ಕೊರೊನಾ ಸೋಂಕು ತಂದಿಟ್ಟಿದ್ದ ಲಾಕ್‌ಡೌನ್ ಸಂಕೋಲೆಯಿಂದ ಇಡೀ ದೇಶವೇ ಹೊರಬರಲು ಸಿದ್ದವಾಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಇಡೀ ದೇಶದ ಜನತೆಗೆ ಬೆಲೆ ಏರಿಕೆಯ ಶಾಕ್ ನೀಡಿದೆ. ಸೋಮವಾರದಿಂದ (ಜೂನ್ 8) ಕೆಲವು ಷರತ್ತುಗಳೊಂದಿಗೆ ಪೂರ್ಣಪ್ರಮಾಣದಲ್ಲಿ ಲಾಕ್‌ಡೌನ್ ತೆರವುಗೊಳಿಸುತ್ತಿರುವ ಮೋದಿ ಸರ್ಕಾರವು ಏಕಾಏಕಿ ಲಾಕ್‌ಡೌನ್ ಘೋಷಣೆ ಮಾಡಿ ನೀಡಿದ್ದಂತಹ ಶಾಖ್ ಅನ್ನು ಮತ್ತೆ ನೀಡಿದೆ. ಲಾಕ್‌ಡೌನ್ ಪೂರ್ಣತೆರವುಗೊಳಿಸುವ ಒಂದು ದಿನ ಮುಂಚಿತವಾಗಿಯೇ ಅಂದರೆ ಜೂನ್ 7ರಿಂದಲೇ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಏರಿಕೆ ಮಾಡಿದೆ.
ಭಾನುವಾರ ದೇಶವ್ಯಾಪಿ ಪೆಟ್ರೋಲ್ ಮತ್ತು ಡಿಸೇಲ್ ದರವನ್ನು ಸರಾಸರಿ 60ಪೈಸೆ ಏರಿಕೆ ಮಾಡಿದೆ. ಈ ಏರಿಕೆಯು ಬರೀ ಭಾನುವಾರಕ್ಕೆ ಸೀಮಿತವಾಗಿಲ್ಲ. ಸೋಮವಾರ ಕೂಡಾ ಪೆಟ್ರೋಲ್ ಮತ್ತು ಡಿಸೇಲ್ ದರವನ್ನು ಸರಾಸರಿ 60 ಪೈಸೆ ಏರಿಕೆ ಮಾಡಲಾಗಿದೆ. ನಾಳೆಯೂ, ನಾಳಿದ್ದೂ ಏರಿಕೆಯಾಗಬಹುದು! ಯಾರಿಗ್ಗೊತ್ತು!??
ಪ್ರಸ್ತುತ ಬೆಂಗಳೂರಿನಲ್ಲಿ ಪೆಟ್ರೋಲ್ ದರವು 73.55 ರುಪಾಯಿಂದ 74.79 ರುಪಾಯಿಗೂ, ಡಿಸೇಲ್ ದರವು 65.96ರಿಂದ 67.11 ರುಪಾಯಿಗೂ ಏರಿಕೆಯಾಗಿದೆ. ಅಂದರೆ, ಪೆಟ್ರೋಲ್ 1.24 ಮತ್ತು ಡಿಸೇಲ್ 1.15 ರುಪಾಯಿಗಳಷ್ಟು ಏರಿಕೆಯಾಗಿದೆ. ಇದು ಕೇವಲ ಎರಡು ದಿನಗಳಲ್ಲಿ ಆಗಿರುವ ಏರಿಕೆ ಮಾತ್ರ. ನಾಗರಿಕರು ಬರುವ ದಿನಗಳಲ್ಲಿ ಮತ್ತಷ್ಟು ದರ ಏರಿಕೆ ಭಾರಹೊರಲು ಸಿದ್ದರಾಗಬೇಕಿದೆ. ಏಕೆಂದರೆ- ಲಾಕ್‌ಡೌನ್ ತೆರವುಗೊಳಿಸಿದ ಪ್ರಧಾನಿ ನರೇಂದ್ರ ಮೋದಿ ‘ಬೆಲೆ ಏರಿಕೆ’ ಮೂಲಕ ಸಾಮಾನ್ಯ ಜೀವನಕ್ಕೆ ಸ್ವಾಗತ ನೀಡಿದ್ದಾರೆ.
ಲಾಕ್‌ಡೌನ್ ಘೋಷಣೆ ಆಗುವ ಮುನ್ನ ಮತ್ತು ನಂತರದ ದಿನಗಳಲ್ಲಿ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಅಲ್ಲೊಲಕಲ್ಲೋಲಗಳಾಗಿ ಕಚ್ಚಾ ತೈಲ ದರವು ಐತಿಹಾಸಿಕ ಋಣಾತ್ಮಕ ದರಕ್ಕೆ ಕುಸಿದು ದಾಖಲೆ ಮಾಡಿತ್ತು. ಋಣಾತ್ಮಕ ದರ ಎಂದರೆ ನೀವು ಹಣ ನೀಡದೇ ಪುಕ್ಕಟ್ಟೆ ಖರೀದಿ ಮಾಡಬಹುದಾದ ಅವಕಾಶ!
ಅಚ್ಚರಿ ಎಂದರೆ ಕಚ್ಚಾ ತೈಲ ದರವು ಋಣಾತ್ಮಕ ದರಕ್ಕೆ ಕುಸಿದರೂ ಕೂಡಾ ಇಡೀ ವಿಶ್ವದ ಎಲ್ಲಾ ದೇಶಗಳ ಪೈಕಿ ಭಾರತದಲ್ಲಿ ಮಾತ್ರ ಪೆಟ್ರೋಲ್ ಮತ್ತು ಡಿಸೇಲ್ ದರ ಇಳಿಯಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಕೈಚಳಕದ ಫಲವಾಗಿ ಅಂತಹ ಸಂದರ್ಭದಲ್ಲೂ ಪೆಟ್ರೋಲ್ ಮತ್ತು ಡಿಸೇಲ್ ದರ ಗರಿಷ್ಠಮಟ್ಟದಲ್ಲೇ ಸ್ಥಿರವಾಗಿಬಿಟ್ಟಿತ್ತು. ಗರಿಷ್ಠ ಮಟ್ಟದ ಸ್ಥಿರತೆಯನ್ನು ಸುಮಾರು 83 ದಿನಗಳ ಕಾಲ ಕಾಯ್ದುಕೊಂಡಿದ್ದ ನರೇಂದ್ರ ಮೋದಿ ಸರ್ಕಾರವು ಈಗ ಮತ್ತೆ ಪೆಟ್ರೋಲ್ ಮತ್ತು ಡಿಸೇಲ್ ದರ ಏರಿಕೆಗೆ ಮುಂದಾಗಿದೆ.
ಲಾಕ್‌ಡೌನ್ ಅವಧಿಯಲ್ಲಿ ಪೆಟ್ರೋಲ್ 73.55 ರುಪಾಯಿಗೆ ಮತ್ತು ಡಿಸೇಲ್ ಅನ್ನು 65.96 ರುಪಾಯಿಗೆ 83 ದಿನಗಳ ಕಾಲ ಮಾರಾಟ ಮಾಡಲಾಗಿದೆ. ಈ ಅವಧಿಯಲ್ಲಿ ಕಚ್ಚಾ ತೈಲದರವು ಪಾತಾಳಕ್ಕೆ ಕುಸಿದಿದ್ದರೂ ಪ್ರಧಾನಿ ನರೇಂದ್ರ ಮೋದಿ ‘ಕೃಪಾಕಟಾಕ್ಷ’ದಿಂದಾಗಿ ದೇಶದಲ್ಲಿ ಮಾತ್ರ ಪೆಟ್ರೋಲ್ ಮತ್ತು ಡಿಸೇಲ್ ದರ ಇಳಿಯಲೇ ಇಲ್ಲ.
ಪ್ರಧಾನಿ ನರೇಂದ್ರ ಮೋದಿ ಪೆಟ್ರೋಲ್ ಮತ್ತು ಡಿಸೇಲ್ ದರ ಏರಿಕೆ ವಿಚಾರದಲ್ಲಿ ಶಾಕ್ ನೀಡುತ್ತಿರುವುದು ಇದೇ ಮೊದಲನೆಯದಲ್ಲ. ಮೇ 5 ರಂದು ಮಧ್ಯರಾತ್ರಿ ಅತಿ ದೊಡ್ಡ ಶಾಖ್ ನೀಡಿದ್ದರು. ಲಾಕ್‌ಡೌನ್ ಅವಧಿಯಲ್ಲಿ ಮೋದಿ ಅವರು ಹತ್ತು ಹಲವು ನಿರ್ಧಾರಗಳ ‘ಪ್ರೈಮ್ ಟೈಮ್’, ‘ಮನ್ ಕಿ ಬಾತ್’ ಘೋಷಣೆಗಳ ನಡುವೆ ಅದು ಮರೆತೇ ಹೋಗಿದೆ.
ಪೆಟ್ರೋಲ್ ಮೇಲೆ ₹10, ಡಿಸೇಲ್ ಮೇಲೆ ₹13 ಹೆಚ್ಚುವರಿ ತೆರಿಗೆ!!
ನರೇಂದ್ರಮೋದಿ ಸರ್ಕಾರ ಮೇ 5ರ ಮಧ್ಯರಾತ್ರಿ ದೇಶದ ಜನರಿಗೆ ನೀಡಿದ ಅತಿದೊಡ್ಡ ಶಾಕ್ ಏನೆಂದರೆ- ಪೆಟ್ರೋಲ್ ಮತ್ತು ಡಿಸೇಲ್ ಮೇಲೆ ಭಾರಿ ಸುಂಕ ಹೇರಿದ್ದು! ಪೆಟ್ರೋಲ್ ಮೇಲೆ 10 ರುಪಾಯಿ ಮತ್ತು ಡಿಸೇಲ್ ಮೇಲೆ 13 ರುಪಾಯಿ ಹೆಚ್ಚುವರಿ ಸುಂಕ ಹೇರಲಾಗಿತ್ತು. ಭಾರತದ ಇತಿಹಾಸದಲ್ಲಿ ಹಿಂದೆಂದೂ ಈ ಬೃಹತ್ ಪ್ರಮಾಣದಲ್ಲಿ ಸುಂಕ ಹೇರಿದ ಉದಾಹರಣೆಗಳಿಲ್ಲ.
ಮೇ 5ರಂದು ಮಧ್ಯರಾತ್ರಿ ಜಾರಿಯಾಗಿರುವ ಹೆಚ್ಚುವರಿ ಸುಂಕವು ಆಗ ತಕ್ಷಣಕ್ಕೆ ಪ್ರಯಾಣಿಕರಿಗೆ ಹೊರೆ ಆಗಿರಲಿಲ್ಲ. ಅದರ ಹೊರೆ ಈಗ ಆರಂಭವಾಗಿದೆ. ಆ ಹೊತ್ತಿಗೆ ಗ್ರಾಹಕರು ಪೆಟ್ರೋಲ್ ಮತ್ತು ಡಿಸೇಲ್ ಮೇಲೆ ಪ್ರತಿ ಲೀಟರ್ ಗೆ ಆಗ ಎಷ್ಟು ಪಾವತಿಸುತ್ತಿದ್ದಾರೋ ಅಷ್ಟೇ ಪಾವತಿಸುತ್ತಿದ್ದರು. ಅಂದರೆ, ಬೆಂಗಳೂರಿನ ಲೆಕ್ಕದಲ್ಲಿ ಪೆಟ್ರೋಲ್ 73.55 ರುಪಾಯಿಗೆ ಮತ್ತು ಡಿಸೇಲ್ ಅನ್ನು 65.96 ರುಪಾಯಿಗಳು.
ಆದರೆ, ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಆಗ ಕಚ್ಚಾ ತೈಲ ದರವು ಅತ್ಯಂತ ಕನಿಷ್ಠ ಮಟ್ಟಕ್ಕೆ ಇಳಿದಿತ್ತು. ಕಚ್ಚಾ ತೈಲ ಪ್ರತಿ ಬ್ಯಾರೆಲ್ ಗೆ 10-12 ಡಾಲರ್ ಆಜುಬಾಜಿನಲ್ಲಿ ವಹಿವಾಟಾಗಿತ್ತು. ಹೀಗಾಗಿ ವಿಶೇಷ ಹೆಚ್ಚುವರಿ ಸುಂಕ ಹೇರದೇ ಇದ್ದರೆ ಜನರಿಗೆ ಅತ್ಯಂತ ಕಡಮೆ ದರದಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ದೊರೆಯುತ್ತಿತ್ತು. ವಾಸ್ತವವಾಗಿ ಈ ಹೊತ್ತಿನ ಅಂದರೆ ಜೂನ್ 8ರ ದರಕ್ಕೆ ಹೋಲಿಸಿದರೆ ಪೆಟ್ರೋಲ್ 16 ರುಪಾಯಿ ಮತ್ತು ಡಿಸೇಲ್ 19 ರುಪಾಯಿ ಇಳಿಯಬೇಕಿತ್ತು. ಲೆಕ್ಕಚಾರದ ಪ್ರಕಾರ, ಪೆಟ್ರೋಲ್ 58 ರುಪಾಯಿಗೂ ಮತ್ತು ಡಿಸೇಲ್ 46 ರುಪಾಯಿಗೂ ಗ್ರಾಹಕರಿಗೆ ದಕ್ಕಬೇಕಿತ್ತು.
ಪೆಟ್ರೋಲ್ ಮತ್ತು ಡಿಸೇಲ್ ಮೇಲೆ ಹೆಚ್ಚುವರಿ ವಿಶೇಷ ತೆರಿಗೆ ಹೇರುವಲ್ಲಿ ಪ್ರಧಾನಿ ನರೇಂದ್ರ ಮೋದಿ ‘ತಜ್ಞ’ರಾಗಿಬಿಟ್ಟಿದ್ದಾರೆ. ಮೇ 5ಕ್ಕೂ ಮುನ್ನ ಏಪ್ರಿಲ್ 1 ರಂದು ಪೆಟ್ರೋಲ್ ಮತ್ತು ಡಿಸೇಲ್ ಮೇಲೆ ತಲಾ 3 ರುಪಾಯಿ ಹೆಚ್ಚುವರಿ ಸುಂಕ ಹೇರಿಕೆ ಮಾಡಿ ಇಡೀ ದೇಶದ ಜನತೆಯನ್ನು ಮೂರ್ಖರನ್ನಾಗಿ ಮಾಡಿದ್ದರು. ಅದಕ್ಕೂ ಮೊದಲು ಮಾರ್ಚ್ 14ರಂದು ಪೆಟ್ರೋಲ್ ಮತ್ತು ಡಿಸೇಲ್ ಮೇಲೆ ತಲಾ 3 ರುಪಾಯಿ ಸುಂಕ ಏರಿಸಿದ್ದರು.
ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದಾಗಿನಿಂದಲೂ ಹೆಚ್ಚುವರಿ ವಿಶೇಷ ಸುಂಕ ಹೇರುವ ತಂತ್ರ ಬಳಸುತ್ತಿದ್ದಾರೆ. ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಕುಸಿದರೆ ಅದರ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸುವುದಿಲ್ಲ. ಬದಲಿಗೆ ವಿಶೇಷ ತೆರಿಗೆ ಹೇರಿ, ಅದರ ಲಾಭವನ್ನು ಬೊಕ್ಕಸಕ್ಕೆ ತುಂಬಿಕೊಳ್ಳುತ್ತಾರೆ. ಕಚ್ಚಾ ತೈಲ ದರ ಏರಿದರೆ, ಪೆಟ್ರೋಲ್ ಮತ್ತು ಡಿಸೇಲ್ ದರ ಏರಿಕೆ ಮಾಡಿ ಗ್ರಾಹಕರ ಮೇಲೆ ಹೊರೆ ಹೇರುತ್ತಾರೆ.
ಅಗತ್ಯ ಬಂದಾಗಲೆಲ್ಲ ಪೆಟ್ರೋಲ್ ಮತ್ತು ಡಿಸೇಲ್ ಮೇಲಿನ ಎಕ್ಸೈಜ್ ಸುಂಕವನ್ನು ಏರಿಕೆ ಮಾಡುತ್ತಾ, ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಲೇ ಬಂದಿರುವ ಪ್ರಧಾನಿ ನರೇಂದ್ರ ಮೋದಿ ಕಳೆದ 100 ದಿನಗಳಲ್ಲಿ ಪೆಟ್ರೋಲ್ ಮೇಲೆ 16 ರುಪಾಯಿ ಮತ್ತು ಡಿಸೇಲ್ ಮೇಲೆ 19 ರುಪಾಯಿ ಹೆಚ್ಚುವರಿ ಸುಂಕ ಹೇರಿದ್ದಾರೆ.
ಇದು ದರ ಏರಿಕೆಯ ಆರಂಭ ಮಾತ್ರ. ಈಗ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರವು ಏರುಹಾದಿಯಲ್ಲಿ ಸಾಗುತ್ತಿದೆ. ಪ್ರಸ್ತುತ ವೆಸ್ಟ್ ಟೆಕ್ಸಾಸ್ ಇಂಟರ್ಮಿಡಿಯೆಟ್ (WTI) ಪ್ರತಿ ಬ್ಯಾರೆಲ್ ಗೆ 40 ಡಾಲರ್ ಮತ್ತು ಬ್ರೆಂಟ್ 43 ಡಾಲರ್ ಆಜುಬಾಜಿನಲ್ಲಿ ವಹಿವಾಟಾಗುತ್ತಿದೆ. ಬರುವ ದಿನಗಳಲ್ಲಿ ಈ ದರಗಳು 50-60 ಡಾಲರ್ ಆಜುಬಾಜಿಗೆ ಏರುವ ನಿರೀಕ್ಷೆ ಇದೆ.
ಆ ಸಂದರ್ಭದಲ್ಲಿ ಏನಾಗುತ್ತದೆ ಎಂದರೆ- ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ದರವು ತ್ವರಿತವಾಗಿ ಏರಿಕೆಯಾಗುತ್ತದೆ. ಈಗಾಗಲೇ ಲಾಕ್‌ಡೌನ್ ನಿಂದ ಬಸವಳಿದಿರುವ ಗ್ರಾಹಕರ ಹೆಗಲ ಮೇಲೆ ಮೋದಿ ಸರ್ಕಾರವು ಮತ್ತಷ್ಟು ಬೆಲೆ ಏರಿಕೆಯ ಹೊರೆ ಹೇರಲಿದೆ. ಪೆಟ್ರೋಲ್ 80 ರುಪಾಯಿ ಮತ್ತು ಡಿಸೇಲ್ 70 ರುಪಾಯಿ ಗಡಿ ದಾಟುವ ದಿನಗಳು ದೂರವಿಲ್ಲ. ಈ ಹೊರೆ ಹೊರಲು ಸಿದ್ಧರಾಗುವುದರ ಹೊರತಾಗಿ ಬಡಪಾಯಿ ಭಾರತೀಯರಿಗೆ ಬೇರೆ ಮಾರ್ಗವೇ ಇಲ್ಲಾ!!!