ಜುಲೈ ತಿಂಗಳಲ್ಲಿ ಶಾಲೆಗಳನ್ನು ಪುನರಾರಂಭಿಸುವ ಕೇಂದ್ರ ಗೃಹ ಇಲಾಖೆಯ ಸಲಹೆಯನ್ನು ವಿದ್ಯಾರ್ಥಿಗಳ ಪೋಷಕರು ವಿರೋಧಿಸಿದ್ದಾರೆ. ಈ ಸಲಹೆಯ ವಿರುದ್ದವಾಗಿ ಈಗಾಗಲೇ ಆನ್‌ಲೈನ್ ಅಭಿಯಾನವೊಂದು ಆರಂಭವಾಗಿದ್ದು, ಸುಮಾರು ಮೂರು ಲಕ್ಷಕ್ಕೂ ಹೆಚ್ಚು ಜನರು ಅಭಿಯಾನದ ಪರವಾಗಿ ಈಗಾಗಲೇ ಸಹಿ ಹಾಕಿದ್ದಾರೆ.
ಕಳೆದ ಶನಿವಾರ ʼಪೋಷಕರ ಸಂಘʼ ಎಂಬ ಗುಂಪಿನಿಂದ ಈ ಅಭಿಯಾನ ಆರಂಭವಾಗಿದೆ. ಕರೋನಾ ಸೋಂಕು ತಡೆಗಟ್ಟುವಂತಹ ಲಸಿಕೆ ತಯಾರಾಗುವ ವರೆಗೂ ಅಥವಾ ದೇಶವು ಸೋಂಕಿನಿಂದ ಮುಕ್ತವಾಗುವ ವರೆಗೂ ಶಾಲೆಗಳನ್ನು ಪುನರಾರಂಭಿಸಬಾರದು ಎಂಬುದು ಅಭಿಯಾನದ ಉದ್ದೇಶವಾಗಿದೆ. ಈಗ ಶಾಲೆಗಳನ್ನು ಆರಂಭಿಸುವುದು ಬೆಂಕಿಯೊಂದಿಗೆ ಸರಸವಾಡಿದಂತೆ ಎಂದು ಪೋಷಕರು ಅಭಿಪ್ರಾಯಪಟ್ಟಿದ್ದಾರೆ.
“ಸರ್ಕಾರದ ಈ ನಿರ್ಧಾರ ನಿಜಕ್ಕೂ ತಪ್ಪಾದ ನಿರ್ಧಾರ. ಆರಿಸಲಾಗದಿರುವ ಬೆಂಕಿಯೊಂದಿಗೆ ಸರಸವಾಡುವ ನಿರ್ಧಾರವಿದು. ಸರ್ಕಾರದ ಈ ನಿರ್ಧಾರದ ವಿರುದ್ದ ಪ್ರತಿಯೊಬ್ಬ ಪೋಷಕರೂ ಪ್ರತಿಭಟಿಸಬೇಕು. ಯಾರೂ ತಮ್ಮ ಮಕ್ಕಳನ್ನು ಶಾಲೆಗಳಿಗೆ ಕಳುಹಿಸಬಾರದು,” ಎಂದು ಸಂಘವು ತಮ್ಮ ಅಭಿಯಾನದಲ್ಲಿ ಬರೆದುಕೊಂಡಿದೆ.
ಈ ಶೈಕ್ಷಣಿಕ ವರ್ಷವನ್ನು ಆನ್‌ಲೈನ್ ಮೂಲಕವೇ ನಡೆಸುವುದು ಉತ್ತಮ ಎಂಬ ನಿರ್ಧಾರಕ್ಕೆ ಬಂದಿರುವ ಪೋಷಕರ ಸಂಘವು, ಒಂದು ವೇಳೆ ಶಾಲೆಗಳು ಹೇಳುವ ಪ್ರಕಾರ ಆನ್‌ಲೈನ್‌ನಲ್ಲಿ ಉತ್ತಮ ಫಲಿತಾಂಶ ಬರುತ್ತಿದೆಯಾದರೆ, ಅದನ್ನು ಮುಂದುವರೆಸಲು ಏನು ಸಮಸ್ಯೆಯಿದೆ, ಎಂದು ಪ್ರಶ್ನಿಸಿದೆ.
