ಫೆಬ್ರವರಿ ತಿಂಗಳ 24, 25 ರಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಗಲಭೆ ಪ್ರಕರಣ ಸಂಬಂಧ ದೆಹಲಿ ಪೊಲೀಸರು ಘಟನೆ ಸಂಬಂಧ ಕಳೆದ ವಾರ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಪ್ರಮುಖವಾಗಿ ಗುಪ್ತಚರ ಅಧಿಕಾರಿ ಅಂಕಿತ್ ಶರ್ಮಾ ಹತ್ಯೆ ಪ್ರಕರಣ ಸಂಬಂಧ ಸಲ್ಲಿಸಿರುವ 1500 ಪದಗಳ ಚಾರ್ಜ್ ಶೀಟ್ ನಲ್ಲಿ ಪೊಲೀಸರು ಈಶಾನ್ಯ ದೆಹಲಿಯಲ್ಲಿ ನಡೆದ ಘಟನೆಯನ್ನ ಕಾಲಾನುಕ್ರಮದಲ್ಲಿ ವಿವರಿಸಿದ್ದಾರೆ. ಪೊಲೀಸರ ಪ್ರಕಾರ ಸಿಎಎ ವಿರೋಧಿ ಪ್ರತಿಭಟನೆ ಗಲಭೆಗೆ ಕುಮ್ಮಕ್ಕು ನೀಡಿದ್ದು, ಅದಕ್ಕೆ ಪ್ರತಿಕ್ರಿಯೆಯಾಗಿ ಇನ್ನೊಂದು ಗುಂಪು ದಾಳಿ ನಡೆಸಿದೆ ಎಂದಿದ್ದಾರೆ.
ಆದರೆ ಗಲಭೆ ಸಂಬಂಧ ಸಲ್ಲಿಸಲಾದ ಚಾರ್ಜ್‌ಶೀಟ್‌ನಲ್ಲಿ ಪೊಲೀಸರು ಗಲಭೆಗೆ ಕುಮ್ಮಕ್ಕು ನೀಡಿದ್ದ ಬಿಜೆಪಿ ನಾಯಕ ಕಪಿಲ್ ಮಿಶ್ರಾ ಭಾಷಣದ ಅಂಶಗಳನ್ನೇ ಬಿಟ್ಟು ಮುಂದಕ್ಕೆ ಸಾಗಿದೆ. ಎಲ್ಲವನ್ನೂ ಕಾಲಾನುಕ್ರಮದಲ್ಲಿ ಬರೆಯುವ ಮೂಲಕ ದೆಹಲಿ ಪೊಲೀಸರು ಚಾರ್ಜ್ ಶೀಟ್ ನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದರೆ, ಫೆಬ್ರವರಿ 23 ರಂದು ಮೌಜ್‌ಪುರ ದಲ್ಲಿ ನಡೆಸಿದ್ದ ದ್ವೇಷ ಹರಡುವ ಭಾಷಣದ ಬಗ್ಗೆ ಎಲ್ಲೂ ಉಲ್ಲೇಖಿಸಿಲ್ಲ.
ಅಚ್ಚರಿ ಅಂದ್ರೆ ಪೊಲೀಸರು ಚಾರ್ಜ್ ಶೀಟ್ ನಲ್ಲಿ ಈ ಕುರಿತು ಜಾಣ್ಮೆಯ ʼಜಂಪಿಂಗ್ʼ ನಡೆಸಿದ್ದಾರೆ. ಫೆಬ್ರವರಿ 22 ಹಾಗೂ ಫೆಬ್ರವರಿ 23 ರಂದು ನಡೆಸಿದ ರಸ್ತೆ ತಡೆಗಳನ್ನು ಉಲ್ಲೇಖಿಸಿದ ಪೊಲೀಸರು, ಅದೇ ಸಮಯದಲ್ಲಿ ನಡೆದ ಕಪಿಲ್ ಮಿಶ್ರಾ ದ್ವೇಷ ಭಾಷಣವೂ ಗಲಭೆಗೆ ಕಾರಣವಾಗಿತ್ತು ಅನ್ನೋದನ್ನ ಎಲ್ಲೂ ಉಲ್ಲೇಖಿಸದೇ ಹೋಗಿದ್ದಾರೆ.
ಪೊಲೀಸರ ಕಾಲಾನುಕ್ರಮದ ಪ್ರಕಾರ ಸಲ್ಲಿಸಿರುವ ಚಾರ್ಜ್ ಶೀಟ್ ನಲ್ಲಿ ಮಾಹಿತಿಗಳು ಇಂತಿವೆ;
(2019) ಡಿಸೆಂಬರ್ 13: ಜಾಮಿಯಾ ಮಿಲ್ಲಿಯಾ ಯೂನಿವರ್ಸಿಟಿಯಲ್ಲಿ ನಡೆದ ಹಿಂಸಾಚಾರ
ಡಿಸೆಂಬರ್ 15: ನ್ಯೂ ಫ್ರೆಂಡ್ಸ್ ಕಾಲನಿಯಲ್ಲಿ ನಡೆದ ಹಿಂಸಾಚಾರ
ಡಿಸೆಂಬರ್ 16: ಜಾಮಿಯಾ ಮಿಲ್ಲಿಯಾ ಯೂನಿವರ್ಸಿಟಿಯಲ್ಲಿ ನಡೆದ ಹಿಂಸಾಚಾರ
ಡಿಸೆಂಬರ್ 16: ಶಾಹಿನ್‌ಬಾಗ್ ಪ್ರತಿಭಟನೆ ಆರಂಭ
(2020) ಜನವರಿ 15 ರಿಂದ ಜನವರಿ 26: ರಸ್ತೆಗಳಿಗೆ ಬಂದ ಪ್ರತಿಭಟನೆ. ಪ್ರಮುಖ ರಸ್ತೆಗಳ ಸಂಚಾರಕ್ಕೆ ತಡೆ. ಪ್ರಮುಖವಾಗಿ ಈಶಾನ್ಯ ದೆಹಲಿಯ ಸೀಲಂಪುರ, ದಯಾಲ್ಪುರ್, ಜ್ಯೋತಿ ನಗರ, ಖಾಜುರಿ ಖಾಸ್, ಭಜನಾಪುರ ಹಾಗೂ ಶಾಸ್ತ್ರೀ ಪಾರ್ಕ್.
ಫೆಬ್ರವರಿ 22, ರಾತ್ರಿ 10.30: ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ ಆಜಾದ್ ನೀಡಿದ್ದ ಭಾರತ್ ಬಂದ್ ಕರೆಯಂತೆ ದೆಹಲಿಯ ಜಫರಾಬಾದ್ ರಸ್ತೆ ಬಂದ್ ನಡೆಸಿದ ಸಿಎಎ ವಿರೋಧಿ ಪ್ರತಿಭಟನಾಕಾರರು.
ಆದರೆ ಆನಂತರ ಫೆಬ್ರವರಿ 23 ರ ಉಲ್ಲೇಖ.. ಬಹುಶಃ ಗಲಭೆ ಆರಂಭವಾಗುವಲ್ಲಿ ಈ ದಿನವೇ ಮಹತ್ವದ್ದೆನಿಸಿತ್ತು. ಆದರೆ ಫೆಬ್ರವರಿ 23 ರಂದು ಕಪಿಲ್ ಮಿಶ್ರಾ ಭಾಷಣದ ನಂತರವೇ ಗಲಭೆ ಸ್ಫೋಟಗೊಂಡಿದ್ದರು, ಪೊಲೀಸರು ಆ ಘಟನೆಯನ್ನು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿಯೇ ಇಲ್ಲ. ಬದಲಿಗೆ ಆ ದಿನ ನಡೆದ ನಾಲ್ಕು ವಿಚಾರಗಳನ್ನ ಉಲ್ಲೇಖಿಸಿದ್ದಾರೆ.
“ಫೆಬ್ರವರಿ 23 ರಂದು ಮಧ್ಯಾಹ್ನ 3 ಗಂಟೆಗೆ ನಮಗೆ ಮಾಹಿತಿ ಒಂದು ಬರುತ್ತದೆ. ಆ ಮಾಹಿತಿಯ ಪ್ರಕಾರ, ಕೆಲವರು ಜಫರಾಬಾದ್ ಮೆಟ್ರೋ ಸ್ಟೇಷನ್ ಬಳಿ ಗುಂಪುಗೂಡಿದ್ದು, ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಬೇಡಿಕೆಯಿಡುತ್ತಿರುವುದಾಗಿ ಗೊತ್ತಾಗುತ್ತದೆ” ಎಂದು ಚಾರ್ಜ್‌ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ.
ಅದರ ನಂತರ ಜಫರಾಬಾದ್ ಹಾಗೂ ಕರ್ದಾಂಪುರಿ ನಡುವೆ ಸಾವಿರ ಸಂಖ್ಯೆಯಲ್ಲಿ ಜನರು ಜಮಾಯಿಸುತ್ತಾರೆ. ಮಾತ್ರವಲ್ಲದೆ ಪರಸ್ಪರ ಕಲ್ಲು ತೂರಾಟಗಳು ನಡೆಯುತ್ತವೆ. ರಸ್ತೆ ತೆರವುಗೊಳಿಸುವಂತೆ ಪ್ರತಿಭಟಿಸಿದ ಜಫರಾಬಾದ್ ಮೆಟ್ರೋ ಸ್ಟೇಷನ್ ಬಳಿಯಿದ್ದ ಪ್ರತಿಭಟನಾಕಾರರು ಮುನ್ನುಗ್ಗುತ್ತಲೇ ಪೊಲೀಸರು ಮಧ್ಯಪ್ರವೇಶಿಸಿ ಎರಡೂ ಬದಿಯ ಪ್ರತಿಭಟನಾಕಾರರ ಮೇಲೆ ಅಶ್ರುವಾಯು ಸಿಡಿಸಿ, ಲಾಠಿ ಚಾರ್ಜ್ ನಡೆಸುವ ಮೂಲಕ ಚದುರಿಸಲಾಯಿತು ಎಂದೂ ಉಲ್ಲೇಖಿಸಿದ್ದಾರೆ.
ಅಲ್ಲದೇ ಐಬಿ ಅಧಿಕಾರಿ ಅಂಕಿತ್ ಶರ್ಮಾ ಹತ್ಯೆ ಚಾರ್ಜ್‌ಶೀಟ್ ನಲ್ಲಿ ಮೌಜ್‌ಪುರ್ ಚೌಕ್ ನ ಜಫರಾಬಾದ್ ಮೆಟ್ರೋ ಸ್ಟೇಷನ್ ಸಮೀಪ ಎರಡರಿಂದ ಮೂರು ಸಾವಿರ ಮಹಿಳೆಯರು ಹಾಗೂ ಪುರುಷರು ಸೇರಿ ರಸ್ತೆ ಸಂಚಾರಕ್ಕೆ ಅನುವು ಮಾಡುವಂತೆ ಒತ್ತಾಯಿಸಿದ್ದರು ಎಂದು ಉಲ್ಲೇಖಿಸಲಾಗಿದೆ.
ಮಾತ್ರವಲ್ಲದೇ ಮಧ್ಯಾಹ್ನ 12.29 ಕ್ಕೆ ಸ್ವೀಕರಿಸಿದ ಮಾಹಿತಿ ಪ್ರಕಾರ, ಕೆಲವು ಸಿಎಎ ವಿರೋಧಿ ಪ್ರತಿಭಟನಾಕಾರರು ಯಮುನಾ ವಿಹಾರ್ ನ ಬಿ ಬ್ಲಾಕ್ ತಡೆದಿರುವುದಾಗಿ ಮಾಹಿತಿ ಸಿಕ್ಕಿರುವುದಾಗಿ ಹಾಗೂ ಆ ನಂತರ ಪ್ರತಿಭಟನಾಕಾರರು ವಜೀರಾಬಾದ್ ರಸ್ತೆಯಲ್ಲೂ ಕೂತು ಪ್ರತಿಭಟನೆ ನಡೆಸಿದ್ದಾಗಿ ಚಾರ್ಜ್ ಶೀಟ್ ನಲ್ಲಿ ದಾಖಲಿಸಿಕೊಳ್ಳಲಾಗಿದೆ.
Also Read: ದೆಹಲಿ ಗಲಭೆಗೆ ಕಪಿಲ್ ಮಿಶ್ರಾ ಹೇಳಿಕೆ ಕಾರಣ : ಮಾರ್ಕ್ ಝುಕರ್ ಬರ್ಗ್
Also Read: ದೆಹಲಿ ಪೋಲೀಸರಿಗೆ ಛೀಮಾರಿ ಹಾಕಿದ ನ್ಯಾಯಾಧೀಶರನ್ನು ವರ್ಗಾಯಿಸಿದ ಮೋದಿ ಸರ್ಕಾರ
ಕಪಿಲ್ ಮಿಶ್ರಾ ದ್ವೇಷ ಭಾಷಣ ಬಗ್ಗೆ ಉಲ್ಲೇಖ ಏಕಿಲ್ಲ?
ದುರಂತ ಅಂದ್ರೆ ದೆಹಲಿ ಡಿಸಿಪಿ ಮಟ್ಟದ ಅಧಿಕಾರಿ ಮುಂದೆಯೇ ದ್ವೇಷ ಬಿತ್ತುವ ಭಾಷಣ ಮಾಡಿದ್ದರೂ ಅವರ ಹೆಸರನ್ನ ಚಾರ್ಜ್ ಶೀಟ್ ನಲ್ಲಿ ಎಲ್ಲೂ ಉಲ್ಲೇಖಿಸಲಾಗಿಲ್ಲ. ಬದಲಿಗೆ ಹಿಂಸಾಚಾರದ ಸಂಪೂರ್ಣ ಹೊಣೆಯನ್ನ ಸಿಎಎ ವಿರೋಧಿ ಪ್ರತಿಭಟನಾಕಾರರ ಮೇಲೆಯೇ ಹೊರಿಸಲಾಗಿದೆ.
ಆದರೆ ಪೊಲೀಸರೇ ಸಿದ್ಧಪಡಿಸಿದ ಚಾರ್ಜ್ ಶೀಟ್ ನಲ್ಲಿಯೇ ಫೆಬ್ರವರಿ 24 ರಂದು ಮೌಜ್ಪುರ್ ಚೌಕ್ ನಿಂದಲೇ ಗಲಭೆ ಸ್ಫೋಟಗೊಂಡಿತ್ತು. ಅಂದರೆ ಇದೇ ಮೌಜ್ಪುರ್ ನಲ್ಲಿಯೇ ಕಪಿಲ್ ಮಿಶ್ರಾ ಭಾಷಣ ಮಾಡಿದ್ದು, ಅದನ್ನ ಉಲ್ಲೇಖಿಸದೇ ಇರೋದು ಅಚ್ಚರಿ ಎನಿಸುತ್ತಿದೆ. ಅಂದು ಭಾಷಣ ಮಾಡಿದ್ದ ಕಪಿಲ್ ಮಿಶ್ರಾ, “ಇದುವೇ ಸರಿಯಾದ ಸಮಯ. ಇದನ್ನ ಚೆನ್ನಾಗಿ ಬಳಸಿಕೊಳ್ಳಿ. ಒಂದು ವೇಳೆ ನೀವೇನಾದರೂ ಅವಕಾಶ ಮಿಸ್ ಮಾಡಿಕೊಂಡರೆ, ಮತ್ತೊಂದು ಬಾರಿ ಸಿಗದು” ಎಂದಿದ್ದಾಗಿ ಭಾಷಣ ಸಮಯದಲ್ಲಿ ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಗಳ ಹೇಳಿಕೆ ಆಧರಿಸಿ ಔಟ್‌ಲುಕ್ ವರದಿಯನ್ನೂ ಮಾಡಿತ್ತು.
ಆದರೆ ಇದೆಲ್ಲಕ್ಕೂ ಮಿಕ್ಕಿ ಪೊಲೀಸರ ಪಕ್ಷಪಾತೀಯ ಧೋರಣೆಯನ್ನ ಮುಂದಿಡೋದಾದರೆ, 20 ಕಿಲೋ ಮೀಟರ್ ದೂರದಲ್ಲಿರುವ ಮಾತ್ರವಲ್ಲದೇ ತಿಂಗಳ ಹಿಂದೆ ಜಾಮಿಯಾ ಮಿಲ್ಲಿಯಾ ಯೂನಿವರ್ಸಿಟಿಯಲ್ಲಿ ನಡೆಸಿದ ಭಾಷಣವನ್ನೇ ಗಲಭೆಗೆ ಕಾರಣ ಎಂದು ಆರೋಪಿಸಿರುವುದು. ಜೊತೆಗೆ ಗಲಭೆ ಸಂಬಂಧ ಅಲ್ಲಿನ ವಿದ್ಯಾರ್ಥಿಗಳನ್ನ ಕರೋನಾ ಲಾಕ್ ಡೌನ್ ಹೇರಿಕೆ ನಂತರ ಬಂಧಿಸಲಾಗಿದೆ. ಇದು ದೆಹಲಿ ಪೊಲೀಸರ ಪಕ್ಷಪಾತದ ನಡೆಗೆ ಸಾಕ್ಷಿ ಎನಿಸುತ್ತಿದೆ. ಜೊತೆಗೆ ಆಳುವ ಬಲಪಂಥಿಯ ಕೇಂದ್ರ ಸರಕಾರಕ್ಕೆ ರಾಜಧಾನಿಯ ತನಿಖಾ ತಂಡ ತಲೆಬಾಗಿದಂತಿದೆ.