ದೇಶಾದ್ಯಂತ ಕರೋನಾ ರೋಗಿಗಳನ್ನು ನಿಭಾಯಿಸುವ ರೀತಿಯನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್, ರೋಗಿಗಳನ್ನು ಪ್ರಾಣಿಗಳಿಗಿಂತಲೂ ನಿಕೃಷ್ಟರಾಗಿ ನೋಡಿಕೊಳ್ಳುತ್ತಿದ್ದಾರೆಂದು ಅಭಿಪ್ರಾಯಿಸಿದೆ.
ಮಾಧ್ಯಮ ವರದಿಗಳನ್ನು ಆದರಿಸಿ ಸರ್ವೋಚ್ಛ ನ್ಯಾಯಾಲಯದ ತ್ರಿಸದಸ್ಯ ಪೀಠವು ದೆಹಲಿ, ಮಹಾರಾಷ್ಟ್ರ, ತಮಿಳುನಾಡು ಹಾಗೂ ಪಶ್ಚಿಮ ಬಂಗಾಳದ ಆಸ್ಪತ್ರೆಗಳ ಸ್ಥಿತಿಗತಿಗಳ ವಿವರಗಳ ವರದಿ ನೀಡುವಂತೆ ರಾಜ್ಯಗಳಿಗೆ ಆದೇಶ ನೀಡಿದೆ.ಕೋವಿಡ್ ರೋಗಿಗಳನ್ನು ಪ್ರಾಣಿಗಳಿಗಿಂತಲೂ ಕಡೆಯಾಗಿ ಪರಿಗಣಿಸಲಾಗುತ್ತಿದೆ. ಓರ್ವ ಕೋವಿಡ್ ರೋಗಿಯ ಮೃತದೇಹ ತ್ಯಾಜ್ಯಗಳ ನಡುವೆ ಸಿಕ್ಕಿರುವುದಾಗಿ ಅಶೋಕ್ ಭೂಷನ್ ನೇತೃತ್ವದ ತ್ರಿ-ಸದಸ್ಯ ಪೀಠವು ಹೇಳಿದೆ.
ದೆಹಲಿ ಆಡಳಿತವನ್ನು ತೀವ್ರವಾಗಿ ಟೀಕಿಸಿರುವ ಸುಪ್ರೀಂ ಕೋರ್ಟ್, ಆಸ್ಪತ್ರೆಗಳು ಕೋವಿಡ್ ಪರೀಕ್ಷೆ ನಡೆಸುವುದನ್ನು ಕಡಿಮೆಗೊಳಿಸಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಸಿಗೆಗಳು ಖಾಲಿಯಿದ್ದರೂ ರೋಗಿಗಳು ಆಸ್ಪತ್ರೆಯಿಂದ ಆಸ್ಪತ್ರೆಗೆ ಓಡಾಡುತ್ತಿದ್ದಾರೆ ಎನ್ನುವುದು ನ್ಯಾಯಾಯಲಯದ ಗಮನಕ್ಕೆ ಬಂದಿದೆ ಎಂದು ಕೋರ್ಟ್ ಹೇಳಿದೆ.
ಲೋಕ ನಾಯಕ್ ಜಯಪ್ರಕಾಶ್ ಆಸ್ಪತ್ರೆಯ ವರಾಂಡದಲ್ಲಿ ಕೋವಿಡ್ ರೋಗಿಯ ಮೃತದೇಹ ಅನಾಥವಾಗಿ ಬಿದ್ದಿರುವುದನ್ನು ಆದರಿಸಿ ಬಂದ ಮಾಧ್ಯಮದ ವರದಿಯನ್ನು ಕೋರ್ಟ್ ಉಲ್ಲೇಖಿಸಿದೆ.
ಕರೋನಾ ರೋಗಿಗಳಿಗೆ ಆರೋಗ್ಯ ಸೇವೆ ನೀಡಲಾಗುತ್ತಿದೆ ಹಾಗೂ ಆಸ್ಪತ್ರೆಗಳಲ್ಲಿ ಮೂಲಭೂತ ಸೌಕರ್ಯಗಳು ಇವೆ ಎನ್ನುವುದನ್ನು ಸರ್ಕಾರಗಳು ಖಾತ್ರಿಪಡಿಸಬೇಕೆಂದು ಸರ್ವೋಚ್ಚ ನ್ಯಾಯಾಲಯ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.