ಯುಪಿಎ ಸರ್ಕಾರದ ಅವಧಿಯಲ್ಲಿ ದೇಶದ ಆರ್ಥಿಕತೆ ವಿನಾಶದತ್ತಾ ಸಾಗಿತ್ತೇ? ಅದನ್ನು ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಸರಿಪಡಿಸಿತೇ? ಹೌದು ಅಂತಾ ಖುದ್ದು ಪ್ರಧಾನಿ ನರೇಂದ್ರ ಮೋದಿಯೇ ಹೇಳಿಕೊಂಡಿದ್ದಾರೆ.
ಅಸೋಚಾಮ್ (Associated Chambers of Commerce and Industry of India) ಶತಮಾನೋತ್ಸವ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಮೋದಿ ಅವರು ಹೇಳಿದ್ದಿಷ್ಟು-‘ನಮ್ಮ ದೇಶದ ಆರ್ಥಿಕತೆಯು ಐದಾರು ವರ್ಷಗಳ ಹಿಂದೆ ವಿಪತ್ತಿನತ್ತ ಸಾಗುತ್ತಿತ್ತು, ನಮ್ಮ ಸರ್ಕಾರ ಅದನ್ನು ಸ್ಥಿರಗೊಳಿಸುವುದಲ್ಲದೆ, ಅದಕ್ಕೆ ಶಿಸ್ತು ತರಲು ಪ್ರಯತ್ನಗಳನ್ನು ಮಾಡಿದೆ’.
ಇದಲ್ಲದೇ ಅವರು ಬ್ಯಾಂಕಿಂಗ್ ವ್ಯವಸ್ಥೆ ಸುಧಾರಣೆ, ಅಪನಗದೀಕರಣ, ಜಿಎಸ್ಟಿ ಮತ್ತಿತರ ಆರ್ಥಿಕ ಸುಧಾರಣೆಗಳ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ. ಪ್ರಸಕ್ತ ವಿತ್ತೀಯ ವರ್ಷದ ದ್ವಿತೀಯ ತ್ರೈಮಾಸಿಕದ ಜಿಡಿಪಿ ಶೇ.4.5ಕ್ಕೆ ಕುಸಿದು ಆರು ವರ್ಷಗಳಲ್ಲೇ ಅತಿ ಕನಿಷ್ಠ ಅಭಿವೃದ್ಧಿ ದಾಖಲಿಸಿರುವ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ಅವರ ಮಾತುಗಳ ಸತ್ಯಾಸತ್ಯತೆ ಏನೆಂಬುದನ್ನು ತಿಳಿಯುವುದು ಅಗತ್ಯ. ನರೇಂದ್ರ ಮೋದಿ ಅವರು ಹೇಳಿದ್ದು ನಿಜಕ್ಕೂ ಸತ್ಯವೇ? ದೇಶದ ಆರ್ಥಿಕತೆ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ನೂರಾರು ಉದ್ಯಮಿಗಳ ಮುಂದೆ ಆಗುವ ಮುಜುಗರ ತಪ್ಪಿಸಿಕೊಳ್ಳಳು ತಪ್ಪು ಮಾಹಿತಿ ನೀಡಿದರೆ? ಅವರು ತಪ್ಪು ಮಾಹಿತಿ ನೀಡಿದ್ದಂತೂ ಸತ್ಯಎಂಬುದನ್ನು ಕೆಳಕಂಡ ಅಂಕಿಅಂಶಗಳೇ ಹೇಳುತ್ತಿವೆ.
ಯುಪಿಎ ಅವಧಿಯಲ್ಲಿ ಹಲವು ಬಾರಿ ಜಿಡಿಪಿ ಶೇ.3ಕ್ಕಿಂತ ಕೆಳಕ್ಕೆ ಇಳಿದಿದೆ ಎಂದೂ ನರೇಂದ್ರ ಮೋದಿ ಹೇಳಿದ್ದಾರೆ. ಆದರೆ ವಾಸ್ತವವಾಗಿ ಯುಪಿಎ-1 ಮತ್ತು ಯುಪಿಎ-2 ಅವಧಿಯಲ್ಲಿ ಜಿಡಿಪಿ ಎಂದೂ ಶೇ.3ಕ್ಕಿಂತ ಕೆಳಕ್ಕೆ ಇಳಿದಿಲ್ಲ. ಯುಪಿಎ ಆಡಳಿತ ಅವಧಿಯಲ್ಲಿನ ಹತ್ತು ವರ್ಷಗಳ ಸರಾಸರಿ ಆರ್ಥಿಕ ಅಭಿವೃದ್ಧಿಯು ಜಿಡಿಪಿ ಲೆಕ್ಕಾಚಾರದಲ್ಲಿ ಶೇ.7.7ರಷ್ಟಿತ್ತು. ಅದಕ್ಕೂ ಹಿಂದಿನ ಒಂದು ದಶಕದಲ್ಲಿ ಜಿಡಿಪಿ ಬೆಳವಣಿಗೆ ಸರಾಸರಿ ಶೇ.6.2ರಷ್ಟಿತ್ತು.
ವಿಶ್ವಬ್ಯಾಂಕ್ ಮತ್ತು ಒಇಸಿಡಿ ಅಂಕಿಅಂಶಗಳ ಪ್ರಕಾರ ಯುಪಿಎ ಅವಧಿಯಲ್ಲಿ ಒಂದು ವರ್ಷ ಮಾತ್ರ ಶೇ.5ಕ್ಕಿಂತ ಕೆಳಮಟ್ಟದ ಅಭಿವೃದ್ಧಿ ದಾಖಲಾಗಿದೆ. ಅದು 2008ರಲ್ಲಿ ಶೇ.3.087ರಷ್ಟಿತ್ತು. ಜಾಗತಿಕ ಆರ್ಥಿಕ ಹಿಂಜರಿತದಿಂದಾಗಿ ಅಭಿವೃದ್ಧಿ ಹೊಂದಿ ದೇಶಗಳು ಸೇರಿದಂತೆ ಎಲ್ಲಾ ರಾಷ್ಟ್ರಗಳ ಆರ್ಥಿಕತೆಯೂ ತೀವ್ರವಾಗಿ ಕುಸಿದಿತ್ತು. ಆ ವರ್ಷ ಇದ್ದುದರಲ್ಲೇ ಆರ್ಥಿಕತೆ ಸ್ಥಿರವಾಗಿದ್ದು ಭಾರತದಲ್ಲಿ ಮಾತ್ರ. ಭಾರತವು ಆರ್ಥಿಕ ಹಿಂಜರಿತವನ್ನು ಎಷ್ಟು ತ್ವರಿತವಾಗಿ ಹಿಮ್ಮೆಟ್ಟಿಸಿತೆಂದರೆ 2009ರಲ್ಲಿ ಜಿಡಿಪಿ ಶೇ.7.862ಕ್ಕೆ ಜಿಗಿದು 2010ರಲ್ಲಿ 8.498ಕ್ಕೆ ಏರಿತು. ಆರ್ಥಿಕ ಹಿಂಜರಿತ ಅವಧಿಯಲ್ಲಿ ಮನಮೋಹನ್ ಸಿಂಗ್ ಸರ್ಕಾರ ಕೈಗೊಂಡ ಉಪಭೋಗ ಮತ್ತು ಉತ್ಪಾದನೆ ಹೆಚ್ಚಿಸುವ ಪರಿಣಾಮಕಾರಿ ಕ್ರಮಗಳಿಂದಾಗಿ ಇದು ಸಾಧ್ಯವಾಗಿತ್ತು.
ಮತ್ತೊಂದು ಸುತ್ತಿನ ಜಾಗತಿಕ ಆರ್ಥಿಕ ಹಿಂಜರಿತ ಬಂದಾಗ ದೇಶದ ಆರ್ಥಿಕತೆಯು ಸುಭದ್ರವಾಗಿಯೇ ಇತ್ತು. ಜಾಗತಿಕ ಆರ್ಥಿಕ ಹಿಂಜರಿತದ ನಡುವೆಯೂ ದೇಶದ ಜಿಡಿಪಿ ಶೇ.5ಕ್ಕಿಂತ ಕೆಳಕ್ಕೆ ಇಳಿಯಲಿಲ್ಲ. 2011 ರಲ್ಲಿ ಶೇ.5.241 ಇಳಿಯಿತು. ಕೊಂಚ ಚೇತರಿಸಿಕೊಂಡ ಆರ್ಥಿಕತೆ 2012ರಲ್ಲಿ ಶೇ. 5.456ಕ್ಕೆ ಏರಿತು. 2013ರಲ್ಲಿ 6.386 ಮತ್ತು 2014ರಲ್ಲಿ ಶೇ.7.41ಕ್ಕೆ ಜಿಗಿಯಿತು.
ಅಂದರೆ ನರೇಂದ್ರ ಮೋದಿ ಮೊದಲ ಬಾರಿಗೆ ಅಧಿಕಾರ ವಹಿಸಿಕೊಂಡಾಗ ದೇಶದ ಆರ್ಥಿಕತೆ ಸುಭದ್ರವಾಗಿತ್ತು ಮತ್ತು ತೀವ್ರ ಚೇತರಿಕೆಯತ್ತ ದಾಪುಗಾಲು ಹಾಕುತ್ತಿತ್ತು. ಮನಮೋಹನ್ ಸಿಂಗ್ ಸರ್ಕಾರದ ಅವಧಿಯಲ್ಲಿದ್ದ ಸುಸ್ಥಿರ ಆರ್ಥಿಕ ಅಭಿವೃದ್ಧಿಯನ್ನು ಆಧರಿಸಿಯೇ ನರೇಂದ್ರಮೋದಿ 2014ರ ಲೋಕಸಭಾ ಚುನವಣೆಯಲ್ಲಿ ದೇಶದ ಜಿಡಪಿಯನ್ನು ಎರಡು ಅಂಕಿಗೆ ಏರಿಸುವುದಾಗಿ ಘೋಷಿಸಿದ್ದು.
ಯುಪಿಎ ಸರ್ಕಾರ ಹಾಕಿಕೊಟ್ಟಿದ್ದ ಭದ್ರ ತಳಹದಿಯಿಂದಾಗಿ 2015ರಲ್ಲಿ ಜಿಡಿಪಿ ಶೇ.7.99ಕ್ಕೂ 2016ರಲ್ಲಿ ಶೇ.8.17ಕ್ಕೂ ಏರಿತು. ಆದರೆ, ನರೇಂದ್ರಮೋದಿ ಸರ್ಕಾರ ಆರ್ಥಿಕ ಸುಧಾರಣೆಗಳ ಹೆಸರಿನಲ್ಲಿ ಜಾರಿಗೆ ತಂದ ಅಪನಗದೀಕರಣ ಮತ್ತು ತರಾತುರಿಯಲ್ಲಿ ಜಾರಿ ಮಾಡಿದ ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆಯಿಂದಾಗಿ ದೇಶದ ಆರ್ಥಿಕತೆಗೆ ತೀವ್ರವಾಗಿ ಮುಗ್ಗರಿಸಿತು. ಒಂದೇ ವರ್ಷದಲ್ಲಿ ಅಂದರೆ 2017ರಲ್ಲಿ ಶೇ.7.16ಕ್ಕೆ ಕುಸಿಯಿತು. ಅಂದರೆ ಒಂದೇ ವರ್ಷದಲ್ಲಿ ಶೇ.1ರಷ್ಟು ಕುಸಿತ ದಾಖಲಿಸಿತು. 2018ರಲ್ಲಿ 6.81 ಕುಸಿಯಿತು. 2019ನೇ ಸಾಲಿನ ಮೊದಲ ತ್ರೈಮಾಸಿಕದಲ್ಲಿ ಶೇ.5ಕ್ಕೆ ಇಳಿದಿದ್ದು ಎರಡನೇ ತ್ರೈಮಾಸಿಕದಲ್ಲಿ ಶೇ.4.5ಕ್ಕೆ ಕುಸಿದಿದೆ. ಪ್ರಸಕ್ತ ವಿತ್ತೀಯ ವರ್ಷದ ಒಟ್ಟಾರೆ ಜಿಡಿಪಿ ಶೇ.4.2-4.5ರ ಆಜುಬಾಜಿನಲ್ಲಿ ಇರಲಿದೆ. ಅಂದರೆ ಜಾಗತಿಕ ಆರ್ಥಿಕ ಹಿಂಜರಿತದ ವರ್ಷದಲ್ಲಿದ್ದ ಶೇ.3.087 ಜಿಡಿಪಿಗೆ ಹೋಲಿಸಿದರೆ ಇದು ಎರಡನೇ ಅತ್ಯಂತ ಕನಿಷ್ಠ ಮಟ್ಟದ್ದಾಗಿದೆ.
ಇಲ್ಲಿ ಗಮನಿಸಬೇಕಾದ ಅಂಶ ಎಂದರೆ ನರೇಂದ್ರ ಮೋದಿ ಸರ್ಕಾರದ ಅವಧಿಯಲ್ಲಿ ಯಾವುದೇ ಜಾಗತಿಕ ಆರ್ಥಿಕ ಹಿಂಜರಿತಗಳಾಗಲೀ, ಜಾಗತಿಕ ರಾಜಕೀಯ ಅಸ್ಥಿರತೆಗಳಾಗಲೀ ಇರಲಿಲ್ಲ. ಆದರೂ ಆರ್ಥಿಕತೆ ಕುಸಿತಕ್ಕೆ ಮೋದಿ ಸರ್ಕರದ ಮಾಡಿದ ಎಡವಟ್ಟುಗಳೇ ಕಾರಣವಾಯ್ತು. ಅಪನಗದೀಕರಣ ಜಾರಿಗೆ ತಂದಾಗ ಇದನ್ನು ಆಕ್ಷೇಪಿಸಿದ್ದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಜಿಡಿಪಿ ಶೇ.2ರಷ್ಟು ಕುಸಿಯುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದರು. ಅವರ ಆತಂಕ ನಿಜವಾಗಿದ್ದಷ್ಟೇ ಅಲ್ಲಾ 2016ರಲ್ಲಿ ಶೇ.8.17ರಷ್ಟಿದ್ದ ಜಿಡಿಪಿಗೆ ಹೋಲಿಸಿದರೆ ಪ್ರಸಕ್ತ ಜಿಡಿಪಿ ಶೇ.3.5ಕ್ಕಿಂತ ಹೆಚ್ಚು ಕುಸಿತ ದಾಖಲಿಸಿದೆ.
ನರೇಂದ್ರ ಮೋದಿ ಅಧಿಕಾರಕ್ಕೆ ಬಂದಾಗ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಕನಿಷ್ಠ ಮಟ್ಟಕ್ಕೆ ಅಂದರೆ ಪ್ರತಿ ಬ್ಯಾರೆಲ್ ಗೆ 30 ಡಾಲರ್ ಗೆ ಕುಸಿದಿತ್ತು. ಅದೇ ಮನಮೋಹನ್ ಸಿಂಗ್ ಅವರು ಪ್ರಧಾನಿ ಆಗಿದ್ದಾಗ 130 ಡಾಲರ್ ಗೆ ಏರಿತ್ತು. ಕಚ್ಚಾ ತೈಲ ಬೆಲೆ ಕುಸಿತದ ಲಾಭವನ್ನು ಅಭಿವೃದ್ಧಿಯಾಗಿ ಪರಿವರ್ತಿಸುವಲ್ಲಿ ಮೋದಿ ಸರ್ಕಾರ ವಿಫಲವಾಗಿದೆ. ಈಗಲೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಪ್ರತಿ ಬ್ಯಾರೆಲ್ ಗೆ 60-70 ಡಾಲರ್ ಆಜುಬಾಜಿನಲ್ಲೇ ವಹಿವಾಟಾಗುತ್ತಿದೆ. ಆದರೆ, ದೇಶೀಯ ಮಾರುಕಟ್ಟೆಯಲ್ಲಿ ಮಾತ್ರ ಪೆಟ್ರೋಲ್ ಮತ್ತು ಡಿಸೇಲ್ ದರ ಹೆಚ್ಚು ಕಮ್ಮಿ ಗರಿಷ್ಠ ಮಟ್ಟದಲ್ಲಿದೆ.
ಮನಮೋಹನ್ ಸಿಂಗ್ ಅಧಿಕಾರದ ಅವಧಿಯಲ್ಲಿ ಆರ್ಥಿಕತೆ ಹೇಗಿತ್ತು ಮತ್ತು ಈಗ ಆರ್ಥಿಕತೆ ಹೇಗಿದೆ ಎಂಬುದನ್ನು ಅಂಕಿ ಅಂಶಗಳೇ ಹೇಳುತ್ತಿವೆ. ಮೋದಿ ಸರ್ಕಾರದಲ್ಲಿ ಆರ್ಥಿಕ ವಿಷಯಗಳ ಬಗ್ಗೆ ಪ್ರಬುದ್ಧವಾಗಿ ಮತ್ತು ರಚನಾತ್ಮಕವಾಗಿ ಸಲಹೆ ನೀಡುವ ಯಾವ ಸಚಿವರೂ ಇಲ್ಲ. ಖುದ್ದು ವಿತ್ತ ಸಚಿವರಿಗೆ ದೇಶದ ಆರ್ಥಿಕತೆ ಎತ್ತ ಸಾಗಿದೆ ಎಂಬುದರ ಬಗ್ಗೆ ಗೊಂದಲ ಇದ್ದಂತಿದೆ.
ಈಗಲೂ ಕಾಲ ಮಿಂಚಿಲ್ಲ. ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ ಆರ್ಥಿಕತೆ ಹಿಂಜರಿತದತ್ತ ದಾಪುಗಾಲು ಹಾಕುತ್ತಿರುವುದನ್ನು ಒಪ್ಪಿಕೊಂಡು ಅದಕ್ಕೆ ಸೂಕ್ತ ಪರಿಹಾರ ಕ್ರಮಗಳನ್ನು ಪ್ರಕಟಿಸಬೇಕಿದೆ. ಕಾರ್ಪೊರೆಟ್ ತೆರಿಗೆ ಕಡಿತದಂತಹ ಆತಾರ್ಕಿಕ ಕ್ರಮಗಳಿಂದ ವಿತ್ತೀಯ ಕೊರತೆ ಗಣನೀಯವಾಗಿ ಹಿಗ್ಗಿ ಪ್ರಸ್ತುತ ಆರ್ಥಿಕ ವ್ಯವಸ್ಥೆ ಮತ್ತಷ್ಟು ಹದಗೆಡುತ್ತದೆ ಹೊರತು ಸುಧಾರಣೆ ಆಗುವುದಿಲ್ಲ ಎಂಬುದನ್ನು ಅರಿಯಬೇಕಿದೆ. ಎಲ್ಲಕ್ಕಿಂತ ಮಿಗಿಲಾಗಿ ತಪ್ಪು ಮಾಹಿತಿ ನೀಡಿ ಜನರನ್ನು ಹಾದಿ ತಪ್ಪಿಸುವ ಹತಾಶಯತ್ನಗಳನ್ನು ಬಿಡಬೇಕಿದೆ.