2022ರ ವೇಳೆಗೆ ನಿಯೋ ಸೂಪರ್ ಪವರ್ ಆಗುವ ಕನಸು ಕಾಣುತ್ತಿದೆ ಭಾರತ. ಹೆಚ್ಚೂಕಮ್ಮಿ 140 ಕೊಟಿ ಜನರಿಗೆ ಮನೆಯಾಗಿರುವ ದೇಶದಲ್ಲಿನ ರಾಜಕೀಯ, ಆಡಳಿತಾತ್ಮಕ ಹಾಗೂ ಕಾರ್ಯಾಂಗ ವ್ಯವಸ್ಥೆಗಳು ಕೆಲಸ ಮಾಡುವ ವೇಗ ಯಾವ ಮಟ್ಟಿಗೆ ಇದೆ ಎಂಬುದು ತಿಳಿಯದ ವಿಷಯವೇನಲ್ಲ.
ವಿಶ್ವ ಬ್ಯಾಂಕ್‌ನ ’Ease of Doing Business’ ರ‍್ಯಾಂಕಿಂಗ್‌ನಲ್ಲಿ 63ನೇ ಸ್ಥಾನಕ್ಕೆ ಜಿಗಿದಿರುವುದೇನೋ ಸರಿ. ಆದರೆ, ಉದ್ಯೋಗ ಸೃಷ್ಟಿಯೊಂದಿಗೆ ಸುಸ್ಥಿತ ಆರ್ಥಿಕ ಪ್ರಗತಿಗೆ ಅಗತ್ಯವಿರುವ ವಾತಾವರಣ ದೇಶದಲ್ಲಿ ಅದೆಷ್ಟರ ಮಟ್ಟಿಗೆ ಇದೆ ಎಂಬುದನ್ನು ತಳಮಟ್ಟದಲ್ಲಿ ಕಣ್ಣಿಗೆ ರಾಚುವಂತೆ ತೋರುವ ವಾಸ್ತವಾಂಶವೊಂದನ್ನು 2019-2020ರ ಆರ್ಥಿಕ ಸಮೀಕ್ಷೆಯ ವರದಿ ಕಣ್ಣ ಮುಂದೆ ಇಟ್ಟಿದೆ.
ಬಡ ಜನರಿಗೆ ಪಡಿತರ ವಿತರಣೆ ಮಾಡುವ ಸಾರ್ವಜನಿಕ ವಿತರಣಾ ವ್ಯವಸ್ಥೆಗಳಿಂದ ಹಿಡಿದು, ರಾಷ್ಟ್ರ ಭದ್ರತೆಗಾಗಿ ವಿದೇಶೀ ಶಸ್ತ್ರಾಸ್ತ್ರಗಳ ಖರೀದಿವರೆಗೂ ವಕ್ಕರಿಸಿಕೊಂಡಿರುವ ಅಧಿಕಾರಶಾಹಿತನವೆಂಬ ಕ್ಯಾನ್ಸರ್ ಗಡ್ಡೆಗೊಂದು ಕೆಮೋಥೆರಪಿ ಮಾಡದೇ ಹೋದಲ್ಲಿ ನಮ್ಮದೇ ಮಹತ್ವಾಕಾಂಕ್ಷೆಗಳು ಕೇವಲ ಭ್ರಮೆಗಳಾಗಿ ಉಳಿದುಬಿಡುತ್ತವೆ.
ಪಿಸ್ತೂಲ್ ಖರೀದಿ ಮಾಡಲು ಕೇಳುವ ದಾಖಲೆಗಳಿಗಿಂತಲೂ ಹೆಚ್ಚಾಗಿ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ರೆಸ್ಟಾರಂಟ್ ಒಂದನ್ನು ತೆರೆಯಲು ದಾಖಲೆಗಳನ್ನು ಒದಗಿಸಬೇಕೆಂಬ ವಾಸ್ತವಿಕ ಸಂಗತಿಯೊಂದರ ನಡವೆಯೇ ಇನ್ನೂ ಜೀವಿಸುತ್ತಿದ್ದೇವೆ.
2019-20ರ ಆರ್ಥಿಕ ಸಮೀಕ್ಷೆ ಪ್ರಕಾರ, ಬೆಂಗಳೂರಿನಲ್ಲಿ ರೆಸ್ಟಾರಂಟ್ ತೆರೆಯಲು ಒಟ್ಟಾರೆ 36 ವಿವಿಧ ದಾಖಲೆಗಳನ್ನು ಸರ್ಕಾರೀ ಕಚೇರಿಗಳಿಗೆ ಸಲ್ಲಿಸಬೇಕಿದೆ. ಮಿಕ್ಕಂತೆ ದೆಹಲಿಯಲ್ಲಿ 26 ಹಾಗೂ ಆರ್ಥಿಕ ರಾಜಧಾನಿ ಮುಂಬಯಿಯಲ್ಲಿ 22 ದಾಖಲೆಗಳನ್ನು ಅಧಿಕಾರಿಗಳ ಮುಂದೆ ಇಡಬೇಕಾಗಿದೆ. ಇದರೊಂದಿಗೆ ದೆಹಲಿ ಮತ್ತು ಕೋಲ್ಕತ್ತಾಗಳಲ್ಲಿ ’Police Eating License’ ಎಂದು ಪ್ರತ್ಯೇಕವಾಗಿ ಲೈಸೆನ್ಸ್‌ಗಳನ್ನು ಪಡೆಯಬೇಕಿದ್ದು, ಇವುಗಳಿಗಾಗಿ 45 ವಿವಿಧ ದಾಖಲೆಗಳನ್ನು ಸಲ್ಲಿಸಬೇಕಾಗಿದೆ.
ಇದೇ ದೆಹಲಿ ಮತ್ತು ಕೋಲ್ಕತ್ತಾಗಳಲ್ಲಿ ಪಿಸ್ತೂಲ್‌ಗಳನ್ನು ಇಟ್ಟುಕೊಳ್ಳಲು ಕ್ರಮವಾಗಿ 19 ಹಾಗೂ 12 ದಾಖಲೆಗಳನ್ನು ಸಲ್ಲಿಸಿದರೆ ಸಾಕು.
ಸೇವಾ ಕ್ಷೇತ್ರದಲ್ಲಿ ಸಾಕಷ್ಟು ಅಡೆತಡೆಗಳಿದ್ದು, ದೈನಂದಿನ ವ್ಯಾಪಾರ ನಡೆಸಿಕೊಂಡು ಹೋಗಲೂ ಸಹ ಭಾರೀ ಸವಾಲುಗಳನ್ನು ಬಾರ್ ಮತ್ತು ರೆಸ್ಟಾರಂಟ್‌ಗಳ ಮಾಲೀಕರು ಎದುರಿಸುತ್ತಿದ್ದಾರೆ.
ಚೀನಾ ಹಾಗೂ ಸಿಂಗಪುರಗಳಲ್ಲಿ ರೆಸ್ಟಾರಂಟ್‌ಗಳನ್ನು ತೆರೆಯಲು ಸರಾಸರಿ 4 ದಾಖಲೆಗಳು ಸಾಕಾದರೆ ಭಾರತದಲ್ಲಿ ಇದರ ಸರಾಸರಿ 12-16ರಷ್ಟಿದೆ. ದೇಶದ ರೆಸ್ಟಾರಂಟ್ ಮಾರುಕಟ್ಟೆ ಗಾತ್ರ $61 ಶತಕೋಟಿಯಷ್ಟಿದ್ದು, ಇಲ್ಲಿನ ಜನಸಂಖ್ಯೆ ಹಾಗೂ ಏರುಗತಿಯಲ್ಲಿ ಸಾಗುತ್ತಿರುವ ಮಧ್ಯಮ ಹಾಗೂ ಮೇಲ್ಮಧ್ಯಮ ವರ್ಗಗಳನ್ನು ಗಣನೆಗೆ ತೆಗೆದುಕೊಂಡರೆ, ಈ ಕ್ಷೇತ್ರದ ಮಾರುಕಟ್ಟೆ ವ್ಯಾಪ್ತಿ ಹಲವು ಪಟ್ಟು ವೃದ್ಧಿಸುವ ಕ್ಷಮತೆಯನ್ನು ಹೊಂದಿದೆ.
ಅತ್ತ ಚೀನಾ ಈ ವಿಷಯದಲ್ಲಿ ಜಾಣ ನಡೆಗಳನ್ನು ಇಟ್ಟಿದ್ದು, ಅಲ್ಲಿನ ರೆಸ್ಟಾರಂಟ್ ಸೇವೆಗಳ ಮಾರುಕಟ್ಟೆ ಕ್ಷೇತ್ರ $815 ಶತಕೋಟಿಯಷ್ಟಿದೆ. ಭಾರತದಲ್ಲಿ ಸರ್ಕಾರೀ ಪೋರ್ಟಲ್‌ಗಳಿಂದ ಸದ್ಯದ ಮಟ್ಟಿಗೆ ಕೇವಲ ಲೈಸೆನ್ಸ್ ಹಾಗೂ ಅನುಮತಿಗಳ ಪಟ್ಟಿಯನ್ನು ಮಾತ್ರವೇ ಪಡೆದುಕೊಳ್ಳಬಹುದಾಗಿದೆ. ಮತ್ತೊಂದೆಡೆ, ನ್ಯೂಝೀಲೆಂಡ್‌ನ ಆಕ್ಲೆಂಡ್‌ನ ಉದಾಹರಣೆಯನ್ನೇ ತೆಗೆದುಕೊಂಡರೆ: ಅಲ್ಲಿನ ಪೌರಸಭೆಯ ಪೋರ್ಟಲ್‌ನಲ್ಲಿ ಲೈಸೆನ್ಸ್ ಪಡೆದುಕೊಳ್ಳಲು ಅನುಸರಿಸಬಹುದಾದ ಪ್ರಕ್ರಿಯೆಗಳ step by step ವಿವರಗಳು, ವಿವಿಧ ಶುಲ್ಕಗಳ ಮಾಹಿತಿ ಹಾಗೂ ರೆಸ್ಟಾರಂಟ್ ತೆರೆಯಲು ತೆಗೆದುಕೊಳ್ಳಬಹುದಾದ ಸಮಯದ ಮಿತಿಯನ್ನು ಸ್ಪಷ್ಟವಾಗಿ ವಿವರಿಸಲಾಗಿರುತ್ತದೆ. ಇದರೊಂದಿಗೆ ಬಳಸಲು ಸಿದ್ಧವಿರುವ ಬ್ಯುಸಿನೆಸ್ ಐಡಿಯಾಗಳು, ಹಾಗೂ ವಿವಿಧ ಗಾತ್ರದ ಬ್ಯುಸಿನೆಸ್‌ಗಳ ಸಮಗ್ರ ಮಾಹಿತಿಯೂ ಸಹ ಅದೇ ಪೋರ್ಟಲ್‌ನಲ್ಲಿ ಸುಲಭವಾಗಿ ಲಭ್ಯವಿದೆ.
ಅಧಿಕಾರಶಾಹೀ ವರ್ಗದ ವಿಪರೀತ ದೊಣ್ಣೆನಾಯಕತ್ವ ಹಾಗೂ ವಾಸ್ತವತೆಗಳಿಗೆ ತೆರೆದುಕೊಂಡಿರುವ ಪಾರದರ್ಶಕ ವ್ಯವಸ್ಥೆಗೂ ಇರುವ ವ್ಯತ್ಯಾಸಗಳನ್ನು ಎತ್ತಿ ತೋರುವ ನೂರಾರು ಜ್ವಲಂತ ಉದಾಹರಣೆಗಳಲ್ಲಿ ಇದೂ ಒಂದು.