ತಬ್ಲೀಗ್ ಜಮಾಅತ್.. ಸದ್ಯ ದೇಶಾದ್ಯಂತ ಗಮನಸೆಳೆಯುತ್ತಿರುವ ಇಸ್ಲಾಮಿಕ್ ಗುಂಪು. ಇದುವರೆಗೂ ಹೆಚ್ಚಿನ ಮಂದಿ ಈ ಹೆಸರೇ ಕೇಳಿರಲಿಲ್ಲ. ಅದೆಷ್ಟೋ ಮುಸ್ಲಿಮರಿಗೂ ಈ ತಬ್ಲೀಗ್ ಜಮಾಅತ್ ಅನ್ನೋ ಪಂಥವೊಂದು ನಮ್ಮ ಧರ್ಮದಲ್ಲಿದೆ ಅನ್ನೋದೇ ತಿಳಿದಿರಲಿಲ್ಲ. ಈ ತಬ್ಲೀಗ್ ಜಮಾಅತ್ ಸದಸ್ಯರು ತಾವಾಯಿತು, ತಮ್ಮ ಪಾಡಾಯಿತು ಅಂತ ಇದ್ದವರು. ಸುನ್ನಿ, ಜಮಾಅತೆ-ಇಸ್ಲಾಮಿ-ಹಿಂದ್ ಪಂಥೀಯರ ಥರ ಎಲ್ಲೂ ಸಾಮಾಜಿಕ, ರಾಜಕೀಯ ಜೀವನದಲ್ಲಿ ಅಷ್ಟಾಗಿ ಗುರುತಿಸಿಕೊಂಡವರಲ್ಲ. ಹಾಗಂತ ಇವರಲ್ಲಿ ಇರುವವರು ಕೇವಲ ಧಾರ್ಮಿಕ ಜ್ಞಾನ ಹೊಂದಿದವರು ಮಾತ್ರವಲ್ಲ, ಲೌಕಿಕ ಜ್ಞಾನವಿರುವವರೂ ಇದ್ದಾರೆ. ವೈದ್ಯರೂ, ಪತ್ರಕರ್ತರೂ, ವಕೀಲರು, ಸೇನೆಯಲ್ಲಿರುವವರೂ ಇದ್ದಾರೆ. ಆದರೆ ಮೊನ್ನೆ ಮೊನ್ನೆವರೆಗೂ ನಿಜಾಮುದ್ದೀನ್ ಮರ್ಕಝ್ ಘಟನೆ ಆಗುವವರೆಗೂ ದೇಶದಲ್ಲಿ ಇಂತಹದ್ದೊಂದು ಪಂಥ ಇದೆ, ಅದರ ಚಟುವಟಿಕೆ ಹೀಗೀಗಿದೆ ಅನ್ನೋದು ಯಾರಿಗೂ ಗೊತ್ತಿರಲಿಲ್ಲ.
ಇವರನ್ನು ಚೆನ್ನಾಗಿ ಅರಿತಿರೋ ಇತರೆ ಮುಸ್ಲಿಂ ಪಂಗಡದ ಮಂದಿ ಹೇಳುವುದು ಇಷ್ಟೇ, ಅವರ ಜೀವನ ಶೈಲಿ ಅನ್ನೋದು ದ್ವೀಪದಂತೆ. ಹೆಚ್ಚಾಗಿ ಬೆರೆಯಲಾರರು, ಸಾಮಾಜಿಕವಾಗಿ ಜಾಸ್ತಿ ಗುರುತಿಸಿಕೊಳ್ಳಲಾರರು. ಆದರೆ ಇದೆಲ್ಲವೂ ಧಾರ್ಮಿಕ ಪಂಡಿತರಿಗೆ ಮಾತ್ರ. ಆದರೆ ಸಾಮಾಜಿಕವಾಗಿ ಗುರುತಿಸಿಕೊಂಡು ಕೆಲಸ ಮಾಡುವವರು ಎಲ್ಲೂ ತಾನೊಬ್ಬ ತಬ್ಲೀಗ್, ನನ್ನ ಸಿದ್ಧಾಂತ ಹೀಗಿದೆ, ಹಾಗಿದೆ ಅನ್ನೋದನ್ನು ಹೇಳುತ್ತಾ ತಿರುಗುವವನೂ ಅಲ್ಲ.
ಇಸ್ಲಾಮ್ ಏಕದೇವ ವಿಶ್ವಾಸದ ಅಡಿಪಾಯದಲ್ಲಿ ನಿಂತರೂ ಅದರಲ್ಲೂ ನೂರಾರು ಗುಂಪು, ಪಂಗಡ-ಪಂಥಗಳಿವೆ. ಒಬ್ಬೊಬ್ಬರದ್ದು ಒಂದೊಂದು ಪಂಥ. ತಬ್ಲೀಗ್ ಜಮಾಅತ್ ಮೇಲ್ನೋಟಕ್ಕೆ ಸಲಫಿ ಪಂಥದ ಧೊರಣೆಯೇ ಹೊಂದಿದ್ದರೂ, ಅವರ ಜೊತೆ ಇವರನ್ನ ಸಮೀಕರಿಸುವಂತಿಲ್ಲ. ಇವರದ್ದೊಂದು ರೀತಿಯ ಅತಿಯಾದ ಧಾರ್ಮಿಕತೆಯಾದರೂ ಎಲ್ಲೂ ಅನಗತ್ಯ ಚರ್ಚೆಗಿಳಿಯದೇ ತಮ್ಮ ಸಂದೇಶಗಳನ್ನು ಮುಸ್ಲಿಮರಿಗಷ್ಟೇ ತಲುಪಿಸುವ ಉದ್ದೇಶ ಹೊಂದಿದವರು. ಇಸ್ಲಾಮಿಕ್ ಮಿಷನರಿಗಳಾಗಿ ಗುರುತಿಸಿಕೊಂಡವರಾದರೂ ಮತಾಂತರ ಇವರ ಆದ್ಯತೆಯಾಗಿಯೇ ಇಲ್ಲ. ಬದಲಾಗಿ ಇಸ್ಲಾಮಿನ ಅನುಯಾಯಿಗಳಲ್ಲೇ ನೈಜ ಧರ್ಮದ ಪಾಠ ಹೇಳಿ ಅವರೇ ಹೇಳುವಂತೆ ಪರಿಶುದ್ಧ ಮುಸ್ಲಿಮನನ್ನಾಗಿಸುವ ಗುರಿ ಹೊಂದಿದವರು ಇವರು.
ಇವರೂ ಏಕದೇವ ವಿಶ್ವಾಸಿಯಾಗಿದ್ದು ಯಾವುದೇ ಕಾರಣಕ್ಕೂ ದರ್ಗಾ ಅಥವಾ ವಿಗ್ರಹ ಆರಾಧನೆಯನ್ನು ಒಪ್ಪಲಾರರು. ಆದ್ದರಿಂದ ಪ್ರಗತಿಪರ ಮುಸ್ಲಿಮರು ಅಥವಾ ಸೂಫಿ ಪಂಥದ ಅನುಯಾಯಿಗಳಿಗೆ ಇವರನ್ನ ಕಂಡರೆ ಅಷ್ಟಕ್ಕಷ್ಟೇ. ತಬ್ಲೀಗ್ ಜಮಾಅತ್‌ನಡಿ ಒಂದುಗೂಡುವ ಧಾರ್ಮಿಕ ವಿದ್ವಾಂಸರಿಗೆ ದೆಹಲಿಯ ನಿಝಾಮುದ್ದೀನ್ ಕೇಂದ್ರ ಅನ್ನೋದು ಕೇಂದ್ರ ಕಚೇರಿ ಇದ್ದಂತೆ. ವರುಷಕ್ಕೊಂದು ಬಾರಿ ಅಲ್ಲಿ ಕಾರ್ಯಕ್ರಮ ನಡೆಸುವ ಇವರು, ಅದೆಷ್ಟೋ ದೇಶಗಳ ವಿದ್ವಾಂಸರನ್ನೂ ಆಹ್ವಾನಿಸುತ್ತಾರೆ.
ತಬ್ಲೀಗ್ ಜಮಾಅತ್‌ನ ಧಾರ್ಮಿಕ ವಿದ್ವಾಂಸರು ವರುಷದಲ್ಲಿ ನೂರಕ್ಕೂ ಅಧಿಕ ದಿನ ವಿವಿಧ ಪ್ರದೇಶಗಳಿಗೆ ಮತ ಪ್ರಚಾರದ ಉದ್ದೇಶದೊಂದಿಗೆ ತೆರಳುತ್ತಾರೆ. ಅಲ್ಲಿಯೇ ಸಿಗುವ ಮಸೀದಿಗಳನ್ನು ಅವಲಂಬಿಸಿ ಧರ್ಮ ಪ್ರಚಾರ ನಡೆಸುತ್ತಾರೆ. ಆದರೆ ಎಲ್ಲೂ ಕೂಡಾ ಮುಸ್ಲಿಮೇತರರನ್ನು ಉದ್ದೇಶಿಸಿ ಅವರು ಮತ ಪ್ರಚಾರ ನಡೆಸಿದ್ದೇ ಇಲ್ಲ. ತಮ್ಮದೇ ಧರ್ಮದಲ್ಲಿರುವ ಮುಸ್ಲಿಮರಲ್ಲಿಯೇ ಧಾರ್ಮಿಕ ಜ್ಞಾನ ಹೆಚ್ಚಿಸುವ ಕೆಲಸ ಮಾಡುತ್ತಾರೆ.
ತಬ್ಲೀಗ್ ಜಮಾಅತ್‌ನ ಹುಟ್ಟು ಸ್ವಾತಂತ್ರ್ಯಕ್ಕೂ ಮುನ್ನವೇ ಆಗಿದೆ. 1927 ರಲ್ಲಿ ಹರಿಯಾಣದ ಮೇವಾತ್‌ನಲ್ಲಿ ಮೊಹಮ್ಮದ್ ಇಲ್ಯಾಸ್ ಅಲ್ ಕಂದ್ಲಾವಿ ಎಂಬವರೇ ಈ ಪಂಥವನ್ನು ಹುಟ್ಟುಹಾಕಿದ್ದರು. 20 ನೇ ಶತಮಾನದಲ್ಲಿ ಇವರು ಆರಂಭಿಸಿದ ತಬ್ಲೀಗ್ ಜಮಾಅತ್ ಇದೀಗ ಸುಮಾರು 200 ದೇಶಗಳಲ್ಲಿ ಇಸ್ಲಾಮಿಕ್ ಚಳವಳಿಗೆ ನಾಂದಿ ಹಾಕಿದೆ. ಸದ್ಯ ಭಾರತದಲ್ಲಿ ಇದರ ನಾಯಕತ್ವ ಹೊಂದಿರವವರು ಮೌಲಾನಾ ಸಾದ್. ಇವರು ಸಂಸ್ಥಾಪಕ ಮೊಹಮ್ಮದ್ ಇಲ್ಯಾಸ್ ಮೊಮ್ಮಗನೂ ಆಗಿದ್ದಾರೆ. ಸದ್ಯ ಕ್ವಾರೆಂಟೈನ್ ನಲ್ಲಿರುವ ಸಾದ್ ಮೇಲೆ ದೆಹಲಿಯಲ್ಲಿ ಎಫ್‌ಐಆರ್ ಕೂಡಾ ದಾಖಲಾಗಿದೆ. ಕ್ವಾರೆಂಟೈನ್ ಮುಗಿಯುತ್ತಿದ್ದಂತೆ ಶಿಸ್ತು ಕ್ರಮವನ್ನೂ ಎದುರಿಸಬೇಕಾಗಿದೆ.
ಸದ್ಯ ತಬ್ಲೀಗ್ ಜಮಾಅತ್‌ನಲ್ಲೂ ಆಂತರಿಕ ಭಿನ್ನಾಭಿಪ್ರಾಯದಿಂದ ವಿಭಿನ್ನ ಪಂಥಗಳಿವೆ ಎನ್ನಲಾಗುತ್ತಿದೆ. ಆದರೆ ಇತರೆ ಕಟ್ಟರ್ ಇಸ್ಲಾಮಿ ಗುಂಪಿನಂತೆಯೇ ಇವರ ಮೇಲೂ ಒಂದಿಷ್ಟು ಆರೋಪಗಳಿವೆ. ಆದರೆ ಭಾರತದಲ್ಲಿ ಇದುವರೆಗೂ ಇವರ ಮೇಲೆ ಅಂತಹ ಗುರುತರವಾದ ಆರೋಪಗಳು ಕೇಳಿ ಬಂದಿಲ್ಲ. ಆದರೆ ಈವಾಗ ಬಂದಿರೋ ಆರೋಪಗಳಿಗೆ ತಬ್ಲೀಗ್ ಜಮಾಅತ್ ಮಾತ್ರವಲ್ಲದೇ ಇಡೀ ಮುಸ್ಲಿಂ ಸಮುದಾಯವೇ ಬೆಚ್ಚಿಬಿದ್ದಿದೆ. ಮಾಧ್ಯಮಗಳಲ್ಲಿ ಕಾಣಸಿಗುವ ವರದಿಗಳಂತೂ ತಬ್ಲೀಗ್ ಜಮಾಅತ್ ಸದಸ್ಯರನ್ನು ಇನ್ನಷ್ಟು ಆರೋಪಿ ಸ್ಥಾನಕ್ಕೇರಿಸಿದೆ. ದೇಶದಲ್ಲಿ ಕರೋನಾ ಸೋಂಕು ಹರಡಲು ಇವರೇ ಕಾರಣ ಅಂತಾ ಮಾಧ್ಯಮ ವರದಿಗಳು ಉಲ್ಲೇಖಿಸಿವೆ. ಆದರೆ ಅದುವರೆಗೂ ಸೈದ್ಧಾಂತಿಕವಾಗಿ ಭಿನ್ನಾಭಿಪ್ರಾಯ ಹೊಂದಿದ್ದ ಸುನ್ನಿ, ಸಲಫಿ, ಜಮಾಅತೆ-ಇಸ್ಲಾಮಿ-ಹಿಂದ್ ಇವರೆಲ್ಲರೂ ತಬ್ಲೀಗ್ ಬೆನ್ನಿಗೆ ನಿಂತಿದ್ದಾರೆ.

ತಬ್ಲೀಗ್ ಜಮಾಅತ್ ಸದಸ್ಯರ ಮೇಲೆ ಮಾಡಲಾದ ಕೆಲವೊಂದು ಆರೋಪಗಳು ಸುಳ್ಳು ಅನ್ನೋದು ಒಂದೊಂದಾಗಿ ಗೊತ್ತಾಗುತ್ತಿದೆ. ಆದರೂ ಕ್ವಾರೆಂಟೈನ್‌ನಲ್ಲಿದ್ದ ಮಂದಿ ಆಸ್ಪತ್ರೆ ಒಳಗೆಯೇ ಮಲ ವಿಸರ್ಜನೆ ಮಾಡಿರೋ ಕೇಸು ಕೂಡಾ ದಾಖಲಾಗಿದೆ. ರಾಜ್ಯದಲ್ಲಿಯೇ ಇನ್ನೂ ೫೦ ರಷ್ಟು ಮಂದಿ ಮೊಬೈಲ್ ನೆಟ್‌ವರ್ಕಿಗೂ ಸಿಗದೇ ಅವಿತುಕೊಂಡಿದ್ದಾರೆ ಅನ್ನೋದು ನಿಜಕ್ಕೂ ಆಘಾತಕಾರಿ ವಿಚಾರ. ಅಲ್ಲದೇ ಬೆಂಗಳೂರಿನ ಹಜ್ಜ್ ಭವನದಲ್ಲಿ ಕ್ವಾರೆಂಟೈನ್‌ನಲ್ಲಿದ್ದ ಮೂವರಲ್ಲಿ ಕರೋನಾ ಸೋಂಕು ಪತ್ತೆಯಾಗಿದೆ. ಆದರೆ ಈ ಹಿಂದೆ ಮಾಡಲಾಗಿದ್ದ ಅನುಚಿತ ವರ್ತನೆ ಆರೋಪವನ್ನು ದೆಹಲಿಯ ವೈದ್ಯೆಯೊಬ್ಬರು ಹಾಗೂ ಹರ್ಯಾಣದಲ್ಲಿ ನಡೆಸಲಾದ ಅನುಚಿತ ವರ್ತನೆ ವರದಿ ಬಗ್ಗೆ ಸಹರಾನ್‌ಪುರ ಪೊಲೀಸರು ಸ್ಪಷ್ಟನೆ ನೀಡಿದ್ದು, ಅಂತಹ ಯಾವುದೇ ಘಟನೆ ನಡೆದಿಲ್ಲ ಅಂತಾ ತಿಳಿಸಿದ್ದಾರೆ.

ಒಟ್ಟಿನಲ್ಲಿ ದ್ವೀಪ ಪ್ರದೇಶದಂತಿದ್ದ ʼತಬ್ಲೀಗ್ ಜಮಾಅತ್ʼ ಹೆಸರು ನಿಝಾಮುದ್ದೀನ್ ಮರ್ಕಝ್ ಘಟನೆ ಬಳಿಕ ಮುನ್ನೆಲೆಗೆ ಬಂದಿದೆ. ತಮಾಷೆಯೆಂದರೆ, ಅದುವರೆಗೂ ಅವರಿಂದ ಅಂತರ ಕಾಯ್ದುಕೊಂಡಿದ್ದ ಎಲ್ಲಾ ಮುಸ್ಲಿಂ ಪಂಗಡ ಮತ್ತು ಪಂಥದವರು ಅವರ ಬೆನ್ನಿಗೆ ನಿಂತಿರುವುದು ಅವರನ್ನ ಇನ್ನಷ್ಟು ಗಟ್ಟಿಯಾಗಿಸಿದೆ. ಅಲ್ಲದೇ ತಮ್ಮ ಮೇಲೆ ಮಾಡಲಾದ ಆರೋಪಗಳಿಗೆ ಮಾಧ್ಯಮಗಳ ವಿರುದ್ಧ ತಬ್ಲೀಗ್ ಜಮಾಅತ್ ಸದಸ್ಯರು ಕಾನೂನು ಮೊರೆ ಹೋಗುತ್ತಿರುವುದು ಸದ್ಯದ ಲೇಟೆಸ್ಟ್ ಬೆಳವಣಿಗೆಯಾಗಿದೆ.










