ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ವಿರುದ್ಧ ಎದ್ದಿರುವ ಜನಾಂದೋಲದಿಂದ ಕಂಗೆಟ್ಟಿರುವ ಬಿಜೆಪಿಯ ಮೋದಿ-ಶಾ ಜೋಡಿಗೆ ಫೀ ಹೆಚ್ಚಳ ವಿರೋಧಿಸಿ ಹೋರಾಟ ನಡೆಸುತ್ತಿದ್ದ ಜೆಎನ್‌ಯು ವಿದ್ಯಾರ್ಥಿಗಳ ಮೇಲೆ ವಿಶೇಷವಾಗಿ ಯುವತಿಯರ ಮೇಲೆ ನಡೆದಿರುವ ಮಾರಣಾಂತಿಕ ಹಲ್ಲೆ ಹಾಗೂ ಅನಂತರ ಎದ್ದಿರುವ ಕಿಚ್ಚು ಗಂಡಾಂತರ ತಂದೊಡ್ಡುವ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ ಜೆ ಎನ್ ಯು ವಿದ್ಯಾರ್ಥಿ ಸಂಘಟನೆಯ ಮಾಜಿ ನಾಯಕ ಕನ್ಹಯ್ಯಾ ಕುಮಾರ್ ಹಾಗೂ ಅವರ ಬಳಗವನ್ನು ದೇಶದ್ರೋಹಿಗಳು ಎಂದು ಜರಿದು ಅದನ್ನು ಸಾಬೀತುಪಡಿಸಲು ವಿಫಲವಾಗಿರುವ ಬಿಜೆಪಿ ನಾಯಕತ್ವವು ಮತ್ತೊಮ್ಮೆ ಪ್ರತಿಷ್ಠಿತ ಜೆ ಎನ್ ಯು ವಿಶ್ವವಿದ್ಯಾಲಯದ ವಿದ್ಯಾರ್ಥಿ ಗಳನ್ನು ಗಾಯಗೊಳಿಸುವ ಮೂಲಕ ಮತ್ತೊಂದು ಸುತ್ತಿನ ಮಂಗಳಾರತಿಗೆ ಅಣಿಯಾದಂತಿದೆ.
ಈ ಬಾರಿ ಜೆ ಎನ್ ಯುನ ನಿರ್ದಿಷ್ಟ ವಸತಿಗೃಹಗಳು ವಿಶೇಷವಾಗಿ ಯುವತಿಯರ ಮೇಲಿನ ದಾಳಿಯ ರಕ್ತಸಿಕ್ತ ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗಿರುವುದನ್ನು ಗಮನಿಸಿದರೆ ಬಿಜೆಪಿಯ ಬೇರುಗಳಿಗೆ ಕೊಡಲಿ ಏಟು ಬೀಳುವುದು ದಿಟವೆನಿಸುತ್ತಿದೆ.
“ಬೇಟಿ ಬಚಾವೊ, ಬೇಟಿ ಪಡಾವೋ” ಎಂದು ಪ್ರಚಾರ ಗಿಟ್ಟಿಸಿದ ಮೋದಿಯವರು ನೆಲೆಸಿರುವ ಅಣತಿ ದೂರದಲ್ಲೇ ಇರುವ ಜೆ ಎನ್ ಯು ವಿನಲ್ಲಿ ಯುವತಿಯರ ಮೇಲೆ ಅವರದೇ ಪಕ್ಷದ ವಿದ್ಯಾರ್ಥಿ ಸಂಘಟನೆಯಾದ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ನ (ಎಬಿವಿಪಿ) ಗುಂಡಾಗಳು ನಡೆಸಿರುವ ಅಮಾನುಷ ದಾಳಿ ಹಾಗೂ ಮೋದಿ ಆಪ್ತ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಉಸ್ತುವಾರಿಯಲ್ಲಿ ಬರುವ ದೆಹಲಿ ಪೊಲೀಸರು ಈ ಘಟನೆಗೆ ಮೂಖಸಾಕ್ಷಿಯಾಗಿರುವುದು ಹೋರಾಟ ತೀವ್ರ ಸ್ವರೂಪ ಪಡೆಯುವಂತೆ ಮಾಡಿದೆ.
ಜೆ ಎನ್ ಯು ಮೇಲಿನ ದಾಳಿ ಖಂಡಿಸಿ ಅಂತಾರಾಷ್ಟ್ರೀಯ ವಿದ್ಯಾರ್ಥಿ ಸಂಘಟನೆಗಳು ಹಾಗೂ ಭಾರತೀಯ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಭಾನುವಾರ ರಾತ್ರಿಯೇ ಬೀದಿಗಳಿದಿದ್ದಾರೆ. ನೊಬೆಲ್ ಪುರಷ್ಕೃತ, ಮಕ್ಕಳ ಹಕ್ಕುಗಳ ಹೋರಾಟಗಾರ ಕೈಲಾಷ್ ಸತ್ಯಾರ್ಥಿ, ಉದ್ಯಮಿಗಳಾದ ಆನಂದ್ ಮಹೇಂದ್ರ, ಕಿರಣ್ ಮುಜುಂದಾರ್ ಷಾ, ಕೇಂದ್ರ ಹಾಗೂ ರಾಜ್ಯಗಳಲ್ಲಿ ಪ್ರತಿಷ್ಠಿತ ಹುದ್ದೆಗಳಲ್ಲಿರುವ ಜೆ ಎನ್ ಯು ಹಳೆಯ ವಿದ್ಯಾರ್ಥಿಗಳು, ಬಾಲಿವುಡ್ ನಟ-ನಟಿಯರು ವಿದ್ಯಾರ್ಥಿಗಳ ಮೇಲಿನ ಅಮಾನುಷ ದಾಳಿಯನ್ನು ಖಂಡಿಸಿದ್ದಾರೆ.
ವಿಶೇಷವಾಗಿ ನೇಪಾಳದ ಮಾಜಿ ಪ್ರಧಾನಿ ಹಾಗೂ ಜೆ ಎನ್ ಯು ಹಳೆಯ ವಿದ್ಯಾರ್ಥಿ ಬಾಬುರಾವ್ ಭಟ್ಟಾರೈ ಅವರು “ಜೆ ಎನ್ ಯು ನಂಥ ಪವಿತ್ರ ಕಲಿಕಾ ಸ್ಥಳವನ್ನು ಉಳಿಸಿ. ಈ ಹೋರಾಟಕ್ಕೆ ನನ್ನ ಬೆಂಬಲವಿದೆ” ಎಂದ ಟ್ವೀಟ್ ಮಾಡುವ ಮೂಲಕ ಜಾಗತಿಕವಾಗಿ ಮೋದಿ ಸರ್ಕಾರದ ವರ್ಚಸ್ಸಿಗೆ ಧಕ್ಕೆಯಾಗುವಂಥ ಸಂದೇಶ ರವಾನಿಸಿದ್ದಾರೆ.
ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಜೈಶಂಕರ್ ಅವರು ತಾವು ಕಲಿತ ವಿಶ್ವವಿದ್ಯಾಲಯದಲ್ಲಿನ ಘೋರ ಬೆಳವಣಿಗೆಗೆ ಬೇಸರ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್, ಎಡಪಕ್ಷಗಳು ಗಾಯಗೊಂಡ ಚಿಕಿತ್ಸೆಗಾಗಿ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿರುವ ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಭೇಟಿಯಾಗುವ ಮೂಲಕ ಬಿಜೆಪಿ ವಿರುದ್ಧದ ದಾಳಿಯನ್ನು ಮೊನಚುಗೊಳಿಸಿವೆ. ಘಟನೆಯನ್ನು ಬಿಜೆಪಿ, ಗೃಹ ಸಚಿವ ಅಮಿತ್ ಷಾ, ಮಾನವ ಸಂಪನ್ಮೂಲ ಸಚಿವ ಪೋಕ್ರಿಯಾಲ್ ಖಂಡಿಸಿದ್ದಾರೆ. ಆದರೆ, ಅವರ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ಸೇರಿದಂತೆ ಹಲವು ನಾಯಕರು ಅಪಹಾಸ್ಯ ಮಾಡಿರುವುದು ಕೇಸರಿ ಪಾಳೆಯದ ದ್ವಂದ್ವ ನೀತಿಗೆ ಕನ್ನಡಿ ಹಿಡಿದಿದೆ.
ಬಿಜೆಪಿ ಹಾಗೂ ಅದರ ನಾಯಕರ ಖಂಡನೆಯನ್ನು ಸಾರಾಸಗಟವಾಗಿ ತಿರಸ್ಕರಿಸಿರುವ ಜೆ ಎನ್ ಯು ವಿದ್ಯಾರ್ಥಿ ಸಂಘಟನೆ ಕೇಸರಿ ಪಾಳೆಯದ ಉಸ್ತುವಾರಿಯಲ್ಲಿಯೇ ದಾಳಿ ನಡೆದಿದೆ ಎಂದು ಆರೋಪಿಸುವ ಮೂಲಕ ಪ್ರಬಲ ಹೋರಾಟದ ಮುನ್ಸೂಚನೆ ನೀಡಿದೆ. ವಿಶ್ವವಿದ್ಯಾಲಯದ ಕುಲಪತಿ ಜಗದೀಶ್ ಕುಮಾರ್ ಅವರು ಘಟನೆಗೆ ವಿದ್ಯಾರ್ಥಿಗಳೇ ಕಾರಣ ಎನ್ನುವ ಸಂದೇಶ ದಾಟಿಸುವ ಮೂಲಕ ಆಳುವವರ ಪರ ನಿಲುವು ಕೈಗೊಂಡಿದ್ದಾರೆ. ಆದರೆ, ಬಿಜೆಪಿಯ ಯಾರೊಬ್ಬರೂ ಗಾಯಾಳುಗಳನ್ನು ಭೇಟಿ ಮಾಡುವ ಸೌಜನ್ಯ ತೋರಿಲ್ಲ. ಬಿಜೆಪಿ ಬೆಂಬಲಿತ ಮಾಧ್ಯಮಗಳು ಘಟನೆಯನ್ನು ವಿದ್ಯಾರ್ಥಿ ಗುಂಪುಗಳ ಕಲಹ ಎಂದು ಬಿಂಬಿಸಲು ಯತ್ನಿಸಿದ್ದು, ಎಬಿವಿಪಿಯ ಕಾರ್ಯಕರ್ತರು ರಾಜಾರೋಷವಾಗಿ ರಾಡುಗಳು, ದೊಣ್ಣೆ ಹಿಡಿದು ವಿಶ್ವವಿದ್ಯಾಲಯದ ಗಾಜು, ಚೇರುಗಳನ್ನು ಪುಡಿಪುಡಿ ಮಾಡಿರುವುದನ್ನು ಉದ್ದೇಶಪೂರ್ವಕವಾಗಿ ಮರೆಮಾಚಲು ಯತ್ನಿಸಿ ಬೆತ್ತಲಾಗಿವೆ.
ಜೆ ಎನ್ ಯು ಸುತ್ತಮುತ್ತ ವಿದ್ಯುದ್ದೀಪಗಳನ್ನು ಆರಿಸಲಾಗಿದ್ದು, ಪೊಲೀಸರೇ ದಾಳಿಕೋರರಿಗೆ ಬೆಂಬಲವಾಗಿ ನಿಂತಿರುವ ಹಲವು ವಿಡಿಯೋಗಳು ವೈರಲ್ ಆಗಿವೆ. ಭಾನುವಾರ ಸಂಜೆಯಿಂದಲೇ ಮುಸುಕು ಕವಿಯುತ್ತಿದ್ದಂತೆ ಜೆ ಎನ್ ಯು ನಲ್ಲಿ ಮುಸುಕುದಾರಿ ಗುಂಡಾಗಳ ದುರ್ವರ್ತನೆ ಆರಂಭವಾಗಿದೆ. ದುರುಳರ ದಾಳಿಯಿಂದ ತಪ್ಪಿಸಿಕೊಳ್ಳಲು ಪೊಲೀಸರು, ಸ್ನೇಹಿತರು, ಹಿತೈಷಿಗಳು, ಪೋಷಕರಿಗೆ ಜೆ ಎನ್ ಯು ವಿದ್ಯಾರ್ಥಿಗಳು ಕರೆ ಮಾಡಿ, ಸಂದೇಶ ಕಳುಹಿಸಿ ನೆರವಿಗೆ ಅಂಗಲಾಚಿರುವ ಘಟನೆಗಳು ಕರುಣಾಜನಕವಾಗಿವೆ. ಹೆಣ್ಣು ಮಕ್ಕಳ ಮೇಲೆ ದೈಹಿಕ ದಾಳಿ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ವರದಿ ಮಾಡಲು ಸ್ಥಳಕ್ಕೆ ತೆರಳಿದ ಮಾಧ್ಯಮಗಳನ್ನು ದೇಶದ್ರೋಹಿಗಳು ಎಂದು ನಿಂದಿಸಿ, ಬೆದರಿಕೆಯ ಒಡ್ಡಿದ ಘಟನೆಗಳೂ ವರದಿಯಾಗಿವೆ. ನಿರ್ದಿಷ್ಟ ವಿಡಿಯೋಗಳಲ್ಲಿ ಮುಸುಕುದಾರಿ ದಾಳಿಕೋರರು ಆಡಿರುವ ಮಾತುಗಳು ನಿಸ್ಸಂಶಯವಾಗಿ ಅದು ಬಿಜೆಪಿ ಪ್ರೇರಿತ ಎಂದೆನಿಸದೆ ಇರದು. ಘಟನೆಗೂ ಮುನ್ನ ನಡೆದಿದೆ ಎನ್ನಲಾದ ವಾಟ್ಸಾಪ್ ಚರ್ಚೆಯ ತುಣುಕುಗಳು ವೈರಲ್ ಆಗಿದ್ದು, “ಯುನೈಟ್ ಎಗೆನೆಸ್ಟ್ ಲೆಫ್ಟ್” ಗುಂಪಿನಲ್ಲಿನ ಸಂಭಾಷಣೆಯು ಪೂರ್ವನಿಯೋಜಿತ ಕೃತ್ಯ ಹಾಗೂ ಬಿಜೆಪಿಯ ಪಿತೂರಿಯಿಂದಲೇ ನಡೆದಿರುವುದು ಎಂಬುದಕ್ಕೆ ಸಾಕ್ಷ್ಯ ಒದಗಿಸುತ್ತದೆ.
ಸಂಭಾಷಣೆಯಲ್ಲಿ ಪಾಲ್ಗೊಂಡವರ ಹೆಸರು, ಮೊಬೈಲ್ ಸಂಖ್ಯೆ ಎಲ್ಲವೂ ಇದೆ. ಪೊಲೀಸರು ದಾಳಿಕೋರರ ಪರವಾದ ಮೃದು ಧೋರಣೆ ತಳೆದಿರುವುದು ಹಾಗೂ ವಿಡಿಯೋಗಳಲ್ಲಿ ಬಿಜೆಪಿಯ ಸೈದ್ಧಾಂತಿಕ ವಿರೋಧಿಗಳಾದ ಎಡಪಕ್ಷಗಳ ಬೆಂಬಲಿಗರನ್ನು ನಿಂಧಿಸುವುದು ಸ್ಪಷ್ಟವಾಗಿದೆ. ಇದರಾಚೆಗೆ ಯೋಚಿಸುವುದಾದರೂ ತಮ್ಮದೇ ವಿಚಾರ ಹೊಂದಿರುವ ಸ್ನೇಹಿತರ ಮೇಲೆ ಸಹಪಾಠಿಗಳೇಕೆ ದಾಳಿ ಮಾಡುತ್ತಾರೆ? ಎಂಬ ಸರಳ ಪ್ರಶ್ನೆಗೆ ಬಿಜೆಪಿ ಪಾಳೆಯದಲ್ಲಿ ಉತ್ತರವಿಲ್ಲ!
ಸಿಎಎ ವಿರುದ್ಧ ಹೋರಾಟಕ್ಕೆ ಇಳಿದಿದ್ದ ದೆಹಲಿಯ ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ವಿವಿಯ ಮೇಲೆ ಕ್ರೌರ್ಯ ಮೆರೆದು ಅದನ್ನು ಸಮರ್ಥಿಸಲಾಗದೆ ದೇಶದ ಮುಂದೆ ಬಯಲಾಗಿದ್ದ ದೆಹಲಿ ಪೊಲೀಸರು ಒಂದೇ ತಿಂಗಳ ಅಂತರದಲ್ಲಿ ಮತ್ತೊಂದು ಹೇಯ ಕೃತ್ಯದ ವಿರುದ್ಧ ಲಾಠಿ ಬೀಸದೇ ಮೌನಕ್ಕೆ ಶರಣಾಗುವ ಮೂಲಕ ಪಕ್ಷಪಾತ ಮೆರೆದಿದ್ದಾರೆ. ವಿಶ್ವವಿದ್ಯಾಲಯದ ಹಾಸ್ಟೆಲ್, ಪರೀಕ್ಷೆ ಫೀ ಹೆಚ್ಚಳ ಕ್ರಮದ ವಿರುದ್ಧ ಹಲವು ದಿನಗಳಿಂದ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಜೆ ಎನ್ ಯು ವಿದ್ಯಾರ್ಥಿಗಳ ಮೇಲೆ ಬಿಜೆಪಿಯ ಮಾತೃಸಂಸ್ಥೆ ಆರ್ ಎಸ್ ಎಸ್ ವಿದ್ಯಾರ್ಥಿ ಸಂಘಟನೆ ಎಬಿವಿಪಿ ಏಕೆ ದಾಳಿ ನಡೆಸಿದೆ?
ಸಿಎಎ ಹೋರಾಟವು ಬಿಜೆಪಿ ನಾಯಕತ್ವಕ್ಕೆ ಒಡ್ಡಿರುವ ಬ್ರಹ್ಮಾಂಡ ಸವಾಲಿನಿಂದ ದೇಶದ ಜನತೆಯ ದೃಷ್ಟಿಕೋನ ಕದಲಿಸಲು ಈ ಕೃತ್ಯ ಎಸಗಲಾಗಿದೆಯೇ? ವಿದ್ಯಾರ್ಥಿಗಳನ್ನು ಕೆಣಕುವ ದುಸ್ಸಾಹಸಕ್ಕೆ ಕೈಹಾಕುವ ಮೂಲಕ ಮೋದಿ ಸರ್ಕಾರ ಮಾಡಲು ಹೊರಟಿರುವುದು ಏನನ್ನು? ಜಾಮಿಯಾ, ಅಲಿಗಢ ಬಳಿಕ ಜೆ ಎನ್ ಯು ಗುರಿಯಾಗಿಸಿರುವುದರ ಹಿಂದೆ ಷಡ್ಯಂತ್ರ ಇರಬಹುದೇ? ದೇಶದ ನಾನಾ ಕಡೆ ನಡೆದಿರುವ ಹೋರಾಟಗಳನ್ನು ಸಮರ್ಥವಾಗಿ ನಿಭಾಯಿಸಲು ವಿಫಲವಾಗಿರುವ ಅಮಿತ್ ಷಾ ನೈತಿಕ ಜವಾಬ್ದಾರಿ ಒತ್ತು ರಾಜೀನಾಮೆ ನೀಡಬೇಕಲ್ಲವೇ? ನಿಷ್ಪಕ್ಷಪಾತವಾಗಿ ಕೆಲಸ ನಿರ್ವಹಿಸಲಾರದ ಸ್ಥಿತಿಯನ್ನು ದೆಹಲಿ ಪೊಲೀಸರಿಗೆ ತಂದೊಡ್ಡಲಾಗಿದೆಯೇ ಎಂಬ ಹತ್ತಾರು ಪ್ರಶ್ನೆಗಳು ಎದ್ದುನಿಂತಿವೆ.
ಸಿಎಎ ವಿರುದ್ಧದ ಹೋರಾಟ ಹಿಮ್ಮೆಟ್ಟಿಸಲು ಪರದಾಡುತ್ತಿರುವ ಬಿಜೆಪಿ ನಾಯಕತ್ವಕ್ಕೆ ಜೆ ಎನ್ ಯು ವಿದ್ಯಾರ್ಥಿಗಳ ಮೇಲಿನ ದಾಳಿಯು ಗಂಭೀರ ಸವಾಲು ತಂದೊಡ್ಡುವುದು ಸ್ಪಷ್ಟವಾಗಿದೆ. ಎರಡು ಪ್ರಮುಖ ಹೋರಾಟಗಳು ಒಂದಾದರೆ ಅದನ್ನು ಹತ್ತಿಕ್ಕುವುದು ಸುಲಭ ಸಾಧ್ಯವಲ್ಲ. ಆರ್ಥಿಕ ಸಮಸ್ಯೆಯಿಂದ ತೀವ್ರ ಟೀಕೆಗೆ ಗುರಿಯಾಗಿರುವ ಮೋದಿ ಸರ್ಕಾರವು ದೇಶದ ಯುವ ಸಮೂಹವನ್ನು ಕೆಣಕುವ ಮೂಲಕ ನಿರ್ಣಾಯಕ ಹೋರಾಟಕ್ಕೆ ತನ್ನನ್ನು ಒಡ್ಡಿಕೊಂಡಿದೆ. ಸ್ವಾತಂತ್ರ್ಯ ಚಳವಳಿಯ ಬಳಿಕ ತುರ್ತುಪರಿಸ್ಥಿತಿಯನ್ನು ಗೆದ್ದ ಭಾರತವು 21ನೇ ಶತಮಾನದ ಮಹತ್ವದ ಹೋರಾಟಕ್ಕೆ ಸಾಕ್ಷಿಯಾಗಿದೆ.
ವಿಶ್ವಾಸಾರ್ಹತೆ ಕಳೆದುಕೊಂಡಿರುವ ವಿರೋಧ ಪಕ್ಷಗಳನ್ನು ಹಿಂದಿಕ್ಕಿ ವಿದ್ಯಾರ್ಥಿಗಳು ಹೋರಾಟದ ಮುಂಚೂಣಿಯಲ್ಲಿರುವುದು ಅತ್ಯಂತ ಆಶಾದಾಯಕ ಬೆಳವಣಿಗೆ. ಕಳೆದೊಂದು ತಿಂಗಳಿಂದ ನಕಾರಾತ್ಮಕ ಸುದ್ದಿಗಳಿಂದ ನಿದ್ರೆಯಿಲ್ಲದ ರಾತ್ರಿ ಕಳೆಯುತ್ತಿರುವ ಮೋದಿ-ಶಾ ಜೋಡಿಯ ಬೆಂಬಲಿಗ ಪಡೆ ಜೆ ಎನ್ ಯು ಜೇನುಗೂಡಿಗೆ ಎಸೆದಿರುವ ಕಲ್ಲು ಅವರನ್ನೇ ಪುಡಿಗಟ್ಟುವ ಮಾತುಗಳು ಕೇಳಿಬರುತ್ತಿವೆ. ಏಕೆಂದರೆ ಜಗತ್ತಿನಲ್ಲಿ ವಿದ್ಯಾರ್ಥಿ ಹೋರಾಟಗಳು ವಿಫಲವಾದ ಐತಿಹ್ಯ ತೀರ ಕಡಿಮೆ.