ಕಾದುನಮ್ಮಲ್ಲನೇಕರು ನಮ್ಮ ಸಣ್ಣದೊಂದು ದೌರ್ಭಾಗ್ಯವನ್ನೋ, ನ್ಯೂನತೆಯನ್ನೋ ಹಿಡಿದುಕೊಂಡು ಕೊರಗುತ್ತಿರುತ್ತೇವೆ. ಆದರೆ, ಕೇರಳದ ಕೊಟ್ಟಯಂ ಮೂಲದ ವ್ಯಕ್ತಿಯೊಬ್ಬರು ತಮ್ಮ ದೈಹಿಕ ಸವಾಲುಗಳನ್ನು ಮೀರಿ ಪರಿಸರ ಸಂರಕ್ಷಣೆ ಕೈಂಕರ್ಯದಲ್ಲಿ ತೊಡಗಿದ್ದಾರೆ. ಅವರ ಹೆಸರು ಎನ್ ಎಸ್ ರಾಜಪ್ಪನ್.
ತನ್ನ ಸಣ್ಣ ವಯಸ್ಸಿನಲ್ಲೇ ಪೊಲಿಯೋಗೆ ಒಳಗಾದ ರಾಜಪ್ಪನ್ ಅವರಿಗೆ ಈಗ 70 ವರ್ಷ, ಪೊಲೀಯೊದಿಂದಾಗಿ ಐದು ವರ್ಷದಲ್ಲೇ ಪಾರ್ಶ್ವವಾಯುವಿಗೆ ಒಳಗಾದ ಅವರು ತಮ್ಮ ಇಚ್ಛಾಶಕ್ತಿಯಿಂದ ಹಾಗೂ ಪರಿಶ್ರಮದಿಂದಲೇ ಗುರುತಿಸಲ್ಪಟ್ಟಿದ್ದಾರೆ.
ಕಳೆದ ಐದಾರು ವರ್ಷಗಳಿಂದ ರಾಜಪ್ಪನ್ ಪ್ರತಿದಿನ ದೋಣಿ ಬಾಡಿಗೆಗೆ ತೆಗೆದುಕೊಂಡು ವೆಂಬನಾಡ್ ನದಿಯಲ್ಲಿ ಎಸೆದ ಪ್ಲಾಸ್ಟಿಕ್ ಬಾಟಲಿಗಳನ್ನು ಸಂಗ್ರಹಿಸುತ್ತಿದ್ದಾರೆ. ಸಂಗ್ರಹಿಸಿ ಅದನ್ನವರು ಸ್ಥಳೀಯ ಏಜೆನ್ಸಿಯೊಂದಕ್ಕೆ ಮಾರುತ್ತಾರೆ. ಮಾರಿ ಬಂದ ಹಣದಿಂದ ತಮ್ಮ ಜೀವನ ನಿರ್ವಹಣೆ ಮಾಡುತ್ತಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
“ನನ್ನ ಕಾಲುಗಳನ್ನು ಸರಿಸಲು ಸಾಧ್ಯವಾದ ಕಾರಣ, ದೈನಂದಿನ ವೇತನದ ಕೆಲಸವನ್ನು ಮಾಡಲು ನನಗೆ ಅವಕಾಶವಿರಲಿಲ್ಲ, ಆದ್ದರಿಂದ ನಾನು ಜೀವನೋಪಾಯಕ್ಕಾಗಿ ಈ ರೀತಿಯ ಕೆಲಸಗಳನ್ನು ಮಾಡುತ್ತಿದ್ದೇನೆ. ಒಂದು ಕಿಲೋಗ್ರಾಂ ಪ್ಲಾಸ್ಟಿಕ್ ನಿಂದ ನಾನು 12 ರೂ. ಗಳಿಸುತ್ತೇನೆ, ನಾನು ಸಂಪೂರ್ಣ ದೋಣಿ ತುಂಬುವಷ್ಟು ಪ್ಲಾಸ್ಟಿಕ್ ಬಾಟಲಿಗಳನ್ನು ಸಂಗ್ರಹಿಸಿದರೂ ಅದು ಸಾಕಾಗುವುದಿಲ್ಲ (ತೂಕ ಕಡಿಮೆ). ಆದರೆ ಪ್ಲಾಸ್ಟಿಕ್ ಬಾಟಲಿಗಳನ್ನು ಸಂಗ್ರಹಿಸುತ್ತಿದ್ದೇನೆ, ಏಕೆಂದರೆ ಆ ಮೂಲಕ ನಾನು ನದಿಯನ್ನೂ ನನ್ನನ್ನೂ ಉಳಿಸುತ್ತೇನೆ, ಅದು ನಿಜಕ್ಕೂ ಮುಖ್ಯವಾದುದು ”ಎಂದು ಅವರನ್ನು ಸಂದರ್ಶಿಸಿದ ದಿ ಬೆಟರ್ ಇಂಡಿಯಾಕ್ಕೆ ತಿಳಿಸಿದ್ದಾರೆ.
ಏಕಾಂಗಿಯಾಗಿರಲು ಆದ್ಯತೆ ನೀಡುವ ರಾಜಪ್ಪನ್, ತನ್ನ ಹೊರೆಯನ್ನು ಕುಟುಂಬದ ಮೇಲೆ ಹೇರಲು ಬಯಸದಷ್ಟು ಸ್ವಾಭಿಮಾನಿ, ಹಾಗಾಗಿ ಒಂಟಿಯಾಗಿಯೇ ಬದುಕಲು ನಿರ್ಧರಿಸಿದ್ದಾರೆ. ಆಹಾರವನ್ನು ಅವರ ಸಹೋದರಿ ವಿಲಾಸಿನಿ ತಯಾರಿಸಿ ನೀಡುತ್ತಾರೆ, ಬಿಟ್ಟರೆ ಉಳಿದೆಲ್ಲಾ ತನ್ನ ಕೆಲಸಗಳನ್ನು ತಾವೇ ನೋಡಿಕೊಳ್ಳುತ್ತಿದ್ದಾರೆ ರಾಜಪ್ಪನ್!.
2018 ರ ಕೇರಳ ಪ್ರವಾಹದ ಸಂದರ್ಭದಲ್ಲಿ, ರಾಜಪ್ಪನ್ ಅವರ ಮನೆ ಸಾಕಷ್ಟು ಹಾನಿಗೊಳಗಾಗಿದೆ. ಆಗಲೂ, ರಾಜಪ್ಪನ್ ಯಾರ ಸಹಾಯವನ್ನು ಕಾದು ಕೂರಲಿಲ್ಲ. ಬದಲಾಗಿ, ಕೆಲವು ವಾರಗಳವರೆಗೆ ದೋಣಿಯಲ್ಲಿ ವಾಸಿಸುತ್ತಿದ್ದರು ಎಂದು ನೆಕ್ಸಸ್ ಫಾರ್ ಗುಡ್ ವೆಬ್‌ಸೈಟ್ ಹೇಳಿದೆ.
ಕರೋನ ವೈರಸ್ ಪ್ರೇರಿತ ಲಾಕ್‌ಡೌನ್ ಘೋಷಿಸಿದ ನಂತರ, ಪ್ರವಾಸಿಗರ ಸಂಖ್ಯೆ ಇಳಿಮುಖವಾದ್ದರಿಂದ, ನದಿಯಲ್ಲಿ ತೇಲುವ ಪ್ಲಾಸ್ಟಿಕ್ ಬಾಟಲಿಗಳ ಸಂಖ್ಯೆ ಕಡಿಮೆಯಾಗಿದೆ. ಇದು ತನ್ನ ಅಲ್ಪಗಳಿಕೆಯ ಭಾಗವನ್ನು ಇನ್ನಷ್ಟು ಕುಂಠಿತಗೊಳಿಸುವುದಾದರೂ, ಅದರ ಕುರಿತು ಚಿಂತಿಸದ ರಾಜಪ್ಪನ್ ʼಬಾಟಲಿಗಳಲ್ಲದೆ ನದಿ ಸ್ವಚ್ಛವಾಗಿರುವುದನ್ನು ಕಾಣುವಾಗ ಅತೀವ ಖುಶಿಯಾಗುತ್ತದೆʼ ಎನ್ನುತ್ತಾರೆ ಮುಗ್ಧವಾಗಿ.
ರಾಜಪ್ಪನ್ ಅವರ ಈ ಪ್ರಕೃತಿಯ ಸೇವೆ ಬೆಳಕಿಗೆ ಬಂದಿರುವುದರ ಹಿಂದೆಯೂ ಒಂದು ಸೋಜುಗದ ಕತೆಯಿದೆ. ನಂದು ಎಂಬ ಹವ್ಯಾಸಿ ಫೋಟೋಗ್ರಾಫರ್ ಒಬ್ಬರು ತನ್ನ ಒಂದು ಪ್ರಾಜೆಕ್ಟ್ ಕೆಲಸಗಳಿಗಾಗಿ ವೆಂಬನಾಡ್ ನದಿಗೆ ಭೇಟಿ ನೀಡಿರದಿದ್ದರೆ, ರಾಜಪ್ಪನ್, ಅವರ ಬದುಕು, ಪ್ರಕೃತಿಗೆ ಅವರು ಮಾಡುತ್ತಿರುವ ಸೇವೆ ಯಾವುದೂ ವೆಂಬನಾಡಿನ ಹೊರಗೆ ಯಾರಿಗೂ ತಿಳಿಯುತ್ತಿರಲಿಲ್ಲ. ಹೊರ ಜಗತ್ತಿಗೆ ಮಾತ್ರವಲ್ಲ, ವೆಂಬನಾಡ್ ಆಸುಪಾಸಿನವರೂ ಇವರು ದೋಣಿ ಹಿಡಿದು ಮೀನುಗಾರಿಕೆ ನಡೆಸುತ್ತಿದ್ದಾರೆಂದೇ ಭಾವಿಸಿದ್ದರು.
ರಾಜಪ್ಪನ್ ಬಾಟಲಿ ಸಂಗ್ರಹಿಸುವ ಚಿತ್ರವನ್ನು ಸೆರೆಹಿಡಿದ ನಂದು ತನ್ನ ಫೇಸ್‌ಬುಕ್ ಖಾತೆಯ ಮೂಲಕ ಅದನ್ನು ಹಂಚುತ್ತಾರೆ. ಅಲ್ಲದೆ, ಒಂದು ವಿಡಿಯೋ ಮಾಡಿ ಯೂಟ್ಯೂಬ್ ಅಲ್ಲಿ ಹರಿಬಿಡುತ್ತಾರೆ. 2020 ರ ಜೂನ್- ಜುಲೈ ತಿಂಗಳ ವೇಳೆಯಲ್ಲಿ ರಾಜಪ್ಪನ್ ಹಾಗೂ ಅವರ ಈ ಸೇವೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದು, ಸಾಮಾಜಿಕ ಬಳಕೆದಾರರು ರಾಜಪ್ಪನ್ ಅವರಿಗೆ ಪದ್ಮಶ್ರೀ ನೀಡಿ ಗೌರವಿಸಬೇಕೆಂದು, ಆ ಮೂಲಕ ಅವರು ಮಾಡುತ್ತಿರುವ ಸೇವೆಯನ್ನು ಪರಿಗಣಿಸಬೇಕೆಂದು ಆಗ್ರಹಿಸಿದ್ದಾರೆ. ಅಲ್ಲದೆ ಪರಿಸರವನ್ನು ರಕ್ಷಿಸುವ ಮೂಲಕ ಜೀವನ ಸಾಗಿಸುವ ವಿಭಿನ್ನ ಸಾಮರ್ಥ್ಯದ ರಾಜಪ್ಪನ್ ಅವರಿಗೆ ಸ್ವಂತ ದೋಣಿ ಕೊಡಿಸುವುದಾಗಿಯೂ ಕೇರಳ ಸ್ಕ್ರಾಪ್ ಮರ್ಚಂಟ್ ಅಸೋಸಿಯೇಷನ್ ಘೋಷಿಸಿತ್ತು.