ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಮೀರ್ ಸಾದಿಕ್ ಎಂದು ಕರೆದಿದ್ದ ಡಿಸಿಎಂ ಅಶ್ವಥ್ ನಾರಾಯಣ್ ಅವರ ಮಾತಿಗೆ ಡಿಕೆ ಶಿವಕುಮಾರ್ ಸಹೋದರ ಡಿಕೆ ಸುರೇಶ್ ಪ್ರತಿಕ್ರಿಯಿಸಿದ್ದಾರೆ.
ಮಂಗಳವಾರ ಮಾತನಾಡಿದ ಡಿಕೆ ಸುರೇಶ್, ಅಶ್ವಥ್ ನಾರಾಯಣ್ ಮಾತನಾಡುವಾಗ ನಾಲಿಗೆ ಮೇಲೆ ಹಿಡಿತ ಇರಲಿ ಎಂದಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಅದಕ್ಕೂ ಮೊದಲು ಕಾಂಗ್ರೆಸ್ ಮುಖಂಡರ ವಿರುದ್ಧ ಹರಿಹಾಯ್ದಿದ್ದ ಅಶ್ವಥ್ ನಾರಾಯಣ್, ಡಿಕೆಶಿ ಓರ್ವ ಮೀರ್ ಸಾದಿಕ್, ಅವರು ಅವರ ಸುತ್ತಿರುವ ಜನರಿಗೆ ಮೋಸ ಮಾಡಿದ್ದಾರೆ. ಸಿದ್ದರಾಮಯ್ಯ ಕೂಡಾ ಅವರ ಪಕ್ಷಕ್ಕೆ ವಂಚಿಸುತ್ತಿದ್ದಾರೆ ಎಂದಿದ್ದರು.
ಮೈತ್ರಿ ಸರ್ಕಾರ ಪತನಕ್ಕೆ ಕಾಂಗ್ರೆಸ್ ಒಳ ಜಗಳವೇ ಕಾರಣ, ಕಾಂಗ್ರೆಸ್ ಶಾಸಕರನ್ನು ನಮ್ಮ (ಬಿಜೆಪಿ) ಪಕ್ಷಕ್ಕೆ ಕಳಿಸಿದ್ದು ಯಾರು ಎಂಬುವುದನ್ನು ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಬಹಿರಂಗಪಡಿಸಬೇಕು ಎಂದು ಅವರು ಹೇಳಿದ್ದರು.

ಸಮ್ಮಿಶ್ರ ಸರ್ಕಾರಕ್ಕೆ ಗುಂಡಿ ತೋಡಿದ್ದು ಬಿಜೆಪಿಯಲ್ಲ, ಅದಕ್ಕೆ ಕಾಂಗ್ರೆಸ್ ನೇರ ಕಾರಣ ಎಂದು ಅವರು ಆರೋಪಿಸಿದ್ದರು. ರಾಜರಾಜೇಶ್ವರಿ ನಗರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಮುನಿರತ್ನ ಡಿಕೆ ಶಿವಕುಮಾರ್ ಅವರಿಗೆ ಆಪ್ತರಾಗಿದ್ದು. ಅವರ ಮನಸು ಕೆಡಿಸಿ ಬಿಜೆಪಿಗೆ ಕಳಿಸಲಾಗಿದೆ ಎಂದೂ ಡಿಸಿಎಂ ಆರೋಪಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಡಿಕೆ ಸುರೇಶ್, ಮೀರ್ ಸಾದಿಕ್ ಯಾರು ಎಂಬುವುದು ಬಿಜೆಪಿಯ ಎಲ್ಲರಿಗೂ ಗೊತ್ತು. ಹಿಂಬದಿಯ ಮೂಲಕ ಯಡಿಯೂರಪ್ಪರನ್ನು ಅಧಿಕಾರದಿಂದ ಕೆಳಗಿಳಿಸುತ್ತಿರುವ ತಂತ್ರಗಾರಿಕೆ ನಡೆಯುತ್ತಿದೆ. ಮೀರ್ ಸಾದಿಕ್ರಂತಹ ನಾಯಕರು ಆಗಾಗ ಮಾಧ್ಯಮಗಳ ಮುಂದೆ ಬಂದು ತಾವು ಪ್ರಾಮಾಣಿಕರು ಎಂದು ಸಾಬೀತು ಪಡಿಸಲು ಪ್ರಯತ್ನಿಸುತ್ತಿದ್ದಾರೆ. ಡಿಕೆ ಶಿವಕುಮಾರ್ ರನ್ನು ಪ್ರಮಾಣ ಮಾಡಲು ಕೇಳುವ ಯೋಗ್ಯತೆ ಇವನಿಗೆ ಏನಿದೆ ಎಂದು ಅಶ್ವಥ್ ನಾರಾಯಣ್ ವಿರುದ್ಧ ಏಕವಚನದಲ್ಲಿ ಹರಿಹಾಯ್ದಿದ್ದಾರೆ.