ದೆಹಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ನಿರ್ದೇಶನದಂತೆ ಕೆಲಸ ಮಾಡುತ್ತಿರುವ ದೆಹಲಿ ಪೊಲೀಸರ ನಡೆ ಇದೀಗ ವಿವಾದಕ್ಕೆಡೆಯಾಗಿದೆ.
ಕಳೆದ ಫೆಬ್ರವರಿಯಲ್ಲಿ ದೆಹಲಿ ವಿಧಾನಸಭಾ ಚುನಾವಣೆಗೆ ಮುನ್ನ ಚುನಾವಣೆಯಲ್ಲಿ ದೆಹಲಿಯಲ್ಲಿ ನಡೆದ ಭೀಕರ ಕೋಮು ಗಲಭೆ, ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿತ್ತು. ಚುನಾವಣೆಯ ಮೇಲೆ ಕಣ್ಣಿಟ್ಟು ಮತಗಳ ಮತೀಯ ಧ್ರುವೀಕರಣದ ಏಕೈಕ ಅಜೆಂಡಾದೊಂದಿಗೆ ಅಲ್ಪಸಂಖ್ಯಾತರ ಮೇಲೆ ನಡೆದ, ಭಾರತ-ಪಾಕಿಸ್ತಾನ ವಿಭಜನೆಯ ಹೊತ್ತಿನ ಹಿಂಸಾಚಾರವನ್ನು ನೆನಪಿಸಿದ ಆ ಭೀಕರ ಕೋಮು ದಳ್ಳುರಿಗೆ ಕುಮ್ಮಕ್ಕು ನೀಡಿದ್ದು ಯಾರು ಎಂಬುದು ಗುಟ್ಟೇನಲ್ಲ. ಏಕೆಂದರೆ, ಆ ಹಿಂಸಾಚಾರಕ್ಕೆ ಯೋಜಿತ ಬೆಂಬಲವಿತ್ತು ಎಂಬುದಕ್ಕೆ ಮತ್ತು ತತಕ್ಷಣಕ್ಕೆ ಪ್ರಚೋದನೆ ನೀಡಿದ್ದಕ್ಕೆ ಬಿಜೆಪಿ ಶಾಸಕರು, ಸಚಿವರ ಬಹಿರಂಗ ಹೇಳಿಕೆಗಳು, ವೀಡಿಯೋ ದೃಶ್ಯಾವಳಿಗಳ ನೂರಾರು ಸಾಕ್ಷ್ಯಗಳು ಇವೆ. ಈಗಲೂ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿಯ ಕಪಿಲ್ ಮಿಶ್ರಾ, ಕೇಂದ್ರ ಸಚಿವ ಅನುರಾಗ್ ಠಾಕೂರ್, ಪರ್ವೇಶ್ ವರ್ಮಾ ಸೇರಿದಂತೆ ಸಾಲುಸಾಲು ಬಿಜೆಪಿ ನಾಯಕರ ಪ್ರಚೋದನಕಾರಿ ಹೇಳಿಕೆಗಳು ಹರಿದಾಡುತ್ತಲೇ ಇವೆ.
ಆದರೆ, ಅಚ್ಚರಿಯ ಸಂಗತಿ ಎಂದರೆ; ಮಾರಕಾಸ್ತ್ರಗಳು, ದೊಂದಿಯೊಂದಿಗೆ ನೂರಾರು ಜನರನ್ನು ಕರೆದುಕೊಂಡು ಬೀದಿಗಳಲ್ಲಿ ಮುಸ್ಲಿಮರ ವಿರುದ್ಧ ಮತೀಯ ಆಕ್ರೋಶದ ಮಾತುಗಳನ್ನು ಆಡುತ್ತಾ, ಬೆಂಕಿ ಹಚ್ಚಲು ಪ್ರಚೋದನೆ ನೀಡುತ್ತಾ ಆರ್ಭಟಿಸಿದ ಕಪಿಲ್ ಮಿಶ್ರಾ ವಿರುದ್ಧವಾಗಲೀ, ‘ಅವರಿಗೆ ಗುಂಡಿಕ್ಕಿ’ ಎಂದು ಬಹಿರಂಗ ಸಭೆಯಲ್ಲಿ ಕರೆಕೊಟ್ಟ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಬಗ್ಗೆಯಾಗಲೀ, ಅಥವಾ ಕೋಮುದಾಳಿಕೋರರ ಬೆನ್ನಿಗೆ ನಿಂತು ಹಿಂಸಾಚಾರಕ್ಕೆ ಬೆಂಬಲಿಸಿದ್ದ ಪರ್ವೇಶ್ ವರ್ಮಾ ಬಗ್ಗೆಯಾಗಲೀ ಪ್ರಕರಣದ ವಿಚಾರಣೆ ನಡೆಸುತ್ತಿರುವ ದೆಹಲಿ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಆರೋಪ ಪಟ್ಟಿಯಲ್ಲಿ ಅವರ ಕುಮ್ಮಕ್ಕಿನ ಬಗ್ಗೆ ಚಕಾರವೆತ್ತಿಲ್ಲ!

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಆದರೆ, ಸಿಎಎ-ಎನ್ ಆರ್ಸಿ ಕಾಯ್ದೆ ದೇಶದ ಅಲ್ಪಸಂಖ್ಯಾತ ಸಮುದಾಯವನ್ನು ಗುರಿಯಾಗಿಟ್ಟುಕೊಂಡು ರೂಪಿಸಲಾಗಿದೆ. ದೇಶದ ಪೌರತ್ವದ ವಿಷಯದಲ್ಲಿ ಧರ್ಮಾಧಾರಿತ, ಕೋಮುವಾದ ಅಜೆಂಡಾವನ್ನು ಹೇರಲಾಗುತ್ತಿದೆ. ಧರ್ಮದ ಆಧಾರದ ಮೇಲೆ ಒಂದು ಸಮುದಾಯವನ್ನು ದೇಶದ ಎರಡನೇ ದರ್ಜೆ ನಾಗರಿಕರನ್ನಾಗಿ ಮಾಡಲು ಈ ಕಾಯ್ದೆ ದುರ್ಬಳಕೆಯಾಗುತ್ತದೆ. ಇದು ಸಂವಿಧಾನದ ಮೂಲ ಆಶಯಕ್ಕೆ ವಿರುದ್ಧವಾದುದು ಎಂಬ ವಾದವನ್ನು ಮುಂದಿಟ್ಟು ಕಾಯ್ದೆ ವಿರೋಧಿಸಿ ದೇಶಾದ್ಯಂತ ನಡೆದ ನಾಗರಿಕ ಹೋರಾಟದಂತೆಯೇ ರಾಜಧಾನಿ ದೆಹಲಿಯಲ್ಲಿಯೂ ತಿಂಗಳುಗಳ ಕಾಲ ನಿರಂತರ ಹೋರಾಟ ನಡೆಸಿದ ನಾಗರಿಕ ಹೋರಾಟಗಾರರನ್ನು ದೆಹಲಿ ಪೊಲೀಸರು ದೆಹಲಿ ಗಲಭೆಕೋರರು ಎಂದು ಬಂಧಿಸತೊಡಗಿದ್ದಾರೆ.
ಅಷ್ಟೇ ಅಲ್ಲ; ದೆಹಲಿ ಗಲಭೆಯ ಸಂದರ್ಭದಲ್ಲಿ ದೆಹಲಿ ಪೊಲೀಸರು ಸ್ವತಃ ಗಲಭೆಗೆ ಕುಮ್ಮಕ್ಕು ನೀಡಿದ್ದು, ಅಲ್ಪಸಂಖ್ಯಾತರ ಬೀದಿಗಳಲ್ಲಿ ದಾಳಿ ಮಾಡಲು ದಾಳಿಕೋರರನ್ನು ಮುಂದೆ ಬಿಟ್ಟಿ ಅವರು ಬೆಂಕಿ ಹಚ್ಚಿ ಕೇಕೆ ಹಾಕುವವರೆಗೆ ನಿಂತು ನೋಡಿ, ಆಮೇಲೆ ಎಲ್ಲ ಮುಗಿದ ಮೇಲೆ ರಕ್ಷಕರಂತೆ ದಡಬಡಾಯಿಸಿ ಧಾವಿಸುವುದು ಎಲ್ಲವೂ ಟಿವಿ ವರದಿಗಳಲ್ಲಿ ಜಗಜ್ಜಾಹೀರಾಗಿತ್ತು. ವೀಡಿಯೋ ದಾಖಲೆ ಸಹಿತ ದೆಹಲಿ ಪೊಲೀಸರ ಈ ನಾಚಿಕೇಗೇಡಿನ, ಹೇಯ ಕೃತ್ಯ ದೇಶದ ಮನೆಮನೆಗೆ ತಲುಪಿತ್ತು. ಆ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರ ಇಂತಹ ದೇಶದ ಸಂವಿಧಾನ ಮತ್ತು ತಾವು ತೊಟ್ಟ ಖಾಕಿಗೆ ಅವಮಾನಕರ ವರ್ತನೆಯನ್ನು ಟೀಕಿಸಿದ್ದ ಮತ್ತು ಆ ಬಗ್ಗೆ ತನಿಖೆಗೆ ಒತ್ತಾಯಿಸಿದ್ದ ರಾಜಕೀಯ ನಾಯಕರ ವಿರುದ್ಧವೂ ದೆಹಲಿ ಪೊಲೀಸರು ಈಗ ಆರೋಪ ಪಟ್ಟಿ ಸಲ್ಲಿಸುವ ಮೂಲಕ ಸೇಡಿನ ವರಸೆ ಮೆರೆದಿದ್ದಾರೆ.

ಆಗ ದೆಹಲಿ ಚುನಾವಣೆಗಳನ್ನು ಗೆಲ್ಲಲು ಮತ್ತು ಸಿಎಎ- ಎನ್ ಆರ್ ಸಿ ಹೋರಾಟವನ್ನು ಬಗ್ಗುಬಡಿಯಲು ಕೋಮು ಗಲಭೆಯನ್ನು ಅಸ್ತ್ರವಾಗಿ ಬಳಸಿದ ಶಕ್ತಿಗಳೇ, ಇಂದು ಸಿಎಎ-ಎನ್ ಆರ್ ಸಿಯೂ ಸೇರಿದಂತೆ ಸರ್ಕಾರದ ಕೋಮು ಅಜೆಂಡಾ ನೀತಿ-ನಿಲುವುಗಳು, ದಮನಕಾರಿ ಆಡಳಿತ, ಸರ್ವಾಧಿಕಾರಿ ಧೋರಣೆಯ ವಿರುದ್ಧ ವಿವಿಧ ಸಂದರ್ಭದಲ್ಲಿ ದನಿ ಎತ್ತಿದ, ಹೋರಾಟ ನಡೆಸಿದ, ದೇಶದ ಸಂವಿಧಾನ ಮತ್ತು ಪ್ರಜಾಸತ್ತೆಯ ಪರ ನಿಂತ ವಿದ್ಯಾರ್ಥಿಗಳು, ಯುವ ನಾಯಕರು, ರಾಜಕೀಯ ಮುಖಂಡರು, ಸಾಮಾಜಿಕ ಹೋರಾಟಗಾರರು, ಪ್ರಾಧ್ಯಾಪಕರು, ಸಿನಿಮಾ ನಿರ್ಮಾಣಕಾರರು, ವಕೀಲರು, ಪತ್ರಕರ್ತರು ಸೇರಿದಂತೆ ಶಾಂತಿಯುತ ಹೋರಾಟಗಾರರು ಮತ್ತು ಪ್ರಜಾಸತ್ತಾತ್ಮಕ ಹಕ್ಕು ಪ್ರತಿಪಾದಕರ ವಿರುದ್ಧ ದಮನಕಾರಿ ಕಾನೂನುಬಾಹಿರ ಚಟುವಟಿಕೆ ನಿಷೇಧ ಕಾಯ್ದೆ(ಯುಎಪಿಎ) ಬಳಸಿ ಜೈಲಿಗಟ್ಟುತ್ತಿದೆ.
ಅದು ಇತ್ತೀಚಿನ ಸಿಎಎ-ಎನ್ಆರ್ ಸಿ ಹೋರಾಟಗಾರ ಹಾಗೂ ಬಿಜೆಪಿಯ ಸರ್ಕಾರದ ಮಗ್ಗುಲಮುಳ್ಳಾಗಿರುವ ಜೆಎನ್ ಯು ವಿದ್ಯಾರ್ಥಿ ಸಂಘಟನೆಯ ಮಾಜಿ ನಾಯಕ ಉಮರ್ ಖಾಲೀದ್ ಬಂಧನವಾಗಿರಬಹುದು, ಸಿಪಿಐ ನಾಯಕ ಸೀತಾರಾಂ ಯೆಚೂರಿ , ಸ್ವರಾಜ್ ಇಂಡಿಯಾ ನಾಯಕ ಯೋಗೇಂದ್ರ ಯಾದವ್ ಅವರನ್ನು ದೆಹಲಿ ಗಲಭೆಗೆ ಸಂಚು ರೂಪಿಸಿದವರು ಎಂದು ದೆಹಲಿ ಪೊಲೀಸರ ಚಾರ್ಜ್ ಶೀಟ್ ಉಲ್ಲೇಖವಿರಬಹುದು, ಎಲ್ಲವೂ ದೆಹಲಿ ಪೊಲೀಸರ ಮೂಲಕ ಆಳುವ ಬಿಜೆಪಿ ಸರ್ಕಾರ ಮತ್ತು ಸರ್ವಾಧಿಕಾರಿ ನಾಯಕತ್ವ ತನ್ನ ಟೀಕಾಕಾರರನ್ನು, ರಾಜಕೀಯ ವಿರೋಧಿಗಳನ್ನು, ತನ್ನ ನೀತಿನಿಲುವುಗಳನ್ನು ಪ್ರಶ್ನಿಸುವ, ವಿಶ್ಲೇಷಿಸುವ ಪ್ರಭಾವಿಗಳನ್ನು ಬಗ್ಗುಬಡಿಯಲು ನಡೆಸುತ್ತಿರುವ ಪ್ರಯತ್ನಗಳೇ ಎಂಬುದು ಗುಟ್ಟೇನಲ್ಲ.

ಹಾಗಾಗಿಯೇ ದೆಹಲಿ ಪೊಲೀಸರ ಈ ತನಿಖೆ ಈಗ ವ್ಯಾಪಕ ಟೀಕೆಗೆ, ಅಪಹಾಸ್ಯಕ್ಕೆ ಈಡಾಗಿದೆ. ಸೀತಾರಾಂ ಯೆಚೂರಿ ಅವರು, “ಇಂತಹ ನಕಲಿ, ದುರುದ್ದೇಶದ ಚಾರ್ಜ್ ಶೀಟ್ ಗಳ ಮೂಲಕ ತಮ್ಮನ್ನು ಬೆದರಿಸುವುದು ಸಾಧ್ಯವಿಲ್ಲ. ಪ್ರಜಾಪ್ರಭುತ್ವದ ಹಿತರಕ್ಷಣೆ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳ ರಕ್ಷಣೆಗಾಗಿ ತಮ್ಮ ಹೋರಾಟ ನಿರಂತರ. ಅದನ್ನು ಫ್ಯಾಸಿಸ್ಟ್ ಶಕ್ತಿಗಳು ತಡೆಯಲಾಗದು” ಎಂದು ಕಿಡಿಕಾರಿದ್ದಾರೆ. ಅದೇ ಹೊತ್ತಿಗೆ ಯೋಗೇಂದ್ರ ಯಾದವ್ ಕೂಡ, “ಸುಶಾಂತ್ ಸಿಂಗ್, ಕಂಗಾನಾ ರಸಮಂಜರಿ ನೋಡಿ ಜನ ಬೋರಾಗಿದ್ದಾರೆ. ದೇಶದ ಜನರಿಗೆ ಹೊಸ ಮನರಂಜನೆ ಕೊಡಬೇಕು ಎಂದು ಈ ಚಾರ್ಜ್ ಶೀಟ್ ಹಾಕಿದಂತಿದೆ. ನಿಜವಾಗಿಯೂ ದೆಹಲಿ ಪೊಲೀಸರಿಗೆ ಧೈರ್ಯವಿದ್ದರೆ, ‘ಅವರಿಗೆ ಗುಂಡಿಕ್ಕಿ’ ಎಂದು ಪ್ರಚೋದನೆ ನೀಡಿದ ಅಸಲೀ ಪ್ರಚೋದನಕಾರರ ಮೇಲೆ ಚಾರ್ಜ್ ಶೀಟ್ ಹಾಕಬೇಕಿತ್ತು” ಎಂದು ಹೇಳಿದ್ದಾರೆ.
ಅದೇ ಹೊತ್ತಿಗೆ ದೆಹಲಿ ಪೊಲೀಸರ ಈ ತನಿಖೆ ಯಾವ ಮಟ್ಟಿನ ಟೀಕೆಗೆ, ಅವಹೇಳನಕ್ಕೆ ಗುರಿಯಾಗಿದೆ ಎಂದರೆ; ಖ್ಯಾತ ಮಾಜಿ ಪೊಲೀಸ್ ಅಧಿಕಾರಿ ಜ್ಯೂಲಿಯೊ ರೆಬೆರೋ ಸೇರಿದಂತೆ ಒಂಭತ್ತು ಮಂದಿ ನಿವೃತ್ತ ಐಪಿಎಸ್ ಅಧಿಕಾರಿಗಳು ದೆಹಲಿ ಪೊಲೀಸ್ ಕಮೀಷನರ್ ಎಸ್ ಎನ್ ಶ್ರೀವಾಸ್ತವ ಅವರಿಗೆ ಬಹಿರಂಗ ಪತ್ರ ಬರೆದು “ಸಿಎಎ ವಿರುದ್ಧ ದನಿ ಎತ್ತಿದ ರಾಜಕೀಯ ನಾಯಕರು, ವಿದ್ಯಾರ್ಥಿ ಮುಖಂಡರು ಸೇರಿದಂತೆ ವಿವಿಧ ಶಾಂತಿಯುತ ಹೋರಾಟಗಾರರು ಮತ್ತು ಪ್ರಜಾಸತ್ತಾತ್ಮಕ ಚಳವಳಿಗಾರರನ್ನು ಗಲಭೆಕೋರರು, ಗಲಭೆಗೆ ಕುಮ್ಮಕ್ಕು ನೀಡಿದವರು ಎಂದು ಬಂಧಿಸಲಾಗುತ್ತಿದೆ. ಅದೇ ಹೊತ್ತಿಗೆ ನಿಜವಾಗಿಯೂ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿ ಗಲಭೆಗೆ ನೇರ ಕುಮ್ಮಕ್ಕು ನೀಡಿದ ಆಡಳಿತ ಪಕ್ಷದೊಂದಿಗೆ ಗುರುತಿಸಿಕೊಂಡಿರುವ ವ್ಯಕ್ತಿಗಳನ್ನು ರಾಜಾರೋಷವಾಗಿ ಓಡಾಡಿಕೊಂಡಿರಲು ಬಿಡಲಾಗಿದೆ. ಇದು ಪೊಲೀಸ್ ವ್ಯವಸ್ಥೆಗೇ ಅವಮಾನಕರ ನಡೆ” ಎಂದು ಛೀಮಾರಿ ಹಾಕಿದ್ದಾರೆ.

ಪಂಜಾಬ್ ಮತ್ತು ಹರ್ಯಾಣದ ಪೊಲೀಸ್ ಮುಖ್ಯಸ್ಥರಾಗಿ, ಎಂಬತ್ತರ ದಶಕದಲ್ಲಿ ಕಾಶ್ಮೀರಿ ಭಯೋತ್ಪಾದಕರು ಮತ್ತು ನುಸುಳುಕೋರರ ಉಪಟಳವನ್ನು ಬಗ್ಗುಬಡಿದ ಖ್ಯಾತಿಯ ರೆಬೆರೋ, ಮುಂಬೈ ಪೊಲೀಸ್ ಮುಖ್ಯಸ್ಥರಾಗಿಯೂ ಹೆಸರು ಮಾಡಿದ ದೇಶದ ಅತ್ಯಂತ ದಿಟ್ಟ ಪೊಲೀಸ್ ಅಧಿಕಾರಿ ಎಂದು ಜನಪ್ರಿಯರು. ದೆಹಲಿ ಪೊಲೀಸರ ತನಿಖೆಯ ವರಸೆಯನ್ನು ಕಂಡು ದಿಗ್ಭ್ರಮೆಗೊಂಡಿರುವುದಾಗಿ ಹೇಳಿರುವ ಅವರು, ಉಮರ್ ಖಾಲಿದ್ ಬಂಧನವನ್ನು ಪ್ರಸ್ತಾಪಿಸಿ, ದೇಶದಲ್ಲಿ ಪ್ರಜಾಸತ್ತಾತ್ಮಕ, ಶಾಂತಿಯುತ ಹೋರಾಟಗಾರರಿಗೆ ಸರ್ಕಾರದ ನೀತಿ ನಿಲುವುಗಳನ್ನು ಪ್ರಶ್ನಿಸುವ, ಶಾಂತಿಯುತ ಹೋರಾಟದ ಮೂಲಕ ತಮ್ಮ ಸಂವಿಧಾನಿಕ ಹಕ್ಕುಗಳನ್ನು ಚಲಾಯಿಸುವ ಸ್ವಾತಂತ್ರ್ಯವೂ ಇಲ್ಲವೆಂದಾದರೆ, ನಿಜಕ್ಕೂ ಪೊಲೀಸರು ಸರ್ವಾಧಿಕಾರಿಗಳಾಗಿದ್ದಾರೆಯೇ? ಅಥವಾ ಸಂವಿಧಾನ ರಕ್ಷಕರಾಗಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.
ಈ ನಡುವೆ, ದೆಹಲಿ ಗಲಭೆಯ ವಿಷಯದಲ್ಲಿ ರಾಜಧಾನಿಯಲ್ಲಿ ಮತ್ತೊಂದು ಬೆಳವಣಿಗೆ ನಡೆದಿದ್ದು, ದೆಹಲಿ ಪೊಲೀಸರ ಪ್ರಜಾಪ್ರಭುತ್ವ ವಿರೋಧಿ ಚಾರ್ಜ್ ಶೀಟ್ ಕಟ್ಟುಕತೆಗಳ ಜೊತೆಗೆ, ಗಲಭೆಯ ವೇಳೆ ಸಾಮಾಜಿಕ ಜಾಲತಾಣಗಳ ಪಾತ್ರದ ಕುರಿತ ಮಹತ್ವದ ವಿಚಾರಣೆ ಆರಂಭವಾಗಿದೆ. ದೆಹಲಿ ಗಲಭೆ ವೇಳೆ ಪ್ರಚೋದನಕಾರಿ ಹೇಳಿಕೆ, ವೀಡಿಯೋ, ಫೋಟೋಗಳನ್ನು ತನ್ನ ಸಾಮಾಜಿಕ ಜಾಲತಾಣದಲ್ಲಿ ಯಾವ ನಿರ್ಬಂಧವಿಲ್ಲದೆ, ಪ್ರಸರಣಕ್ಕೆ ಅವಕಾಶ ನೀಡುವ ಮೂಲಕ ಫೇಸ್ ಬುಕ್, ಪರೋಕ್ಷವಾಗಿ ಗಲಭೆಗೆ ಕುಮ್ಮಕ್ಕು ನೀಡಿದೆ ಮತ್ತು ಕೋಮುವಾದಿ ಆಡಳಿತಕ್ಕೆ ನೆರವಾಗಿದೆ ಎಂಬ ಆರೋಪದ ಮೇಲೆ ದೆಹಲಿಯ ಎಎಪಿ ಸರ್ಕಾರ ಜಾಲತಾಣ ಸಂಸ್ಥೆ ವಿರುದ್ಧ ವಿಚಾರಣೆ ಆರಂಭಿಸಿದೆ.

ದೆಹಲಿ ರಾಜ್ಯ ಸರ್ಕಾರದ ಶಾಂತಿ ಮತ್ತು ಸೌಹಾರ್ದಕ್ಕೆ ಸಂಬಂಧಿಸಿದ ಸದನ ಸಮಿತಿ ಈ ಸಂಬಂಧ ವಿಚಾರಣೆಗೆ ಮಂಗಳವಾರ ಹಾಜರಾಗುವಂತೆ ಫೇಸ್ ಬುಕ್ ಇಂಡಿಯಾದ ವ್ಯವಸ್ಥಾಪಕ ಅಜಿತ್ ಮೋಹನ್ ಎಂಬುವರಿಗೆ ನೋಟೀಸ್ ನೀಡಿತ್ತು. ಆದರೆ, ‘ದೆಹಲಿ ಕಾನೂನು ಮತ್ತು ಸುವ್ಯವಸ್ಥೆ ಮತ್ತು ಐಟಿ ಕಾಯ್ದೆಗಳು ದೆಹಲಿ ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುವುದಿಲ್ಲ ಮತ್ತು ಈಗಾಗಲೇ ಇದೇ ವಿಷಯದ ಕುರಿತು ಸಂಸದೀಯ ಸಮಿತಿ ವಿಚಾರಣೆ ನಡೆಸುತ್ತಿರುವುದರಿಂದ ದೆಹಲಿ ವಿಧಾನಸಭಾ ಸದನ ಸಮಿತಿಗೆ ವಿಚಾರಣೆ ನಡೆಸುವ ಹಕ್ಕಿಲ್ಲ’ ಎಂದು ಹೇಳಿರುವ ಫೇಸ್ ಬುಕ್ ಎಂಡಿ, ವಿಚಾರಣೆಗೆ ಹಾಜರಾಗದೇ ದೂರವೇ ಉಳಿದಿದ್ದಾರೆ. ಈ ನಡೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಸದನ ಸಮಿತಿಯ ಅಧ್ಯಕ್ಷ ರಾಘವ್ ಛಡ್ಡಾ, ವಿಚಾರಣೆಗೆ ಹಾಜರಾಗದೇ ಇರುವ ಫೇಸ್ ಬುಕ್ ಕಂಪನಿಯ ವರಸೆ, ಅದು ಏನನ್ನೋ ಮುಚ್ಚಿಡುತ್ತಿದೆ ಎಂಬುದನ್ನು ತೋರಿಸುತ್ತಿದೆ. ಅಲ್ಲದೆ, ದೆಹಲಿ ಗಲಭೆಗೆ ಕುಮ್ಮಕ್ಕು ನೀಡಿದೆ ಎಂಬ ತನ್ನ ವಿರುದ್ಧದ ಆರೋಪಗಳಲ್ಲಿ ನಿಜವಿದೆ ಎಂದು ಆ ಸಂಸ್ಥೆಯೇ ಪರೋಕ್ಷವಾಗಿ ಹೀಗೆ ಹೇಳುತ್ತಿದೆ ಎಂದು ತಿರುಗೇಟು ನೀಡಿದ್ಧಾರೆ.
ಒಟ್ಟಾರೆ ಇತ್ತೀಚಿನ ದಶಕಗಳಲ್ಲೇ ದೇಶ ಕಂಡುಕೇಳರಿಯದ ಪ್ರಮಾಣದ ಭೀಕರ ದೆಹಲಿ ಗಲಭೆಯ ಹಿಂದೆ ಕೇವಲ ಒಂದು ಸಮುದಾಯವನ್ನು ಬೆದರಿಸುವ, ಹತ್ತಿಕ್ಕುವ ಉದ್ದೇಶಮಾತ್ರವಲ್ಲ; ಸಾಮಾಜಿಕ ಜಾಲತಾಣಗಳು, ಪೊಲೀಸ್, ರಾಜಕೀಯ ಅಧಿಕಾರವನ್ನು ಬಳಸಿಕೊಂಡು ದೇಶದ ಸಂವಿಧಾನ ಮತ್ತು ಪ್ರಜಾಸತ್ತೆಯನ್ನು ಕೂಡ ಬುಡಮೇಲು ಮಾಡುವ ಯತ್ನ ಸರ್ವಾಧಿಕಾರಿ ಶಕ್ತಿಗಳಿಂದ ನಡೆದಿತ್ತು ಎಂಬುದನ್ನು ಈಗ ಈ ಎಲ್ಲಾ ಸಂಗತಿಗಳು ಬಯಲುಮಾಡುತ್ತಿವೆ. ಅಂತಹ ವಿಷಯದಲ್ಲಿ ಪೇಸ್ ಬುಕ್ ನಂತಹ ವಿದೇಶಿ ಕಾರ್ಪೊರೇಟ್ ಸಂಸ್ಥೆಯ ಪಾಲುದಾರಿಕೆಯ ಆರೋಪಗಳು ಮತ್ತು ಆ ಆರೋಪಗಳಿಗೆ ಆ ಕಂಪನಿ ತೋರುತ್ತಿರುವ ಪ್ರತಿಕ್ರಿಯೆಗಳು ನಿಜಕ್ಕೂ ಆಘಾತಕಾರಿ!