ಚಿತ್ರದುರ್ಗದ ರೇಣುಕಾಸ್ವಾಮಿ ಎಂಬ ಲಿಂಗಾಯತ ಸಮುದಾಯ ಯುವಕ ಮೆಸೇಜ್ ಮಾಡಿದ್ದ ಎನ್ನುವ ಒಂದೇ ಒಂದು ಕಾರಣಕ್ಕೆ ಕೊಲೆ ಮಾಡಿದ ಆರೋಪದಲ್ಲಿ ಬಂಧನ ಆಗಿರುವ ನಟ ದರ್ಶನ್ ಸೇರಿದಂತೆ ಎಲ್ಲಾ ಆರೋಪಿಗಳಿಗೆ ನಿನ್ನೆ ರಾತ್ರಿ ಊಟದ ವ್ಯವಸ್ಥೆ ಮಾಡಲಾಗಿದೆ. 6 ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿರುವ ಆರೋಪಿಗಳಿಗೆ ಫೇಮಸ್ ಚಿಕ್ಕಪೇಟೆಯ ದೊನ್ನೆ ಬಿರಿಯಾನಿ ತರಿಸಿಕೊಟ್ಟಿದ್ದಾರೆ ಪೊಲೀಸರು. ಪ್ರವಿತ್ರಾಗೌಡ ಹೊರತುಪಡಿಸಿ ಉಳಿದ 12 ಆರೋಪಿಗಳಿಗೆ ದೊನ್ನೆ ಬಿರಿಯಾನಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಇದು ಎಷ್ಟು ಸರಿ ಅನ್ನೋ ಬಗ್ಗೆ ಪರ ವಿರೋಧ ಚರ್ಚೆ ನಡುವೆ, ಪೊಲೀಸ್ರ ಕ್ರಮವನ್ನು ಕರ್ನಾಟಕ ಸರ್ಕಾರದ ಹೋಂ ಮಿನಿಸ್ಟರ್ ಸಮರ್ಥನೆ ಮಾಡಿಕೊಂಡಿದ್ದಾರೆ.

ಕೊಲೆ ಆರೋಪಿಗಳಿಗೆ ಬಿರಿಯಾನಿ ತರಿಸಿ ಕೊಟ್ಟ ವಿಚಾರದಲ್ಲಿ ಪೊಲೀಸರ ನಡೆ ಬಗ್ಗೆ ಸಾರ್ವಜನಿಕವಾಗಿ ಆಕ್ರೋಶ ವ್ಯಕ್ತವಾಗ್ತಿದೆ. ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ಬಿರಿಯಾನಿ ಊಟ ತಂದು ಕೊಟ್ಟ ಬಗ್ಗೆ ಗೃಹ ಸಚಿವರನ್ನು ಮಾಧ್ಯಮಗಳು ಪ್ರಶ್ನೆ ಮಾಡಿದಾಗ, ನನಗೆ ಗೊತ್ತಿಲ್ಲ. ಊಟ ಇಲ್ಲದೆ ಸಾಯಿಸುವುದಕ್ಕೆ ಆಗಲ್ವಲ್ಲ..? ಊಟ ತರಿಸಿ ಕೊಡುತ್ತಾರೆ. ಅದರಲ್ಲಿ ಬಿರಿಯಾನಿ ತರಿಸಿಕೊಟ್ರಾ..? ಚಿಕನ್ ತರಿಸಿಕೊಟ್ರಾ ಗೊತ್ತಿಲ್ಲ ಎನ್ನುವ ಮೂಲಕ ಪರೋಕ್ಷವಾಗಿ ಪೊಲೀಸ್ರ ಕೆಲಸವನ್ನು ಪರಮೇಶ್ವರ್ ಸಮರ್ಥನೆ ಮಾಡಿಕೊಂಡಿದ್ದಾರೆ. ಈ ನಡುವೆ ಪೊಲೀಸ್ ಠಾಣೆಯಲ್ಲಿ ದರ್ಶನ್ ಮತ್ತೊಂದು ಬೇಡಿಕೆ ಇಟ್ಟಿರುವುದು ಗೊತ್ತಾಗ್ತಿದೆ.

ನಟ ದರ್ಶನ್ ಸಿಗರೇಟ್ ಬೇಕು ಎಂದು ಪೊಲೀಸ್ರ ಮುಂದೆ ಬೇಡಿಕೆ ಇಟ್ಟಿದ್ದಾನೆ ಅನ್ನೋದು ಗೊತ್ತಾಗಿದೆ. ಆರೋಪಿ ದರ್ಶನ್ ಪೊಲೀಸ್ ಕಸ್ಟಡಿಯಲ್ಲಿ ಸಿಗರೇಟ್ ಬೇಕೆಂದು ಕೇಳುತ್ತಿದ್ದಾನೆ. ಆದರೆ ಸಿಗರೇಟ್ ನೀಡಲು ಸಾಧ್ಯವಿಲ್ಲ ಅಂತ ದರ್ಶನ್ ಬೇಡಿಕೆ ನಿರಾಕರಣೆ ಮಾಡಿದ್ದಾರಂತೆ ಪೊಲೀಸ್ರು. ಗೃಹ ಸಚಿವರೇ ಸಿಗರೇಟ್ ಅವಶ್ಯಕತೆ ಬಿದ್ದಿದೆ. ದರ್ಶನ್ ಇನ್ನು ಆರೋಪಿ ಮಾತ್ರ ಅಪರಾಧಿಯಲ್ಲ, ಸಿಗರೇಟ್ಗೆ ವ್ಯವಸ್ಥೆ ಮಾಡಬಹುದಲ್ಲವೇ ಅನ್ನೋ ಕುಹಕದ ಮಾತು ಕೇಳುವಂತಾಗಿದೆ. ನಟ ದರ್ಶನ್ ಸ್ಟಾರ್ ಅನ್ನೋ ಕಾರಣಕ್ಕೆ ಬಿರಿಯಾನಿ ತರಿಸಿಕೊಟ್ಟಿರಬಹುದು. ಆದರೆ ಓರ್ವ ಸಾಮಾನ್ಯ ಅಪರಾಧಿ ಯಾವುದೋ ಒಂದು ಕೇಸ್ನಲ್ಲಿ ಈ ರೀತಿ ಅರೆಸ್ಟ್ ಆದಾಗಾ ಎಲ್ಲಿದ್ದು ಬಿರಿಯಾನಿ ಬರುತ್ತದೆ..? ಆಗಲೂ ವ್ಯವಸ್ಥೆ ಆಗುತ್ತಾ..? ಆತನನ್ನೂ ಸಾಯಿಸಲು ಆಗಲ್ಲ ಅಲ್ಲವೇ..?

ದರ್ಶನ್ ರಕ್ಷಣೆ ಇಬ್ಬರು ಸಚಿವರು ಪ್ರಯತ್ನ ಮಾಡ್ತಿದ್ದಾರೆ ಅನ್ನೋ ವಿಚಾರಕ್ಕೂ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದು, ಕಾನೂನಿನ ಪ್ರಕಾರ ಏನು ಕ್ರಮ ತೆಗೆದುಕೊಳ್ಳಬೇಕು ಅದನ್ನು ಪೊಲೀಸ್ ಇಲಾಖೆ ತೆಗೆದುಕೊಳ್ಳುತ್ತದೆ. ದರ್ಶನ್ನನ್ನು ಬಚಾವ್ ಮಾಡಲು ಪ್ರಭಾವಿ ರಾಜಕಾರಣಿಗಳು ಕರೆ ಮಾಡಿದ ವಿಚಾರ ನನಗೆ ಗೊತ್ತಿಲ್ಲ. ನನಗೆ ಗೊತ್ತಿರುವಂತೆ ಯಾರು ಪ್ರಯತ್ನ ಮಾಡಿಲ್ಲ. ನನ್ನ ಹತ್ತಿರ ಅಂತೂ ಯಾರೊಬ್ಬರೂ ಪ್ರಯತ್ನ ಮಾಡಿಲ್ಲ. ಕಾನೂನಿನಲ್ಲಿ ಏನು ಕ್ರಮ ತೆಗೆದುಕೊಳ್ಳೋಕೆ ಅವಕಾಶವಿದೆ ಅದನ್ನು ಪೊಲೀಸ್ರು ತೆಗೆದುಕೊಳ್ತಾರೆ. ಸರ್ಕಾರದಿಂದ ನಾವ್ಯಾರು ಮಧ್ಯಪ್ರವೇಶ ಮಾಡಲ್ಲ. ಸರ್ಕಾರ ಪೊಲೀಸರಿಗೆ ಫ್ರೀ ಹ್ಯಾಂಡ್ ಕೊಟ್ಟಿದೆ. ರೇಣುಕಾಸ್ವಾಮಿ ಕುಟುಂಬದ ಪರವಾಗಿ ಸರ್ಕಾರ ಏನು ಮಾಡಬಹುದು ಅನ್ನೋದನ್ನ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ ಎಂದಿದ್ದಾರೆ.
