ಒಂದು ದೇಶ, ಒಂದು ತೆರಿಗೆ ಮೂಲಕ ಸ್ವರ್ಗವನ್ನೇ ಧರೆಗಿಳಿಸುತ್ತೇವೆ ಎಂದು ಜಿಎಸ್ ಟಿ ಹೆಸರಿನಲ್ಲಿ ರಾಜ್ಯಗಳಿಂದ ತೆರಿಗೆ ಹಕ್ಕು ಕಿತ್ತುಕೊಂಡು, ಈಗ ತೆರಿಗೆ ಪಾಲು ಕೊಡಲು ಆಗುವುದಿಲ್ಲ. ನಿಮ್ಮ ಕರ್ಚುವೆಚ್ಚಳಿಗೆ ಬೇಕಿದ್ದರೆ, ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡಿಸುತ್ತೇವೆ ಎಂಬ ಪ್ರಧಾನಿ ಮೋದಿಯವರ ಸರ್ಕಾರದ ವರಸೆಗೆ ಕೆಲವು ಬಿಜೆಪಿ ಆಡಳಿತದ ರಾಜ್ಯಗಳೂ ಸೇರಿದಂತೆ ಬಹುತೇಕ ರಾಜ್ಯ ಸರ್ಕಾರಗಳು ಪ್ರಬಲ ವಿರೋಧ ವ್ಯಕ್ತಪಡಿಸಿವೆ.
ಒಂದು ರೀತಿಯಲ್ಲಿ ಜಮೀನ್ದಾರಿ ಗೇಣಿ ಪದ್ಧತಿಗಿಂತಲೂ ಹೀನಾಯವಾದ ಕೇಂದ್ರದ ಈ ವರಸೆ, ಬಂದ ಬೆಳೆಯನ್ನೆಲ್ಲಾ ಬಾಚಿ ತನ್ನ ಗೋದಾಮು ತುಂಬಿಸಿಕೊಂಡು ಭೂಮಿ ಉತ್ತಿ ಬಿತ್ತಿ ಬೆಳೆಯುವ ಗೇಣಿ ರೈತನಿಗೆ ನಿನಗೆ ಈ ವರ್ಷ ಫಸಲಿನಲ್ಲಿ ಪಾಲಿಲ್ಲ. ಸಂಸಾರ ನಡೆಸಲು, ಮುಂದಿನ ಗೇಣಿ ಫಸಲು ಬೆಳೆಯಲು ಬೇಕಾದರೆ ಬಡ್ಡಿ ಸಾಲ ತೆಗೆದುಕೊ ಎಂಬಂತಿದೆ. ಅದೇ ಮಾದರಿಯಲ್ಲೇ, ಕೇಂದ್ರ ಸರ್ಕಾರ ಜಿಎಸ್ ಟಿ ಪಾಲು ಕೊಡಲಾಗದು ಎಂದಿರುವ ಜೊತೆಗೆ ರಾಜ್ಯಗಳ ಬಗ್ಗೆ ತೋರಿರುವ ದೊಡ್ಡ ಔದಾರ್ಯ ಎಂಬಂತೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡಿಸುವುದಾಗಿ ಹೇಳಿದೆ!

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಕೇಂದ್ರ ಸರ್ಕಾರದ ಈ ವರಸೆಗೆ ಕೇರಳ ಮೊದಲು ಪ್ರತಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ ತೆಲಂಗಾಣ, ಪಶ್ಚಿಮಬಂಗಾಳ, ದೆಹಲಿ, ಛತ್ತೀಸಗಢ ರಾಜ್ಯಗಳೂ ದನಿ ಎತ್ತಿವೆ. ಬಿಜೆಪಿಯೇತರ ಆಡಳಿತದ ಈ ರಾಜ್ಯಗಳು ಬಹಿರಂಗವಾಗಿ ದನಿ ಎತ್ತುತ್ತಿದ್ದಂತೆ ಬಿಜೆಪಿ ಆಡಳಿತದ ಕೆಲವು ರಾಜ್ಯಗಳಲ್ಲಿಯೂ ಕೇಂದ್ರ ಸರ್ಕಾರದ ಹೊಣೆಗೇಡಿ ಪ್ರಸ್ತಾಪದ ಬಗ್ಗೆ ಆತಂರಿಕವಾಗಿ ತೀವ್ರ ಅಸಮಾಧಾನ ಎದ್ದಿದೆ. ಆದರೆ, ಮೋದಿ ಮತ್ತು ಅಮಿತ್ ಶಾ ಅವರ ಕಪಿಮುಷ್ಟಿಯಲ್ಲಿರುವ ಪಕ್ಷದಲ್ಲಿ ಅಂತಹ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಬಹಿರಂಗವಾಗಿ ಕೇಳುವ, ವಿರೋಧಿಸುವ ಛಾತಿ ಅವರಲ್ಲಿ ಇಲ್ಲ ಅಷ್ಟೇ!
ಆದರೆ, ಕೇರಳ ಹಣಕಾಸು ಸಚಿವ ಟಿ ಎಂ ಥಾಮಸ್ ಐಸಾಕ್ ನೇತೃತ್ವದಲ್ಲಿ ಸೋಮವಾರ ನಡೆದ ಬಿಜೆಪಿಯೇತರ ಆಡಳಿತದ ರಾಜ್ಯಗಳ ಹಣಕಾಸು ಸಚಿವರ ಆನ್ ಲೈನ್ ಸಭೆಯಲ್ಲಿ; ದೆಹಲಿ, ಛತ್ತೀಸಗಢ, ಪಶ್ಚಿಮಬಂಗಾಳ, ತೆಲಂಗಾಣ ರಾಜ್ಯಗಳ ರಾಜ್ಯಗಳ ಸಚಿವರು ಭಾಗವಹಿಸಿ, ಕೇಂದ್ರದ ನೀತಿಯ ವಿರುದ್ಧ ಸಂಘಟಿತ ವಿರೋಧ ದಾಖಲಿಸಲು ಮತ್ತು ಪ್ರಬಲ ಹೋರಾಟ ನಡೆಸಲು ಒಮ್ಮತದ ನಿರ್ಧಾರ ಕೈಗೊಳ್ಳಲಾಗಿದೆ.
ಕರೋನಾ ಸಂಕಷ್ಟದ ಹಿನ್ನೆಲೆಯಲ್ಲಿ ಆದಾಯ ಖೋತಾ ಆಗಿದೆ. ಹಾಗಾಗಿ ರಾಜ್ಯಗಳಿಗೆ ಕೊಡಬೇಕಾಗಿರುವ ಜಿಎಸ್ ಟಿ ಪಾಲು 2.35 ಲಕ್ಷ ಕೋಟಿ ಹಣವನ್ನು ನೀಡಲು ಕೇಂದ್ರಕ್ಕೆ ಸಾಧ್ಯವಿಲ್ಲ. ಆ ಹಿನ್ನೆಲೆಯಲ್ಲಿ ರಾಜ್ಯಗಳು ತಮ್ಮ ಕರ್ಚುವೆಚ್ಚ ನಿಭಾಯಿಸಲು ಆದಾಯ ಕ್ರೋಡೀಕರಣಕ್ಕೆ ಕೇಂದ್ರ ಎರಡು ಆಯ್ಕೆಗಳನ್ನು ನೀಡುತ್ತಿದೆ. ಒಂದು; ಜಿಎಸ್ ಟಿ ಪಾಲು ಒಟ್ಟು ಮೊತ್ತದ ಪೈಕಿ 97 ಸಾವಿರ ಕೋಟಿ ರೂ.ಗಳನ್ನು ಆರ್ ಬಿಐ ಸಹಮತದೊಂದಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯಬಹುದು. ಮತ್ತೊಂದು ಆಯ್ಕೆ; ಬಾಕಿ ಇರುವ ಸಂಪೂರ್ಣ 2.35 ಲಕ್ಷ ಕೋಟಿ ರೂ.ವನ್ನು ವಿಶೇಷ ವ್ಯವಸ್ಥೆಯಡಿ ಸಾಲ ಪಡೆಯುವುದು. ನಡು ಹೊಳೆಯಲ್ಲಿ ಹರಿಗೋಲು, ದೋಣಿ ಎರಡನ್ನೂ ಕಸಿದುಕೊಂಡು, ದಡ ಸೇರಬೇಕಾದರೆ; ‘ನಿನ್ನ ಚಡ್ಡಿ ಅಡವಿಟ್ಟು ಹರಿಗೋಲು-ದೋಣಿ ತೆಗೆದುಕೋ’ ಎಂಬಂತಹ ಮೋದಿಯವರ ಈ ವರಸೆಗೆ ರಾಜ್ಯ ಸರ್ಕಾರಗಳು ಮಾತ್ರವಲ್ಲ; ದೇಶದ ಆರ್ಥಿಕ ತಜ್ಞರು, ತೆರಿಗೆ ಪರಿಣಿತರು ಕೂಡ ಹುಬ್ಬೇರಿಸಿದ್ದರು!
ಇದೀಗ ಬಿಜೆಪಿಯೇತರ ರಾಜ್ಯಗಳ ಜಿಎಸ್ ಟಿ ಪಾಲು ಪಡೆಯುವ ಪ್ರಯತ್ನದ ನೇತೃತ್ವವನ್ನು ಕೇರಳ ಹಣಕಾಸು ಸಚಿವರು ವಹಿಸಿಕೊಂಡಿದ್ದು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ‘ದೇವರ ಆಟ’ದ ವಾದವನ್ನು ತಳ್ಳಿಹಾಕಿದ್ದಾರೆ. ಜಿಎಸ್ ಟಿ ಜಾರಿ ವೇಳೆ ಕೇಂದ್ರ ಸರ್ಕಾರ, ರಾಜ್ಯಗಳಿಗೆ ನೀಡಿದ ಭರವಸೆಯ ಪ್ರಕಾರ ಮತ್ತು ಜಿಎಸ್ ಟಿ ಕಾಯ್ದೆಯ ಪ್ರಕಾರ ನೀಡಬೇಕಾದ ಪಾಲನ್ನು ನೀಡಬೇಕಿದೆ. ಅದಕ್ಕೆ ಸಾಂಕ್ರಾಮಿಕ, ನೈಸರ್ಗಿಕ ವಿಪತ್ತಿನ ನೆಪ ಹೇಳಿ, ದೇವರ ಆಟದ ಪ್ರಸ್ತಾಪ ಮಾಡಿ ರಾಜ್ಯಗಳಿಗೆ ವಂಚಿಸುವುದು ಬೇಕಾಗಿಲ್ಲ. ಜಿಎಸ್ ಟಿ ಮೂಲ ಮಾಪಕ ವರ್ಷ 2015ಕ್ಕೆ ಹೋಲಿಸಿದರೆ ಪ್ರತಿ ವರ್ಷ ರಾಜ್ಯಗಳ ತೆರಿಗೆ ಪಾಲಿನಲ್ಲಿ ಶೇ.14ರಷ್ಟು ಏರಿಕೆಯಾಗಲಿದೆ ಎಂದು ಕೊಟ್ಟ ಮಾತಿನಂತೆ ತೆರಿಗೆ ಪಾಲು ಬಿಡುಗಡೆ ಮಾಡಿ ಎಂದು ಆಗ್ರಹಿಸಿವೆ.

ತೆರಿಗೆ ಸಂಗ್ರಹ ನೀವು ಮಾಡಿ, ಕೇಂದ್ರದ ಬೊಕ್ಕಸ ತಂಬಿಕೊಂಡು ಈಗ ಅದರ ಪಾಲು ಕೊಡಲಾಗುವುದಿಲ್ಲ ಎಂದರೆ ಏನರ್ಥ? ಆದಾಯದ ಫಸಲು ಪಡೆಯಲು ನೀವು, ಆ ಫಸಲು ಬೆಳೆಯಲು ಬೇಕಾದ ಕರ್ಚುವೆಚ್ಚ, ಶ್ರಮ ಹಾಕಲು ನಾವು ಎಂಬುದು ಯಾವ ನ್ಯಾಯ? ಕಣಜ ತುಂಬಿದ ಮೇಲೆ ಇಡೀ ಕಣಜ ನಮ್ಮದು ಎಂದು ನೀವು ಜಮೀನ್ದಾರಿ ವರಸೆ ಪ್ರದರ್ಶಿಸುತ್ತಿದ್ದೀರಿ. ಬೆವರು ಸುರಿಸಿ, ಬೆಳೆ ಬೆಳೆಯಲು, ಕಣಜ ತುಂಬಿಸಲು ನಾವು ದುಡಿಯಬೇಕು ಮತ್ತು ಅದಕ್ಕಾಗಿ ನಾವು ಸಾಲ ಮಾಡಬೇಕು ಎಂಬುದು ಜಮೀನ್ದಾರಿ ಭೂಮಾಲಿಕರ ಅಟ್ಟಹಾಸಕ್ಕಿಂತ ಹೇಯ. ಜಿಎಸ್ ಟಿ ಆದಾಯವನ್ನು ಇಡಿಯಾಗಿ ತೆಗೆದುಕೊಂಡಿರುವ ನೀವೇ ಸಾಲ ಮಾಡಿ, ಅದರಲ್ಲೇ ನಮಗೆ ಜಿಎಸ್ ಟಿ ಪಾಲು ಕೊಡುವುದನ್ನು ಕೊಡಿ ಎಂಬುದು ಈ ರಾಜ್ಯಗಳ ವಾದ.
ಅಲ್ಲದೆ, ರಾಜ್ಯಗಳಿಗೆ ಸಾಲ ಪಡೆಯಲು ಒಂದು ಮಿತಿ ಇದೆ. ಅವುಗಳ ತಮ್ಮ ಒಟ್ಟಾರೆ ಆದಾಯದ ಪ್ರಮಾಣದ ಮೇಲೆ ಶೇ.3ರಷ್ಟು ಅನುಪಾತದ ಸಾಲ ಪಡೆಯಲು ಮಾತ್ರ ಅವಕಾಶವಿದೆ. ಅಲ್ಲದೆ, ಈಗಿನ ಕರೋನಾ ಸಂಕಷ್ಟ ಮತ್ತು ಆ ಹಿಂದಿನಿಂದಲೂ ಕೇಂದ್ರದ ಕೆಟ್ಟ ನಿರ್ಧಾರಗಳ ಪರಿಣಾಮವಾಗಿ ನಿರಂತರ ಕುಸಿತದಲ್ಲಿದ್ದ ಆರ್ಥಿಕತೆಯ ಹಿನ್ನೆಲೆಯಲ್ಲಿ ಹೀಗೆ ಸಾಲ ಪಡೆಯುವುದು ರಾಜ್ಯಗಳನ್ನು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿಸಲಿದೆ. ಹಾಗಾಗಿ, ಕೇಂದ್ರವೇ ಸಾಲ ಪಡೆದು, ಆ ಹಣದಲ್ಲಿ ರಾಜ್ಯಗಳ ಜಿಎಸ್ ಟಿ ಪಾಲು ಕೊಡಲು ಇರುವ ತೊಡಕೇನು ಎಂದೂ ಪ್ರಶ್ನಿಸಲಾಗಿದೆ.

ಕೇಂದ್ರ ಸರ್ಕಾರದ ಈ ನಿರ್ಧಾರ ರಾಜ್ಯಗಳಿಗೆ ಬಗೆಯುವ ವಂಚನೆ ಮತ್ತು ಒಟ್ಟಾರೆ ಒಕ್ಕೂಟ ವ್ಯವಸ್ಥೆಗೇ ಅಪಾಯಕಾರಿ. ಆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಇಂತಹ ವರಸೆಯ ವಿರುದ್ಧ ಜನಾಂದೋಲನ ನಡೆಸುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಿದ್ದಾಗಿ ಥಾಮಸ್ ಐಸಾಕ್ ಹೇಳಿದ್ದಾರೆ. ಈ ಮಾತಿಗೆ ಬೆಂಬಲ ವ್ಯಕ್ತಪಡಿಸಿರುವ ತೆಲಂಗಾಣ ಹಣಕಾಸು ಸಚಿವ ಟಿ ಹರೀಶ್ ರಾವ್ ಕೂಡ, ರಾಜ್ಯಗಳ ತೆರಿಗೆ ಆದಾಯದ ಬೆಳವಣಿಗೆ ದರ ಶೇ.14ಕ್ಕಿಂತ ಕಡಿಮೆ ಇದ್ದಲ್ಲಿ, ಸಂಪೂರ್ಣ ತೆರಿಗೆ ಪಾಲನ್ನು ಕೇಂದ್ರ ಭರಿಸಬೇಕು ಎಂಬುದು ಜಿಎಸ್ ಟಿ ಕಾಯ್ದೆಯ ಮೂಲ ಅಂಶಗಳಲ್ಲಿ ಒಂದು. ಆದರೆ, ತಾನೇ ಬೆನ್ನುತಟ್ಟಿಕೊಂಡು, ಮಹಾನ್ ಕ್ರಾಂತಿಕಾರಕ ತೆರಿಗೆ ಪದ್ಧತಿ ಎಂದು ಕೊಂಡಾಡಿದ್ದ ಬಿಜೆಪಿ ಸರ್ಕಾರ, ಇದೀಗ ದೇವರ ಆಟ, ಕರೋನಾ ಸಂಕಷ್ಟದ ನೆಪ ಹೇಳಿ ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದಿದ್ದಾರೆ.
ಕೇಂದ್ರದ ದ್ವಿಮುಖ ನೀತಿಯ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಹಣಕಾಸು ಸಚಿವರು, ಸದ್ಯದಲ್ಲಿ ಮತ್ತೊಂದು ಸುತ್ತಿನ ಸಭೆ ನಡೆಸಿ, ಈ ಬಗ್ಗೆ ಹೋರಾಟ ರೂಪಿಸಲು ಮತ್ತು ಬಿಜೆಪಿ ಆಡಳಿತದ ರಾಜ್ಯ ಸರ್ಕಾರಗಳ ಬೆಂಬಲವನ್ನೂ ಕ್ರೋಡೀಕರಿಸಲು ನಿರ್ಧರಿಸಿದ್ದಾರೆ.