ಫೆಬ್ರವರಿ 23 ಭಾಗಶಃ ಭಾರತೀಯರು ಅಷ್ಟು ಸುಲಭಕ್ಕೆ ಮರೆಯಲಾರದ ದಿನ. ಏಕೆಂದರೆ 1983 ಸಿಖ್ ಹತ್ಯಾಕಾಂಡದ ನಂತರ ರಾಷ್ಟ್ರದ ರಾಜಧಾನಿ ದೆಹಲಿ ದಶಕಗಳ ನಂತರ ಮತ್ತೆ ಅಂತಹದ್ದೇ ಒಂದು ಕೋಮುದಳ್ಳುರಿಗೆ ಸಾಕ್ಷಿಯಾದ ದಿನ ಅದು. ಈ ಕರಾಳ ದಿನಕ್ಕೆ ಬರೋಬ್ಬರಿ 50ಕ್ಕೂ ಹೆಚ್ಚು ಹೆಣಗಳು ಸಾಕ್ಷಿಯಾಗಿವೆ. ಬಹುಷ ಭವಿಷ್ಯದಲ್ಲಿ ಭಾರತದ ಇತಿಹಾಸವನ್ನು ಅಧ್ಯಯನ ಮಾಡುವವರು ಈ ಹೆಣಗಳ ವಿವರಗಳನ್ನು ಈ ದಂಗೆಯ ಹಿನ್ನೆಲೆಯನ್ನು ತಡಕಾಡದೆ ಮುಂದುವರೆಯಲಾರರೇನೋ?
ಫೆಬ್ರವರಿ 24, 25 ಭಾರತಕ್ಕೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿ ನೀಡಿದ್ದ ಅದೇ ಸಂದರ್ಭದಲ್ಲಿ ಭಾರತದ ಶಕ್ತಿ ಕೇಂದ್ರವಾದ ದೆಹಲಿಯಲ್ಲಿ CAA-NRC ವಿರುದ್ಧ ದೊಡ್ಡ ಮಟ್ಟದಲ್ಲಿ ಪ್ರತಿಭಟನೆಗಳು ನಡೆಯುತ್ತಿದ್ದವು. ಅಮೆರಿಕದ ಅಧ್ಯಕ್ಷ ಟ್ರಂಪ್ ಭಾರತಕ್ಕೆ ಭೇಟಿ ನೀಡುತ್ತಿದ್ದ ವೇಳೆ ಇಂತಹ ಪ್ರತಿಭಟನೆಗಳು ಕೇಂದ್ರಕ್ಕೆ ಇರಿಸು ಮುರಿಸು ಉಂಟಾಗುವಂತೆ ಮಾಡಿದ್ದು ಸುಳ್ಳಲ್ಲ. ಇದೇ ಕಾರಣಕ್ಕೆ ಈ ಪ್ರತಿಭಟನೆಯನ್ನು ಹೇಗಾದರೂ ಮಾಡಿ ಹಣಿಯಬೇಕು ಎಂದು ಕೇಂದ್ರದ ಬಿಜೆಪಿ ಸರ್ಕಾರ ಪಣ ತೊಟ್ಟಿತ್ತು. ಆದರೆ, ಇದಕ್ಕೆ ಅನುಸರಿಸಿದ ಕ್ರಮ ಮಾತ್ರ ಅಮಾನವೀಯ.
ಒಂದೆಡೆ CAA ವಿರೋಧಿ ಹೋರಾಟಗಳು ನಡೆಯುತ್ತಿದ್ದರೆ ಮತ್ತೊಂದೆಡೆ CAA ಪರ ಹೋರಾಟಕ್ಕೆ ಅನಧಿಕೃತವಾಗಿ ಅವಕಾಶ ನೀಡಲಾಗಿತ್ತು. ಫೆಬ್ರವರಿ 23 ರಂದು ನೋಡ ನೋಡುತ್ತಿದ್ದಂತೆ ರಾಷ್ಟ್ರ ರಾಜಧಾನಿ ದೆಹಲಿ ಕೋಮುದಳ್ಳುರಿಗೆ ಸಾಕ್ಷಿಯಾಗಿತ್ತು. ಅತ್ತ ಡೊನಾಲ್ಡ್ ಟ್ರಂಪ್ ಅಮೆರಿಕಕ್ಕೆ ತೆರಳುತ್ತಿದ್ದಂತೆ ದೆಹಲಿಯ ದಳ್ಳುರಿ ಮೊಟ್ಟ ಮೊದಲ ಕೊಲೆಗೆ ಸಾಕ್ಷಿಯಾಗಿತ್ತು. ಶಾಹಿದ್ ಅಲ್ವಿ ಎಂಬ 23 ವರ್ಷದ ಆಟೋ ಡ್ರೈವರ್ ಆಗಂತುಕರ ಗುಂಡಿಗೆ ಬಲಿಯಾಗಿದ್ದ.
ನಂತರದ ದಿನಗಳಲ್ಲಿ ಉರುಳಿದ ಸಾಲು ಸಾಲು ಹೆಣಗಳಿಗೆ ಶಾಹಿದ್ ಅಲ್ವಿ ಒಂದು ರೀತಿಯ ಆರಂಭದ ಚುಕ್ಕಿಯಂತಾಗಿ ಹೋಗಿದ್ದ. ಅಸಲಿಗೆ ಈ ಕೊಲೆಯ ಬೆನ್ನುಹತ್ತಿ ಹೊರಟರೆ ಪ್ರಭುತ್ವದ ಮತ್ತು ಪೊಲೀಸರ ಮತ್ತೊಂದು ಕರಾಳ ಮುಖ ನಿಮಗೆ ಅನಾವರಣವಾಗಿ ಬೆಚ್ಚಿ ಬೀಳಿಸದೆ ಇರದು.
ಆಟೋ ಡ್ರೈವರ್ ಕೊಲೆಯನ್ನು ಕೆದಕುತ್ತಾ..!
ಫೆಬ್ರವರಿ 23 ರಂದು ಪೌರತ್ವ (ತಿದ್ದುಪಡಿ) ಕಾಯ್ದೆಯ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿದ್ದ ಈಶಾನ್ಯ ದೆಹಲಿಯಲ್ಲಿ ಹಿಂಸಾಚಾರ ಭುಗಿಲೆದ್ದಿತು. ಆ ಮಧ್ಯಾಹ್ನ, CAAಯನ್ನು ಬೆಂಬಲಿಸುವ ಜನಸಮೂಹ-ಪ್ರಧಾನವಾಗಿ ಹಿಂದೂ ಪುರುಷರು, “ಜೈ ಶ್ರೀ ರಾಮ್” ನಂತಹ ಘೋಷಣೆಗಳನ್ನು ಜಪಿಸುತ್ತಾ ಮುಸ್ಲಿಂ ಜನರ ಬಾಹುಳ್ಯವೇ ಅಧಿಕವಿರುವ ಜಾಫ್ರಾಬಾದ್- ಮೌಜ್ಪುರ್ ಪ್ರದೇಶಗಳಿಗೆ ಆಗಮಿಸಿದ್ದಾರೆ.
ಈ ವೇಳೆ ಸಿಎಎ ವಿರುದ್ಧದ ಜನಸಮೂಹ ಮತ್ತು ಪ್ರತಿಭಟನಾಕಾರರು ಪರಸ್ಪರ ಕಲ್ಲು ತೂರಾಟ ನಡೆಸಿದ್ದಾರೆ. ಪರಿಣಾಮ ಮರುದಿನ ಹಿಂಸಾಚಾರ ಉಲ್ಬಣಗೊಂಡಿದೆ. ಸುತ್ತಮುತ್ತಲಿನ ಪ್ರದೇಶಗಳಾದ ಚಂದ್ ಬಾಗ್, ಯಮುನಾ ವಿಹಾರ್ ಮತ್ತು ಭಜನ್ಪುರಗಳಿಗೆ ಹರಡಿದೆ.
ಪ್ರತ್ಯಕ್ಷದರ್ಶಿಗಳೇ ಹೇಳುವ ಪ್ರಕಾರ:- ದಂಗೆಯಲ್ಲಿ ಪಾಲ್ಗೊಂಡಿದ್ದ ಹಿಂದೂ ಜನಸಮೂಹ ಪೊಲೀಸರ ಬೆಂಬಲದೊಂದಿಗೆ ದಾರಿಹೋಕರ ಮೇಲೆ ದಾಳಿ ನಡೆಸಿದೆ. ಅಲ್ಲದೆ, ಮುಸ್ಲಿಂ ಸಮುದಾಯದವರ ಕಾರುಗಳು, ಅಂಗಡಿಗಳು ಮತ್ತು ಕಟ್ಟಡಗಳಿಗೆ ಬೆಂಕಿ ಹಚ್ಚಿ ಕ್ರೌರ್ಯ ಮೆರೆದಿದ್ದಾರೆ. ಇಂತಹ ಕ್ರೌರ್ಯಕ್ಕೆ ಬಲಿಯಾದ ಮೊದಲ ವ್ಯಕ್ತಿಯೇ 23 ವರ್ಷದ ಶಾಹಿದ್ ಅಲ್ವಿ.
ವೃತ್ತಿಯಲ್ಲಿ ಆಟೋ ಡ್ರೈವರ್ ಆಗಿದ್ದ ಶಾಹಿದ್ ಅಲ್ವಿ ದೆಹಲಿಯ ವಾಜಿರಾಬಾದ್ ನಿವಾಸಿ. ಉತ್ತರ ಪ್ರದೇಶದ ಬುಲಂದ್ಶಹರ್ ಜಿಲ್ಲೆಯಿಂದ ಬದುಕನ್ನು ಅರಸಿ ದೆಹಲಿಗೆ ಬಂದು ನೆಲೆಸಿದ್ದರು. ಅಂದು ಗಲಭೆಯ ಕಾರಣ ಆತ ಮನೆಯಿಂದ ಕೆಲಸಕ್ಕೆ ಹೊರಟಿರಲಿಲ್ಲ. ಆದರೆ, ಎಂದಿನಂತೆ ನಮಾಜ್ ಮಾಡುವುದಕ್ಕಾಗಿ ಹತ್ತಿರದ ದರ್ಗಾಗೆ ತೆರಳಿ ಪ್ರಾರ್ಥನೆ ಸಲ್ಲಿಸಿ ಆಗಿನ್ನು ಮನೆಗೆ ವಾಪಾಸ್ ಹಿಂದಿರುಗುತ್ತಿದ್ದ. ಈತನಿಗೆ ಯಾವುದೇ ಗಲಭೆಗಳ ಗೊಡವೆ ಅಗತ್ಯವಿರಲಿಲ್ಲ. ಆದರೆ, ಮನೆಗೆ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ಮಧ್ಯಾಹ್ನ 3 ರಿಂದ 4 ಗಂಟೆಯ ನಡುವೆ ಈತನ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಎರಡು ಬುಲೆಟ್ಗಳು ಆತನ ಹೊಟ್ಟೆಯನ್ನು ಹೊಕ್ಕಿ ಸಾವಿಗೆ ಹೊಂಚು ಹಾಕಿ ಕೂತಿದ್ದವು.
ಗುಂಡು ಹಾರಿಸಿದ ತಕ್ಷಣವೇ ಶಾಹಿದ್ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಕೂಡಲೇ ಅಲ್ಲಿದ್ದ ಇಬ್ಬರು ಅಪರಿಚಿತರು ಆತನನ್ನು ಹತ್ತಿರದಲ್ಲಿದ್ದ ಮದೀನಾ ಚಾರಿಟೇಬಲ್ ಕ್ಲಿನಿಕ್ಗೆ ದಾಖಲಿಸಿದ್ದಾರೆ. ಆದರೆ, ಶಾಹಿದ್ ಆಸ್ಪತ್ರೆಗೆ ದಾಖಲಿಸುವ ಮುನ್ನವೇ ಮೃತಪಟ್ಟಿದ್ದಾರೆ.
ಮೃತಪಟ್ಟ ಶಾಹೀದ್ ಮದುವೆಯಾಗಿ ಆಗಿನ್ನು ಎರಡು ವರ್ಷವಾಗಿತ್ತಷ್ಟೆ. ಆತನ ಹೆಂಡತಿ ಈಗ ತುಂಬು ಗರ್ಭಿಣಿ. ಆದರೆ, ಕರುಣೆಯಿಲ್ಲದ ದೆಹಲಿಯ ಕೋಮು ದಳ್ಳುರಿ ತನ್ನ ಇಚ್ಚೆಯಂತೆ ಮೊದಲ ಬಲಿಯನ್ನು ಪಡೆದಿತ್ತು. ಆದರೆ, ಶವದ ಮರಣೋತ್ತರ ಪರೀಕ್ಷೆ ನಡೆಸಿ ಅಂತಿಮ ವಿಧಿ ವಿಧಾನಕ್ಕಾಗಿ ಶಾಹೀದ್ ಮೃತ ದೇಹವನ್ನು ನಮಗೆ ನೀಡಲು ಪೊಲೀಸರು ಎರಡು ದಿನ ತೆಗೆದುಕೊಂಡರು ಎಂದು ಆರೋಪಿಸುತ್ತಾರೆ ಆತನ ಸಹೋದರ ಇರ್ಫಾನ್.

“ದಿ ಕ್ಯಾರಾವಾನ್” ಕೆದಕಿರುವ ಕೆಲವು ಸತ್ಯಗಳು!
ದೆಹಲಿ ಕೋಮು ದಳ್ಳುರಿಯಲ್ಲಿ ಮೃತಪಟ್ಟ ಶಾಹೀದ್ ಪ್ರಕರಣಕ್ಕೆ ಸಂಬಂಧಿಸಿದಂತೆ “ದಿ ಕ್ಯಾರಾವಾನ್”ವಾಜಿರಾಬಾದ್ನಲ್ಲಿ ಅನೇಕ ಜನರನ್ನು ಮಾತನಾಡಿಸಿದೆ. ಶಾಹಿದ್ ಅಲ್ವಿಸ್ ಮನೆಯ ಪಕ್ಕದಲ್ಲೇ ವಾಸಿಸುವ ಮೊಹಮ್ಮದ್ ಇಕ್ರಾರ್ ಹೇಳುವ ಪ್ರಕಾರ, “ದೆಹಲಿಯಲ್ಲಿ ಎರಡು ದಿನಗಳಿಂದ ಕೋಮು ಗಲಭೆ ಉದ್ವಿಗ್ನವಾಗುತ್ತಿತ್ತು. ಆದರೆ, ಇದು ವ್ಯಕ್ತಿಯನ್ನು ಗುಂಡಿಕ್ಕಿ ಕೊಲ್ಲುವ ಹಂತಕ್ಕೆ ಮುಂದುವರೆಯುತ್ತದೆ ಎಂದು ನಾವು ಊಹಿಸಿರಲಿಲ್ಲ. ಗಲಭೆಗೆ ಹೆದರಿ ನಾವು ಮನೆಯಲ್ಲೇ ಇದ್ದದ್ದರಿಂದ ಶಾಹೀದ್ ಸಹಾಯಕ್ಕೆ ನಾವು ಧಾವಿಸುವುದು ಸಾಧ್ಯವಾಗಿಲ್ಲ. ಆದರೆ, ನಮ್ಮ ಪ್ರದೇಶದ ಸುತ್ತಲೂ ದಂಗೆಕೋರರಿಗೆ ಪೊಲೀಸರೇ ಸಹಕರಿಸಿದ್ದರು. ಹೀಗಾಗಿ ಶಹೀದ್ ಹತ್ಯೆಕಾರನನ್ನು ದೆಹಲಿ ಪೊಲೀಸರು ಬಂಧಿಸುತ್ತಾರೆ ಎಂಬ ವಿಶ್ವಾಸ ನಮ್ಮಲ್ಲಿ ಇಲ್ಲ” ಎಂಬುದು ಪ್ರತ್ಯಕ್ಷದರ್ಶಿಯ ಮಾತು.
ಇದು ಕೇವಲ ಓರ್ವ ಪ್ರತ್ಯಕ್ಷದರ್ಶಿಯ ಹೇಳಿಕೆ ಅಷ್ಟೇ ಅಲ್ಲ, ಬದಲಾಗಿ ಹತ್ಯಾಕಾಂಡವೊಂದರ ಪ್ರಮುಖ ಸಾಕ್ಷಿ. ಆದರೆ, ಇಂತಹ ಸಾಕ್ಷಿಗಳನ್ನು ಸಂಪರ್ಕಿಸಿ ಚಾರ್ಜ್‌ಶೀಟ್ ಫೈಲ್ ಮಾಡಲು ದೆಹಲಿ ಪೊಲೀಸರಿಗೆ ಸಮಯವೇ ಇಲ್ಲ. ಏಕೆಂದರೆ ಅವರಿಗೆ ಅದು ಬೇಕಾಗಿಯೂ ಇಲ್ಲ.
ಅಸಲಿಗೆ ಶಾಹೀದ್ ಮರಣೋತ್ತರ ಪರೀಕ್ಷೆ ನಡೆಸಿದ ವೇಳೆ ಆತನ ದೇಹ ಹೊಕ್ಕ ಬುಲೆಟ್‌ಗಳು ಆರೋಪಿಯ ವಿಳಾಸವನ್ನೇ ಹೇಳಿರುತ್ತವೆ. ಆದರೆ, ಪೊಲೀಸರು ಸಲ್ಲಿಸಿರುವ ಚಾರ್ಜ್ಶೀಟ್‌ನಲ್ಲಿ ದೆಹಲಿ ಕೋಮು ದಂಗೆಗೆ ಮುಸ್ಲಿಂ ಸಮುದಾಯದವರು ಮತ್ತು CAA ವಿರೋಧಿ ಹೋರಾಟವೇ ಕಾರಣ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. CAA ವಿರೋಧಿ ಹೋರಾಟಗಾರರ ಮೇಲೆಯೇ FIR ದಾಖಲಿಸಲಿದೆ. ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಆದರೆ, ಅಂಕಿಸಂಖ್ಯೆಗಳ ಪ್ರಕಾರ ಗಲಭೆಯಲ್ಲಿ ಮೃತಪಟ್ಟವರ ಪೈಕಿ ಶೇ.95 ರಷ್ಟು ಮುಸ್ಲಿಮರು. ಇವರನ್ನು ಕೊಂದವರು ಯಾರು? ಇವರ ಮೇಲೆ FIR ಏಕಿಲ್ಲ? ಅಸಲಿಗೆ ಕೋಮು ದಳ್ಳುರಿಗೆ ಸಹಕರಿಸಿದ್ದ ಪೊಲೀಸರ ಮೇಲೆ ಕ್ರಮ ಏಕಿಲ್ಲ? ಕೋಮು ಗಲಭೆ ತಡೆಯದಂತೆ ಪೊಲೀಸರಿಗೆ ಆದೇಶಿಸಿದವರು ಯಾರು? ಇವರ ಉದ್ದೇಶವೇನು? ಇದ್ಯಾವ ತನಿಖೆಗೂ ಪೊಲೀಸರು ಮುಂದಾಗಿಲ್ಲ, ಚಾರ್ಜ್ಶೀಟ್ನಲ್ಲಿ ಇದರ ಉಲ್ಲೇಖವೂ ಇಲ್ಲ. ಭಾರತದಂತಹ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಇದು ನಿಜಕ್ಕೂ ಅಚ್ಚರಿಯೇ ಸರಿ.
ಆದರೆ, ಭಾರತ ಪ್ರಜಾಪ್ರಭುತ್ವ ರಾಷ್ಟ್ರವಾದರೇನಾಯ್ತು? ಪ್ರಭುತ್ವ ಹಾಗೂ ಪೊಲೀಸರೇ ಮುಂದೆ ನಿಂತು ಒಂದು ಕೋಮು ದಂಗೆಯನ್ನು ಕುದ್ದಾಗಿ ನಡೆಸುವಾಗ ಯಾರು ತಾನೇ ಏನು ಮಾಡಲು ಸಾಧ್ಯ? ಬೇಲಿಯೇ ಎದ್ದು ಹೊಲ ಮೇಯ್ದರೆ ನ್ಯಾಯವನ್ನು ಮುಂದಿಡುವವರಾದರೂ ಯಾರು? ನ್ಯಾಯಕ್ಕಾಗಿ ಯಾರ ಮೊರೆ ಹೋಗುವುದು? ಎಂಬಂತಹ ಸ್ಥಿತಿಗೆ ಇದೀಗ ದೆಹಲಿ ಮುಸ್ಲಿಂ ಜನ ದೂಡಲ್ಪಟ್ಟಿದ್ದಾರೆ.
ಅಸಲಿಗೆ ಶಾಹೀದ್ ಅಲ್ವಿ ಕೊಲೆ ಆರಂಭವಷ್ಟೇ, ಈ ಕೊಲೆಯನ್ನು ಅನುಸರಿಸಿ ದೆಹಲಿಯಲ್ಲಿ ಪೊಲೀಸರ ಮೇಲುಸ್ತುವಾರಿಯಲ್ಲಿ ನಡೆದ ಕೊಲೆಗಳ ಸಂಖ್ಯೆ ಅನೇಕ. ಪೊಲೀಸರ ಕ್ರೌರ್ಯ ನಿಜಕ್ಕೂ ಹೇಯ. ಇಂತಹ ಮತ್ತಷ್ಟು ಮನಕಲಕುವ ಅಸಲಿ ಘಟನೆಗಳ ನೈಜ ತನಿಖಾ ವರದಿಯನ್ನು ಮುಂದಿನ ಸಂಚಿಕೆಯಲ್ಲಿ ನಿರೀಕ್ಷಿಸಿ.










