ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮತ್ತೊಂದು ತನ್ನ hidden agenda ವನ್ನು ದೇಶದ ನಾಗರಿಕರ ಮೇಲೆ ಹೇರಲು ಹೊರಟಿದೆ. ಕಳೆದ ಆರು ವರ್ಷಗಳಿಂದ ಮೇಕ್ ಇಂಡಿಯಾ ಹೆಸರಿನಲ್ಲಿ ಉದ್ಯಮದಲ್ಲಿ ಕೇಸರೀಕರಣವನ್ನು ಹೇರಿದ್ದ ಬಿಜೆಪಿ ಶಿಕ್ಷಣ, ಉನ್ನತ ಶಿಕ್ಷಣ ಸೇರಿದಂತೆ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿಯೂ ಕೇಸರೀಕರಣವನ್ನು ತೂರಿಸುತ್ತಾ ಬಂದಿದೆ. ಇದೀಗ ವಿದೇಶಕ್ಕೆ ಹೋಗಲು ಅಗತ್ಯವಾಗಿರುವ ಪಾಸ್ ಪೋರ್ಟ್ ನಲ್ಲೂ ಕೇಸರಿಯನ್ನು ಮಿಶ್ರಣ ಮಾಡಲು ಹೊರಡುವ ಮೂಲಕ ಬಿಜೆಪಿ ತನ್ನ ಕೇಸರೀಕರಣವೆಂಬ ಹಿಡನ್ ಅಜೆಂಡಾವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೇರಿಸುತ್ತಿದೆ!
ಇನ್ನು ಮುಂದೆ ಪಾಸ್ ಪೋರ್ಟಿನಲ್ಲೂ ಬಿಜೆಪಿಯ ಸಿಂಬಲ್ ಆಗಿರುವ ಕಮಲ ಅರಳಿದೆ. ಕೇಂದ್ರ ಸರ್ಕಾರ ಪಾಸ್ ಪೋರ್ಟಿನಲ್ಲಿ ಕಮಲವನ್ನು ಸದ್ದಿಲ್ಲದೇ ಅರಳಿಸಿದೆ. ಇತ್ತೀಚೆಗೆ ಕೇರಳದ ನಾಗರಿಕರೊಬ್ಬರು ಹೊಸ ಪಾಸ್ ಪೋರ್ಟ್ ಪಡೆದಾಗ ಅದರಲ್ಲಿ ಕಮಲದ ಚಿಹ್ನೆ ಇದ್ದದ್ದನ್ನು ನೋಡಿ ದಂಗಾಗಿ ಹೋಗಿದ್ದಾರೆ. ಇದು ಅಸಲಿಯೋ ನಕಲಿಯೋ ಎಂಬ ಅನುಮಾನ ಅವರಿಗೆ ಬಂದಿದೆ.
ಅದನ್ನು ದೃಢಪಡಿಸಿಕೊಳ್ಳಲೆಂದು ಪಾಸ್ ಪೋರ್ಟ್ ಕಚೇರಿಗೆ ಹೋಗಿ ಕೇಳಿದರೆ ಹೊಸ ಪಾಸ್ ಪೋರ್ಟ್ ಹೀಗೆಯೇ ಬರುವುದು. ಇನ್ನು ಮುಂದೆ ಪಡೆಯಲಿರುವ ಪಾಸ್ ಪೋರ್ಟ್ ಗಳಲ್ಲಿ ಕಮಲದ ಚಿಹ್ನೆ ಇರಲಿದೆ ಎಂದು ಅಧಿಕಾರಿಗಳು ಹೇಳಿ ಕಳುಹಿಸಿದ್ದಾರೆ. ಆಗಲೇ ಗೊತ್ತಾದದ್ದು ಕೇಂದ್ರ ಸರ್ಕಾರದ ಈ ಹಿಡನ್ ಅಜೆಂಡಾ.
ಇದು ಸಂಸತ್ತಿನಲ್ಲಿ ಕೋಲಾಹಲ ಎಬ್ಬಿಸಿದೆ. ಪ್ರತಿಪಕ್ಷಗಳು ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ಬಿಜೆಪಿ ಸರ್ಕಾರ ದೇಶವನ್ನು ಕೇಸರಿಮಯ ಮಾಡಲು ಹೊರಟಿದೆ. ಬಿಜೆಪಿಯ ಚಿಹ್ನೆಯೂ ಕಮಲವಾಗಿದೆ. ಈ ಹಿನ್ನೆಲೆಯಲ್ಲಿ ಕಮಲದ ಚಿಹ್ನೆಯನ್ನು ಪಾಸ್ ಪೋರ್ಟ್ ನಲ್ಲಿ ಹಾಕುವ ಅಗತ್ಯವಿರಲಿಲ್ಲ. ಎಲ್ಲಾ ಕ್ಷೇತ್ರಗಳನ್ನೂ ಹಂತಹಂತವಾಗಿ ಕೇಸರೀಮಯ ಮಾಡುತ್ತಾ ಬರುತ್ತಿರುವ ಕೇಂದ್ರ ಸರ್ಕಾರ ಇದೀಗ ಪಾಸ್ ಪೋರ್ಟ್ ನಲ್ಲಿ ಕಮಲದ ಹೂವನ್ನು ಹಾಕುವ ಮೂಲಕ ಕೇಸರೀಕರಣವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವ ಹುನ್ನಾರ ಮಾಡುತ್ತಿದೆ.
ಹೌದು ಕಮಲ ನಮ್ಮ ರಾಷ್ಟ್ರೀಯ ಹೂವು ಎಂದು ಒಪ್ಪಿಕೊಳ್ಳಬಹುದು. ಆದರೆ, ಇಷ್ಟು ವರ್ಷಗಳ ಕಾಲ ಇಲ್ಲದ ಆಲೋಚನೆ ಇದ್ದಕ್ಕಿದ್ದಂತೆ ಬಂದು ಪಾಸ್ ಪೋರ್ಟ್ ನಲ್ಲಿ ಅದರ ಚಿಹ್ನೆಯನ್ನು ಹಾಕಿದ್ದಾದರೂ ಏಕೆ ಎಂಬ ಪ್ರಶ್ನೆಗಳು ನಾಗರಿಕ ವಲಯದಲ್ಲಿ ಕೇಳಿಬರುತ್ತಿವೆ.
ಇದು ನಮ್ಮ ರಾಷ್ಟ್ರೀಯ ಹೂವು ಆಗಿದೆ. ಪಾಸ್ ಪೋರ್ಟ್ ನ ನಕಲಿಯನ್ನು ತಡೆಯುವ ನಿಟ್ಟಿನಲ್ಲಿ ಭದ್ರತೆಯನ್ನು ಹೆಚ್ಚಳ ಮಾಡಬೇಕಿತ್ತು. ಈ ಕಾರಣದಿಂದಲೇ ಕಮಲದ ಚಿಹ್ನೆಯನ್ನು ಬಳಸಿ ಅದರಲ್ಲಿ ಭದ್ರತಾ ವೈಶಿಷ್ಟ್ಯತೆಗಳನ್ನು ಅಳವಡಿಸಲಾಗಿದೆ ಎಂಬ ಸಬೂಬು ವಿದೇಶಾಂಗ ಇಲಾಖೆಯಿಂದ ಬಂದಿದೆ.
ಇದುವರೆಗೆ ಇನ್ನೂ ಹಲವು ರಾಷ್ಟ್ರೀಯ ಚಿಹ್ನೆಗಳನ್ನು ಪಾಸ್ ಪೋರ್ಟ್ ನಲ್ಲಿ ಬಳಸಲಾಗಿದೆ. ಇದೀಗ ಕಮಲದ ಸರದಿ ಬಂದಿದ್ದರಿಂದ ಅದನ್ನೇ ಬಳಸಿದ್ದೇವೆ ಎಂದು ವಿದೇಶಾಂಗ ಇಲಾಖೆ ಹೇಳಿದೆಯಾದರೂ, ಕಮಲ ಬಿಟ್ಟು ಇನ್ನೂ ಹಲವಾರು ರಾಷ್ಟ್ರೀಯ ಚಿಹ್ನೆಗಳಿದ್ದವು. ಅವುಗಳನ್ನೇ ಬಳಸಲು ಅವಕಾಶವಿತ್ತು. ಆದರೆ, ಸರ್ಕಾರ ಉದ್ದೇಶಪೂರ್ವಕವಾಗಿಯೇ ಕಮಲವನ್ನು ಪಾಸ್ ಪೋರ್ಟ್ ನಲ್ಲಿ ಬಳಸುವ ಮೂಲಕ ತನ್ನ ಕೇಸರೀಕರಣದ ಹಿಡನ್ ಅಜೆಂಡಾವನ್ನು ಮತ್ತೊಮ್ಮೆ ಪ್ರದರ್ಶಿಸಿದೆ.
ಇದುವರೆಗೆ ಬಳಸಲಾಗುತ್ತಿದ್ದ ಸಿಂಹದ ಚಿತ್ರವನ್ನು ಬದಲಿಸುವ ಅಗತ್ಯವೇನಿತ್ತು? ಹಾಗೊಂದು ವೇಳೆ ಬದಲಾಯಿಸಲೇಬೇಕೆಂದಿದ್ದರೆ ಬೇರೆ ಚಿಹ್ನೆಗಳನ್ನು ಬಳಸಬಹುದಿತ್ತು. ಅದನ್ನು ಬಿಟ್ಟು ಬಿಜೆಪಿ ತನ್ನದೇ ಚಿಹ್ನೆಯಾದ ಕಮಲವನ್ನು ಸೇರಿಸಿರುವುದು ಅಕ್ಷಮ್ಯ. ಇದು ಬಿಜೆಪಿ ಸರ್ಕಾರದ ಕೇಸರೀಕರಣದ ಮುಂದುವರಿದ ಭಾಗದಂತೆ ಕಾಣುತ್ತಿದೆ.
ಇಂತಹ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಮುನ್ನ ಸರ್ಕಾರ ಜನಾಭಿಪ್ರಾಯ ಸಂಗ್ರಹಿಸಬಹುದಿತ್ತು. ಆದರೆ, ಬಿಜೆಪಿ ಅಧಿಕಾರಕ್ಕೆ ಬಂದ ದಿನದಿಂದಲೂ ಯಾವುದೇ ನಿರ್ಧಾರಗಳಿಗೂ ಜನಾಭಿಪ್ರಾಯವನ್ನು ಸಂಗ್ರಹಿಸುವ ಗೋಜಿಗೆ ಹೋಗುತ್ತಿಲ್ಲ. ಈ ಮೂಲಕ ಪ್ರಜಾತಂತ್ರ ವಿರೋಧಿ ನಿಲುವಿಗೆ ಅಂಟಿಕೊಂಡು ತನ್ನದೇ ಆದ ಹಿಡನ್ ಅಜೆಂಡಾದಲ್ಲಿರುವ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿದೆ.