CAA-NRCಯನ್ನು ವಿರೋಧಿಸಿ ಭಾರತಾದ್ಯಂತ ನಡೆದ ಪ್ರತಿಭಟನೆಗಳು ಕೆಲವೆಡೆ ಹೀಂಸಾರೂಪಕ್ಕೆ ತಿರುಗಿದ್ದವು. ಮಂಗಳೂರು ಗೋಲಿಬಾರ್ ಮತ್ತು ದೆಹಲಿ ಗಲಭೆ ಅವುಗಳಲ್ಲಿ ಪ್ರಮುಖವಾದುದು. ದೆಹಲಿ ಬಿಜೆಪಿ ನಾಯಕ ಕಪಿಲ್ ಮಿಶ್ರಾ ಅವರ ಪ್ರಚೋದನಾತ್ಮಕ ಹೇಳಿಕೆ, ʼದೇಶ್ ಕೆ ಗದ್ದಾರೊಂ ಕೊ, ಗೋಲಿ ಮಾರೊ ಸಾಲೋಂ ಕೊʼ ಎಂಬ ಅನುರಾಗ್ ಠಾಕುರ್ ಅವರ ಆವೇಶಭರಿತ ಭಾಷಣ, ದೆಹಲಿಯನ್ನು ಅಕ್ಷರಶಃ ಹೊತ್ತಿ ಉರಿಯುವಂತೆ ಮಾಡಿತ್ತು. ಐವತ್ತಕ್ಕೂ ಹೆಚ್ಚು ಜನರು ಈ ಗಲಭೆಗೆ ಪ್ರಾಣ ತೆತ್ತಿದ್ದರು.
Also Read: ದೆಹಲಿ ಗಲಭೆ ತನಿಖೆ: ಪೊಲೀಸರ ವಿರುದ್ಧ ವ್ಯಾಪಕ ಟೀಕೆ, ಫೇಸ್ಬುಕ್ಗೆ ಛೀಮಾರಿ!
ಆದರೆ, ದೆಹಲಿ ಗಲಭೆಯ ಕುರಿತಾಗಿ ʼಸತ್ಯ ಶೋಧನಾʼ ವರದಿಯನ್ನು ನೀಡಿರುವ ದೆಹಲಿ ಮೂಲದ ಸರ್ಕಾರೇತರ ಸಂಸ್ಥೆ ʼಕಾಲ್ ಫಾರ್ ಜಸ್ಟೀಸ್ʼ (Call for Justice), ತನ್ನ ವರದಿಯಲ್ಲಿ ಸುಳ್ಳುಗಳ ಮಹಾಪೂರವನ್ನೇ ಹರಿಸಿತ್ತು. ಮೇ ತಿಂಗಳ ಕೊನೆಯಲ್ಲಿ ಈ ಸತ್ಯಶೋಧನಾ ವರದಿಯನ್ನು ದೇಶದ ಗೃಹ ಸಚಿವರಾದ ಅಮಿತ್ ಶಾ ಅವರು ಒಪ್ಪಿಕೊಂಡಿದ್ದಾರೆ. ಬಾಂಬೆ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಅಂಬಾದಾಸ್ ಜೋಷಿ ಅವರ ನೇತೃತ್ವದಲ್ಲಿ ರಚಿಸಲಾದ ಸಮಿತಿಯಲ್ಲಿ ಐದು ಜನ ಸದಸ್ಯರಿದ್ದರು. ಈಗ, ದೆಹಲಿ ಗಲಭೆಯ ಕುರಿತಾದ ತನಿಖೆಗಳು ಚುರುಕು ಪಡೆಯುತ್ತಿರುವ ಹಿನ್ನೆಲೆಯಲ್ಲಿ, ಅಂಬಾದಾಸ್ ಜೋಷಿ ಹಾಗೂ ಅವರ ತಂಡ ನೀಡಿದ ಸತ್ಯಶೋಧನಾ ವರದಿಯಲ್ಲಿನ ತಪ್ಪು ಮಾಹಿತಿಗಳು ಹೊರಬರಲಾರಂಭಿಸಿವೆ.
Also Read: ದೆಹಲಿ ಗಲಭೆ: ಗಾಯಗೊಂಡ ವ್ಯಕ್ತಿಗೆ ರಾಷ್ಟ್ರಗೀತೆ ಹಾಡಲು ಒತ್ತಾಯಿಸಿದ ಪೊಲೀಸರ ವಿಚಾರಣೆ
ತಪ್ಪು ಮಾಹಿತಿ 1: ಸಿಎಎ ವಿರೋಧಿ ಪ್ರತಿಭಟನಾಕಾರರು ಎಷ್ಟೇ ಪ್ರಯತ್ನಿಸಿದರೂ, ಅಂತರಾಷ್ಟ್ರೀಯವಾಗಿ ಸಾಮಾಜಿಕ ಮತ್ತು ನೈತಿಕ ಬೆಂಬಲ ಪಡೆಯಲಿಲ್ಲ
Fact-Check: ಸಿಎಎ ವಿರೋಧಿ ಪ್ರತಿಭಟನೆಗಳು ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗಿರಲಿಲ್ಲ
ಸತ್ಯಶೋಧನಾ ವರದಿಯ ಮೊದಲ ಪ್ಯಾರಾದಲ್ಲಿಯೇ, ಸಿಎಎ ವಿರೋಧಿ ಪ್ರತಿಭಟನಾಕಾರರು ಎಷ್ಟೇ ಪ್ರಯತ್ನಿಸಿದರೂ, ಅಂತರಾಷ್ಟ್ರೀಯವಾಗಿ ಸಾಮಾಜಿಕ ಮತ್ತು ನೈತಿಕ ಬೆಂಬಲ ಪಡೆಯಲಿಲ್ಲ ಎಂದು ದಾಖಲಿಸಿ ದಾರಿ ತಪ್ಪಿಸುವ ಪ್ರಯತ್ನ ನಡೆದಿದೆ. ಸಿಎಎ ವಿರೋಧಿ ಪ್ರತಿಭಟನೆಗಳು ಕೇವಲ ಭಾರತದಲ್ಲಿ ಮಾತ್ರವಲ್ಲದೇ, ಅಂತರಾಷ್ಟ್ರೀಯ ಮಟ್ಟದಲ್ಲಿಯೂ ನಡೆದಿದ್ದವು. ಈ ಕುರಿತಾಗಿ ಪ್ರಮುಖ ಸುದ್ದಿ ಮಾಧ್ಯಮಗಳಾದ, ಎನ್ಡಿಟಿವಿ, ದ ಹಿಂದು ಹಾಗೂ ಡೆಕ್ಕನ್ ಹೆರಾಲ್ಡ್ಗಳು ಪ್ರಕಟಿಸಿದ್ದವು.
ಫೆಬ್ರುವರಿ 6ರಂದು Alt News ಪ್ರಕಟಿಸಿದ್ದ ಸುದ್ದಿಯಲ್ಲಿ ಬೇರೆ ಬೇರೆ ದೇಶಗಳಲ್ಲಿ ನಡೆದಿದ್ದ ಸಿಎಎ ವಿರೋಧಿ ಪ್ರತಿಭಟನೆಗಳ ಕುರಿತು ಮಾಹಿತಿ ನೀಡಿತ್ತು. ANIನಂತಹ ಸುದ್ದಿ ಏಜೆನ್ಸಿಗಳು ಪ್ರಕಟ ಮಾಡಿದ್ದ ಸುದ್ದಿಯ ವಿಶ್ಲೇಷಣೆ ನಡೆಸಿದ್ದರು.
Also Read: ದೆಹಲಿ ಗಲಭೆ: ಶಾಹೀದ್ ಮೃತದೇಹ ಬಯಲು ಮಾಡಿತ್ತು ಪೊಲೀಸರ ನಿಜ ಬಣ್ಣ- Part2
ತಪ್ಪು ಮಾಹಿತಿ 2: ಪ್ರತಿಭಟನಾಕಾರರಿಗೆ ದುಡ್ಡು ಹಂಚುತ್ತಿರುವ ವಿಡಿಯೋವನ್ನು ಸಾಕ್ಷ್ಯವಾಗಿ ಪರಿಗಣಿಸಿರುವುದು
Fact Check: ವ್ಯಕ್ತಿಯೊಬ್ಬರು ಗಲಭೆಯಿಂದ ಹಾನಿಗೊಳಗಾದವರಿಗೆ ದಾನವಾಗಿ ಹಣ ಹಂಚುತ್ತಿರುವುದು
ಸತ್ಯಶೋಧನಾ ವರದಿಯ 21ನೇ ಪುಟದಲ್ಲಿ “ಪ್ರತಿಭಟನಾಕಾರರು ಎರಡು ಪಾಳಿಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದು, 8 ತಾಸುಗಳಿಗೆ ಪಾಳಿಯನ್ನು ಬದಲಾಯಿಸಲಾಗುತ್ತಿತ್ತು. ಮಹಿಳೆಯರಿಗೆ ತಲಾ 500 ರೂ. ಮತ್ತು ಪುರುಷರಿಗೆ ತಲಾ 700-800 ರೂ. ಪ್ರತಿದಿನ ನೀಡಲಾಗುತ್ತಿತ್ತು. ಈ ರೀತಿಯಾಗಿ ಪ್ರತಿಭಟನೆಯನ್ನು ಒಂದೂವರೆ ತಿಂಗಳಿಗಿಂತಲೂ ಹೆಚ್ಚು ಸಮಯ ನಡೆಸಲಾಗಿತ್ತು, ಎಂದು ಹೇಳಲಾಗಿದೆ. ಈ ಮಾತನ್ನು ದೃಢಪಡಿಸಲು, ಕೆನಡಾದಲ್ಲಿರುವ ಪಾಕ್ ಮೂಲದ ಲೇಖಕ ತಾರೆಕ್ ಫತೇಹ್ ಅವರ ಟ್ವೀಟ್ ಅನ್ನು ಕೂಡಾ ಲಗತ್ತಿಸಲಾಗಿತ್ತು.
ಆದರೆ, ಈ ವಿಡಿಯೋ ಕುರಿತಾಗಿ ಬಹಳ ಹಿಂದೆಯೇ ಫ್ಯಾಕ್ಟ್ ಚೆಕ್ ಮಾಡಲಾಗಿದ್ದು, ದೆಹಲಿ ಗಲಭೆಯ ಸಂತ್ರಸ್ತರಿಗೆ ಓರ್ವ ವ್ಯಕ್ತಿಯು ತನ್ನ ಸ್ವಇಚ್ಚೆಯಿಂದ ಹಣ ನೀಡುತ್ತಿರುವ ವಿಡಿಯೋ ಇದಾಗಿತ್ತು. ಇನ್ನು ತಾರೆಕ್ ಫತೇಹ್ ಅವರು ಈ ಹಿಂದೆಯೂ ಸುಳ್ಳು ಮಾಹಿತಿಯನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡು ಟೀಕೆಗೆ ಗುರಿಯಾಗಿದ್ದರು.
Also Read: ದೆಹಲಿ ಗಲಭೆ ಪ್ರಕರಣ; ಚಾರ್ಜ್ ಶೀಟ್ ನಲ್ಲಿ ʼಪೊಲೀಸ್ʼ ಬುದ್ಧಿ ತೋರಿದ ದೆಹಲಿ ತನಿಖಾ ತಂಡ
ತಪ್ಪು ಮಾಹಿತಿ 3: ಎಎಪಿ ಶಾಸಕ ಅಮಾನತುಲ್ಲಾ ಖಾನ್ ಜಾಮಿಯಾ ನಗರ ಗಲಭೆಯಲ್ಲಿ ಕಾಣಿಸಿಕೊಂಡಿದ್ದರು
Fact Check: ಅಮಾನತುಲ್ಲಾ ಖಾನ್ ಶಹೀನ್ ಬಾಘ್ನಲ್ಲಿ ಪ್ರತಿಭಟಿಸುತ್ತಿದ್ದರು
ಡಿಸೆಂಬರ್ 12, 2019ರಂದು ಅಮಾನತುಲ್ಲಾ ಖಾನ್ ಜಾಮಿಯಾ ನಗರದಲ್ಲಿ ನಡೆದ ಹಿಂಸಾಚಾರದಲ್ಲಿ ಪಾಲ್ಗೊಂಡಿದ್ದರು ಎಂದು ಸತ್ಯಶೋಧನಾ ಸಮಿತಿ ವರದಿ ಮಾಡಿದೆ. ಆ ಗಲಭೆಯಲ್ಲಿ ʼಹಿಂದೂಗಳಿಂದ ಸ್ವಾತಂತ್ರ್ಯ ಬೇಕುʼ ಎಂಬ ಘೊಷಣೆ ಕೂಗಿ, ಬಸ್ಗಳಿಗೆ ಬೆಂಕಿ ಹಚ್ಚಲಾಗಿತ್ತು ಎಂದು ವರದಿ ಹೇಳಿದೆ.
ಆದರೆ, Alt News ಮಾಡಿರುವ ಫ್ಯಾಕ್ಟ್ ಚೆಕ್ ಪ್ರಕಾರ, ಸಾಕಷ್ಟು ಸಾಕ್ಷ್ಯಗಳ ಪ್ರಕಾರ ಅಂದು ಅಮಾನತುಲ್ಲಾ ಖಾನ್ ಶಹೀನ್ ಬಾಘ್ನಲ್ಲಿ 2-6 ಗಂಟೆಯವರೆಗೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಅಂದು ಶಹೀನ್ ಬಾಘ್ ಪ್ರದೇಶದಲ್ಲಿ ಬಸ್ಸುಗಳಿಗೆ ಬೆಂಕಿ ಹಚ್ಚಿರುವ ಕುರಿತು ಯಾವುದೇ ವರದಿಗಳು ಪ್ರಕಟವಾಗಿರಲಿಲ್ಲ.
ತಪ್ಪು ಮಾಹಿತಿ 4: ಹೋರಾಟಗಾರ ಹರ್ಷ್ ಮಂದರ್ ಅವರು ಜಾಮಿಯಾ ಮಿಲಿಯಾ ಇಸ್ಲಾಮಿಯಾ ಯೂನಿವರ್ಸಿಟಿಯಲ್ಲಿ ಮಾಡಿದ ಪ್ರಚೋದನಾಕಾರಿ ಭಾಷಣದಿಂದ ಗಲಭೆ ಸೃಷ್ಟಿಯಾಯಿತು
Fact Check: ಹರ್ಷ್ ಮಂದರ್ ಅವರ ಭಾಷಣದ ವಿಡಿಯೋವನ್ನು ತಿರುಚಿ ದಾರಿತಪ್ಪಿಸುವ ಯತ್ನ
ಹೋರಾಟಗಾರ ಹರ್ಷ್ ಮಂದರ್ ಅವರು ಜಾಮಿಯಾ ಮಿಲಿಯಾ ಇಸ್ಲಾಮಿಯಾ ಯೂನಿವರ್ಸಿಟಿಯಲ್ಲಿ ಮಾಡಿದ ಭಾಷಣದಲ್ಲಿ ʼಸುಪ್ರಿಂ ಕೋರ್ಟ್ ಮೇಲೆ ಯಾವುದೇ ನಂಬಿಕೆಯಿಲ್ಲ. ಎನ್ಆರ್ಸಿ, ಅಯೋಧ್ಯೆ ಮತ್ತು ಕಾಶ್ಮೀರ ಕುರಿತಾಗಿನ ತೀರ್ಪುಗಳಲ್ಲಿ ಜಾತ್ಯಾತೀತತೆ, ಮಾನವೀಯತೆ ಮತ್ತು ಸಮಾನತೆಯನ್ನು ಅದು ಕಾಪಾಡಲಿಲ್ಲ. ನಮಗೆ ನ್ಯಾಯವು ಬೀದಿಯಲ್ಲಿ ಮಾತ್ರ ಸಿಗುತ್ತದೆ,ʼ ಎಂದು ಹೇಳಿದ್ದರು ಎಂದು ವರದಿಯಲ್ಲಿ ದಾಖಲಿಸಲಾಗಿದೆ.
The Quint ಮತ್ತು BOOM ಮಾಡಿರುವ ಫ್ಯಾಕ್ಟ್ಚೆಕ್ಗಳಲ್ಲಿ, ಇದೊಂದು ತಿರುಚಿದ ವಿಡಿಯೋ ಎಂದು ಸಾಬೀತಾಗಿದ್ದು, ಬಿಜೆಪಿ ಐಟಿ ಸೆಲ್ ಈ ವಿಡಿಯೋಗೆ ಪ್ರಚಾರ ನೀಡಿತ್ತು ಎಂದು ಹೇಳಿದೆ. ಇದನ್ನು ಕೆಲ ಮಾಧ್ಯಮಗಳು ಸತ್ಯವೆಂದು ಭಾವಿಸಿ, ಸುದ್ದಿಯನ್ನು ಪ್ರಕಟಿಸಿದ್ದವು ಕೂಡಾ.
ತಪ್ಪು ಮಾಹಿತಿ 5: ದೆಹಲಿಗೆ ಡೊನಾಲ್ಡ್ ಟ್ರಂಪ್ ಭೇಟಿಗೂ ಮುನ್ನ ಉಮರ್ ಖಾಲಿದ್ ಗಲಭೆ ಸೃಷ್ಟಿಸಲು ಕರೆ ನೀಡಿದ್ದರು
Fact Check: ಉಮರ್ ಖಾಲಿದ್ ಅವರ ತಿರುಚಿದ ವಿಡಿಯೋವನ್ನು ನೀಡಿ ಸುಳ್ಳು ಸುದ್ದಿ ಪ್ರಕಟಿಸಲಾಗಿತ್ತು
ದೆಹಲಿಗೆ ಡೊನಾಲ್ಡ್ ಟ್ರಂಪ್ ಭೇಟಿಗೂ ಮುನ್ನ ಉಮರ್ ಖಾಲಿದ್ ಗಲಭೆ ಸೃಷ್ಟಿಸಲು ಕರೆ ನೀಡಿದ್ದರು ಎಂಬ ವಿಚಾರವನ್ನು ಸತ್ಯಶೋಧನಾ ವರದಿಯಲ್ಲಿ 4 ಬಾರಿ ಪ್ರಕಟಿಸಲಾಗಿದೆ. ಅದರಲ್ಲಿ ಪುಟ ಸಂಖ್ಯೆ 3 ಮತ್ತು 48ರಲ್ಲಿ ಮಾತ್ರ ಈ ಮಾಹಿತಿಯ ಮೂಲವನ್ನು (OpIndia ಮತ್ತು Republic Tv {ವಿಡಿಯೋ ಯೂಟ್ಯೂಬ್ನಿಂದ ಡಿಲೀಟ್ ಮಾಡಲಾಗಿದೆ}) ಪ್ರಕಟಿಸಲಾಗಿದೆ.
ಆದರೆ, ಮಹಾರಾಷ್ಟ್ರದ ಅಮ್ರಾವತಿಯಲ್ಲಿ ಫೆಬ್ರುವರಿ 17ರಂದು ಉಮರ್ ಖಾಲಿದ್ ಮಾಡಿರುವ ಭಾಷಣದ ಕೇವಲ 40 ಸೆಕೆಂಡ್ಗಳ ತುಣುಕನ್ನು ಗಲಭೆಗೆ ಪ್ರಚೋದನೆ ನೀಡಿರುವ ಸಾಕ್ಷ್ಯ ಎಂದು ಬಿಂಬಿಸಲಾಗುತ್ತಿದೆ.
ಆದರೆ, ಅಂದು ಅವರು ಮಾಡಿದ ಭಾಷಣದ ವಿವರ ಹೀಗಿದೆ, “ನನಗಿಂತ ಮೊದಲು ಭಾಷಣ ಮಾಡಿದ ಐಪಿಎಸ್ ಅಬ್ದುರ್ ರೆಹಮಾನ್ ಅವರು, ಮಹಾತ್ಮಾ ಗಾಂಧಿಯವರ ಅಸ್ತ್ರಗಳಾದ ಅಹಿಂಸೆ ಮತ್ತು ಸತ್ಯಾಗ್ರಹದ ಕುರಿತು ಮಾತನಾಡಿದರು. ನಾವು ಹಿಂಸೆಗೆ ಹಿಂಸೆಯಿಂದ ಉತ್ತ ʼನೀಡುವುದಿಲ್ಲʼ. ದ್ವೇಷಕ್ಕೆ ದ್ವೇಷದಿಂದ ಉತ್ತರ ʼನೀಡುವುದಿಲ್ಲʼ. ಅವರು ದ್ವೇಷ ಹರಡಿದರೆ ನಾವು ಪ್ರೀತಿ ಹರಡುತ್ತೇವೆ. ಅವರು ಲಾಠಿಯಲ್ಲಿ ಹೊಡೆದರೆ ನಾವು ತ್ರಿವರ್ಣ ಧ್ವಜ ಎತ್ತಿ ಹಿಡಿಯುತ್ತೇವೆ. ಅವರು ಗುಂಡಿನ ದಾಳಿ ನಡೆಸಿದರೆ, ನಾವು ಸಂವಿಧಾನವನ್ನು ಅಪ್ಪಿಕೊಳ್ಳುತ್ತೇವೆ. ನಮ್ಮನ್ನು ಜೈಲಿಗಟ್ಟಿದರೆ, ನಾವು ಸಾರೆ ಜಹಾಂ ಸೆ ಅಚ್ಚಾ ಹಿಂದುಸ್ತಾನ್ ಹಮಾರ ಹಾಡನ್ನು ಹಾಡಿ ಜೈಲಿ ಹೋಗುತ್ತೇವೆ,” ಎಂದು ಹೇಳಿದ್ದರು ಎಂದು The Quint ವರದಿ ಮಾಡಿತ್ತು.
ಮುಂದುವರೆಯುವುದು…