ರಾನು ಮಂಡಲ್ ಮೇಕಪ್ ಹಾಕೋಲ್ಲ, ಕಾಸ್ಮೆಟಿಕ್ ಬೆಲೆ ಗೊತ್ತಿಲ್ಲ!
ರಾನು ಮಾರಿಯಾ ಮಂಡಲ್ ಕಾಸ್ಮೆಟಿಕ್ ಬೆಲೆ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಏಕೆಂದರೆ, ಅವರು ಹೆಚ್ಚು ಮೇಕಪ್ ಮಾಡಿಕೊಳ್ಳುವುದಿಲ್ಲ! #SayItLikeNirmalaTai.
ಜನಸಾಮಾನ್ಯ: ತೈಲ ದರ ಗಗನಕ್ಕೇರುತ್ತಿದೆ.
ನಿರ್ಮಲಾ ಸೀತಾರಾಮನ್: ಅಯ್ಯೋ ನಾನು ಸಚಿವಳಾಗಿರುವುದರಿಂದ ಪೆಟ್ರೋಲ್/ಡೀಸೆಲ್ ಗೆ ಹಣವನ್ನೇ ನೀಡುವುದಿಲ್ಲ.
ಜನಸಾಮಾನ್ಯ: ಅಯ್ಯೋ ದೇಶದಲ್ಲಿ ಈರುಳ್ಳಿ ಬೆಲೆ ಗಗನಕ್ಕೇರುತ್ತಿದೆ.
ನಿರ್ಮಲಾ ಸೀತಾರಾಮನ್: ನಮ್ಮ ಮನೆಯಲ್ಲಿ ಈರುಳ್ಳಿ-ಬೆಳ್ಳುಳ್ಳಿಯನ್ನು ಹೆಚ್ಚು ತಿನ್ನೋದಿಲ್ಲ.
ಹೀಗೆ ಹತ್ತಾರು ವಿಧದಲ್ಲಿ ಜನಸಾಮಾನ್ಯರು ಮತ್ತು ನೆಟ್ಟಿಗರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈರುಳ್ಳಿ ಬೆಲೆ ಬಗ್ಗೆ ನೀಡಿದ ಹೇಳಿಕೆಗೆ ವ್ಯಂಗ್ಯವಾಡಿದ್ದಾರೆ.
ಕಳೆದ ಹಲವು ತಿಂಗಳಿಂದ ದೇಶದಲ್ಲಿ ಈರುಳ್ಳಿ ಬೆಲೆ ಗಗನಕ್ಕೇರಿದ್ದು, ಸಂಸತ್ತಿನಲ್ಲಿ ಈ ಬಗ್ಗೆ ಎಲ್ಲಾ ಸದಸ್ಯರು ಕಳವಳ ವ್ಯಕ್ತಪಡಿಸಿದರೆ, ಈ ಮಹಾತಾಯಿ ನಮ್ಮನೇಲಿ ಜಾಸ್ತಿ ಈರುಳ್ಳಿ, ಬೆಳ್ಳುಳ್ಳಿ ತಿನ್ನೋಲ್ಲ. ಹಾಗಾಗಿ ಅದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಜನಾಕ್ರೋಶಕ್ಕೆ ತುತ್ತಾಗಿದ್ದಾರಲ್ಲದೇ, ವ್ಯಂಗ್ಯದ ಕೇಂದ್ರ ಬಿಂದುವಾಗಿದ್ದಾರೆ.
ನಿರ್ಮಲಾ ಸೀತಾರಾಮನ್ ಅವರ ಈ ಹೇಳಿಕೆ ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು ಎಂಬಂತಾಗಿದೆ. ಈರುಳ್ಳಿ ಎಷ್ಟು ಪ್ರಭಾವ ಹೊಂದಿದೆ ಎಂಬುದನ್ನು ಬಹುಶಃ ನಿರ್ಮಲಾ ಅವರಿಗೆ ತಿಳಿದಿರಲಿಕ್ಕಿಲ್ಲ. ಈ ಹಿಂದೆ 80 ರ ದಶಕದಲ್ಲಿ ಇದೇ ಈರುಳ್ಳಿ ಪ್ರಧಾನಿ ಚರಣ್ ಸಿಂಗ್ ಅವರ ನೇತೃತ್ವದ ಕೇಂದ್ರ ಸರ್ಕಾರವನ್ನೇ ಪತನಗೊಳ್ಳುವಂತೆ ಮಾಡಿತ್ತು.
ಅದೇ ರೀತಿ 1998 ರಲ್ಲಿ ದೆಹಲಿ ಮುಖ್ಯಮಂತ್ರಿಯಾಗಿದ್ದ ಸುಷ್ಮಾ ಸ್ವರಾಜ್ ಅವರು ಈರುಳ್ಳಿ ಬೆಲೆಯನ್ನು ನಿಯಂತ್ರಣಕ್ಕೆ ತರಲು ಸಾಧ್ಯವಾಗದೇ ಅಧಿಕಾರವನ್ನೇ ತ್ಯಜಿಸಿದ್ದರು.
ಈಗಲೂ ಇಂತಹದ್ದೇ ಪರಿಸ್ಥಿತಿ ಬಂದಂತಾಗಿದೆ. ಎಡೆಬಿಡದೇ ಸುರಿದ ಮಳೆಯಿಂದಾಗಿ ಮಹಾರಾಷ್ಟ್ರ, ಕರ್ನಾಟಕ ಮತ್ತು ಅವಿಭಜಿತ ಆಂಧ್ರಪ್ರದೇಶದಲ್ಲಿ ಬೆಳೆದು ನಿಂತಿದ್ದ ಈರುಳ್ಳಿ ಕೊಳೆತು ನಾಶವಾದ ಹಿನ್ನೆಲೆಯಲ್ಲಿ ಬೆಲೆ ಇಂದು ಪ್ರತಿ ಕೆಜಿಗೆ 130 ರೂಪಾಯಿಯ ಗಡಿ ದಾಟುವಂತಾಗಿದೆ.
ಈ ಬೆಲೆ ಕನಿಷ್ಠ ಪಕ್ಷ ಅಲ್ಪಸ್ವಲ್ಪ ಈರುಳ್ಳಿಯನ್ನಿಟ್ಟುಕೊಂಡಿರುವ ರೈತನಿಗಾದರೂ ಸಿಗುತ್ತಿದೆಯೇ ಎಂದು ನೋಡಿದರೆ ಅವನ ಕೈಗೆ ಪುಡಿಗಾಸು ಸಿಕ್ಕಿ, ಸಿಂಹಪಾಲನ್ನು ದಲ್ಲಾಳಿಗಳು ತಿಂದು ತೇಗುತ್ತಿದ್ದಾರೆ. ಮತ್ತೊಂದೆಡೆ ಗ್ರಾಹಕರು ಈರುಳ್ಳಿ ಖರೀದಿಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಕೈಚೆಲ್ಲುತ್ತಿರುವ ಕೇಂದ್ರ ಸರ್ಕಾರ
ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರ ಜನಸಾಮಾನ್ಯರ ನೆರವಿಗೆ ಧಾವಿಸಬೇಕಿತ್ತು. ಆದರೆ, ಈ ಖಾತೆಯ ಜವಾಬ್ದಾರಿ ಹೊತ್ತಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಮ್ಮನೇಲಿ ಈರುಳ್ಳಿ ಹೆಚ್ಚು ತಿನ್ನೋಲ್ಲ, ಅದಕ್ಕೇ ಬೆಲೆ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳೋದಿಲ್ಲ ಎಂಬ ಉಡಾಫೆಯ ಮಾತನ್ನಾಡಿದ್ದಾರೆ.
ಕೇಂದ್ರ ಸರ್ಕಾರ ಮನಸು ಮಾಡಿದ್ದರೆ ವಿದೇಶಗಳಿಂದ ಈರುಳ್ಳಿಯನ್ನು ಸಾಕಷ್ಟು ಪ್ರಮಾಣದಲ್ಲಿ ಆಮದು ಮಾಡಿಕೊಂಡು ಸಾರ್ವಜನಿಕರಿಗೆ ತಲುಪಿಸಬಹುದಿತ್ತು. ಆದರೆ, ಕೇವಲ ಕಣ್ಣೊರೆಸುವ ತಂತ್ರವೆಂಬಂತೆ ಕೆಲವೇ ಕೆಲವು ಮೆಟ್ರಿಕ್ ಟನ್ ನಷ್ಟು ಈರುಳ್ಳಿಯನ್ನು ಆಮದು ಮಾಡಿಕೊಂಡು ಕೈಚೆಲ್ಲಿ ಕುಳಿತಿದೆ. ಅಷ್ಟೇ ಅಲ್ಲ, ಬೆಲೆ ಇಳಿಕೆಗೆ ಮಾಡಬಹುದಾದ ಕಾರ್ಯತಂತ್ರವನ್ನೇ ರೂಪಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ.
ನಿರ್ಮಲಾಗೆ ಮಂಗಳಾರತಿ!
ಇನ್ನು ಈರುಳ್ಳಿ ಬೆಲೆ ಏರಿಕೆ ಬಗ್ಗೆ ಬೇಜವಾಬ್ದಾರಿಯುತವಾದ ಹೇಳಿಕೆ ನೀಡಿರುವ ನಿರ್ಮಲಾ ವಿರುದ್ಧ ಸಾರ್ವಜನಿಕರು ಮತ್ತು ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಿಮ್ಮನೆಯಲ್ಲಿ ಈರುಳ್ಳಿ ತಿನ್ನದಿದ್ದರೇನಂತೆ ಜನಸಾಮಾನ್ಯರಾದ ನಾವು ಈರುಳ್ಳಿ ತಿನ್ನುತ್ತೇವೆ. ನೀವು ಇದರ ಬೆಲೆಯನ್ನು ಇಳಿಸುವ ಬಗ್ಗೆ ಮೊದಲು ಚಿಂತನೆ ಮಾಡಿ ಎಂದು ಆಗ್ರಹಿಸುತ್ತಿದ್ದಾರೆ.
ಕೊಲ್ಕತ್ತಾದ ಗಾಯಕಿ ರಾನು ಮಂಡಲ್ ಅವರು ಹೆಚ್ಚು ಮೇಕಪ್ ಮಾಡುವುದಿಲ್ಲ. ಹೀಗಾಗಿ ಕಾಸ್ಮೆಟಿಕ್ ಬೆಲೆ ಬಗ್ಗೆ ಅವರು ತಲೆ ಕೆಡಿಸಿಕೊಳ್ಳುವುದಿಲ್ಲ. ಅದೇ ರೀತಿ, ನಿರ್ಮಲಾ ಸೀತಾರಾಮನ್ ಅವರು ಈರುಳ್ಳಿ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಟೀಕಿಸಿದ್ದಾರೆ ನೆಟ್ಟಿಗರು.
ಇಲ್ಲಿ ಸಚಿವರು ಅಥವಾ ಅವರ ಮನೆಯವರು ಈರುಳ್ಳಿ ತಿನ್ನುತ್ತಾರೋ ಇಲ್ಲವೋ ಎಂಬುದು ಮುಖ್ಯವಲ್ಲ. ಜನಸಾಮಾನ್ಯರಿಗೆ ಹೊರೆಯಾಗುತ್ತಿರುವ ಈರುಳ್ಳಿ ಬೆಲೆಯನ್ನು ಇಳಿಸುವ ವಿಚಾರ ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸಚಿವರು ಇಂತಹ ಹೇಳಿಕೆಗಳನ್ನು ನೀಡುವ ಬದಲು ಮತ್ತು ಮೊದಲು ಈರುಳ್ಳಿ ಬೆಲೆಯನ್ನು ಇಳಿಸುವ ಬಗ್ಗೆ ಕಾರ್ಯತಂತ್ರಗಳನ್ನು ರೂಪಿಸಲಿ ಎಂದು ನೆಟ್ಟಿಗರು ಸವಾಲು ಹಾಕಿದ್ದಾರೆ.