ಕೇಂದ್ರ ಸರ್ಕಾರ ಮುಂದಿನ ವರ್ಷ ಜಾರಿಗೆ ತರಲು ಉದ್ದೇಶಿಸಿರುವ ತೃತೀಯ ಲಿಂಗಿಗಳ ಹಕ್ಕುಗಳ ರಕ್ಷಣಾ ಮಸೂದೆ 2019ನ್ನು ಅನೇಕ ರಾಜ್ಯಸಭಾ ಸದಸ್ಯರ ವಿರೋಧದ ನಡುವೆಯೂ ಕಳೆದ ನವೆಂಬರ್ 26 ರಂದು ರಾಜ್ಯಸಭೆಯು ಅನುಮೋದನೆ ನೀಡಿದೆ. ಈ ಮಸೂದೆಯನ್ನು ತಮಿಳುನಾಡಿನ ತಿರುಚ್ಚಿಯ ರಾಜ್ಯಸಭಾ ಸದಸ್ಯ ಶಿವ ಅವರು 2014 ರಲ್ಲೇ ಮಂಡಿಸಿದ್ದರು. ತೃತೀಯ ಲಿಂಗಿಗಳಿಗೆ ನ್ಯಾಯಬದ್ದವಾಗಿ ಸಿಗಬೇಕಾದ ಹಕ್ಕುಗಳನ್ನು ನೀಡುವ ಮೂಲಕ ಅವರ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ಮಾಡುವ ಮೂಲಕ ಸಮಾಜದ ಮುಖ್ಯ ವಾಹಿನಿಗೆ ತರುವುದು ಈ ಮಸೂದೆಯ ಉದ್ದೇಶವಾಗಿತ್ತು.
ಆದರೆ ದೇಶದ ತೃತೀಯ ಲಿಂಗಿಗಳ ಸಮುದಾಯ ಈ ಮಸೂದೆಗೆ ತೀವ್ರ ಪ್ರತಿರೋಧ ವ್ಯಕ್ತಪಡಿಸಿದ್ದು ತಮ್ಮ ವಿರೋಧವನ್ನು ಲಭ್ಯವಿರುವ ಎಲ್ಲ ಸಾಮಾಜಿಕ ತಾಣಗಳ ಮೂಲಕ ಹೊರ ಹಾಕಿದೆ. ಈ ಎಲ್ಲ ಪ್ರತಿರೋಧಗಳ ನಡುವೆಯೂ ಸರ್ಕಾರ ಡಿಸೆಂಬರ್ 2018 ರಲ್ಲೇ ಲೋಕಸಭೆಯಲ್ಲಿ ಈ ಮಸೂದೆಯನ್ನು ಮಂಡಿಸಿದೆ. ಕಳೆದ ಆಗಸ್ಟ್ 5 ,2019 ರಂದು ಲೋಕಸಭೆಯು ತೃತೀಯ ಲಿಂಗಿ ಹಕ್ಕುಗಳ ರಕ್ಷಣಾ ಮಸೂದೆ 2019 ನ್ನು ಅನುಮೋದನೆ ಮಾಡಿದ್ದು ಇದನ್ನು ಲೋಕಸಭೆಯಲ್ಲಿ ಮಂಡಿಸುವುದಕ್ಕೂ ಮೊದಲು ತೃತೀಯ ಲಿಂಗಿ ಸಮುದಾಯಕ್ಕಾಗಲೀ , ಎನ್‌ಜಿಓಗಳಿಗಾಗಲೀ ಅಥವಾ ಸಾರ್ವಜನಿಕರಿಗಾಗಲೀ ಇದರ ಅಂಶಗಳು ಲಭ್ಯವಿರಲಿಲ್ಲ. ಕಳೆದ ವಾರ ರಾಜ್ಯಸಭೆಯೂ ಮಸೂದೆಯನ್ನು ಅಂಗೀಕರಿಸಿದ್ದು ಇದು ಕಾನೂನು ಆಗಬೇಕಾದರೆ ರಾಷ್ಟ್ರಪತಿಗಳ ಸಹಿಗಾಗಿ ಕಾಯುತ್ತಿದೆ.
ಸರ್ಕಾರದ ಪ್ರಕಾರ ಈ ಮಸೂದೆಯಿಂದ ಶೋಷಿತ ಸಮುದಾಯವನ್ನು ಸಂಕಷ್ಟದಿಂದ ಮೇಲೆತ್ತುವ ಪ್ರಗತಿಪರ ಪ್ರಯತ್ನ ಎಂದು ಹೇಳಿಕೊಂಡಿದೆ. ಆದರೆ ವಾಸ್ತವವಾಗಿ ಈ ಮಸೂದೆಯಲ್ಲಿನ ಕೆಲವು ಅಂಶಗಳು ಶೋಷಿತ ಸಮುದಾಯದ ವಿರುದ್ಧವೇ ಇವೆ. ತೃತೀಯ ಲಿಂಗಿಗಳ ಅಭಿವೃದ್ದಿಗೆ ಶ್ರಮಿಸುತ್ತಿರುವ ಎನ್‌ಜಿಓ ಒಂದರ ಪ್ರಕಾರ ಈ ಸಂಪೂರ್ಣ ಪ್ರಕ್ರಿಯೆ ತೃತೀಯ ಲಿಂಗಿಗಳ ಅಭಿವೃದ್ದಿಗೆ ಏನೂ ಮಾಡುವುದಿಲ್ಲ ಬದಲಿಗೆ ಅವರಿಗೆ ಈಗಿರುವ ಹಕ್ಕುಗಳನ್ನೂ ಕಸಿದುಕೊಳ್ಳಲಿದೆ ಎನ್ನುತ್ತದೆ.
ಮೊದಲನೇಯದಾಗಿ ಈ ಮಸೂದೆಯಲ್ಲಿ ತೃತೀಯ ಲಿಂಗಿಗಳನ್ನಲ್ಲದೆ ಇತರ ಲಿಂಗಿಯ ವ್ಯಕ್ತಿಗಳನ್ನೂ ಈ ಕಾಯ್ದೆಯಡಿಯಲ್ಲಿ ಸೇರ್ಪಡೆ ಮಾಡಲಾಗಿದ್ದು ಇದು ಕಾಯ್ದೆ ನಿಗದಿಯಾದ ಯಾವುದೇ ಸಮುದಾಯಕ್ಕೆ ಅನುಕೂಲ ಮಾಡಿಕೊಡುವುದಿಲ್ಲ.
ಎರಡನೇಯದಾಗಿ ಈ ಮಸೂದೆಯಲ್ಲಿ ಉಲ್ಲೇಖೀಸಲಾಗಿರುವ ಕುಟುಂಬ ಎಂಬ ಪದವು ಖಚಿತವಾದ ಅರ್ಥ ಕೊಡುವುದಿಲ್ಲ. ಏಕೆಂದರೆ ತೃತೀಯ ಲಿಂಗಿಗಳು ಸಾಮಾನ್ಯವಾಗಿ ತಾವು ಹುಟ್ಟಿ ಬೆಳೆದ ಕುಟುಂಬವನ್ನು ತೊರೆದು ತಮ್ಮದೇ ಸಮುದಾಯದ ಜನರ ನಡುವೆ ವಾಸಿಸುತ್ತಿರುತ್ತಾರೆ. ಹಾಗಾಗಿ ಇವರನ್ನೂ ಕುಟುಂಬ ಎಂದೇ ಪರಿಗಣಿಸಬೇಕಿದೆ.
ಈ ಮಸೂದೆಯಲ್ಲಿ ಸರ್ಕಾರ ತೃತೀಯ ಲಿಂಗಿಗಳ ರಕ್ಷಣೆ , ಭದ್ರತೆ ಮತ್ತು ಪುನರ್ವಸತಿ ಒದಗಿಸಬೇಕಾದ ಬದ್ದತೆಯನ್ನು ಹೊಂದಿದೆ. ಇದು ಕೂಡ ಸ್ಪಷ್ಟತೆಯನ್ನು ಹೊಂದಿಲ್ಲ ಮತ್ತು ಇದನ್ನು ಅಧಿಕಾರಿಗಳು ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆ ಇದ್ದು ತೃತೀಯ ಲಿಂಗಿಗಳು ಈಗ ಹೊಂದಿರುವ ಸ್ವಾತಂತ್ರ್ಯವನ್ನೂ ಕಸಿದುಕೊಳ್ಳುವ ಸಾಧ್ಯತೆ ಇದೆ.
ಈ ಮಸೂದೆಯಲ್ಲಿ ತೃತೀಯ ಲಿಂಗಿ ವರ್ಗಕ್ಕೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡುವ ಕುರಿತು ಪ್ರಸ್ತಾಪವನ್ನೇ ಮಾಡಿಲ್ಲ. ಇದು ಈ ಸಮುದಾಯದ ಬಹಳ ವರ್ಷಗಳ ಬೇಡಿಕೆ ಆಗಿದೆ. ಇದಲ್ಲದೆ ಮಸೂದೆಯಲ್ಲಿ ಅಡಕವಾಗಿರುವ ಅಂಶಗಳು ತೃತೀಯ ಲಿಂಗಿಗಳಿಗೆ ಸರ್ಕಾರ ಶಿಕ್ಷಣ ಹಾಗೂ ಆರೋಗ್ಯ ಸವಲತ್ತುಗಳನ್ನು ಕಡ್ಡಾಯವಾಗಿ ಒದಗಿಸಬೇಕಾದ ಬದ್ದತೆಯ ಅಂಶವಿಲ್ಲ. ಇದನ್ನು ಸಂಪೂರ್ಣವಾಗಿ ಸರ್ಕಾರಿ ಅಧಿಕಾರಿಗಳ ವಿವೇಚನೆಗೆ ಬಿಡಲಾಗಿದ್ದು ಈ ಕುರಿತು ತೃತೀಯ ಲಿಂಗಿಯೊಬ್ಬನಿಗೆ ಆತನ ಹುಟ್ಟಿನಿಂದ ಬಂದಿರುವ ನ್ಯೂನತೆಯ ಕುರಿತು ಸಂಭಂಧಿಸಿದ ಅಧಿಕಾರಿ ಸರ್ಟಿಫಿಕೇಟ್ ನೀಡಬಹುದು. ಆದರೆ ಇದರಲ್ಲೂ ಸ್ಪಷ್ಟತೆ ಇಲ್ಲ.
ಉದ್ದೇಶಿತ ತೃತೀಯ ಲಿಂಗಿಗಳ ಹಕ್ಕುಗಳ ರಾಷ್ಟ್ರೀಯ ಮಂಡಳಿಯ ರಚನೆಯಲ್ಲಿ ಕೇವಲ 5 ತೃತೀಯ ಲಿಂಗಿ ಸದಸ್ಯರಿಗೆ ಅವಕಾಶ ಕಲ್ಪಿಸಲಾಗಿದೆ. ಇದನ್ನೂ ಕೂಡ ಕೇಂದ್ರ ಸರ್ಕಾರ ನಾಮಕರಣ ಮಾಡಬೇಕಿದೆ. ಇದರಿಂದ ಸರ್ಕಾರವು ಸಂಪೂರ್ಣ ಮಂಡಳಿಯಲ್ಲಿ ತನ್ನ ಹಿಡಿತ ಸಾಧಿಸಬಹುದಾಗಿದೆ ಮತ್ತು ಸಮುದಾಯದ ಗಟ್ಟಿ ಧ್ವನಿ ಇರುವ ವ್ಯಕ್ತಿಗಳ ಸಮಸ್ಯೆಗಳನ್ನು ಬಗೆಹರಿಸುವುದು ಶೀಘ್ರವಾಗಲಿದೆಯಾದರೆ ದುರ್ಬಲರ ದ್ವನಿ ಅಡಗಿ ಹೋಗಲಿದೆ.
ಈ ಮಸೂದೆಯಲ್ಲಿ ಭಾರತೀಯ ದಂಡ ಸಂಹಿತೆ 1860 ಹಾಗೂ ಇತರ ಕಾಯ್ದೆಗಳಲ್ಲಿ ಭಿನ್ನವಾದ ಶಿಕ್ಷೆ ವಿಧಿಸುವ ಅವಕಾಶ ನೀಡಲಾಗಿದೆ. ತೃತೀಯ ಲಿಂಗಿಗಳ ಮೇಲೆ ನಡೆಯುವ ಅಪರಾಧಗಳಲ್ಲಿ ಅಪರಾಧಿಗಳಿಗೆ ಶಿಕ್ಷೆ ಪ್ರಮಾಣವನ್ನು ಕಡಿಮೆ ಮಾಡಲಾಗಿದೆ. ಉದಾಹರಣೆಗೆ ತೃತೀಯ ಲಿಂಗಿ ಯೊಬ್ಬನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದರೆ ಗರಿಷ್ಟ 2 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಢ ವಿಧಿಸಬಹುದಾಗಿದ್ದರೆ ಆದರೆ ಮಹಿಳೆಯೊಬ್ಬಳ ಮೇಲನ ಲೈಂಗಿಕ ದೌರ್ಜನ್ಯಕ್ಕೆ ಗರಿಷ್ಟ 7 ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.
ನಮ್ಮ ಸಂವಿಧಾನದ ಮೂಲ ಆಶಯದ ಪ್ರಕಾರ ಲೈಂಗಿಕ ಅಲ್ಪಸಂಖ್ಯಾತರಿಗೂ ಕೂಡ ಇತರ ಎಲ್ಲರಿಗೆ ಇರುವಂತೆ ಸಮಾನ ಹಕ್ಕುಗಳನ್ನು ನೀಡಬೇಕು ಮತ್ತು ಕಾನೂನಿನ ರಕ್ಷಣೆಯನ್ನು ಒದಗಿಸಬೇಕಿದೆ. ಇಂದು ಈ ನ್ಯಾಯಬದ್ದವಾದ ಹಕ್ಕುಗಳನ್ನು ಪಡೆಯಲು ಅಧಿಕಾರ ಶಾಹಿಯ ಎದುರು ದಿನಗಟ್ಟಲೆ ನಿಂತು ಮತ್ತಷ್ಟು ಸಮಯ ವ್ಯರ್ಥ ಮಾಡಿಕೊಳ್ಳುವ ಪರಿಸ್ಥಿತಿ ಇದೆ. ತೃತೀಯ ಲಿಂಗಿಗಳು ಇಂದಿಗೂ ನಿತ್ಯದ ಬದುಕಿನಲ್ಲಿ ವಿಶಿಷ್ಟವಾದ ಸಮಸ್ಯೆಗಳನ್ನು ಎದುರಿಸುತಿದ್ದಾರೆ . ಆದರೆ ಅವರ ಸಮಸ್ಯೆ ಮತ್ತು ವಿಷಯಗಳು ಟಿವಿಗಳಲ್ಲಿ ಚರ್ಚೆಗೆ , ಟಾಕ್ ಶೋ ಗಳಿಗೆ ಅರ್ಹವಲ್ಲ ಮತ್ತು ಡಾಕ್ಯುಮೆಂಟರಿ ನಿರ್ಮಿಸಲೂ ಯೋಗ್ಯವಾದ ವಸ್ತುವಲ್ಲ ಎಂದು ಸಮಾಜ ಭಾವಿಸಿರುವುದು ನಿಜಕ್ಕೂ ವಿಷಾದನೀಯ ಸಂಗತಿ .
ಒಟ್ಟಿನಲ್ಲಿ ಈ ಉದ್ದೇಶಿತ ಕಾಯ್ದೆಯಿಂದಾಗಿ ತೃತೀಯ ಲಿಂಗಿಗಳಿಗೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು ಎಂದು ಸಮುದಾಯದ ಅಭಿಮತವಾಗಿದೆ.