ್ ದರ ಏರುತ್ತಿದೆ, ದಿನಸಿ, ವಿದ್ಯುತ್ ದರ ಏರಿಬಿಟ್ಟಿದೆ ಅಂತ ಗೊಣಗುತ್ತಿದ್ದೀರಾ? ಈಗ ಮತ್ತೊಂದು ದರ ಏರಿಕೆಗೆ ಸಿದ್ದರಾಗಿ. ನಿಮ್ಮನ್ನು ಯಾವಾಗಲೂ ಬಿಟ್ಟಿರಲಾರದ ನಿಮ್ಮ ಮೊಬೈಲ್ ಸೇವೆಗಳ ದರ ಭಾರಿ ಪ್ರಮಾಣದ ಏರಿಕೆ ಆಗಲಿದೆ. ಈಗ ಪ್ರಕಟಿತ ಪರಿಷ್ಕೃತ ದರಗಳ ಪ್ರಕಾರ ಶೇ.50ರವರೆಗೆ ದರ ಏರಲಿದೆ. ಅಂದರೆ ನಿಮ್ಮ ತಿಂಗಳ ಮೊಬೈಲ್ ಖರ್ಚು ಇದುವರೆಗೆ 1000 ರುಪಾಯಿ ಇದ್ದರೆ ಅದು ಹೆಚ್ಚುಕಮ್ಮಿ 1500 ರುಪಾಯಿಗೆ ಏರಲಿದೆ.
ಮೂರು ವರ್ಷಗಳ ಹಿಂದೆ ರಿಲಯನ್ಸ್ ಜಿಯೋ ಮೊಬೈಲ್ ಮಾರುಕಟ್ಟೆಗೆ ಪ್ರವೇಶ ಮಾಡಿದ ನಂತರ ಪೈಪೋಟಿಯಲ್ಲಿ ಅತ್ಯಂತ ಕಡಮೆ ದರದಲ್ಲಿ ಸೇವೆ ಒದಗಿಸುತ್ತಿದ್ದ ಮೊಬೈಲ್ ಕಂಪನಿಗಳೀಗ ದರ ಏರಿಕೆಯಲ್ಲೂ ಪೈಪೋಟಿಗೆ ಬಿದ್ದಂತಿವೆ. ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ಡಿಸೆಂಬರ್ 3ರಿಂದ ಪರಿಷ್ಕೃತ ದರ ಜಾರಿ ಮಾಡುತ್ತಿದ್ದರೆ, ರಿಲಯನ್ಸ್ ಜಿಯೋ ಡಿಸೆಂಬರ್ 6ರಿಂದ ಪರಿಷ್ಕೃತ ದರ ಜಾರಿ ಮಾಡುತ್ತಿದೆ.
2014ರ ನಂತರ ಇದೆ ಮೊದಲ ಬಾರಿಗೆ ಮೊಬೈಲ್ ಕಂಪನಿಗಳು ದರ ಏರಿಕೆ ಮಾಡುತ್ತಿವೆ. ಇದುವರೆಗೆ ಬಹುತೇಕ ಉಚಿತವಾಗಿದ್ದ ಎಲ್ಲಾ ಸೇವೆಗಳಿಗೆ ಶುಲ್ಕ ಪಾವತಿ ಮಾಡಬೇಕಾಗುತ್ತದೆ. ಶುಲ್ಕ ಪಾವತಿ ಮಾಡುತ್ತಿದ್ದ ಸೇವೆಗಳ ದರವೂ ಏರಿಕೆ ಆಗಲಿದೆ. ಈ ಐದು ವರ್ಷಗಳಲ್ಲಿ ಡೇಟಾ, ಮೆಸೆಜ್, ಕರೆದರ ಎಲ್ಲವೂ ಗಣನೀಯವಾಗಿ ಇಳಿಕೆಯಾಗಿದ್ದವು. 2104ರಲ್ಲಿ 269 ರುಪಾಯಿ ಇದ್ದ 1 ಜಿಬಿ ಡೇಟಾ ದರ ಈಗ 11.78 ರುಪಾಯಿಗೆ ಇಳಿದಿತ್ತು. ಈ ಉಚಿತ ಸೇವೆ ಮತ್ತು ಸುಲಭದ ದರ ಎಲ್ಲವೂ ಗ್ರಾಹಕರನ್ನು ಸೆಳೆಯುವ ದೀರ್ಘಾವಧಿಯ ತಂತ್ರವಾಗಿತ್ತು ಎಂಬುದು ಈಗ ಎಲ್ಲಾ ಕಂಪನಿಗಳು ದರ ಏರಿಕೆಗೆ ಮುಂದಾಗಿರುವುದರಿಂದ ಸಾಬೀತಾಗಿದೆ.
ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ಕಂಪನಿಗಳು ಈಗ ಜಾರಿಯಲ್ಲಿರುವ ಅನ್ಲಿಮಿಡೆಟ್ ಕೆಟಗರಿಯ ದರವನ್ನು ಶೇ.50 ರಷ್ಟು ಏರಿಕೆ ಮಾಡಲಿವೆ. ಹಾಲಿ ಬಳಕೆದಾರರು ಶೇ.50ರಷ್ಟು ಹೆಚ್ಚಿನದರ ಪಾವತಿಸಬೇಕಾಗುತ್ತದೆ. ರಿಲಯನ್ಸ್ ಜಿಯೋ ತನ್ನ ಅನ್ಲಿಮಿಟೆಡ್ ಕೆಟಗರಿ ದರವನ್ನು ಶೇ.40ರಷ್ಟು ಏರಿಕೆ ಮಾಡಲಿದ್ದು, ಪರಿಷ್ಕೃತ ದರ ಡಿಸೆಂಬರ್ 6ರಿಂದ ಜಾರಿಗೆ ಬರಲಿದೆ ಎಂದು ಪ್ರಕಟಿಸಿದೆ. ಈದರಗಳು ಬರುವ ದಿನಗಳಲ್ಲಿ ಮತ್ತಷ್ಟು ಪರಿಷ್ಕೃತಗೊಳ್ಳಲಿವೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ದರ ಏರಿಕೆ ಮಾಡುವ ಮುನ್ಸೂಚನೆಯನ್ನು ಕಂಪನಿಗಳು ನೀಡಿವೆ. ಇದುವರೆಗೆ ಕಂಪನಿಗಳು ಪ್ರಕಟಿಸಿರುವ ಪರಿಷ್ಕೃತ ದರದ ಸ್ಥೂಲ ರೂಪವು ಕೆಳಕಂಡಂತಿದೆ.
ವೊಡಾಫೋನ್ ಐಡಿಯಾ
ವೊಡಾಫೋನ್ ಐಡಿಯಾ ತನ್ನ ಪ್ರಿಪೇಯ್ಡ್ ಉತ್ಪನ್ನಗಳು ಮತ್ತು ಸೇವೆಗಳಿಗಾಗಿ ಹೊಸ ಯೋಜನೆಗಳನ್ನು ಮೊದಲು ಘೋಷಿಸಿದೆ ಡಿಸೆಂಬರ್ 3 ರಿಂದ ಭಾರತದಾದ್ಯಂತ ತನ್ನ ಹೊಸ ಪ್ಲಾನ್ ಗಳು ಲಭ್ಯವಿರುತ್ತವೆ ಎಂದು ಕಂಪನಿ ತಿಳಿಸಿದೆ. ಕಂಪನಿಯು ತನ್ನ ಆರಂಭಿಕ ಮಟ್ಟದ ಅನ್ಲಿಮಿಟೆಡ್ ಯೋಜನೆಯಲ್ಲಿನ ದರವನ್ನು ಗರಿಷ್ಠ 50 ಪ್ರತಿಶತದಷ್ಟು ಹೆಚ್ಚಳ ಮಾಡಿದೆ. ವರ್ಷಪೂರ್ತಿ ಬಳಕೆ ಮಾಡಲು ರೂಪಿಸಿದ್ದ 12 ಜಿಬಿಯೊಂದಿಗೆ ಬರುತ್ತಿದ್ದ 999 ರೂ.ಗಳ ಯೋಜನೆಯ ಬದಲಿಗೆ 24 ಜಿಬಿ ಡೇಟಾ ಬಳಕೆಯ ಮಿತಿಯೊಂದಿಗೆ ವರ್ಷಪೂರ್ತಿ ದರವನ್ನು 1,499 ರೂ.ಗಳಿಗೆ ಏರಿಕೆ ಮಾಡಿದೆ. ಡಿಸೆಂಬರ್ 3 ರಿಂದ, ವೊಡಾಫೋನ್ ಐಡಿಯಾದ ಗ್ರಾಹಕರು ಕರೆ ಮಾಡಲು, ಮೊಬೈಲ್‌ನಲ್ಲಿ ಇಂಟರ್ನೆಟ್ ಬಳಸಲು ಮತ್ತು ಸಂಪರ್ಕದಲ್ಲಿರಲು ತಿಂಗಳಿಗೆ ಕನಿಷ್ಠ 49 ರೂ. ವ್ಯಾಲಿಡಿಟಿ ಶುಲ್ಕ ಪಾವತಿಸಬೇಕು. ಇತರ ಸಂಪರ್ಕಗಳಿಗೆ ಕರೆ ಮಾಡಲು ಇದ್ದ ಅನಿಯಮಿತ ಯೋಜನೆಯನ್ನು ರದ್ದು ಮಾಡಿದ್ದು ಕರೆಗೆ ಮಿತಿ ಹೇರಿದೆ. 28 ದಿನಿಗಳ ವ್ಯಾಲಿಟಿಡಿ ಪ್ಲಾನ್ ನಲ್ಲಿ 1000 ನಿಮಿಷ, 84 ದಿನಗಳ ವ್ಯಾಲಿಡಿಟಿ ಪ್ಲಾನ್ ನಲ್ಲಿ 3000 ನಿಮಿಷ ಮತ್ತು 365 ದಿನಗಳ ವ್ಯಾಲಿಡಿಟಿ ಪ್ಲಾನ್ ನಲ್ಲಿ 12000 ನಿಮಿಷಗಳ ಕರೆ ಮಿತಿ ಹೇರಿದೆ. ಇದರ ಹೊರತಾಗಿ ಕರೆ ಮಾಡುವ ಗ್ರಾಹಕರು ಹೊರ ಹೋಗುವ ಕರೆಗಳ ಪ್ರತಿ ನಿಮಿಷಕ್ಕೆ 6 ಪೈಸೆ ಪಾವತಿಸಬೇಕು. ಇದಲ್ಲದೇ ವೊಡಾಫೋನ್ ಐಡಿಯಾ 2 ದಿನಗಳು, 28 ದಿನಗಳು, 84 ದಿನಗಳು ಹಾಗೂ 365 ದಿನಗಳ ಪರಿಷ್ಕೃತ ದರದ ನೂತನ ಪ್ಯಾಕ್ ಗಳನ್ನು ಪ್ರಕಟಿಸಿದೆ.
ಭಾರ್ತಿ ಏರ್ಟೆಲ್
ಮೊಬೈಲ್ ಪ್ರಿ-ಪೇಯ್ಡ್ ಸೇವಾ ದರವನ್ನು ಹೆಚ್ಚಿಸಲು ಭಾರತಿ ಏರ್ಟೆಲ್ ಇದೇ ರೀತಿಯ ಯೋಜನೆಗಳನ್ನು ಪ್ರಕಟಿಸಿದೆ. ಭಾರ್ತಿ ಏರ್‌ಟೆಲ್ ಕೂಡಾ ಬಹುತೇಕ ವೊಡಾಫೋನ್ ಐಡಿಯಾ ಮಾದರಿಯಲ್ಲೇ ದರ ಪರಿಷ್ಕರಣೆ ಮಾಡಿದ್ದು ಒಂದು ರುಪಾಯಿ ಕಡಮೆ ಇದೆಯಷ್ಟೇ. ಏರ್ಟೆಲ್ ಘೋಷಿಸಿರುವ ಪರಿಷ್ಕೃತ ಯೋಜನೆಗಳು ಮತ್ತು ದರ ಪ್ರಕಾರ ಅನ್ಲಿಮಿಟೆಡ್ ವಿಭಾಗದಲ್ಲಿನ ಯೋಜನೆಗಳಿಗಾಗಿ ಏರ್ಟೆಲ್ ಪ್ರಿಪೇಯ್ಡ್ ಗ್ರಾಹಕರು ಪ್ರಸ್ತುತ ಪಾವತಿಸುತ್ತಿದ್ದ ದರಕ್ಕೆ ಹೋಲಿಸಿದರೆ 42% ರಷ್ಟು ಹೆಚ್ಚಳವಾಗಲಿದೆ. 249 ರೂ (28 ದಿನಗಳ ವ್ಯಾಲಿಟಿಡಿ) ಮತ್ತು 448 ರೂ (82 ದಿನಗಳ ವ್ಯಾಲಿಡಿಟಿ) ದಲ್ಲಿ ಬಂದ ಅನ್ಲಿಮಿಟೆಡ್ ಕರೆ ಮತ್ತು ಡೇಟಾ ಸೇವೆಗಳನ್ನು ಒದಗಿಸುವ ಏರ್‌ಟೆಲ್ ಪ್ಲ್ಯಾನ್ ಗಳಿಗಾಗಿ ಗ್ರಾಹಕರು ಇನ್ನು ಮುಂದೆ ಕ್ರಮವಾಗಿ 298 ಮತ್ತು 598 ರುಪಾಯಿ ಪಾವತಿಸಬೇಕಾಗುತ್ತದೆ. ಏರ್ಟೆಲ್ ಇದುವರೆಗೆ ಇದ್ದ 169 ಮತ್ತು 199 ಪ್ಯಾಕ್ ಗಳನ್ನು ವಿಲೀನಗೊಳಿಸಿ 248 ರುಪಾಯಿಗಳ ಹೊಸ ಪ್ಯಾಕ್ ನೀಡಿದೆ. 28 ದಿನಗಳವರೆಗೆ ವ್ಯಾಲಿಡಿಟಿ ಇರು ಈ ಪ್ಯಾಕ್ ಪಡೆಯುವ ಗ್ರಾಹಕರು ನಿತ್ಯ 1.5 ಜಿಬಿ ಡೇಟಾ ಪಡೆಯಲಿದ್ದಾರೆ.
ರಿಲಯನ್ಸ್ ಜಿಯೋ
ಡಿಸೆಂಬರ್ 6 ರಿಂದ ಮೊಬೈಲ್ ಸೇವೆಗಳ ದರವನ್ನು ಹೆಚ್ಚಿಸುವುದಾಗಿ ರಿಲಯನ್ಸ್ ಜಿಯೋ ಹೇಳಿದೆ. ಕಂಪನಿಯು ತನ್ನ ಹೊಸ ಆಲ್ ಇನ್ ಒನ್ ಯೋಜನೆಗಳಿಗೆ ಶೇಕಡಾ 40 ರಷ್ಟು ಹೆಚ್ಚಿನ ದರ ವಿಧಿಸಲಿದೆ ಎಂದು ಪ್ರಕಟಿಸಿದೆ. ಆದರೆ ಶೇ.300 ರಷ್ಟು ಹೆಚ್ಚನ ಸೇವೆ ಒದಗಿಸುವುದಾಗಿ ಕಂಪನಿ ಹೇಳಿಕೊಂಡಿದೆ. “ಹೊಸ ಯೋಜನೆಗಳು ಡಿಸೆಂಬರ್ 6, 2019 ರಿಂದ ಜಾರಿಗೆ ಬರಲಿವೆ. ಹೊಸ ಆಲ್-ಇನ್-ಒನ್ ಯೋಜನೆಗಳಿಗೆ ಶೇಕಡಾ 40 ರಷ್ಟು ಹೆಚ್ಚಿನ ಬೆಲೆ ನೀಡಬೇಕಾಗುತ್ತದೆಯಾದರೂ ಗ್ರಾಹಕರಿಗೆ ನೀಡಿದ ಭರವಸೆಯನ್ನು ಉಳಿಸಿಕೊಳ್ಳುವ ಸಲುವಾಗಿ ಶೇ. 300 ಹೆಚ್ಚಿನ ಸೇವೆಯನ್ನು ನೀಡಲಿದ್ದೇವೆ ಎಂದು ಜಿಯೋ ಹೇಳಿದೆ. ಆದರೆ, ಅವು ಯಾವ ಸೇವೆಗಳು ಮತ್ತು ಪ್ರಯೋಜನಗಳು ಎಂಬುದನ್ನು ರಿಲಯನ್ಸ್ ಜಿಯೋ ಹೇಳಿಲ್ಲ.
ದರ ಏರಿಕೆಗೆ ಕಾರಣ ಏನು?
ಸತತ ನಷ್ಟದಲ್ಲಿ ಇದ್ದರೂ ಪೈಪೋಟಿ ಕಾರಣಕ್ಕಾಗಿ ಮೊಬೈಲ್ ಕಂಪನಿಗಳು ದರ ಏರಿಕೆ ಮಾಡಿರಲಿಲ್ಲ. ಪ್ರತಿಬಾರಿ ದರ ಏರಿಕೆ ಮಾಡುವ ಪ್ರಸ್ತಾಪವನ್ನು ಹೊಸದಾಗಿ ಮಾರುಕಟ್ಟೆಗೆ ಬಂದಿದ್ದ ರಿಲಯನ್ಸ್ ಜಿಯೋ ತನ್ನ ಅನುಕೂಲಕ್ಕೆ ಬಳಸಿಕೊಳ್ಳುತ್ತಿತ್ತು. ಆದರೆ, ದೂರಸಂಪರ್ಕ ಇಲಾಖೆ ಹೊಂದಾಣಿಕೆ ಮಾಡಲಾದ ಒಟ್ಟು ಆದಾಯ (ಎಜಿಆರ್) ಕುರಿತಂತೆ ಸುಪ್ರೀಂಕೋರ್ಟ್ ನಲ್ಲಿ ವ್ಯಾಜ್ಯವನ್ನು ಗೆದ್ದಿದ್ದು, ಬೃಹತ್ ಬಾಕಿ ಮೊತ್ತವನ್ನು ಈ ಕಂಪನಿಗಳು ಪಾವತಿಸಬೇಕಿದೆ. ಹೊಂದಾಣಿಕೆ ಮಾಡಲಾದ ಒಟ್ಟು ಆದಾಯ (ಎಜಿಆರ್) ಬಾಕಿ ಪಾವತಿಸುವ ಸಲುವಾಗಿ ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ತಮ್ಮ ಎಡರನೇ ತ್ರೈಮಾಸಿಕದಲ್ಲಿ ಭಾರಿ ನಷ್ಟವನ್ನು ಘೋಷಣೆ ಮಾಡಿವೆ. ವೊಡಾಫೋನ್ ಐಡಿಯಾ 50,921 ಕೋಟಿ ರುಪಾಯಿಗಳ ನಷ್ಟ ಘೋಷಣೆ ಮಾಡಿದ್ದರೆ, ಏರ್ಟೆಲ್ 23,045 ಕೋಟಿ ರುಪಾಯಿ ನಷ್ಟ ಘೋಷಣೆ ಮಾಡಿದೆ. ಘೋಷಣೆ ಮಾಡಲಾದ ನಷ್ಟದ ಅಷ್ಟೂ ಮೊತ್ತವನ್ನು ಈ ಕಂಪನಿಗಳು ಹೊಂದಾಣಿಕೆ ಮಾಡಲಾದ ಒಟ್ಟು ಆದಾಯದ ಮೇಲಿನ ತೆರಿಗೆ ಮತ್ತು ಶುಲ್ಕವನ್ನು ಸರ್ಕಾರಕ್ಕೆ ಪಾವತಿಸಬೇಕಿದೆ.
ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್ ಬಿಟ್ಟರೆ, ಸ್ಪರ್ಧೆಯಲ್ಲಿ ಉಳಿದಿರುವ ಮೂರು ಪ್ರಮುಖ ಕಂಪನಿಗಳಾದ ಏರ್ಟೆಲ್, ಐಡಿಯಾ ಮತ್ತು ರಿಲಯನ್ಸ್ ಜಿಯೋ ಕಂಪನಿಗಳ ಮೇಲೆ ಬೃಹತ್ ಸಾಲದ ಹೊರೆಯೇ ಇದೆ. ಏರ್ಟೆಲ್ 1.17 ಲಕ್ಷ ಕೋಟಿ ಇದ್ದರೆ, ವೊಡಾಫೋನ್ 1.18 ಲಕ್ಷ ಕೋಟಿ ಮತ್ತು ರಿಲಯನ್ಸ್ ಜಿಯೋ 1.08 ಲಕ್ಷ ಕೋಟಿ ಸಾಲ ಹೊಂದಿವೆ. ಈ ಮೂರು ಕಂಪನಿಗಳ ಒಟ್ಟು 3.43 ಲಕ್ಷ ಕೋಟಿ ಸಾಲ ಹೊರೆ ಇದೆ. ಈ ಬೃಹತ್ ಸಾಲದ ಹೊರೆಯ ಜತೆಗೆ ಹೊಂದಾಣಿಕೆ ಮಾಡಲಾದ ಒಟ್ಟು ಆದಾಯದ ಮೇಲಿನ ಬಾಕಿ ತೆರಿಗೆ ಮತ್ತು ಶುಲ್ಕ ಪಾವತಿಸಬೇಕಿರುವುದರಿಂದ ಕಂಪನಿಗಳಿಗೆ ದರ ಏರಿಕೆ ಮಾಡದೇ ಅನ್ಯ ಮಾರ್ಗವೇ ಇರಲಿಲ್ಲ.
ಇತ್ತೀಚೆಗಷ್ಟೇ ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಜಿಯೋಯೇತರ ಮೊಬೈಲ್ ಗಳಿಗೆ ಮಾಡುವ ಕರೆಗಳಿಗೆ ಐಯುಸಿ (ಇಂಟರ್ಕನೆಕ್ಟಿವಿಟಿ ಯೂಸೆಜ್ ಚಾರ್ಚ್) ಶುಲ್ಕ ಪ್ರತಿ ನಿಮಿಷಕ್ಕೆ 6 ಪೈಸೆ ವಿಧಿಸಲಾರಂಭಿಸಿತು. ಅದು ದರ ಏರಿಕೆಗೆ ಪರೋಕ್ಷವಾಗಿ ಚಾಲನೆ ನೀಡಿತು.