ಪಾಕಿಸ್ತಾನ ಪರ ಗೂಢಚರ್ಯೆ ನಡೆಸಿ ಮಾಹಿತಿ ಒದಗಿಸುತ್ತಿದ್ದ ಪ್ರಮುಖ ಸಂಚುಕೋರನನ್ನ ಬಂಧಿಸುವಲ್ಲಿ NIA ಯಶಸ್ವಿಯಾಗಿದೆ. 2019ರ ಡಿಸೆಂಬರ್ ನಲ್ಲಿ ನಡೆದ ಕಾರ್ಯಾಚರಣೆಯ ಮುಂದುವರಿದ ಭಾಗ ಇದಾಗಿದ್ದು, ಅಂದು ವಿಶಾಖಪಟ್ಟಣಂ ನಿಂದ ಏಳು ಮಂದಿ ನೌಕಾ ಸೇನೆಯ ಸಿಬ್ಬಂದಿಗಳನ್ನ ಕೇಂದ್ರ ಗುಪ್ತಚರ ಇಲಾಖೆ ಹಾಗೂ ನೌಕಾಸೇನೆಯ ಅಧಿಕಾರಿಗಳ ಮಾಹಿತಿಯಂತೆ ಆಂಧ್ರ ಪ್ರದೇಶ ರಾಜ್ಯ ಪೊಲೀಸರು ಅರೆಸ್ಟ್ ಮಾಡಿದ್ದರು. ಆ 7 ಮಂದಿಯಲ್ಲಿ ಇಬ್ಬರು ಕಾರವಾರದ ನೌಕಾನೆಲೆಯ ಸಿಬ್ಬಂದಿಗಳಾಗಿದ್ದರು. ʼಡಾಲ್ಫಿನ್ಸ್ ನೋಸ್ʼ ಹೆಸರಿನಲ್ಲಿ ಈ ಕಾರ್ಯಾಚರಣೆಯಲ್ಲಿ 7 ಮಂದಿ ಬಂಧನವಾಗುತ್ತಿದ್ದಂತೆ ದೇಶದಲ್ಲಿ ರಕ್ಷಣಾ ಇಲಾಖೆಯಲ್ಲಿರುವ ಸಿಬ್ಬಂದಿಗಳೇ ಶತ್ರುರಾಷ್ಟ್ರ ಪಾಕಿಸ್ತಾನ ಪರ ಗೂಢಚಾರಿಕೆ ಮಾಡುವುದು ಬಹಿರಂಗವಾಗಿತ್ತು.
ಇದೀಗ ಈ ಪ್ರಕರಣದ ಪ್ರಮುಖ ಸಂಚುಕೋರನನ್ನು NIA ಅಧಿಕಾರಿಗಳು ಮುಂಬೈಯಲ್ಲಿ ಬಂಧಿಸಿದ್ದಾರೆ. ಈತನನ್ನು ಮುಂಬೈ ನಿವಾಸಿ ಮೊಹಮ್ಮದ್ ಹಾರೂನ್ ಹಾಜಿ ಅಬ್ದುಲ್ ರೆಹ್ಮಾನ್ ಲಕ್ಡಾವಾಲ (49) ಎಂದು ಗುರುತಿಸಲಾಗಿದೆ. ಈತ ಈ ಗೂಢಚರ್ಯೆ ದಂಧೆಯ ಹಿಂದಿದ್ದ ಪ್ರಮುಖ ಸಂಚುಕೋರ ಎಂದು NIA ತಿಳಿಸಿದೆ.
ಪಾಕಿಸ್ತಾನದ ಇಬ್ಬರು ಗೂಢಚಾರ ಸಿಬ್ಬಂದಿಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಈತ, ಭಾರತೀಯ ನೌಕಾ ಸೇನೆಯ ಸಿಬ್ಬಂದಿಗಳಿಗೆ ಹಣದ ಆಮಿಷವೊಡ್ಡಿ ಮಾಹಿತಿ ಸಂಗ್ರಹಿಸಿ ಪಾಕಿಸ್ತಾನದ ಗುಪ್ತಚರ ಇಲಾಖೆಗೆ ನೀಡುತ್ತಿದ್ದ ಎನ್ನಲಾಗಿದೆ. ಅದಕ್ಕೆ ಪೂರಕವಾಗಿ ಪಾಕಿಸ್ತಾನದ ಪರ ಉದ್ಯಮ ಆಸಕ್ತಿ ಹೊಂದಿರುವವರ ಮೂಲಕ ಇಂತಹ ರಕ್ಷಣಾ ಇಲಾಖೆಯ ಮಾಹಿತಿ ನೀಡುವವರಿಗೆ ಹಣ ಸಂದಾಯವಾಗುತ್ತಿತ್ತು.
ಬಂಧಿತರಾದ ನೌಕಾ ಸಿಬ್ಬಂದಿಗಳು ಹವಾಲಾ ಆಪರೇಟರ್ವೊಬ್ಬನಿಂದ ಈ ಹಣವನ್ನ ಸಂಗ್ರಹಿಸುತ್ತಿದ್ದರು. ಅದಕ್ಕೆ ಪ್ರತಿಯಾಗಿ ಇವರು ಭಾರತೀಯ ನೌಕೆಯ ಹಾಗೂ ಜಲಾಂತರ್ಗಾಮಿ ನೌಕೆಗಳ ಸಂಚಾರದ ಸಮಯ ಹಾಗೂ ಕಾರ್ಯಯೋಜನೆಯ ಬಗ್ಗೆ ಮಾಹಿತಿ ಒದಗಿಸುತ್ತಿದ್ದರು ಎನ್ನಲಾಗಿದೆ.
ಬಂಧಿತ ಹಾರೂನ್ ಈ ಹಿಂದೆ ಹಲವು ಬಾರಿ ಕರಾಚಿಗೆ ಭೇಟಿ ನೀಡಿರುವುದು ಕೂಡಾ NIA ಅಧಿಕಾರಿಗಳಿಗೆ ಗೊತ್ತಾಗಿದೆ. ಹೀಗೆ ಕರಾಚಿಯಲ್ಲಿ ಭೇಟಿಯಾದ ಅಕ್ಬರ್ ಹಾಗೂ ರಿಜ್ವಾನ್ ಎಂಬಿಬ್ಬರು ಪಾಕಿಸ್ತಾನ ಗೂಢಚರರ ಜೊತೆ ಸಂಪರ್ಕ ಸಾಧಿಸಿದ್ದ ಈತ, ಆನಂತರ ಭಾರತದ ನೌಕಾ ಸಿಬ್ಬಂದಿಗಳನ್ನ ಸೆಳೆದು ಅವರಲ್ಲಿ ಹಣದ ಆಮಿಷವೊಡ್ಡಿ ಮಾಹಿತಿ ಒದಗಿಸಲು ಕೇಳಿಕೊಳ್ಳುತ್ತಿದ್ದ. ಹೀಗೆ ಹಣದ ಆಮಿಷಕ್ಕೊಳಗಾದ ಸಿಬ್ಬಂದಿಗಳು ರಕ್ಷಣಾ ಇಲಾಖೆಯ ಮಾಹಿತಿಯನ್ನ ಒಂದಿಂಚೂ ಬಿಡದೇ ಪಾಕಿಸ್ತಾನಕ್ಕೆ ನೀಡುತ್ತಿದ್ದರು. ಮಾತ್ರವಲ್ಲದೇ ಜಾಲತಾಣಗಳಲ್ಲೂ ಪಾಕಿಸ್ತಾನದ ಕೆಲವರ ಜೊತೆ ನೌಕಾಸೇನೆಯ ಕೆಲವು ಸಿಬ್ಬಂದಿಗಳು ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್ ಹಾಗೂ ವಾಟ್ಸಾಪ್ ಗಳಲ್ಲಿ ಸಂಪರ್ಕದಲ್ಲಿರುವುದಾಗಿಯೂ NIA ಸ್ಪಷ್ಟಪಡಿಸಿದೆ.
“ಪಾಕಿಸ್ತಾನದ ಗೂಢಚರರು ತಮ್ಮ ಕಾರ್ಯತಂತ್ರಕ್ಕಾಗಿ ಭಾರತೀಯ ಮೂಲದ ಏಜೆಂಟ್ಗಳನ್ನ ನೇಮಿಸಿಕೊಳ್ಳುತ್ತಿದ್ದು, ಆ ಮೂಲಕ ನೌಕಾ ಸೇನೆ ಹಾಗೂ ಇತರೆ ರಕ್ಷಣಾ ಇಲಾಖೆಯ ಸ್ಥಳ ಗುರುತು ಹಾಗೂ ಸೂಕ್ಷ್ಮ ಮಾಹಿತಿಗಳನ್ನ ಪಾಕಿಸ್ತಾನ ಪಡೆಯುತ್ತಿದೆ” ಎಂದು NIA ಅಧಿಕಾರಿಗಳು ತಿಳಿಸಿದ್ದಾರೆ.
ಸದ್ಯ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಾರೂನ್ ಸೇರಿ ಇದುವರೆಗೆ 11 ಮಂದಿಯನ್ನ ಬಂಧಿಸಲಾಗಿದೆ. ಇದರಲ್ಲಿ ಓರ್ವ ಹವಾಲಾ ಆಪರೇಟರ್ ಕೂಡಾ ಸೇರಿದ್ದಾನೆ. ಮಾತ್ರವಲ್ಲದೇ ಪಾಕಿಸ್ತಾನ ಮೂಲದ ಭಾರತೀಯ ವ್ಯಕ್ತಿಯೊಬ್ಬನೂ ಬಂಧಿತರಲ್ಲಿ ಸೇರಿದ್ದವನಾಗಿದ್ದಾನೆ. ಇವರೆಲ್ಲರ ಮೇಲೂ Officials Secrets Act ಹಾಗೂ UAPA ಯಂತಹ ಕಠಿಣ ಕಾಯ್ದೆಗಳನ್ನೇ ಹಾಕಲಾಗಿದೆ.
ಬಂಧಿತ ಹಾರೂನ್ ನಿಂದ ಹಲವು ಮಹತ್ವದ ದಾಖಲೆಗಳನ್ನ ವಶಕ್ಕೆ ಪಡೆದಿರುವ NIA ಅಧಿಕಾರಿಗಳು, ತನಿಖೆ ಮುಂದುವರೆಸಿದ್ದಾರೆ. ಒಟ್ಟಿನಲ್ಲಿ ದೇಶದೊಳಗಿದ್ದು ಶತ್ರು ರಾಷ್ಟ್ರಗಳಿಗೆ ಮಾಹಿತಿ ಸೋರಿಕೆ ಮಾಡುತ್ತಿದ್ದ ಇಂತಹವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವ ಅಗತ್ಯತೆಯೂ NIA ಅಧಿಕಾರಿಗಳ ಮುಂದಿದೆ.