ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಾದರೆ ಹೊರರಾಷ್ಟ್ರಗಳಿಂದ ಬಂದು ದೇಶದಲ್ಲಿ ಭಯೋತ್ಪಾದನಾ ಚಟುವಟಿಕೆ ನಡೆಸುತ್ತಿರುವ ಮುಸ್ಲಿಮರಿಗೆ ಕಡಿವಾಣ ಬೀಳುತ್ತದೆ. ಆಗ ಭಾರತೀಯ ಮುಸ್ಲಿಮರ ಮೇಲಿರುವ ಅನುಮಾನ, ಆರೋಪಗಳು ದೂರವಾಗಿ ಸಹಬಾಳ್ವೆಗೆ ದಾರಿಯಾಗುತ್ತದೆ. ಆದರೆ, ಅದಾವುದೂ ಮುನ್ನಲೆಗೆ ಬಾರದೆ ಕೇವಲ ಮುಸ್ಲಿಂ ವಿರೋಧಿ ಎಂಬ ಊಹಾಪೋಹ ಮುಂದಿಟ್ಟುಕೊಂಡು ನಡೆಯುತ್ತಿರುವ ಹೋರಾಟದ ಹಿಂದಿನ ಉದ್ದೇಶ ಎನು ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಒಟ್ಟಾರೆ ಈ ಕಾಯ್ದೆಯ ಒಳ-ಹೊರಗುಗಳ ಬಗ್ಗೆ ಪ್ರತಿಧ್ವನಿಯಲ್ಲಿ `ಇಂದಿರಾತನಯ’ ಬಿಡಿಸಿಟ್ಟಿದ್ದಾರೆ.
ದೇಶದೆಲ್ಲೆಡೆ ಈಗ ಪೌರತ್ವ ತಿದ್ದುಪಡಿ ಕಾಯ್ದೆಯದ್ದೇ ರಂಪಾಟ ಶುರುವಾಗಿದೆ. ಸಂಸತ್ತಿನ ಉಭಯ ಸದನಗಳಲ್ಲಿ ಪೌರತ್ವ ತಿದ್ದುಪಡಿ ವಿಧೇಯಕಕ್ಕೆ ಒಪ್ಪಿಗೆ ಸಿಕ್ಕಿ ರಾಷ್ಟ್ರಪತಿಗಳ ಅಂಕಿತವೂ ಬಿದ್ದು ಕಾಯ್ದೆಯಾಗಿ ಹೊರಹೊಮ್ಮಿದೆ. ಈ ಕಾಯ್ದೆ ಜಾರಿ ಮುಸ್ಲಿಂ ವಿರೋಧಿ ಎಂಬ ಹಣೆಪಟ್ಟಿಯೊಂದಿಗೆ ದೇಶಾದ್ಯಂತ ಕಿಚ್ಚು ಹಬ್ಬಿಸಿದ್ದು, ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗಳು ಹಿಂಸಾರೂಪಕ್ಕಿಳಿದಿದೆ. ವಿದ್ಯಾರ್ಥಿಗಳು ಕೂಡ ತಮ್ಮ ಭವಿಷ್ಯವನ್ನು ಮರೆತು ಹೋರಾಟದಲ್ಲಿ ತೊಡಗಿಕೊಂಡಿದ್ದಾರೆ. ಇನ್ನೊಂದೆಡೆ ಕಾಯ್ದೆ ಪ್ರಶ್ನಿಸಿ ಹೈಕೋರ್ಟ್, ಸುಪ್ರೀಂ ಕೋರ್ಟ್ ಗಳಲ್ಲಿ ತಕರಾರು ಅರ್ಜಿಗಳನ್ನು ಹಾಕಲಾಗಿದೆ.
ಆದರೆ, ಕಾಯ್ದೆ ವಿರೋಧಿಸಿ ಪ್ರತಿಭಟನೆಗಳ ಹಿಂದಿರುವ ಉದ್ದೇಶ, ಹೋರಾಟ ಹಿಂಸಾರೂಪ ಪಡೆಯುವ ಹಿಂದಿರುವ ಶಕ್ತಿಗಳ ಕುರಿತು ಯಾವುದೇ ಚರ್ಚೆಯಾಗಲಿ, ಮಾತುಗಳಾಗಲೀ ಕೇಳಿಬರುತ್ತಿಲ್ಲ. ಈ ಕಾಯ್ದೆಯನ್ನು ಬೆಂಬಲಿಸುವವರು ಕೋಮುವಾದಿಗಳು, ಧರ್ಮದ ಹೆಸರಿನಲ್ಲಿ ದೇಶವನ್ನು ಒಡೆಯುವವರು, ಮುಸ್ಲಿಂ ವಿರೋಧಿಗಳು, ದೇಶದಲ್ಲಿ ಮುಸ್ಲಿಮರನ್ನು ನಾಶಮಾಡಲು ಹೊರಟವರು ಎಂಬಿತ್ಯಾದಿ ಆರೋಪಗಳನ್ನು ಎದುರಿಸುವಂತಾಗಿದೆ.
ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಈಶಾನ್ಯ ಭಾರತದಲ್ಲಿ ಆರಂಭವಾದ ಹೋರಾಟ ಉತ್ತರ ಭಾರತದೆಲ್ಲೆಡೆ ಹರಡುತ್ತಿದೆ. ನೆರೆಯ ಮಹಾರಾಷ್ಟ್ರ, ಹೈದರಾಬಾದ್ ಗಳಲ್ಲೂ ಹೋರಾಟ ತೀವ್ರಗೊಂಡಿದೆ. ಕಾಯ್ದೆ ವಿರೋಧಿಸಿ ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ಪ್ರತಿಭಟನೆ ನಡೆಯುತ್ತಿದ್ದ ವೇಳೆ ಪೊಲೀಸರು ವಿವಿ ಆವರಣದೊಳಗೆ ನುಗ್ಗಿ ಹಲ್ಲೆ ನಡೆಸಿದರು ಎಂಬ ಕಾರಣಕ್ಕೆ ದೇಶದ ವಿವಿಧ ವಿವಿ, ಕಾಲೇಜುಗಳಲ್ಲೂ ಹೋರಾಟ ತೀವ್ರಗೊಂಡಿದೆ.
ಆದರೆ, ಈ ಹೋರಾಟದ ಹಿಂದಿನ ಉದ್ದೇಶಗಳು ಮಾತ್ರ ಇನ್ನೂ ಪೂರ್ತಿಯಾಗಿ ಅರ್ಥವಾಗಿಲ್ಲ. ಏಕೆಂದರೆ, ಕೇಂದ್ರ ಸರ್ಕಾರ ಕೈಗೊಳ್ಳುವ ಯಾವುದೇ ತೀರ್ಮಾನದ ಹಿಂದೆ ಕೆಟ್ಟ ಉದ್ದೇಶಗಳ ಜತೆ ಜತೆಗೆ ಒಳ್ಳೆಯ ಉದ್ದೇಶಗಳೂ ಇರುತ್ತವೆ. ಆದರೆ, ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರದಲ್ಲಿ ಇದು ಮುಸ್ಲಿಂ ವಿರೋಧಿ ಎಂದು ಹೇಳಲಾಗುತ್ತಿದೆಯೇ ಹೊರತು ಯಾವ ಮುಸ್ಲಿಮರ ವಿರೋಧಿಯಾಗಿದೆ ಎಂಬ ಬಗ್ಗೆ ಪ್ರತಿಭಟನಾಕಾರರಾಗಲಿ, ಹೋರಾಟಗಾರರಾಗಲಿ ಸೊಲ್ಲೆತ್ತುತ್ತಿಲ್ಲ. ಕಾಯ್ದೆಯನ್ನು ವಿರೋಧಿಸುವ ರಾಜಕೀಯ ಪಕ್ಷಗಳು ಕೂಡ ಈ ಬಗ್ಗೆ ಚಕಾರವೆತ್ತುತ್ತಿಲ್ಲ.
ಈ ಕಾಯ್ದೆ ಯಾಕಾಗಿ ಜಾರಿಯಾಗುತ್ತಿದೆ?
ಏಕೆಂದರೆ, ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಮುಸ್ಲಿಂಮರ ತುಷ್ಠೀಕರಣ ಮತ್ತು ರಾಜಕೀಯದಿಂದ ಹೊರತಾಗಿ ನೋಡಿದರೆ ಮಾತ್ರ ಅದರ ನಿಜವಾದ ಉದ್ದೇಶ ಅರ್ಥವಾಗುತ್ತದೆ. ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೊಳಿಸಿರುವುದು ಹೊಸದಾಗಿ ಪೌರತ್ವ ನೀಡುವುದಕ್ಕಷ್ಟೇ ಹೊರತು ಇರುವ ಪೌರತ್ವವನ್ನು ರದ್ದುಗೊಳಿಸುವುದಕ್ಕಲ್ಲ. ಅಫ್ಘಾನಿಸ್ತಾನ ಬಾಂಗ್ಲಾದೇಶ ಮತ್ತು ಪಾಕಿಸ್ತಾನದಗಳಲ್ಲಿ ಸಂತ್ರಸ್ತರಾಗಿ ಬದುಕು ಕಟ್ಟಿಕೊಳ್ಳಲಾಗದೆ ಭಾರತಕ್ಕೆ ಓಡಿಬರುವ ಹಿಂದೂಗಳು, ಸಿಖ್ಖರು, ಬೌದ್ಧರು, ಜೈನರು, ಪಾರ್ಸಿಗಳು ಮತ್ತು ಕ್ರೈಸ್ತರಿಗೆ ಪೌರತ್ವ ನೀಡುವ ಉದ್ದೇಶದಿಂದ ಈ ಕಾಯ್ದೆ ರೂಪಿಸಲಾಗಿದೆ. ಆ ಆರು ಧರ್ಮದವರು ಭಾರತಕ್ಕೆ 2014ರ ಡಿಸೆಂಬರ್ 31ರ ಮೊದಲು ಭಾರತಕ್ಕೆ ಬಂದಿದ್ದರೆ ಅವರೆಲ್ಲರೂ ಭಾರತೀಯ ಪೌರತ್ವ ಪಡೆಯಲು ಅರ್ಹರು. ಈ ಕಾಯ್ದೆಯಲ್ಲಿ ಮುಸ್ಲಿಮರನ್ನು ಸೇರಿಸಿಲ್ಲ ಎಂಬುದಷ್ಟೇ ಕಾಯ್ದೆ ವಿರೋಧಿಸುವವರ ಕೋಪ.
ಮುಸ್ಲಿಂ ರಾಷ್ಟ್ರಗಳಾಗಿರುವ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಗಾನಿಸ್ತಾನಗಳಿಂದ ಧರ್ಮದ ಕಾರಣಕ್ಕೆ ಮುಸ್ಲಿಮರ ಮೇಲೆ ದೌರ್ಜನ್ಯ ನಡೆಯಲು ಸಾಧ್ಯವೇ? ಇದುವರೆಗೆ ಅಂತಹ ಯಾವುದಾದರೂ ಘಟನೆಗಳು ನಡೆದಿವೆಯೇ? ಅಂತಹ ಒಂದು ಉದಾಹರಣೆ ಸಿಗುವುದು ಕೂಡ ಕಷ್ಟಸಾಧ್ಯ. ಆದರೆ, ಅದೇ ರಾಷ್ಟ್ರಗಳಲ್ಲಿ ಮುಸ್ಲಿಮರನ್ನು ಹೊರತುಪಡಿಸಿದ ಅಲ್ಪಸಂಖ್ಯಾತರಿಗೆ, ಅದರಲ್ಲೂ ಮುಖ್ಯವಾಗಿ ಹಿಂದೂಗಳಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಈ ಹೋರಾಟಗಾರರು ಯಾವತ್ತಾದರೂ ದನಿ ಎತ್ತಿದ್ದಾರಾ? ಭಾರತ ವಿಭಜನೆಯಾಗಿ ಪಾಕಿಸ್ತಾನ (ಈಗಿನ ಬಾಂಗ್ಲಾದೇಶ ಸೇರಿ) ಉದಯವಾದಾಗ ಅಲ್ಲಿನ ಒಟ್ಟು ಜನಸಂಖ್ಯೆಯಲ್ಲಿ ಶೇ. 20ರಷ್ಟು ಹಿಂದೂಗಳಿದ್ದರು. ಆದರೆ, ಈಗ ಪಾಕಿಸ್ತಾನ ಮತ್ತು ಬಾಂಗ್ಲಾದಲ್ಲಿ ಹಿಂದೂಗಳ ಸಂಖ್ಯೆ ಶೇ. 3ಕ್ಕೆ ಇಳಿದಿದೆ. ಇರುವ ಕೆಲವು ಮಂದಿಯೂ ಅಲ್ಲಿನ ಸರ್ಕಾರಗಳ ಕಾನೂನುಗಳು, ಬಹುಸಂಖ್ಯಾತರ ದೌರ್ಜನ್ಯ ತಡೆಯಲು ಸಾಧ್ಯವಾಗದೆ ಭಾರತಕ್ಕೆ ನುಸುಳುತ್ತಿದ್ದಾರೆ. ಅಂತಹ ಹಿಂದೂಗಳಿಗೆ ಭಾರತೀಯ ಪೌರತ್ವ ನೀಡುವುದು ತಪ್ಪೇ?
ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ಮೂರೂ ಮುಸ್ಲಿಂ ರಾಷ್ಟ್ರಗಳು. ಹೀಗಿರುವಾಗ ಅಲ್ಲಿನ ಮುಸ್ಲಿಮರು ದೌರ್ಜನ್ಯಕ್ಕೆ ಒಳಗಾಗಿ ಅಥವಾ ನಿರಾಶ್ರಿತರಾಗಿ ಭಾರತಕ್ಕೆ ಬರುವ ಸಾಧ್ಯತೆಗಳು ಇಲ್ಲ. ಉದ್ಯೋಗ ಮತ್ತಿತರೆ ಕಾರಣಗಳಿಗೆಂದು ಭಾರತಕ್ಕೆ ಬರುವುದಾದರೆ ವೀಸಾ ಪಡೆದು ಬರಲು ಅವಕಾಶವಿದೆ. ಅಷ್ಟೇ ಅಲ್ಲ, ಅಲ್ಲಿನ ಜನರಿಗೆ ತಮ್ಮ ರಾಷ್ಟ್ರದಲ್ಲೇ ಭದ್ರತೆ ಇದೆ. ನಿರಾಶ್ರಿತರಾಗಿ ಆ ರಾಷ್ಟ್ರಗಳಿಂದ ಭಾರತಕ್ಕೆ ಬರುವವರು ಅಲ್ಲಿನ ಅಲ್ಪಸಂಖ್ಯಾತರು (ಹಿಂದೂ, ಕ್ರೈಸ್ತ, ಸಿಖ್, ಬೌದ್ಧ, ಜೈನ, ಪಾರ್ಸಿ) ಮಾತ್ರ. ಅಂಥವರಿಗೆ ಭಾರತೀಯ ಪೌರತ್ವ ನೀಡುವುದು ಹೇಗೆ ತಾನೇ ಭಾರತೀಯ ಮುಸ್ಲಿಮರ ವಿರೋಧಿಯಾಗುತ್ತದೆ?
ಭಾರತೀಯ ಮುಸ್ಲಿಮರಿಗೆ ಅನುಕೂಲ ಈ ಕಾಯ್ದೆ
ಇನ್ನು ಈ ಕಾಯ್ದೆ ಜಾರಿಯಾದರೆ ಭಾರತೀಯ ಮುಸ್ಲಿಮರಿಗೆ ಇರುವ ಆತಂಕವೂ ದೂರವಾಗುತ್ತದೆ. ದೇಶದಲ್ಲಿ ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸುತ್ತಿರುವವರು ಪಾಕಿಸ್ತಾನ, ಬಾಂಗ್ಲಾದೇಶ ಅಥವಾ ಅಪ್ಘಾನಿಸ್ತಾನದಿಂದ ಬರುವ ಮುಸ್ಲಿಮರು. ಇವರಿಂದಾಗಿ ಭಾರತೀಯ ಮುಸ್ಲಿಮರನ್ನೂ ಇತರೆ ಸಮುದಾಯದವರು ಅನುಮಾನದಿಂದ ನೋಡುವಂತಾಗಿದೆ. ಒಂದೊಮ್ಮೆ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಾಗಿ ಮೂರು ಮುಸ್ಲಿಂ ರಾಷ್ಟ್ರಗಳಿಂದ ಅಕ್ರಮವಾಗಿ ನುಸುಳಿದವರು ಹೊರಹೋದರೆ ಆಗ ಭಾರತ ಸ್ವಲ್ಪ ಮಟ್ಚಿಗೆ ಸ್ವಚ್ಛವಾಗುತ್ತದೆ. ಭಯೋತ್ಪಾದನಾ ಕೃತ್ಯಗಳಿಗೆ ಕಡಿವಾಣ ಬೀಳುತ್ತದೆ. ಇದರ ಪರಿಣಾಮ ಹಿಂದೂ-ಮುಸ್ಲಿಮರ ಮಧ್ಯೆ ಸೌಹಾರ್ದ ವಾತಾವರಣ ನಿರ್ಮಾಣವಾಗುತ್ತದೆ.
ಆದರೆ, ಇದಾವುದನ್ನೂ ಗಣನೆಗೆ ತೆಗೆದುಕೊಳ್ಳದ ಕೆಲವು ರಾಜಕೀಯ ಪಕ್ಷಗಳು ಪೌರತ್ವ ತಿದ್ದುಪಡಿ ಕಾಯ್ದೆ ಎಂಬುದು ಮುಸ್ಲಿಂ ವಿರೋಧಿ. ಈ ಕಾಯ್ದೆ ಜಾರಿಯಾದರೆ ಮುಸ್ಲಿಮರು ದೇಶ ಬಿಡಬೇಕಾಗುತ್ತದೆ ಎಂಬ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿವೆ. ಇದರ ಲಾಭ ಪಡೆದುಕೊಳ್ಳುತ್ತಿರುವ ಕೆಲವು ದೇಶವಿರೋಧಿ ಸಂಘಟನೆಗಳು ಯುವ ಸಮುದಾಯವನ್ನು ಎತ್ತಿಕಟ್ಟಿ ಹೋರಾಟಕ್ಕಿಳಿಯುವಂತೆ ಮಾಡುತ್ತಿವೆ.
ಹಾಗೆಂದು ಈ ರೀತಿ ವಿದೇಶದಿಂದ ಬಂದವರಿಗೆ ಭಾರತೀಯ ಪೌರತ್ವ ನೀಡುತ್ತಿರುವುದು ಇದೇ ಪ್ರಥಮವೇನೂ ಅಲ್ಲ. ಹಿಂದೆ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಪಾಕಿಸ್ತಾನದಿಂದ ನಿರಾಶ್ರಿತರಾಗಿ ಬಂದಿದ್ದ ಸುಮಾರು 12 ಸಾವಿರ ಹಿಂದೂಗಳು ಮತ್ತು ಸಿಖ್ ಸಮುದಾಯದವರಿಗೆ ಭಾರತೀಯ ಪೌರತ್ವ ನೀಡಲಾಗಿತ್ತು. ಆಗ ಅದನ್ನು ಯಾರೂ ಪ್ರಶ್ನಿಸಲೂ ಇಲ್ಲ, ವಿರೋಧಿಸಲೂ ಇಲ್ಲ. ಈಗ ಬಿಜೆಪಿ ಸರ್ಕಾರ ಅದಕ್ಕಾಗಿ ಕಾಯ್ದೆ ರೂಪಿಸುತ್ತಿದೆ ಎನ್ನುವಾಗ ರಾಜಕೀಯ ಪಕ್ಷಗಳವರು ಮುಸ್ಲಿಮರ ಜಪ ಮಾಡುತ್ತಾ, ಸುಳ್ಳುಗಳನ್ನು ಹೇಳಿ ಅವರನ್ನು ಎತ್ತಿಕಟ್ಟುತ್ತಿದ್ದಾರೆ.
ಹಿಂಸಾತ್ಮಕ ಹೋರಾಟ ಉಂಟುಮಾಡುತ್ತಿರುವ ಅನುಮಾನ
ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರದಲ್ಲಿ ಪ್ರತಿಭಟನಾಕಾರರೂ ಹಿಂಸಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ಹೋರಾಟದ ಬಗ್ಗೆಯೇ ಅನುಮಾನ ಮೂಡುವಂತೆ ಮಾಡಿದೆ. ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್ ಕೂಡ, ನಾವು ಶಾಂತಿಯುತ ಪ್ರತಿಭಟನೆಗೆ ಎಂದಿಗೂ ವಿರೋಧಿಸುವುದಿಲ್ಲ. ಪ್ರತಿಭಟನೆ ಸಂವಿಧಾನಾತ್ಮಕ ಹಕ್ಕು. ಆದರೆ ಹಿಂಸಾಚಾರ ನಡೆಸಿ ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ಅಡ್ಡಿ ಉಂಟು ಮಾಡುವುದನ್ನು ನಾವು ಎಂದಿಗೂ ಸಹಿಸುವುದಿಲ್ಲ. ಈ ಪ್ರತಿಭಟನೆಯನ್ನು ತಕ್ಷಣವೇ ನಿಲ್ಲಿಸಬೇಕು. ಆನಂತರವಷ್ಟೇ ಈ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ಮುಂದುವರಿಸಲಿದೆ. ತಕ್ಷಣಕ್ಕೆ ಈ ಅರ್ಜಿ ವಿಚಾರಣೆ ನಡೆಸಲು ಸಾಧ್ಯವೇ ಇಲ್ಲ ಎಂದು ಹೇಳಿದೆ. ಅಂದರೆ, ಹಿಂದೆ ನಿಂತು ಹೋರಾಟವನ್ನು ಪೋಷಿಸುವವರ ಉದ್ದೇಶ ಅರ್ಥವಾಗುತ್ತದೆ.
ಏಕೆಂದರೆ, ಈ ಕಾಯ್ದೆ ದೇಶದ ಯಾವುದೇ ಧರ್ಮ, ಜಾತಿ ಅಥವಾ ಸಂವಿಧಾನದ ಆಶಯಗಳಿಗೆ ವಿರುದ್ಧವಾದರೆ ನ್ಯಾಯಾಲಯದಲ್ಲಿ ಅದರ ವಿರುದ್ಧ ಹೋರಾಡಿ ನ್ಯಾಯ ಪಡೆದುಕೊಳ್ಳಲು ಎಲ್ಲಾ ಅವಕಾಶಗಳೂ ಇವೆ. ಇಂತಹ ವಿಚಾರಗಳಿದ್ದರೆ ನ್ಯಾಯಾಲಯಗಳು ಸರ್ಕಾರದ ಕಾಯ್ದೆಗಳನ್ನು ರದ್ದುಗೊಳಿಸಿದ ಅನೇಕ ಉದಾಹರಣೆಗಳು ಇವೆ. ಹೀಗಿದ್ದರೂ ಹಿಂಸಾರೂಪದ ಹೋರಾಟಗಳನ್ನು ನಡೆಸುವುದರ ಉದ್ದೇಶವೇನು ಎಂಬುದಕ್ಕೆ ಕಾಯ್ದೆ ವಿರೋಧಿಸುವವರು ಉತ್ತರಿಸಬೇಕು.