ಕರೋನಾ ಸೋಂಕು ನಿಗ್ರಹಕ್ಕಾಗಿ ದೇಶವ್ಯಾಪಿ ಲಾಕ್‌ಡೌನ್ ಘೋಷಿಸಿದ ಹಿನ್ನೆಲೆಯಲ್ಲಿ ಆದಾಯವೇ ಬಾರದೆ ಬೊಕ್ಕಸ ಬರಿದಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಪ್ರಸಕ್ತ ವಿತ್ತೀಯ ವರ್ಷದಲ್ಲಿನ ಸಾಲದ ಪ್ರಮಾಣವನ್ನು 12 ಲಕ್ಷ ಕೋಟಿ ರುಪಾಯಿಗಳಿಗೆ ಏರಿಸಲಿದೆ. ಈ ಹಿಂದೆ ಪಡೆಯುವ ಸಾಲದ ಪ್ರಮಾಣವನ್ನು 7.8 ಲಕ್ಷ ಕೋಟಿ ರುಪಾಯಿಗಳೆಂದು ನಿಗದಿ ಮಾಡಲಾಗಿತ್ತು. ಅಂದರೆ 4.2 ಲಕ್ಷ ಕೋಟಿಗಳಷ್ಟು ಹೆಚ್ಚುವರಿಯಾಗಿ ಸಾಲ ಮಾಡಲು ಮುಂದಾಗಿದೆ. ಇದರೊಂದಿಗೆ ದೇಶದ ಸಾಲದ ಮೊತ್ತವು ನರೇಂದ್ರ ಮೋದಿ ಅವರ ಘನ ಅಧಿಕಾರದ ಅವಧಿಯಲ್ಲಿ 1 ಲಕ್ಷ ಕೋಟಿಯನ್ನು ದಾಟುತ್ತಿದೆ.
ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ದೇಶದ ಸಾಲದ ಪ್ರಮಾಣ ಬೃಹತ್ ಪ್ರಮಾಣದಲ್ಲಿ ಏರಿಕೆಯಾಗಿದೆ. ಅದಕ್ಕೆ ಸ್ಪಷ್ಟ ಕಾರಣವೇನೆಂಬುದನ್ನು ಮೋದಿ ಸರ್ಕಾರವು ಇದುವರೆಗೆ ನೀಡಿಲ್ಲ. ಆದರೆ, ಮೋದಿ ಸರ್ಕಾರದ ತರ್ಕರಹಿತ ಆರ್ಥಿಕ ನೀತಿಗಳು ಇದಕ್ಕೆ ಕಾರಣ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದೆ. ನರೇಂದ್ರಮೋದಿ ಪ್ರಧಾನಿಯಾಗಿ ಅಧಿಕಾರ ಗ್ರಹಿಸುವ ಮುನ್ನಾ ಅಂದರೆ, 2014 ಮಾರ್ಚ್ ಅಂತ್ಯಕ್ಕೆ ಇದ್ದ ದೇಶದ ಸಾಲದ ಮೊತ್ತವು 53.11 ಲಕ್ಷ ಕೋಟಿ ರುಪಾಯಿಗಳು. ಮೋದಿ ಆಡಳಿತದ ಮೊದಲ ಐದೂವರೆ ವರ್ಷಗಳ ಅವಧಿಯಲ್ಲಿ ಅಂದರೆ, ಸೆಪ್ಟೆಂಬರ್ 2019ರ ವೇಳೆಗೆ 91.01 ಲಕ್ಷ ಕೋಟಿ ರುಪಾಯಿಗಳಿಗೆ ಏರಿತ್ತು. ಮೋದಿ ಅಧಿಕಾರಕ್ಕೆ ಬಂದ ನಂತರ ಏರಿಕೆ ಆಗಿರುವ ಸಾಲದ ಮೊತ್ತವು 37.9 ಲಕ್ಷ ಕೋಟಿ ರುಪಾಯಿಗಳು. ಶೇಕಡವಾರು ಪ್ರಮಾಣದಲ್ಲಿ ಶೇ.71.36ರಷ್ಟು.
ಸಾಮಾನ್ಯವಾಗಿ ಮಾರ್ಚ್ ಅಂತ್ಯಕ್ಕೆ ಆಯಾ ವರ್ಷದ ಸಾಲದ ಅಂಕಿಅಂಶಗಳನ್ನು ಏಪ್ರಿಲ್ ತಿಂಗಳ ಅಂತ್ಯದಲ್ಲಿ ಪ್ರಕಟಿಸಲಾಗುತ್ತದೆ. ಪ್ರಸಕ್ತ ವರ್ಷದಲ್ಲಿ ಇದುವರೆಗೂ ಪ್ರಕಟವಾಗಿಲ್ಲ. ಕಳೆದ ವಿತ್ತೀಯ ವರ್ಷದ ಉತ್ತರಾರ್ಧದಲ್ಲಿ ಮೊದಿ ಸರ್ಕಾರ ಏನಿಲ್ಲವೆಂದರೂ 6 ಲಕ್ಷ ಕೋಟಿ ರುಪಾಯಿಗಳಷ್ಟು ಸಾಲ ಮಾಡಿರುವ ಅಂದಾಜಿದ್ದು, ಒಟ್ಟಾರೆ ಸಾಲವು 97 ಲಕ್ಷ ಕೋಟಿ ಆಜುಬಾಜಿಗೆ ಏರಬಹುದು. ಈ ಲೆಕ್ಕವು 2020 ಮಾರ್ಚ್ ಅಂತ್ಯದವರೆಗೆ ಮಾತ್ರ.
ನರೇಂದ್ರ ಮೋದಿ ಅವರು ನಮಸ್ತೆ ಟ್ರಂಪ್ ಕಾರ್ಯಕ್ರಮ ಮಾಡಲು ಮತ್ತು ಮಧ್ಯಪ್ರದೇಶದಲ್ಲಿ ಹಿಂಬಾಗಿಲಿನಿಂದ ಸರ್ಕಾರ ರಚಿಸುವ ಸಲುವಾಗಿ ಕರೋನಾ ಸೋಂಕು ತಡೆಗೆ ಮಾರ್ಚ್ ಕೊನೆವಾರದಲ್ಲಿ ಲಾಕ್‌ಡೌನ್ ಘೋಷಿಸಿರಬಹುದು. ಆದರೆ, ಜನವರಿ ಆರಂಭದಿಂದಲೇ ಕರೋನಾ ಸೋಂಕು ಆರ್ಥಿಕ ಚಟುವಟಿಕೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತ್ತು. ಹೀಗಾಗಿ ಕಳೆದ ವಿತ್ತೀಯ ವರ್ಷದ ಕೊನೆ ತ್ರೈಮಾಸಿಕದಲ್ಲಿನ ಬೊಕ್ಕಸಕ್ಕೆ ಹೆಚ್ಚಿನ ಆದಾಯವೇನೂ ಬಂದಿಲ್ಲ. ಅದಕ್ಕೂ ಹಿಂದಿನ ಮೂರು ತ್ರೈಮಾಸಿಕಗಳಲ್ಲಿ ಕೂಡಾ ಸರ್ಕಾರ ನಿರೀಕ್ಷಿಸಿದಷ್ಟು ಜಿಎಸ್ಟಿ ಸೇರಿದಂತೆ ತೆರಿಗೆ ಸಂಪನ್ಮೂಲ ಕ್ರೋಢೀಕರಣವಾಗಿಲ್ಲ. ಹೀಗಾಗಿ 2019-20ನೇ ಸಾಲಿನಲ್ಲಿ ಬಜೆಟ್ ನಲ್ಲಿ ಅಂದಾಜಿಸಿದ ವಿತ್ತೀಯ ಕೊರತೆಯು ಶೇ.3.5ರ ಬದಲಿಗೆ ಶೇ.5.5ಕ್ಕೆ ಏರುವ ಅಂದಾಜು ಮಾಡಲಾಗಿದೆ. ವಾಸ್ತವವಾಗಿ ಅದು ಶೇ.6ರಷ್ಟಕ್ಕೆ ಏರುವ ಸಾಧ್ಯತೆಯೂ ಇದೆ.
ಹೀಗಾಗಿ ಪ್ರಸಕ್ತ ವಿತ್ತೀಯ ವರ್ಷದಲ್ಲಿ ಮೋದಿ ಸರ್ಕಾರವು ಹೆಚ್ಚಿನ ಸಾಲ ಪಡೆಯಲು ಮುಂದಾಗುತ್ತಿದೆ. ಕರೋನಾ ಸಂಕಷ್ಟ ನಿವಾರಿಸಲು ಘೋಷಿಸಲಾಗಿರುವ ಮತ್ತು ಮುಂದೆ ಘೋಷಿಸಲ್ಪಡುವ ಪ್ಯಾಕೇಜುಗಳಿಗಾಗಿ ಹೆಚ್ಚಿನ ಆರ್ಥಿಕ ಸಂಪನ್ಮೂಲದ ಅಗತ್ಯ ಇರುವುದರಿಂದ ಈ ಹೊತ್ತಿನಲ್ಲಿ ಅದು ತೆರಿಗೆ ಮತ್ತಿತರ ಯಾವುದೇ ಮೂಲದಿಂದಲೂ ದಕ್ಕದಿರುವ ಕಾರಣ ಸಾಲ ಪಡೆಯುವುದು ಅನಿವಾರ್ಯವಾಗಿದೆ. ಸಾಲದ ಪ್ರಮಾಣವು ನಿರೀಕ್ಷೆ ಮೀರಿ ಹಿಗ್ಗುತ್ತಿರುವುದರಿಂದಾಗಿ ಪ್ರಸಕ್ತ ವಿತ್ತೀಯ ವರ್ಷದಲ್ಲಿ ಕೂಡಾ ವಿತ್ತೀಯ ಕೊರತೆಯು ಶೇ.6ರಷ್ಟು ದಾಟುವ ಅಂದಾಜು ಇದೆ.